ಆಟಿದ ಕೂಟದಲ್ಲಿ ದೈವನರ್ತನ; ಆಕ್ರೋಶದ ಬಳಿಕ ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆ ಯಾಚಿಸಿದ ಮಹಿಳೆ
ದೈವನರ್ತನವನ್ನು ಅನುಕರಣೆ ಮಾಡಿ ಕುಣಿದ ಮಹಿಳೆಯು, ವ್ಯಾಪಕ ಆಕ್ರೋಶದ ಬಳಿಕ ಕ್ಷಮೆಯಾಚನೆ ಮಾಡಿದ್ದಾರೆ. ತನ್ನಿಂದ ತಪ್ಪಾಗಿದೆ, ಮುಂದೆ ಯಾರೂ ಇಂಥಾ ತಪ್ಪು ಮಾಡಬೇಡಿ ಎಂದು ಕದ್ರಿ ಮಂಜುನಾಥನ ಸನ್ನಿಧಿಯಲ್ಲಿ ಕ್ಷಮೆ ಕೋರಿದ್ದಾರೆ.
ಮಂಗಳೂರು: ಮಂಗಳೂರಿನಲ್ಲಿ ನಡೆದ ಆಟಿದ ಕೂಟ ಕಾರ್ಯಕ್ರಮವೊಂದರಲ್ಲಿ ದೈವನೃತ್ಯವನ್ನು ಅನುಕರಣೆ ಮಾಡಿ ಕುಣಿದ ಮಹಿಳೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶ ಕೇಳಿ ಬಂದ ಬಳಿಕ, ಕದ್ರಿ ದೇವಸ್ಥಾನಕ್ಕೆ ಬಂದ ಮಹಿಳೆ ಕದ್ರಿ ಮಂಜುನಾಥ ದೇವರ ಸನ್ನಿಧಿಯಲ್ಲಿ ಮಂಡಿಯೂರಿ ಕ್ಷಮೆಯಾಚಿಸಿದ ಘಟನೆ ಬುಧವಾರ ನಡೆದಿದೆ.
ದೈವ ನರ್ತನದ ಮೂಲಕ ತುಳುನಾಡಿನ ದೈವಾರಾಧನೆಗೆ ಮಹಿಳೆ ಅಪಮಾನ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಮಹಿಳೆ ಕದ್ರಿ ಮಂಜುನಾಥ ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿ ಕ್ಷಮೆಯಾಚನೆ ಮಾಡಿದ್ದಾರೆ. ದೇವರಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ ರುದ್ರಾಭಿಷೇಕ ಹಾಗೂ ತಂಬಿಲ ಸೇವೆ ಸಲ್ಲಿಸಿ ದೇವರಲ್ಲಿ ಕ್ಷಮೆಯಾಚನೆ ಮಾಡಿದ್ದಾರೆ. ಇಷ್ಟೇ ಅಲ್ಲದೆ ಕಲ್ಲುರ್ಟಿ ದೈವಕ್ಕೆ ಕೋಲ ಹಾಗೂ ಚಂಡಿಕಾಯಾಗ ಕೊಡುವ ಪ್ರಾರ್ಥನೆಯನ್ನೂ ಅವರು ಮಾಡಿದ್ದಾರೆ.
ಮಂಜುನಾಥ ದೇವರ ಸನ್ನಿಧಿಯಲ್ಲಿ ತಪ್ಪಾಯ್ತು ಎಂದು ಅವರು ಕಣ್ಣೀರು ಹಾಕಿದ್ದಾರೆ. ತಿಳಿಯದೇ ಮಾಡಿದ ತಪ್ಪಿಗೆ ಕ್ಷಮಿಸಿ ಅಂತ ದೇವರ ಎದುರು ಕ್ಷಮೆಯಾಚನೆ ಮಾಡಿದರು. ದೈವಾರಾಧಕ ದಯಾನಂದ ಕತ್ತಲ್‌ಸಾರ್ ಜೊತೆಗೆ ಆಗಮಿಸಿದ ಮಹಿಳೆ, ದೈವಾರಾಧಕರು ಮತ್ತು ಹಿಂದೂ ಸಂಘಟನೆಗಳ ವಿರೋಧದ ಬಳಿಕ ಕ್ಷಮೆಯಾಚನೆ ಮಾಡಿದ್ದಾರೆ. ಮಹಿಳೆಗೆ ಬುದ್ದಿಮಾತು ಹೇಳಿ ಪ್ರಾರ್ಥನೆ ಸಲ್ಲಿಸಿದ ದೈವಾರಾಧಕ ದಯಾನಂದ ಕತ್ತಲ್ ಸಾರ್, ಇಂಥ ಘಟನೆ ಮರುಕಳಿಸಬಾರದು ಎಂದರು.
ಆಟಿ ಕೂಟದಲ್ಲಿ ಹಾಡೊಂದಕ್ಕೆ ದೈವನರ್ತನ ಮಾಡಿ ದೈವಾರಾಧನೆಗೆ ಅಪಮಾನ ಮಾಡಿದ್ದ ಮಹಿಳೆಯ ವಿಡಿಯೋ ವೈರಲ್ ಆಗಿತ್ತು. ಕಾರ್ಯಕ್ರಮದಲ್ಲಿ ಸೇರಿದ್ದ ಹಲವರು, ಆ ಸಂದರ್ಭದಲ್ಲಿ ಚಪ್ಪಾಳೆ ತಟ್ಟಿ ಮಹಿಳೆಗೆ ಪ್ರೋತ್ಸಾಹ ನೀಡಿದ್ದರು. ವಿಡಿಯೋ ವೈರಲ್ ಅದ ಬೆನ್ನಲ್ಲೇ ಸಾಮಾಜಿಕ ತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಕಾರ್ಯಕ್ರಮ ಆಯೋಜಕರನ್ನು ಕರೆ ಮಾಡಿ ತರಾಟೆಗೆ ತೆಗೆದುಕೊಂಡಿದ್ದ ಹಲವರು ಈ ಕೃತ್ಯವನ್ನು ಖಂಡಿಸಿದ್ದರು. ಮಹಿಳೆ ದೈವದ ಎದುರು ನಿಂತು ಕ್ಷಮೆ ಯಾಚಿಸುವಂತೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ವೈರಲ್ ವಿಡಿಯೋ ಇಲ್ಲಿದೆ
ಈ ಸಂದರ್ಭ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಮಹಿಳೆ, ನಿತ್ಯ ದೈವಗಳ ಆರಾಧನೆ, ದೇವರ ಪೂಜೆ ಮಾಡಿಕೊಂಡು ಬಂದವಳು ನಾನು. ಆದರೆ ಸಂಗೀತ ಮತ್ತು ನೃತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದೆ. ಈ ಕಾರಣದಿಂದ ತಪ್ಪಾಗಿದೆ. ಮಂಜುನಾಥನ ಬಳಿ ಕ್ಷಮೆ ಕೇಳಿ ತಪ್ಪು ಕಾಣಿಕೆ ಹಾಕಿದ್ದೇನೆ. ಇನ್ನು ಮುಂದೆ ಯಾರೂ ದಯವಿಟ್ಟು ಇಂಥಹ ತಪ್ಪು ಮಾಡಲೇ ಬೇಡಿ ಎಂದು ಕಣ್ಣೀರು ಹಾಕಿದರು.