Aero India 2025: ಬೆಂಗಳೂರು ಏರೋ ಇಂಡಿಯಾ 2025 ವೀಕ್ಷಿಸುವ ಬಯಕೆ ಇದೆಯಾ, ನೋಂದಣಿ ಕಡ್ಡಾಯ, ಇದಕ್ಕಾಗಿ ಈ ಮಾರ್ಗ ಅನುಸರಿಸಿ
Aero India 2025 Registration: ಏರೋ ಇಂಡಿಯಾ 2025 ಮೊದಲ ಮೂರು ದಿನಗಳು ವ್ಯಾಪಾರ ಸಂಬಂಧಿ ಚಟುವಟಿಕೆ, ವಹಿವಾಟುದಾರರಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಅಂದರೆ ಫೆಬ್ರವರಿ 13 ಹಾಗೂ 14 ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರದರ್ಶನವು ಪ್ರತಿದಿನ ಬೆಳಿಗೆ 09ರಿಂದ ರಿಂದ ಸಂಜೆ 06 ವರೆಗೆ ನಡೆಯುತ್ತದೆ. ಇದಕ್ಕಾಗಿ ನೋಂದಣಿ ಮಾಡಿಸಲು ಮಾಹಿತಿ ಇಲ್ಲಿದೆ.
Aero India 2025 Registration:ಬೆಂಗಳೂರು ಏರೋ ಇಂಡಿಯಾ ಎಂಬ ಲೋಹದ ಹಕ್ಕಿಗಳ ಹಾರಾಟದ ಪ್ರದರ್ಶನ ಮತ್ತೆ ಬಂದಿದೆ. ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಪ್ರದರ್ಶನ 2025 ರ ಫೆಬ್ರವರಿ 10 ರಿಂದ 14 ರವರೆಗೆ ಯಲಹಂಕ ಏರ್ ಫೋರ್ಸ್ ಸ್ಟೇಷನ್ ನಲ್ಲಿ ಆಯೋಜಿಸಲಾಗುತ್ತಿದೆ. ಏರೋ ಇಂಡಿಯಾವು ಬೆಂಗಳೂರಿನಲ್ಲಿ ನಡೆಯುವ ದ್ವೈವಾರ್ಷಿಕ ವೈಮಾನಿಕ ಮತ್ತು ವಾಯುಯಾನ ಪ್ರದರ್ಶನ. ರಕ್ಷಣಾ ಪ್ರದರ್ಶನ ಸಂಸ್ಥೆ, ರಕ್ಷಣಾ ಉತ್ಪಾದನಾ ಇಲಾಖೆ, ರಕ್ಷಣಾ ಸಚಿವಾಲಯಗಳು ಜಂಟಿಯಾಗಿ ಆಯೋಜಿಸುತ್ತಿವೆ. ಏರೋ ಇಂಡಿಯಾ ಭಾರತದ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾಗಿದ್ದು, ಜಾಗತಿಕ ವೈಮಾನಿಕ ಮಾರಾಟಗಾರರು ಮತ್ತು ಭಾರತೀಯ ವಾಯುಪಡೆ (IAF) ವಿಭಿನ್ನ ವಿಮಾನ, ಹೆಲಿಕಾಪ್ಟರ್‌ಗಳನ್ನು ಆಗಸದಲ್ಲಿ ಉಡಾವಣೆ ಮಾಡಿ ಜನರಿಗೆ ಪರಿಚಯ ಮಾಡಿಕೊಡಲಿದೆ.
ಏರೋ ಇಂಡಿಯಾ 2025 ಮೊದಲ ಮೂರು ದಿನಗಳು ವ್ಯಾಪಾರ ಸಂಬಂಧಿ ಚಟುವಟಿಕೆ, ವಹಿವಾಟುದಾರರಿಗೆ ಮೀಸಲಾಗಿದ್ದರೆ, ಕೊನೆಯ ಎರಡು ದಿನಗಳು ಅಂದರೆ ಫೆಬ್ರವರಿ 13 ಹಾಗೂ 14 ಸಾರ್ವಜನಿಕರಿಗೆ ತೆರೆದಿರುತ್ತದೆ. ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 9ರಿಂದ ರಿಂದ ಸಂಜೆ 6 ವರೆಗೆ ನಡೆಯುತ್ತದೆ. ಇದಕ್ಕೆ ಪ್ರತಿ ವಿಭಾಗದವರಿಗೂ ನೋಂದಣಿ ಕಡ್ಡಾಯ. ಏರೋ ಇಂಡಿಯಾದಲ್ಲಿ ಮಳಿಗೆ ಹಾಕುವವರು, ವ್ಯಾಪಾರ ಮಾಡುವವರು, ವೀಕ್ಷಣೆ ಮಾಡುವವರ ಸಹಿತ ಎಲ್ಲರಿಗೂ ನೋಂದಣಿ ಕಡ್ಡಾಯವಿದ್ದು, ಜನವರಿ 5ರೊಳಗೆ ಪೂರೈಸಿಕೊಳ್ಳಬೇಕು.
ಇದನ್ನೂ ಓದಿರಿ: Aero India Show 2025: ಮತ್ತೆ ಬರುತ್ತಿದೆ ಬೆಂಗಳೂರು ಏರೋ ಇಂಡಿಯಾ ಶೋ, ಇದರ ಹಿನ್ನೆಲೆ ಏನು
ನೋಂದಾಯಿಸಲು ಈ ಹಂತಗಳನ್ನು ಅನುಸರಿಸಿ:
- ಅಧಿಕೃತ ವೆಬ್‌ಸೈಟ್ aeroindia.gov.in ಗೆ ಭೇಟಿ ನೀಡಿ
- ಮೇಲಿನ ಬಲ ಮೂಲೆಯಲ್ಲಿರುವ "ನೋಂದಣಿ" ಲಿಂಕ್ ಅನ್ನು ಆಯ್ಕೆಮಾಡಿ.
- ಡ್ರಾಪ್‌ಡೌನ್ ಮೆನುವಿನಿಂದ "ಸಂದರ್ಶಕರ ನೋಂದಣಿ" ಆಯ್ಕೆಮಾಡಿ.
- ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.
- ಒಮ್ಮೆ ನೋಂದಾಯಿಸಿದ ನಂತರ ಟಿಕೆಟ್ ಬುಕಿಂಗ್ ಮಾಡ್ಯೂಲ್ ಅನ್ನು ಪ್ರವೇಶಿಸಲು ಲಾಗಿನ್ ಅನ್ನು ಬಳಸಿ.
- ಡ್ಯಾಶ್‌ಬೋರ್ಡ್‌ನಲ್ಲಿ ನೀಡಲಾದ ಸೂಚನೆಗಳನ್ನು ಅನುಸರಿಸಿ
ಪ್ರವೇಶ ದರ ಎಷ್ಟು
ವ್ಯಾಪಾರ ಪಾಸ್‌ಗಳು: ಭಾರತೀಯ ಪ್ರಜೆಗಳಿಗೆ 5,000 ರೂ. ಮತ್ತು ವಿದೇಶಿ ಪ್ರಜೆಗಳಿಗೆ ಯುಎಸ್‌ಡಾಲರ್ 150 (ಜಿಎಸ್‌ಟಿ ಒಳಗೊಂಡಂತೆ).
ಏರ್ ಡಿಸ್ಪ್ಲೇ ವ್ಯೂಯಿಂಗ್ ಏರಿಯಾ ಪಾಸ್‌ಗಳು: ಭಾರತೀಯ ಪ್ರಜೆಗಳಿಗೆ 1,000 ರೂ. ಮತ್ತು ವಿದೇಶಿ ಪ್ರಜೆಗಳಿಗೆ ಯುಎಸ್ ಡಾಲರ್ 50 ( ಜಿಎಸ್‌ಟಿ ಒಳಗೊಂಡಂತೆ).
ಸಾಮಾನ್ಯ ಸಂದರ್ಶಕರ ಪಾಸ್‌ಗಳು: ಭಾರತೀಯ ಪ್ರಜೆಗಳಿಗೆ 2,500 ರೂ. ಮತ್ತು ವಿದೇಶಿ ಪ್ರಜೆಗಳಿಗೆ ಯುಎಸ್‌ಡಾಲರ್ 50 (ಸಾರ್ವಜನಿಕ ದಿನಗಳಲ್ಲಿ) (ಜಿಎಸ್‌ಟಿ ಒಳಗೊಂಡಂತೆ).
ಏರೋ ಇಂಡಿಯಾ ಶೋನಲ್ಲಿ ಪಾಲ್ಗೊಳ್ಳಲು ವಿದ್ಯಾರ್ಥಿಗಳಿಗೆ ಸ್ವಾಗತವಿದೆ. ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಬಹುದು. ಮೂರು ವಿಭಾಗಗಳಿವೆ: ಸಾಮಾನ್ಯ, ಏರ್ ಡಿಸ್ಪ್ಲೇ ವ್ಯೂಯಿಂಗ್ ಏರಿಯಾ ಮತ್ತು ವ್ಯಾಪಾರ. ಕೊನೆಯ ಎರಡು ದಿನಗಳು ಸಾರ್ವಜನಿಕರಿಗೆ ತೆರೆದಿರುತ್ತವೆ.
ಹೋಗೋದು ಹೇಗೆ
ಯಲಹಂಕ ಏರ್ ಫೋರ್ಸ್ ಸ್ಟೇಷನ್ ಬೆಂಗಳೂರು ನಗರದಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಸುಮಾರು 25 ಕಿಲೋಮೀಟರ್ ದೂರದಲ್ಲಿದೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಲಹಂಕ ಏರ್ ಫೋರ್ಸ್ ಸ್ಟೇಷನ್‌ಗೆ ರಸ್ತೆಯ ಮೂಲಕ ಪ್ರಯಾಣವು ಸರಿಸುಮಾರು 40-45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಸೀಮಿತ ಮತ್ತು ದೂರದ ಪಾರ್ಕಿಂಗ್ ಆಯ್ಕೆಗಳಿಂದಾಗಿ ಟ್ಯಾಕ್ಸಿ ಸೇವೆ ಅಥವಾ ಸಾರ್ವಜನಿಕ ಸಾರಿಗೆಯನ್ನು ಬಳಸಲು ಶಿಫಾರಸು ಮಾಡಲಾಗಿದೆ. ಪಾರ್ಕಿಂಗ್ ಪ್ರದೇಶಗಳು ಮತ್ತು ಪ್ರದರ್ಶನ ಗೇಟ್ ನಡುವೆ ಶಟಲ್ ಬಸ್ಸುಗಳು ಲಭ್ಯವಿದೆ.
ಅಲ್ಲಿಗೆ ಬರುವವರಿಗೆ ಗೊತ್ತುಪಡಿಸಿದ ಸ್ಥಳಗಳಲ್ಲಿ ಪಾರ್ಕಿಂಗ್ ಲಭ್ಯವಿದೆ. ಜಿಕೆವಿಕೆ ಮತ್ತು ಜಕ್ಕೂರು ಕ್ಯಾಂಪಸ್‌ಗಳಲ್ಲಿ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಅವಕಾಶವಿದ್ದು, ಅಲ್ಲಿಂದ ಶಟಲ್ ಬಸ್‌ನಲ್ಲಿ ಬರಬಹುದು.
ಕಾರ್ ಪಾಸ್‌ಗಳು: ಭಾರತೀಯ ಮತ್ತು ವಿದೇಶಿ ಪ್ರಜೆಗಳಿಗೆ ಶುಲ್ಕ ಪಾವತಿಸಬೇಕಾಗುತ್ತದೆ..
ಏರ್ ಶೋವನ್ನು ಸೆರೆಹಿಡಿಯಲು ನೀವು DSLR ಅಥವಾ ಕ್ಯಾಮರಾವನ್ನು ತರಬಹುದು. ಆದಾಗ್ಯೂ, ಈವೆಂಟ್ ಆವರಣದ ಒಳಗೆ ಮತ್ತು ಹೊರಗೆ ಡ್ರೋಣ್ ಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
ಇದನ್ನೂ ಗಮನಿಸಿ
- ಏರ್ ಶೋಗಳನ್ನು ಪ್ರತಿದಿನ ಎರಡು ಬಾರಿ ನಡೆಸಲಾಗುತ್ತದೆ. ಬೆಳಿಗ್ಗೆ ಹಾಗೂ ಮಧ್ಯಾಹ್ನ.
- ಈವೆಂಟ್ ಹೊರಾಂಗಣದಲ್ಲಿರುವುದರಿಂದ ಟೋಪಿ/ಕ್ಯಾಪ್ ಮತ್ತು ಸನ್‌ಸ್ಕ್ರೀನ್ ತನ್ನಿ.
- ಪಾರ್ಕಿಂಗ್ ಲಭ್ಯವಿದೆ, ಆದರೆ ಸ್ಥಳವನ್ನು ಹುಡುಕಲು ಒಂದೂವರೆ ಗಂಟೆಗಳವರೆಗೆ ತೆಗೆದುಕೊಳ್ಳಬಹುದು. ಕ್ಯಾಬ್ ಅಥವಾ ಸಾರ್ವಜನಿಕ ಸಾರಿಗೆಯನ್ನು ತೆಗೆದುಕೊಳ್ಳಲು ಶಿಫಾರಸು ಮಾಡಲಾಗಿದೆ. ಶಟಲ್ ಬಸ್ಸುಗಳು ನಿಮ್ಮನ್ನು ಪಾರ್ಕಿಂಗ್ ಪ್ರದೇಶಗಳಿಂದ ಈವೆಂಟ್ ಗೇಟ್‌ಗಳಿಗೆ ಕರೆದೊಯ್ಯುತ್ತವೆ.
- ದೂರದ ನಡಿಗೆಗೆ ಆರಾಮದಾಯಕವಾದ ಬಟ್ಟೆ ಮತ್ತು ಶೂಗಳನ್ನು ಧರಿಸಿ.
- ಯುಪಿಐ ಅಥವಾ ಕಾರ್ಡ್ ವಹಿವಾಟುಗಳಂತಹ ಡಿಜಿಟಲ್ ಪಾವತಿಗಳು ಲಭ್ಯವಿಲ್ಲದಿದ್ದಲ್ಲಿ ಹಣವನ್ನು ತೆಗೆದುಕೊಂಡು ಬನ್ನಿ
- ಅನೇಕ ಭದ್ರತಾ ತಪಾಸಣೆಗಳು ಇರುವುದರಿಂದ ಯಾವಾಗಲೂ ಸರ್ಕಾರದ ನಿಮ್ಮ ಯಾವುದೇ ಐಡಿಯನ್ನು ತನ್ನಿರಿ.
- ಮಾಹಿತಿಗೆ ರಕ್ಷಣಾ ಇಲಾಖೆ ಬೆಂಗಳೂರಿನ ಸಾರ್ವಜನಿಕ ಸಂಪರ್ಕ ವಿಭಾಗದ ಪ್ರದೀಪ್ ಅವರನ್ನು 96660 80818 ರಲ್ಲಿ ಸಂಪರ್ಕಿಸಿ.