ಈ 7 ಸೀಟಿನ ಕಾರು ದರ 5.32 ಲಕ್ಷ, ಮೈಲೇಜ್ ಕೂಡ ಉತ್ತಮ, ಇದೇ ಕಾರಣಕ್ಕೆ ಮಧ್ಯಮ ವರ್ಗದವರಿಗೆ ಈ ಬಂಡಿ ಅಚ್ಚುಮೆಚ್ಚು
Maruti Suzuki Eeco 7 Seater: ಮಾರುತಿ ಸುಜುಕಿ ಎಕೊ 7 ಸೀಟಿನ ಕಾರು ಸಾಕಷ್ಟು ಜನರಿಗೆ ಅಚ್ಚುಮೆಚ್ಚಿನ ಆಯ್ಕೆಯಾಗಿದೆ. ಇದರ ವಿನ್ಯಾಸ ತುಸು ಒರಟಾಗಿದ್ದರೂ, ಇದರಲ್ಲಿ ಎರಡು ರೀತಿಯ ಪ್ರಯೋಜನವಿದೆ. ಮಾರುತಿ ಎಕೋ ಕಾರಿನ ಕುರಿತು ಹೆಚ್ಚಿನ ವಿವರ ತಿಳಿದುಕೊಳ್ಳೋಣ ಬನ್ನಿ.
Maruti Suzuki Eeco 7 Seater: ಮಾರುತಿ ಸುಜುಕಿ ಕಂಪನಿಯು ವೈವಿಧ್ಯಮಯ ಕಾರುಗಳನ್ನು ಭಾರತದಲ್ಲಿ ಪರಿಚಯಿಸಿದೆ. ಪುಟ್ಟ ಆಲ್ಟೋದಿಂದ ಹಿಡಿದು ದೊಡ್ಡ ಎಸ್‌ಯುವಿ, ಐಷಾರಾಮಿ ವಾಹನಗಳನ್ನೂ ಪರಿಚಯಿಸಿದೆ. ಭಾರತದಲ್ಲಿ ಯಾವೆಲ್ಲ ರೀತಿಯ ಗ್ರಾಹಕರಿದ್ದಾರೋ ಎಲ್ಲರಿಗೂ ಸೂಕ್ತವಾದ ಕಾರುಗಳನ್ನು ಪರಿಚಯಿಸಿದೆ. ಮೊದಲ ಬಾರಿಗೆ ಕಾರು ಖರೀದಿಸುವವರಿಗೆ ಸೂಕ್ತವಾಗುವಂತೆ ಕಂಪನಿಯು ಮಾರುತಿ ಆಲ್ಟೋ ಪರಿಚಯಿಸಿದೆ. ಇದರ ದರ 5 ಲಕ್ಷ ರೂಪಾಯಿಗಿಂತ ಕಡಿಮೆ ಇದೆ. ಇದಾದ ಬಳಿಕ ಎಸ್ ಪ್ರೆಸೊ ಎಂಬ ಕಾರನ್ನು ಪರಿಚಯಿಸಿದೆ. ವ್ಯಾಗನಾರ್ ಕೂಡ ಭಾರತದಲ್ಲಿ ಫೇಮಸ್. ವ್ಯಾಗನಾರ್‌ಗೆ ಎರಡು ಸೀಟ್ ಹೆಚ್ಚಿಸಿದಂತೆ ಅಥವಾ ಓಮ್ನಿಗೆ ಮೂತಿ ಕೂರಿಸಿದಂತೆ ಕಾಣಿಸುವ ಇಕೋ ಇನ್ನೊಂದು ಕಾರು. ಇದು ನೋಡಲ ಅಷ್ಟೇನೂ ಚೆನ್ನಾಗಿ ಕಾಣಿಸದೆ ಇದ್ದರೂ ಬಹು ಉಪಯೋಗಿ. ಇದೇ ಕಾರಣಕ್ಕೆ ಸಾಕಷ್ಟು ಜನರು ಇಕೋ ಕಾರನ್ನು ಖರೀದಿಸಲು ಆದ್ಯತೆ ನೀಡುತ್ತಾರೆ.
ಮಾರುತಿ ಸುಜುಕಿ ಕಂಪನಿಯು ಇಕೋ ಕಾರನ್ನು 2010ರಲ್ಲಿ ಪರಿಚಯಿಸಿತ್ತು. ಅಂದಿನಿಂದ ಈ ಕಾರಿನ ಕುರಿತು ಜನರು ವಿಶೇಷ ಪ್ರೀತಿ ಇಟ್ಟುಕೊಂಡಿದ್ದಾರೆ. ಕಡಿಮೆ ದರಕ್ಕೆ ಏಳು ಸೀಟಿನ ಕಾರು ಬೇಕೆನ್ನುವವರು ಇಕೋ ಕಾರು ಖರೀದಿಸುತ್ತಿದ್ದಾರೆ. ಇದನ್ನು ವೈಯಕ್ತಿಕ ಬಳಕೆಯ ವಾಹನವಾಗಿ ಮಾತ್ರವಲ್ಲದೆ ಶಾಲಾ ವ್ಯಾನ್ ಆಗಿಯೂ ಬಳಸಲಾಗುತ್ತದೆ. ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ವರ್ಗದ ಜನರಿಗೆ ಇದು ಅತ್ಯಂತ ಆದ್ಯತೆಯ ವಾಹನ ಎಂದು ಹೇಳಬಹುದು. ಈ ಕಾರು ಕಡಿಮೆ ಬೆಲೆಯಲ್ಲಿ ದೊರಕುವುದು, ಹೆಚ್ಚು ಮೈಲೇಜ್ ನೀಡುವುದು ಇದಕ್ಕೆ ಪ್ರಮುಖ ಕಾರಣ.
ಎಂಜಿನ್ ಮತ್ತು ಇತರೆ ವಿವರ
ಮಾರುತಿ ಸುಜುಕಿ ಇಕೋ 1.2 ಲೀಟರ್ ಪೆಟ್ರೋಲ್ ಎಂಜಿನ್ ಹೊಂದಿದೆ. ಇದು 81 ಪಿಎಸ್ ಪವರ್ ಮತ್ತು 104.4 ಎನ್ಎಂ ಟಾರ್ಕ್ ನೀಡುತ್ತದೆ. ಈ ಕಾರು ಸಿಎನ್‌ಜಿ ಮಾದರಿಯಲ್ಲೂ ಲಭ್ಯವಿದೆ. ಸಿಎನ್‌ಜಿಯಲ್ಲಿ ಚಾಲನೆಯಲ್ಲಿರುವಾಗ ಅದರ ಪವರ್ ಕಡಿಮೆಯಾಗುತ್ತದೆ. ಸಿಎನ್‌ಜಿ ರೂಪಾಂತರವು 72 ಪಎಸ್ ಪವರ್ ಮತ್ತು 95 ಎನ್ಎಂ ಟಾರ್ಕ್ ನೀಡುತ್ತದೆ.
ಮೈಲೇಜ್ ಉತ್ತಮ
ಕಂಪನಿಯ ಪ್ರಕಾರ ಇದು ಪ್ರತಿಲೀಟರ್ ಪೆಟ್ರೋಲ್‌ಗೆ 20 ಕಿ.ಮೀ. ಇಂಧನ ದಕ್ಷತೆ ನೀಡುತ್ತದೆ. ಸಿಎನ್‌ಜಿ ಎಂಜಿನ್ ಪ್ರತಿ ಕಿಲೋಗ್ರಾಂಗೆ 27 ಕಿಲೋಮೀಟರ್‌ವರೆಗೆ ಮೈಲೇಜ್ ನೀಡುತ್ತದೆ.
ಮಾರುತಿ ಸುಜುಕಿ ಇಕೋ ಬೇಸ್ ವೆರಿಯಂಟ್ ಎಕ್ಸ್ ಶೋ ರೂಂ ಬೆಲೆ ರೂ. 5.32 ಲಕ್ಷ ಪ್ರಾರಂಭವಾಗುತ್ತದೆ. ಟಾಪ್ ವೆರಿಯಂಟ್ ಬೆಲೆ ರೂ. 6.58 ಲಕ್ಷ ಎಕ್ಸ್ ಶೋ ರೂಂ. ಈ ಕಾರು 5 ಆಸನಗಳು ಮತ್ತು 7 ಆಸನಗಳ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ.
ಇದು ಮ್ಯಾನುವಲ್ ಎಸಿ, 12 ವೋಲ್ಟ್ ಚಾರ್ಜಿಂಗ್ ಸಾಕೆಟ್, ಡಿಜಿಟಲ್ ಸ್ಪೀಡೋಮೀಟರ್, ಪ್ರಯಾಣಿಕರ ಸುರಕ್ಷತೆಗಾಗಿ ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, ಮುಂಭಾಗದ ಸೀಟ್‌ಬೆಲ್ಟ್ ರಿಮೈಂಡರ್, ಸ್ಪೀಡ್ ಅಲರ್ಟ್, ಇಬಿಡಿ, ಎಬಿಎಸ್ ಜೊತೆಗೆ ರಿಯರ್ ಪಾರ್ಕಿಂಗ್ ಸೆನ್ಸಾರ್‌ನಂತಹ ವೈಶಿಷ್ಟ್ಯಗಳನ್ನು ಹೊಂದಿದೆ.
ಕಡಿಮೆ ಬೆಲೆಯಲ್ಲಿ ಉತ್ತಮ ವಾಹನವನ್ನು ಖರೀದಿಸಲು ಬಯಸುವವರಿಗೆ ಉಪಯುಕ್ತವಾಗಿದೆ. ಇದನ್ನು ಇತರ ಉದ್ದೇಶಗಳಿಗಾಗಿ ಬಳಸಬಹುದು. ಮಧ್ಯಮ ವರ್ಗದ ಜನರಿಗೆ ಇದು ಉತ್ತಮ ಆಯ್ಕೆ ಎಂದು ಹೇಳಬಹುದು.
ಬೆಂಗಳೂರಿನಲ್ಲಿ ಇಕೋ 5 ಸೀಟ್ ಮತ್ತು 7 ಸೀಟಿನ ಪೆಟ್ರೋಲ್ ಮತ್ತು ಸಿಎನ್‌ಜಿ ಆವೃತ್ತಿ ದರ ಎಷ್ಟಿದೆ ಎಂಬ ವಿವರವನ್ನು ಈ ಮುಂದೆ ಕೋಷ್ಟಕದಲ್ಲಿ ನೀಡಲಾಗಿದೆ.
ಆವೃತ್ತಿ | ಮೆಟಾಲಿಕ್ | ನಾನ್ ಮೆಟಾಲಿಕ್ |
ಇಕೋ 5 ಸೀಟಿನ ಸ್ಟಾಂಡರ್ಡ್ (ಒ) | ₹5 32 000.00 | ₹5 32 000.00 |
ಇಕೋ 7 ಸೀಟಿನ ಸ್ಟಾಂಡರ್ಡ್ (ಒ) | ₹5 61 000.00 | ₹5 61 000.00 |
ಇಕೋ ಸೀಟಿನ ಸ್ಟಾಂಡರ್ಡ್ ಏಸಿ ಆವೃತ್ತಿ | ₹5 68 000.00 | ₹5 68 000.00 |
ಇಕೋ 5 ಸೀಟಿನ ಸ್ಟಾಂಡರ್ಡ್ ಏಸಿ ಸಿಎನ್‌ಜಿ ಆವೃತ್ತಿ | ₹6 58 000.00 | ₹6 58 000.00 |