ಕರ್ನಾಟಕ ಹವಾಮಾನ ಏಪ್ರಿಲ್ 4; ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು, ಬೆಂಗಳೂರಲ್ಲಿ ತಾಪಮಾನ ಹೆಚ್ಚಳ
ಕರ್ನಾಟಕ ಹವಾಮಾನ ಏಪ್ರಿಲ್ 4; ರಾಜ್ಯದ ರಾಯಚೂರು, ಕೊಪ್ಪಳ,ವಿಜಯಪುರ ಸೇರಿ ಉತ್ತರ ಒಳನಾಡಲ್ಲಿ ರಣಬಿಸಿಲು, ಬಿಸಿಗಾಳಿ ಅಲೆ ಇರುವ ಸಾಧ್ಯತೆ ಇದೆ. ಬಿಸಿ ಮತ್ತು ಶುಷ್ಕ ವಾತಾವರಣವು ಕರಾವಳಿ ಜಿಲ್ಲೆಗಳಲ್ಲಿ ಏಪ್ರಿಲ್ 05 ರವರೆಗೆ ಹೆಚ್ಚಾಗುವ ಸಾಧ್ಯತೆಯಿದೆ. ಬೆಂಗಳೂರಲ್ಲಿ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಬೆಂಗಳೂರು: ಕರ್ನಾಟಕದ ಉತ್ತರ ಒಳನಾಡು ಜಿಲ್ಲೆಗಳಲ್ಲಿ ಇಂದು ಮತ್ತು ನಾಳೆ (ಏಪ್ರಿಲ್ 5 ಮತ್ತು 6) ಬಿಸಿಗಾಳಿ ಅಲೆ, ರಣ ಬಿಸಿಲು ಕಾಡಬಹುದು. ವಿಶೇಷವಾಗಿ ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ,ವಿಜಯಪುರಗಳಲ್ಲಿ ಈ ಬಿಸಿಗಾಳಿ ವಾತಾವರಣ ಇರಲಿದೆ. ಕರಾವಳಿ ಜಿಲ್ಲೆಗಳಲ್ಲಿ ಬಿಸಿ ಮತ್ತು ಶುಷ್ಕ ವಾತಾವರಣವು ಕಂಡುಬರಲಿದೆ. ಬೆಂಗಳೂರು ಸುತ್ತಮುತ್ತ ಗರಿಷ್ಠ ತಾಪಮಾನ 37 ಡಿಗ್ರಿ ಸೆಲ್ಶಿಯಸ್ ದಾಟಬಹುದು ಎಂದು ಹವಾಮಾನ ಇಲಾಖೆಯ ವರದಿ ಎಚ್ಚರಿಸಿದೆ.
ಬೆಂಗಳೂರು ಹವಾಮಾನ ಕೇಂದ್ರದದ ವರದಿ ಪ್ರಕಾರ, ರಾಜ್ಯದಲ್ಲಿ ಇಂದು ಒಣಹವೆ ಇರಲಿದೆ. ಬಾಗಲಕೋಟೆ, ಕಲಬುರಗಿ, ರಾಯಚೂರು, ಕೊಪ್ಪಳ,ವಿಜಯಪುರಗಳಲ್ಲಿ ಶಾಖ ತರಂಗಗಳು ಉಂಟಾಗಬಹುದು. ರಾತ್ರಿ ವೇಳೆ ಬಹಳ ಬಿಸಿ ವಾತಾವರಣ ಕಾಡಬಹುದು. ಇಂದು ಮತ್ತು ನಾಳೆ ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಬಿಸಿ ಮತ್ತು ಆರ್ದ್ರತೆಯಂತಹ ವಿಪರೀತ ಹವಾಮಾನ ಕಾಡಲಿದೆ. ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಕಲಬುರಗಿ, ಹಾವೇರಿ, ಕೊಪ್ಪಳ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು 2 ರಿಂದ 4 ಡಿಗ್ರಿ ಸೆಲ್ಶಿಯಸ್‌ನಷ್ಟು ಹೆಚ್ಚಾಗಬಹುದು. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ತಾಪಮಾನ 2 ರಿಂದ 3 ಡಿಗ್ರಿ ಸೆಲ್ಶಿಯಸ್ ಏರಿಕೆಯಾಗುವ ಸಾಧ್ಯತೆ ಇದೆ.
ನಿನ್ನೆ (ಏಪ್ರಿಲ್ 3) ರಾಜ್ಯದ ಗರಿಷ್ಠ ತಾಪಮಾನ 44.4 ಡಿಗ್ರಿ ಸೆಲ್ಶಿಯಸ್ ದಾಖಲು
ಕರ್ನಾಟಕ ರಾಜ್ಯದಲ್ಲಿ ಏಪ್ರಿಲ್ 03 ರಂದು ಕಳೆದ 7 ವರ್ಷಗಳ ಅವಧಿಯ ಗರಿಷ್ಠ ತಾಪಮಾನ 44.4 ಡಿಗ್ರಿ ಸೆಲ್ಶಿಯಸ್ ದಾಖಲಾಗಿದೆ. ದಾಖಲಾದ ಗರಿಷ್ಠ ತಾಪಮಾನದ ವರ್ಷವಾರು (2017-2024) ಹೋಲಿಕೆ ಮೇಲಿನ ಬಾರ್ ಚಾರ್ಟ್‌ನಲ್ಲಿ ತೋರಿಸಲಾಗಿದೆ. ಕಳೆದ 7 ವರ್ಷಕ್ಕೆ ಹೋಲಿಸಿದರೆ ಅತಿ ಹೆಚ್ಚು ತಾಪಮಾನ ದಾಖಲಾಗಿದೆ.
ಬೆಂಗಳೂರು ಹವಾಮಾನ ಇಂದು (ಏಪ್ರಿಲ್ 4), ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಕನಿಷ್ಠ 23 ಡಿಗ್ರಿ ಸೆಲ್ಶಿಯಸ್
ಬೆಂಗಳೂರು ನಗರದಲ್ಲಿ ಇಂದು (ಏಪ್ರಿಲ್ 4) ಬೆಳಗ್ಗೆ ಭಾಗಶಃ ಮೋಡಕವಿದ ವಾತಾವರಣ ಇರಲಿದೆ. ಬಳಿಕ ತಿಳಿ ಆಕಾಶ ಇರಲಿದ್ದು, ತಾಪಮಾನ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಕನಿಷ್ಠ 23 ಡಿಗ್ರಿ ಸೆಲ್ಶಿಯಸ್ ದಾಖಲಾಗಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ಮುನ್ಸೂಚನಾ ವರದಿ ತಿಳಿಸಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಕೂಡ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಶಿಯಸ್ ಉಷ್ಣಾಂಶ ಇರಬಹುದು. ನಿನ್ನೆ (ಏಪ್ರಿಲ್ 3) ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 37.2 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 24.5 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 37 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 23 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಏಪ್ರಿಲ್ 3) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 37.3 ಡಿಗ್ರಿ ಸೆಲ್ಶಿಯಸ್, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.
ಪ್ರಮುಖ ನಗರಗಳ ತಾಪಮಾನ
ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಏಪ್ರಿಲ್ 4) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.
ಬೆಂಗಳೂರು – 28.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 39)
ಮಂಗಳೂರು – 28 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 84)
ಚಿತ್ರದುರ್ಗ – 29 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 65)
ಗದಗ – 29.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 57)
ಹೊನ್ನಾವರ – 26.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 86)
ಕಲಬುರಗಿ – 33.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 23)
ಬೆಳಗಾವಿ – 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 74)
ಕಾರವಾರ – 33.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 61 )
----------------------
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
(This copy first appeared in Hindustan Times Kannada website. To read more like this please logon to kannada.hindustantimes.com)