ಅಯೋಧ್ಯೆ ಬಾಲರಾಮನ ವಿಗ್ರಹ ನಿರ್ಮಿಸಿಕೊಟ್ಟ ಶಿಲ್ಪಿ ಅರುಣ್‌ ಯೋಗಿರಾಜ್ ಭಾರಿ ನಿರಾಸೆಗೀಡಾದ್ರು, ಅದಕ್ಕೆ ಕಾರಣ ಅಮೆರಿಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಅಯೋಧ್ಯೆ ಬಾಲರಾಮನ ವಿಗ್ರಹ ನಿರ್ಮಿಸಿಕೊಟ್ಟ ಶಿಲ್ಪಿ ಅರುಣ್‌ ಯೋಗಿರಾಜ್ ಭಾರಿ ನಿರಾಸೆಗೀಡಾದ್ರು, ಅದಕ್ಕೆ ಕಾರಣ ಅಮೆರಿಕ

ಅಯೋಧ್ಯೆ ಬಾಲರಾಮನ ವಿಗ್ರಹ ನಿರ್ಮಿಸಿಕೊಟ್ಟ ಶಿಲ್ಪಿ ಅರುಣ್‌ ಯೋಗಿರಾಜ್ ಭಾರಿ ನಿರಾಸೆಗೀಡಾದ್ರು, ಅದಕ್ಕೆ ಕಾರಣ ಅಮೆರಿಕ

Arun Yogiraj News; ಅಯೋಧ್ಯೆ ರಾಮ ಮಂದಿರಕ್ಕಾಗಿ ಬಾಲರಾಮನ ಮೂರ್ತಿ ನಿರ್ಮಿಸಿಕೊಟ್ಟ ಮೈಸೂರಿನ ಅರುಣ್ ಯೋಗಿರಾಜ್ ಅವರು ಭಾರಿ ನಿರಾಸೆಗೊಳಗಾಗಿದ್ದಾರೆ. ಅವರ ಈ ಪರಿಸ್ಥಿತಿಗೆ ಅಮೆರಿಕ ಕಾರಣ ಎಂಬುದು ಈಗ ಚರ್ಚೆಗೆ ಒಳಗಾಗಿರುವ ವಿಚಾರ.

ಅಕ್ಕ ಸಮ್ಮೇಳನಕ್ಕೆ ಹೋಗಲು ಸಿದ್ದರಾಗಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ ಅವರಿಗೆ ವೀಸಾ ನಿರಾಕರಿಸಿ ನಿರಾಸೆಗೀಡುಮಾಡಿದ ಅಮೆರಿಕ.
ಅಕ್ಕ ಸಮ್ಮೇಳನಕ್ಕೆ ಹೋಗಲು ಸಿದ್ದರಾಗಿದ್ದ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್‌ ಅವರಿಗೆ ವೀಸಾ ನಿರಾಕರಿಸಿ ನಿರಾಸೆಗೀಡುಮಾಡಿದ ಅಮೆರಿಕ.

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರಕ್ಕಾಗಿ ಬಾಲರಾಮನ ವಿಗ್ರಹ ನಿರ್ಮಿಸಿಕೊಟ್ಟ ಮೈಸೂರು ಮೂಲದ ಖ್ಯಾತ ಶಿಲ್ಪಿ ಅರುಣ್ ಯೋಗಿರಾಜ್‌ಗೆ ವೀಸಾ ನೀಡಲು ಅಮೆರಿಕ ನಿರಾಕರಿಸಿದೆ. ಇದಕ್ಕೆ ಅಮೆರಿಕ ಯಾವುದೇ ಸ್ಪಷ್ಟ ಕಾರಣ ನೀಡಿಲ್ಲ.

ಅರುಣ್ ಯೋಗಿರಾಜ್ ಕುಟುಂಬ ವೀಸಾ ನೀಡದಿರುವ ಬಗ್ಗೆ ನಿರಾಶೆ ವ್ಯಕ್ತಪಡಿಸಿದೆ. ಅರುಣ್ ಅವರ ಪತ್ನಿ ವಿಜೇತಾ ಈಗಾಗಲೇ ಅಮೆರಿಕಕ್ಕೆ ತೆರಳಿದ್ದು, ಇಂತಹ ಪರಿಸ್ಥಿತಿಯಲ್ಲಿ ಅರುಣ್ ಗೆ ವೀಸಾ ನಿರಾಕರಣೆ ಆಗಿರುವುದು ಅನಿರೀಕ್ಷಿತ ಎಂದು ಕುಟುಂಬದ ಮೂಲಗಳು ಹೇಳುತ್ತವೆ.

ಅರುಣ್‌ ಯೋಗಿರಾಜ್ ಅಮೆರಿಕ ಪ್ರವಾಸ ಯಾಕೆ

ಮೈಸೂರು ಮೂಲದ ಶಿಲ್ಪಿ ಅರುಣ್ ಕೂಡ ಅಮೆರಿಕಕ್ಕೆ ಎಲ್ಲ ಸಿದ್ಧತೆಗಳನ್ನು ಮುಗಿಸಿದ್ದರು. ಅರುಣ್ ಯೋಗಿರಾಜ್ ಕೂಡ ಅಮೆರಿಕದಿಂದ ವೀಸಾ ನಿರಾಕರಣೆಯನ್ನು ಖಚಿತಪಡಿಸಿದ್ದಾರೆ. ನನಗೆ ಯಾವುದೇ ಕಾರಣ ತಿಳಿದಿಲ್ಲ, ಆದರೆ ನಾವು ವೀಸಾ ಸಂಬಂಧಿತ ಎಲ್ಲಾ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದು ಹೇಳಿದ್ದಾಗಿ ರಿಪಬ್ಲಿಕ್ ಟಿವಿ ವರದಿ ಮಾಡಿದೆ.

12ನೇ ಅಕ್ಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ಅರುಣ್‌ ಯೋಗಿರಾಜ್ ಅವರು ಅಮೆರಿಕಕ್ಕೆ ಹೋಗಬೇಕಾಗಿದೆ. ಅಕ್ಕ ವಿಶ್ವ ಕನ್ನಡ ಸಮ್ಮೇಳನವನ್ನು ವರ್ಷಕ್ಕೆ ಎರಡು ಬಾರಿ ಆಯೋಜಿಸಲಾಗುತ್ತದೆ. ಅಮೆರಿಕ ಸೇರಿದಂತೆ ವಿಶ್ವದ ಇತರ ಭಾಗಗಳಲ್ಲಿ ವಾಸಿಸುವ ಸಮುದಾಯದ ಸದಸ್ಯರನ್ನು ಒಟ್ಟುಗೂಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಅರುಣ್ ಯೋಗಿರಾಜ್ ಅವರು ಕೌಟುಂಬಿಕವಾಗಿ ಕೂಡ ಕಲೆಯ ಹಿನ್ನೆಲೆ ಹೊಂದಿದ್ದಾರೆ. ಅವರದ್ದು ಐದನೇ ತಲೆಮಾರು. ಅರುಣ್ ಯೋಗಿರಾಜ್ ಅವರು ಎಂಬಿಎ ವ್ಯಾಸಂಗ ಮಾಡಿದ ಬಳಿಕ ಬಹುರಾಷ್ಟ್ರೀಯ ಕಂಪನಿಗೆ ಉದ್ಯೋಗಕ್ಕೆ ಸೇರಿದ್ದರು. ಅಲ್ಲಿ ಕೆಲಸ ಶುರುಮಾಡಿದ ಬಳಿಕ, ಶಿಲ್ಪ ಕಲೆಯ ಕಡೆಗೆ ಹೆಚ್ಚಿನ ಆಸಕ್ತಿ ಮೂಡಿದ್ದು, 2008ರಲ್ಲಿ ಕೆಲಸ ಬಿಟ್ಟು, ಕುಲಕಸುಬಾದ ಶಿಲ್ಪ ಕಲೆಯನ್ನೇ ಉದ್ಯೋಗವನ್ನಾಗಿ ಸ್ವೀಕರಿಸಿದರು. ಸಂತೋಷದಿಂದ ಮಾಡುತ್ತಿರುವ ಕೆಲಸವಾದ ಕಾರಣ, ಇದರಲ್ಲಿ ಹೆಚ್ಚು ತೃಪ್ತಿ ಇದೆ ಎಂದು ಅಯೋಧ್ಯೆ ಬಾಲರಾಮನ ಮೂರ್ತಿ ನಿರ್ಮಿಸುತ್ತಿದ್ದಾಗ ಅರುಣ್ ಯೋಗಿರಾಜ್ ಹೇಳಿದ್ದರು.

ಅಕ್ಕ ಸಮ್ಮೇಳನ ಮತ್ತು ಅದರ ವಿಶೇಷ

ಕನ್ನಡ ನಾಡಿನ ಶ್ರೀಮಂತ ಭಾಷೆ, ಕಲೆ, ಪರಂಪರೆ, ಸಂಸ್ಕೃತಿಯನ್ನು ಸಪ್ತ ಸಾಗರದಾಚೆ ಪಸರಿಸುವ, ಬೆಳೆಸುವ 12ನೇ ಅಕ್ಕ ವಿಶ್ವ ಸಮ್ಮೇಳನ – 2024 ಅಮೆರಿಕದ ವರ್ಜೀನಿಯಾ ರಾಜ್ಯದ ರಿಚ್‌ಮಂಡ್‌ ನಗರದಲ್ಲಿ ಆಗಸ್ಟ್ 30 ಮತ್ತು ಸೆಪ್ಟೆಂಬರ್ 1 ರಂದು ನಡೆಯಲಿದೆ. 42 ಅಮೆರಿಕ ಕನ್ನಡ ಸಂಘಗಳು ಸೇರಿ ಈ ವಿಶಿಷ್ಠ ಕಾರ್ಯಕ್ರಮವನ್ನು ಆಯೋಜಿಸುತ್ತಿವೆ. ಎಂದು ಅಮೆರಿಕ ಕನ್ನಡ ಕೂಟಗಳ ಒಕ್ಕೂಟದ (ಅಕ್ಕ) ಅಧ್ಯಕ್ಷರಾದ ರವಿ ಬೋರೆಗೌಡ ಇತ್ತೀಚೆಗೆ ಸುದ್ದಿಗೋಷ್ಠಿ ನಡೆಸಿ ತಿಳಿಸಿದ್ದರು.

ಕನ್ನಡ ಭಾಷೆ, ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಅಮೆರಿಕದಲ್ಲಿ ಪ್ರಚಾರ ಮಾಡುವ ಉದ್ದೇಶದಿಂದ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳಿರಲಿವೆ. ಎಲ್ಲಾ ವಯೋಮಾನದವರಿಗೆ ವಿವಿಧ ರೀತಿಯ ಸ್ಪರ್ಧೆಗಳು ಕೂಡ ಇದ್ದು, ವಿಜೇತರಿಗೆ ಕರ್ನಾಟಕದಿಂದ ಆಗಮಿಸುವ ಗಣ್ಯರಿಂದ ಬಹುಮಾನ ವಿತರಿಸಲು ಆಯೋಜಕರು ಸಿದ್ದತೆ ನಡೆಸಿದ್ದಾರೆ.

ಗಣ್ಯರ ಪಟ್ಟಿಯಲ್ಲಿ ಅರುಣ್ ಯೋಗಿರಾಜ್ ಅವರು ಕೂಡ ಇದ್ದರು. ಆದರೆ ಅವರಿಗೆ ವೀಸಾ ಸಿಗದಿರುವುದು ಸಂಘಟಕರಿಗೂ ನಿರಾಸೆ ಉಂಟುಮಾಡಿದೆ. ಇನ್ನೂ ದಿನಗಳಿರುವ ಕಾರಣ, ಅರುಣ್‌ ಯೋಗಿರಾಜ್ ಅವರಿಗೆ ವೀಸಾ ದೊರಕಿಸುವುದಕ್ಕೆ ಪ್ರಯತ್ನಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.