ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಗೆಲುವಿನ ಬಳಿಕ ಡಬ್ಲ್ಯುಟಿಸಿ ಅಂಕಪಟ್ಟಿ ಹೀಗಿದೆ; ಭಾರತ ಯಾವ ಸ್ಥಾನದಲ್ಲಿದೆ?
ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ತಂಡ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದರೂ, ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆಗಳಾಗಿಲ್ಲ. ಆಂಗ್ಲರಿಗೆ ಈ ಗೆಲುವಿನಿಂದ ಬಡ್ತಿ ಸಿಕ್ಕಿಲ್ಲ. ಅತ್ತ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯ ಅಗ್ರಸ್ಥಾನದಲ್ಲೇ ಮುಂದುವರೆದಿದೆ.
ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ಇಂಗ್ಲೆಂಡ್ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಕ್ರೈಸ್ಟ್‌ಚರ್ಚ್‌ನ ಹ್ಯಾಗ್ಲಿ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಅಮೋಘ ಗೆಲುವಿನೊಂದಿಗೆ ತಂಡವು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ವೇಗದ ಬೌಲರ್ ಬ್ರೈಡನ್ ಕಾರ್ಸೆ ಮಾರಕ ಬೌಲಿಗ್ ದಾಳಿಗೆ ಆತಿಥೇಯ ಕಿವೀಸ್ ನಲುಗಿತು. ತಮ್ಮ ವೃತ್ತಿಜೀವನದ ಅತ್ಯುತ್ತಮ ಅಂಕಿ-ಅಂಶಗಳನ್ನು ದಾಖಲಿಸಿದ ಅವರು 42 ರನ್ ಬಿಟ್ಟುಕೊಟ್ಟು 6 ವಿಕೆಟ್ ಕಬಳಿಸಿದರು.
ಕಾರ್ಸೆ ಬೆಂಕಿ ದಾಳಿಗೆ ನಲುಗಿದ ಕಿವೀಸ್, ಎರಡನೇ ಇನ್ನಿಂಗ್ಸ್‌ನಲ್ಲಿ 254 ರನ್‌ಗಳಿಗೆ ಆಲೌಟ್ ಆಯ್ತು. ಅತ್ತ ಬೌಲಿಂಗ್ ಆಲ್‌ರೌಂಡರ್ ಕ್ರಿಸ್ ವೋಕ್ಸ್ ಕೂಡಾ ಎರಡನೇ ಇನ್ನಿಂಗ್ಸ್‌ನಲ್ಲಿ ಪ್ರಭಾವ ಬೀರಿದರು. 3 ವಿಕೆಟ್ ಪಡೆದು ಅಬ್ಬರಿಸಿದರು.
ಸದ್ಯ ಕಿವೀಸ್ ವಿರುದ್ಧ ಇಂಗ್ಲೆಂಡ್‌ನ ಎಂಟು ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದರೂ, WTC ಅಂಕಪಟ್ಟಿಯಲ್ಲಿ ದೊಡ್ಡ ಬದಲಾವಣೆಗಳಾಗಿಲ್ಲ. ಆಂಗ್ಲರಿಗೆ ಈ ಗೆಲುವಿನಿಂದ ಬಡ್ತಿ ಸಿಕ್ಕಿಲ್ಲ. ಶನಿವಾರ ಅಂತ್ಯಗೊಂಡ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ದಕ್ಷಿಣ ಆಫ್ರಿಕಾ ತಂಡ ಗೆಲುವು ಸಾಧಿಸಿ, ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು. ಅಲ್ಲದೆ, ಸದ್ಯ ಭಾರತದ ವಿರುದ್ಧ ಬಾರ್ಡರ್-ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಡುತ್ತಿರುವ ಆಸ್ಟ್ರೇಲಿಯಾ ತಂಡವನ್ನು ಮೂರನೇ ಸ್ಥಾನಕ್ಕಿಳಿಸಿತು.
ಡಬ್ಲ್ಯುಟಿಸಿ ಅಂಕಪಟ್ಟಿ
ಕಿವೀಸ್ ವಿರುದ್ಧ ಗೆದ್ದ ಇಗ್ಲೆಂಡ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದೆ. ಆಡಿದ 20 ಪಂದ್ಯಗಳಲ್ಲಿ ತಂಡವು 10 ಗೆಲುವಿನೊಂದಿಗೆ ಶೇಕಡಾ 43.750 ಅಂಕಗಳನ್ನು ಪಡೆದಿದೆ. ಆದರೂ, ಡಬ್ಲ್ಯುಟಿಸಿ ಫೈನಲ್‌ಗೆ ಓಟದಲ್ಲಿ ಇನ್ನೂ ಜೀವಂತವಾಗಿದೆ. ಮತ್ತೊಂದೆಡೆ, ಭಾರತದ ವಿರುದ್ಧ ಸರಣಿ ಕ್ಲೀನ್ ಸ್ವೀಪ್ ಸಾಧಿಸಿದ್ದ ನ್ಯೂಜಿಲೆಂಡ್, ಇದೀಗ ತವರಿನಲ್ಲಿನ ಸೋಲುಂಡಿದೆ. ಆದರೂ ಕಿವೀಸ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಆಡಿದ 12 ಪಂದ್ಯಗಳಲ್ಲಿ 6ರಲ್ಲಿ ಗೆದ್ದಿರುವ ತಂಡ, ಶೇಕಡಾ 50.00 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆದಿದೆ.
ಭಾರತ ತಂಡ 61.11 ಶೇಕಡಾ ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿ ಮುಂದುವರೆದಿದೆ. ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ದಕ್ಷಿಣ ಆಫ್ರಿಕಾ, 59.260 ಶೇಕಡಾ ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದಿದೆ. ಇದೇ ವೇಳೆ ಆಸ್ಟ್ರೇಲಿಯಾ ತಂಡ ಮೂರನೇ ಸ್ಥಾನಕ್ಕೆ ಕುಸಿದಿದ್ದು, 59.26 ಶೇಕಡಾ ಅಂಕಗಳನ್ನು ಗಳಿಸಿದೆ.