ಕರ್ನಾಟಕದಲ್ಲಿರುವ 53 ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ತಾಣಗಳು ವಕ್ಫ್ ಆಸ್ತಿ ಎಂದಿರುವ ವಕ್ಫ್ ಬೋರ್ಡ್, ಆರ್‌ಟಿಐ ಮೂಲಕ ಬಹಿರಂಗ
ಕರ್ನಾಟಕದಲ್ಲಿರುವ 53 ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಯ ತಾಣಗಳು ವಕ್ಫ್ ಆಸ್ತಿ ಎಂದಿರುವ ವಕ್ಫ್ ಬೋರ್ಡ್ ಘೋಷಿಸಿದೆ. 2005ರಲ್ಲಿ ಈ ಕೃತ್ಯ ನಡೆದಿದ್ದು, ಈಗ ಗಮನಸೆಳೆದಿದೆ. ಈ ಆಸ್ತಿಗಳೆಲ್ಲವೂ ಅತಿಕ್ರಮಣವಾಗಿದ್ದು, ಅವುಗಳ ಮೂಲ ಸ್ವರೂಪಕ್ಕೆ ಘಾಸಿಗಳಾಗಿವೆ ಎಂದು ವರದಿ ವಿವರಿಸಿದೆ. ಆರ್‌ಟಿಐ ಅರ್ಜಿಗೆ ಸರ್ಕಾರದ ಉತ್ತರ ಕೂಡ ಗಮನಸೆಳೆದಿದ್ದು, ಅದರ ವಿವರ ಇಲ್ಲಿದೆ.
ಬೆಂಗಳೂರು: ವಕ್ಫ್ ಬೋರ್ಡ್ ನೋಟಿಸ್ ಮತ್ತು ವಕ್ಫ್ ಆಸ್ತಿ ವಿಚಾರ ಸದ್ಯ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಕೂಡ ಚರ್ಚೆಯ ಕೇಂದ್ರ ಬಿಂದು. ರೈತರ ಆಸ್ತಿಗೆ ಕಣ್ಣು ಹಾಕಿದ್ದ ವಕ್ಫ್ ಬೋರ್ಡ್ ಕ್ರಮ ವ್ಯಾಪಕವಾಗಿ ಟೀಕೆಗೆ ಒಳಗಾಗಿರುವಾಗಲೇ, ಕರ್ನಾಟಕದಲ್ಲಿರುವ ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಗೆ ಸಂಬಂಧಿಸಿದ 53 ತಾಣಗಳು ತನ್ನದು ಎಂದು ವಕ್ಫ್ ಬೋರ್ಡ್ ಸದ್ದಿಲ್ಲದೇ ಘೋಷಿಸಿದೆ ಎಂಬ ಅಂಶ ಆರ್‌ಟಿಐ ಅರ್ಜಿ ಮೂಲಕ ಬಹಿರಂಗವಾಗಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ. ಇದರಂತೆ, ಕರ್ನಾಟಕದಲ್ಲಿರುವ ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಗೆ ಸಂಬಂಧಿಸಿದ 53 ತಾಣಗಳ ಪೈಕಿ ಗೋಲ್ ಗುಂಬಜ್, ಇಬ್ರಾಹಿಂ ರೋಜಾ, ಬಾರಾ ಕಮಾನು ಸೇರಿ 43 ವಿಜಯಪುರದಲ್ಲೇ ಇವೆ ಎಂಬ ಅಂಶವೂ ಗಮನಸೆಳೆದಿದೆ. ಇದಲ್ಲದೆ ಬೀದರ್, ಕಲಬುರಗಿ ಜಿಲ್ಲೆಗಳಲ್ಲಿರುವ ಕೆಲವು ಕೋಟೆಗಳು ಕೂಡ ತನ್ನದು ಎಂದು ವಕ್ಫ್ ಬೋರ್ಡ್ ಹೇಳಿಕೊಂಡಿರುವುದರ ಕಡೆಗೆ ವರದಿ ಬೆಳಕು ಚೆಲ್ಲಿದೆ.
ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ತಾಣಗಳ ಮೇಲೆ ವಕ್ಫ್ ಬೋರ್ಡ್ ಕಣ್ಣು
ಹಿಂದಿನ ಅದಿಲ್ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರದಲ್ಲಿರುವ 43 ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ ತಾಣಗಳು ತನ್ನದು ಎಂದು ವಕ್ಫ್ ಬೋರ್ಡ್ ಘೋಷಿಸಿದೆ. 2005ರಲ್ಲೇ ಈ ಘೋಷಣೆ ಮಾಡಿದ್ದು, ಇದಾದ ಬಳಿಕ ಅಲ್ಲಿ ಸಾಕಷ್ಟು ಅತಿಕ್ರಮಗಳು ಮತ್ತು ಸಂವೇದನೆ ಇಲ್ಲದ ರೂಪಾಂತರಗಳಾಗಿವೆ. ತಾಣಗಳ ಮೂಲ ಸ್ವರೂಪಕ್ಕೆ ಧಕ್ಕೆಗಳಾಗಿವೆ ಎಂದು ವರದಿ ಹೇಳಿದೆ.
ವಕ್ಫ್ ಮಂಡಳಿಯು ವಿಜಯಪುರದಲ್ಲಿರುವ 43 ಕೇಂದ್ರೀಯ ಸಂರಕ್ಷಿತ ಸ್ಮಾರಕಗಳನ್ನು ವಕ್ಫ್ ಆಸ್ತಿಗಳೆಂದು ಘೋಷಿಸಿದೆ. ಅದೇ ಆರ್‌ಒಆರ್/ ಪಿಆರ್ ಕಾರ್ಡ್‌ಗಳ (ಆಸ್ತಿಯ ಮಾಲೀಕರಿಗೆ ನೀಡಲಾದ ಹಕ್ಕುಗಳ ದಾಖಲೆ/ಸರ್ಕಾರದ ಪ್ರಮಾಣಪತ್ರ) ಅಧಿಕಾರವನ್ನು ಬಳಸಿಕೊಂಡು ವಕ್ಫ್ ಮಂಡಳಿ ಈ ಕೃತ್ಯವೆಸಗಿದೆ.
ಈ ಸಂರಕ್ಷಿತ ಸ್ಮಾರಕಗಳನ್ನು 2005 ರಲ್ಲಿ ವಕ್ಫ್ ಆಸ್ತಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೈದ್ಯಕೀಯ ಶಿಕ್ಷಣ) ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್ ಅವರು ಘೋಷಿಸಿದರು, ಅವರು ನಂತರ ವಿಜಯಪುರದ ಜಿಲ್ಲಾಧಿಕಾರಿ ಮತ್ತು ವಕ್ಫ್ ಮಂಡಳಿಯ ಅಧ್ಯಕ್ಷರಾಗಿದ್ದರು. “ಎಷ್ಟು ಸ್ಮಾರಕಗಳನ್ನು ವಕ್ಫ್ ಆಸ್ತಿ ಎಂದು ಘೋಷಿಸಲಾಗಿದೆ ಎಂಬುದು ನನಗೆ ನೆನಪಿಲ್ಲ. ಆದರೆ ನಾನು ಮಾಡಿರುವುದು ಕಂದಾಯ ಇಲಾಖೆ ಹೊರಡಿಸಿದ ಸರ್ಕಾರಿ ಗೆಜೆಟ್ ಅಧಿಸೂಚನೆ ಮತ್ತು ಕಕ್ಷಿದಾರರು ನಿರ್ಮಿಸಿದ ಅಧಿಕೃತ ದಾಖಲೆಗಳ ಪ್ರಕಾರವಾಗಿದೆ”ಎಂದು ಮೊಹ್ಸಿನ್ ಹೇಳಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಗೆ ಗೊತ್ತಿಲ್ಲದೇ ನಡೆದಿದೆಯಂತೆ ಬೆಳವಣಿಗೆ
“ಭಾರತದ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಭೂಮಿ/ಸ್ಮಾರಕದ ಹಿಡುವಳಿದಾರರಾಗಿದ್ದರೆ, ವಕ್ಫ್ ಪ್ರಾಧಿಕಾರವು ಒತ್ತುವರಿ ಮಾಡಿದೆ. ಎಎಸ್‌ಐ ಸಮಾಲೋಚನೆಯಿಲ್ಲದೆ ಈ ಕೃತ್ಯ ನಡೆಸಿದೆ” ಎಂದು ಕೇಂದ್ರ ಸರ್ಕಾರ ಆರ್‌ಟಿಐ ಪ್ರತಿಕ್ರಿಯೆ ನೀಡಿದೆ.
ಅವುಗಳಲ್ಲಿ ಹೆಚ್ಚಿನವುಗಳನ್ನು ನವೆಂಬರ್ 12, 1914 ರಂದು ಆಗಿನ ಬ್ರಿಟಿಷ್ ಸರ್ಕಾರವು ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳೆಂದು ಅಧಿಸೂಚನೆ ಮೂಲಕ ಖಚಿತಪಡಿಸಿತು.. ಪುರಾತನ ಸ್ಮಾರಕ ಮತ್ತು ಪುರಾತತ್ತ್ವ ತಾಣಗಳ ಅವಶೇಷ ಕಾಯ್ದೆ ಮತ್ತು ನಿಯಮ 1958ರ ಪ್ರಕಾರ ಭಾರತದ ಪುರಾತತ್ತ್ವ ಇಲಾಖೆ ಈ ತಾಣಗಳ ಏಕೈಕ ವಾರಸುದಾರ ಎಂದು ಘೋಷಿಸಲಾಗಿದೆ.