Vijayapura Monuments: ಸ್ಮಾರಕ ದರ್ಶನ ಭಾಗ- 5: ಜಾಮಿಯಾ ಮಸೀದಿ, ಭಕ್ತಿಯ ಸ್ಪೂರ್ತಿ ಕೇಂದ್ರ
ಕನ್ನಡ ಸುದ್ದಿ  /  ಕರ್ನಾಟಕ  /  Vijayapura Monuments: ಸ್ಮಾರಕ ದರ್ಶನ ಭಾಗ- 5: ಜಾಮಿಯಾ ಮಸೀದಿ, ಭಕ್ತಿಯ ಸ್ಪೂರ್ತಿ ಕೇಂದ್ರ

Vijayapura Monuments: ಸ್ಮಾರಕ ದರ್ಶನ ಭಾಗ- 5: ಜಾಮಿಯಾ ಮಸೀದಿ, ಭಕ್ತಿಯ ಸ್ಪೂರ್ತಿ ಕೇಂದ್ರ

ಜಾಮಿಯಾ‌ ಮಸೀದಿ ಭವ್ಯತೆ ವರ್ಣಿಸಲು ಪದಗಳೇ ಸಾಲದಷ್ಟು ವಿಶಾಲ. ವಿಜಯಪುರದ ಐತಿಹಾಸಿಕ ಸ್ಮಾರಕಗಳಲ್ಲಿ ಭಕ್ತಿ ಭಾವದಿಂದ ಗಮನ ಸೆಳೆಯುವ ಜಾಮಿಯಾ ಮಸೀದಿ ಭಕ್ತಿ ಕೇಂದ್ರದ ಜೊತೆಗೆ ಮಹತ್ವದ ಐತಿಹಾಸಿಕ ಸ್ಮಾರಕ ಸಹ ಹೌದು. ಈ ಕುರಿತು ಸಮೀವುಲ್ಲಾ ಉಸ್ತಾದ ಅವರ ವಿಶೇಷ ಬರಹ ಇಲ್ಲಿದೆ.

ವಿಜಯಪುರದ ಜಾಮಿಯಾ‌ ಮಸೀದಿ
ವಿಜಯಪುರದ ಜಾಮಿಯಾ‌ ಮಸೀದಿ

ವಿಜಯಪುರ: ಅದೊಂದು ಅಪೂರ್ವ ಪ್ರಾರ್ಥನಾ ಸ್ಥಳ, ವಿಶಾಲ, ಭವ್ಯ, ಸುಂದರ ಹೀಗೆ ಬೃಹತ್ ‌ಜಾಮಿಯಾ‌ ಮಸೀದಿ ಭವ್ಯತೆ ವರ್ಣಿಸಲು ಪದಗಳೇ ಸಾಲದಷ್ಟು ವಿಶಾಲ. ವಿಜಯಪುರದ ಐತಿಹಾಸಿಕ ಸ್ಮಾರಕಗಳಲ್ಲಿ ಭಕ್ತಿ ಭಾವದಿಂದ ಗಮನ ಸೆಳೆಯುವ ಜಾಮಿಯಾ ಮಸೀದಿ ಭಕ್ತಿ ಕೇಂದ್ರದ ಜೊತೆಗೆ ಮಹತ್ವದ ಐತಿಹಾಸಿಕ ಸ್ಮಾರಕ ಸಹ ಹೌದು.

ಚಿನ್ನ ಲೇಪಿತ ಪವಿತ್ರ ಕುರಾನ್ ವಾಣಿಗಳನ್ನು ನೋಡುವುದೇ‌ ನಯನಗಳಿಗೆ ಹಬ್ಬ. ಒಳ ಪ್ರವೇಶಿಲು ಸುಂದರ ಪ್ರವೇಶ ದ್ವಾರ, ನಮಾಜ್ ನಿರ್ವಹಿಸಲು ಮೊದಲು ಶುದ್ದವಾಗಲು ಸುಂದರವಾದ ವಜೂ ಕೊಳ, ಆಗಿನ ಕಾಲದ ಜನರ ಗಾತ್ರಕ್ಕೆ ಅನುಗುಣವಾಗಿ ನಮಾಜ್ ಮಾಡಲು ಬಣ್ಣದ ಪ್ರಾಂಗಣ ಹೀಗೆ ಜಾಮಿಯಾ ಮಸೀದಿ ಸುಂದರವೇ ಒಂದು ವೈಭವ.

ಭಕ್ತಿಯ ಸ್ಪೂರ್ತಿ ಕೇಂದ್ರ

ಜಾಮಿಯಾ ಮಸೀದಿ ಭವ್ಯತೆ, ಅಲಂಕಾರ, ಶೋಭೆ ತರುವ ಕಮಾನುಗಳು, ಸುಂದರವಾದ ಗುಮ್ಮಟ, ಒಳಗೆ ಪ್ರವೇಶಿಸುವ ಭಕ್ತರಲ್ಲಿ ಪ್ರಾರ್ಥನೆಗೆ ಸ್ಫೂರ್ತಿ ನೀಡುತ್ತದೆ. ಇಂಡೋ ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪದ ಸರಳತೆ, ಈ ಕಟ್ಟಡದ ವೈಭವವನ್ನು ಎತ್ತರಿಸಿದೆ. ಇದೊಂದು ಸುಂದರ-ಸಮಭುಜ ಚೌಕಾಕಾರದ ಕಟ್ಟಡ, ಉತ್ತರ ದಕ್ಷಿಣ 225 ಅಡಿ ಹಾಗೂ ಪೂರ್ವ-ಪಶ್ಚಿಮಕ್ಕೆ 450 ಅಡಿ ಉದ್ದವಿದ್ದು, ಪೂರ್ವದಲ್ಲಿ ಪ್ರವೇಶದ್ವಾರವಿದೆ. ಇಲ್ಲಿಂದ ಒಳಗೆ ಹೋದರೆ ಕಟ್ಟಡದ ಮಧ್ಯದಲ್ಲಿ 155 ಚದರ ಅಡಿಯ ಕಾರಂಜಿ ಸಹಿತ ಕೊಳವಿದೆ, ಎರಡೂ ಬದಿಯಲ್ಲಿ 28 ಅಡಿ ಅಗಲ, 25 ಅಡಿ ಎತ್ತರದ ಕಮಾನುಗಳಿವೆ. ಇದರ ಗೋಡೆಯು ತುಂಬಾ ಮೆದುವಾಗಿದೆ.

ಕೆನೆ ನಸುಬಣ್ಣದ ಕಮಾನುಗಳಿದ್ದು, ಇವುಗಳ ಒಳಗೆ ಉಟ್ಟಿರುವ ಭಾಗದಲ್ಲಿ ಚಿಕ್ಕ ಚಿಕ್ಕ ಕಿಂಡಿಗಳಿವೆ. ಇವುಗಳೊಂದಿಗೆ ಜಾಲಂಧ್ರಗಳಿಂದ ಕೂಡಿದ ಕಲ್ಲುಗಳ ಜೋಡಣೆ ಮಸೀದಿಯ ಸೌಂದರ್ಯಕ್ಕೆ ಮೆರಗು ಕೊಟ್ಟಿದೆ. ಜಾಲಂಧ್ರಗಳಿಂದ ಗಾಳಿ-ಬೆಳಕು ಸದಾಕಾಲ ಬರುವಂತೆ ನಿರ್ಮಿಸಲಾಗಿದೆ. 116 000 ಚದರ ಅಡಿ ವಿಸ್ತರಿಸಿದ್ದು, ವಿಜಯಪುರದಲ್ಲಿ ಅತ್ಯಧಿಕ ಸ್ಥಳವನ್ನು ಹೊಂದಿದ ಕಟ್ಟಡವಾಗಿದೆ.

ಸಭಾಂಗಣ ಕಟ್ಟಡ ಮೂರು ಭಾಗಗಳನ್ನು ಹೊಂದಿದ್ದು ಪ್ರತಿಯೊಂದನ್ನು ಅರ್ಧ ಗೋಳಾಕಾರದ ಛಾವಣಿ ಇದೆ. ಪ್ರಾರ್ಥನೆಗಾಗಿ 2,250 ಮುಸಲ್ಲಾಗಳನ್ನು (ಸ್ಥಳಗಳು) ನೆಲದಲ್ಲಿ ಕೊರೆಯಲಾಗಿದೆ. ಮೆಹಬ್ ಎಂದು ಕರೆಯಲಾಗುವ ಸ್ಥಳದಲ್ಲಿ ಸುಂದರ ನಕ್ಷೆಗಳು, ಪವಿತ್ರ ಕುರಾನ ವಾಕ್ಯಗಳನ್ನು ಕಲಾತ್ಮಕ ಅಕ್ಷರಗಳಿಂದ ಕೊರೆಯಲಾಗಿದೆ. ಒಂದು ಕಾಲದಲ್ಲಿ ಈ ಅಕ್ಷರಗಳಿಗೆ ಬಂಗಾರದ ನೀರು ಲೇಪಿಸಲಾಗಿತ್ತು. ಅದೀಗ ಮಾಸಿ ಹೋಗುತ್ತಿದೆ. ಅಲ್ಲಲ್ಲಿ ಚಿನ್ನದ ನೀರಿನ ಅವಶೇಷಗಳು ಕಾಣುತ್ತವೆ.

ಇಲ್ಲಿನ ಬಣ್ಣ-ಬಣ್ಣದ ಚಿತ್ತಾರದ ಅಲಂಕರಣೆಯನ್ನು ಕ್ರಿ.ಶ. 1636 ರಲ್ಲಿ ಮೊಹ್ಮದ್ ಆದಿಲ್‌ಶಾಹ ಆಜ್ಞೆ ಮೇರೆಗೆ ಮಲಿಕ್ ಯಾಕೂರ್ ಎಂಬ ಅಧಿಕಾರಿ ಮಾಡಿದನೆಂದು ಇತಿಹಾಸ ಪುಟಗಳಲ್ಲಿ ದಾಖಲಾಗಿದೆ. ಕಟ್ಟಡದ ಮಧ್ಯದ ಗುಮ್ಮಟ 75 ಚದರ ಅಡಿ ಅಗಲವಾಗಿದ್ದು, ಭೂಮಿಯಿಂದ 155 ಅಡಿ ಎತ್ತರದಲ್ಲಿದೆ. ವಿಜಯಪುರದ ಗುಮ್ಮಟಗಳಲ್ಲಿಯೇ ಅತ್ಯಂತ ಸುಂದರವಾದ ಗುಮ್ಮಟ ಇದಾಗಿದ್ದು ನಗರದ ನಾಲ್ಕು ದಿಕ್ಕುಗಳಲ್ಲಿಯೂ ಹೊರವಲಯದಿಂದಲೇ ಎದ್ದು ಕಾಣುತ್ತದೆ.

ಬರಹ: ಸಮೀವುಲ್ಲಾ ಉಸ್ತಾದ

Whats_app_banner