ಬೇಸಿಗೆಯಲ್ಲಿ ಕಾಂತಿ ಕಳೆದುಕೊಂಡ ಮುಖದ ಸೌಂದರ್ಯ ಹೆಚ್ಚಿಸಲು ಮಾವಿನ ಹಣ್ಣಿನ ಫೇಶಿಯಲ್‌; ಸುಲಭವಾಗಿ ಮನೆಯಲ್ಲೇ ಮಾಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೇಸಿಗೆಯಲ್ಲಿ ಕಾಂತಿ ಕಳೆದುಕೊಂಡ ಮುಖದ ಸೌಂದರ್ಯ ಹೆಚ್ಚಿಸಲು ಮಾವಿನ ಹಣ್ಣಿನ ಫೇಶಿಯಲ್‌; ಸುಲಭವಾಗಿ ಮನೆಯಲ್ಲೇ ಮಾಡಿ

ಬೇಸಿಗೆಯಲ್ಲಿ ಕಾಂತಿ ಕಳೆದುಕೊಂಡ ಮುಖದ ಸೌಂದರ್ಯ ಹೆಚ್ಚಿಸಲು ಮಾವಿನ ಹಣ್ಣಿನ ಫೇಶಿಯಲ್‌; ಸುಲಭವಾಗಿ ಮನೆಯಲ್ಲೇ ಮಾಡಿ

ಸೌಂದರ್ಯದ ಬಗ್ಗೆ ಕಾಳಜಿ ಇಲ್ಲದವರು ಯಾರಿದ್ದಾರೆ ಹೇಳಿ. ಅದರಲ್ಲೂ ಮಾವಿನ ಸೀಸನ್‌ ಆಗಿರುವುದರಿಂದ ಸೌಂದರ್ಯ ವರ್ಧಕವಾಗಿರುವ ಮಾವಿನ ಹಣ್ಣು ಬಳಸಿಕೊಂಡು ಮನೆಯಲ್ಲೇ ಫೇಶಿಯಲ್‌ ಮಾಡುವುದು ಹೇಗೆ? ಅದಕ್ಕೆ ಅನುಸರಿಸಬೇಕಾಗಿರುವ ಹಂತಗಳ ವಿವರಣೆ ಇಲ್ಲಿದೆ.

ಬೇಸಿಗೆಯಲ್ಲಿ ಕಾಂತಿ ಕಳೆದುಕೊಂಡ ಮುಖದ ಸೌಂದರ್ಯ ಹೆಚ್ಚಿಸಲು ಮಾವಿನ ಹಣ್ಣಿನ ಫೇಶಿಯಲ್‌
ಬೇಸಿಗೆಯಲ್ಲಿ ಕಾಂತಿ ಕಳೆದುಕೊಂಡ ಮುಖದ ಸೌಂದರ್ಯ ಹೆಚ್ಚಿಸಲು ಮಾವಿನ ಹಣ್ಣಿನ ಫೇಶಿಯಲ್‌ (pixel)

ಬೇಸಿಗೆ ಕಾಲದಲ್ಲಿ ನಮ್ಮ ಆರೋಗ್ಯದ ಕಾಳಜಿ ವಹಿಸಬೇಕಾದುದು ಎಷ್ಟು ಅಗತ್ಯವೋ ಚರ್ಮ ಹಾಗೂ ಮುಖದ ಆರೋಗ್ಯದ ಕಡೆಗೆ ಗಮನಕೊಡಬೇಕಾದುದೂ ಅಷ್ಟೇ ಮುಖ್ಯ. ಬಿಸಿಲಿನ ಶಾಖಕ್ಕೆ, ಬೇಸಿಗೆಯ ಧಗೆಗೆ ಇಡೀ ವಾತಾವರಣವೇ ಧೂಳು ಹಾಗೂ ಶುಷ್ಕತೆಯಿಂದ ಕೂಡಿದ್ದು, ಸೌಂದರ್ಯದ ಕಾಳಜಿ ವಹಿಸುವ ಮಹಿಳೆಯರು ತಮ್ಮ ನೆಚ್ಚಿನ ಸ್ಪಾ ಅಥವಾ ಬ್ಯೂಟಿ ಪಾರ್ಲರ್‌ಗಳಿಗೆ ನಿಯಮಿತವಾಗಿ ಭೇಟಿ ಕೊಟ್ಟು ಅಗತ್ಯವಾದ ಸೇವೆ ಪಡೆದುಕೊಳ್ಳುತ್ತಿರುತ್ತಾರೆ. ಆದರೆ ಬೇಸಿಗೆಯಲ್ಲಿ ತ್ವಚೆಯು ಆರೋಗ್ಯಕರ ಮತ್ತು ಸುಂದರವಾಗಿ ಕಾಣಲು ಮನೆಯಲ್ಲೇ ಸುಲಭವಾಗಿ ಮಾವಿನಹಣ್ಣಿನ ಫೇಶಿಯಲ್‌ ಮಾಡಿಕೊಳ್ಳಬಹುದು. ಮಾವಿನಹಣ್ಣು ರುಚಿ ಮತ್ತು ಆರೋಗ್ಯಕ್ಕಷ್ಟೇ ಅಲ್ಲದೇ ಸೌಂದರ್ಯವರ್ಧಕವೂ ಆಗಿದೆ.

ಮಾವಿನ ಹಣ್ಣಿನಲ್ಲಿ ವಿಟಮಿನ್‌ ಸಿ, ವಿಟಮಿನ್ ಎ ಮತ್ತು ಬೆಟಾ ಕ್ಯಾರೋಟಿನ್ ನಿಂದ ಸಮೃದ್ಧವಾಗಿದ್ದು, ಇದನ್ನು ಚರ್ಮಕ್ಕೆ ಹಚ್ಚಿಕೊಂಡರೆ ಚರ್ಮವು ತೇಜಸ್ಸನ್ನು ಪಡೆದು ಕಲೆಗಳು ನಿವಾರಣೆಯಾಗಿ ಹೊಳಪನ್ನು ಪಡೆಯುವುದು.

ನೈಸರ್ಗಿಕವಾಗಿ ದೊರೆಯುವ ಮಾವಿನಹಣ್ಣನ್ನು ಬಳಕೆ ಮಾಡಿಕೊಂಡು ಕ್ಲೆಂಸರ್‌, ಸ್ಕ್ರಬ್‌, ಫೇಸ್‌ ಪ್ಯಾಕ್‌, ಫೇಸ್‌ ಮಾಸ್ಕ್‌ ತಯಾರಿಸಿಕೊಂಡು ಫೇಶಿಯಲ್‌ ಮಾಡಿಕೊಳ್ಳುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಮಾವಿನ ಹಣ್ಣಿನ ಕ್ಲೆಂಸರ್‌

ಒಂದು ಮಾವಿನ ಹಣ್ಣು ತೆಗೆದುಕೊಂಡು ಅದರ ತಿರುಳನ್ನು ಬೇರ್ಪಡಿಸಿ ಅದನ್ನು ಚೆನ್ನಾಗಿ ಗ್ರೈಂಡ್‌ ಮಾಡಿಕೊಳ್ಳಿ. ಈಗ ಒಂದು ಬೌಲ್‌ನಲ್ಲಿ 2 ಚಮಚ ಹಸಿ ಹಾಲನ್ನು ತೆಗೆದುಕೊಂಡು ಇದಕ್ಕೆ 1 ಚಮಚ ಮಾವಿನ ಹಣ್ಣಿನ ಪೇಸ್ಟ್ ಹಾಕಿಕೊಂಡು ಚೆನ್ನಾಗಿ ಮಿಶ್ರ ಮಾಡಿ. ಈಗ ಸಣ್ಣನೆಯ ಕಾಟನ್‌ ತುಂಡನ್ನು ತೆಗೆದುಕೊಂಡು ಈ ಮಿಶ್ರಣದಲ್ಲಿ ಅದ್ದಿಕೊಳ್ಳಿ. ಅದನ್ನು ಮೇಕಪ್‌ ರಹಿತ ಮುಖಕ್ಕೆ ಹಚ್ಚಿಕೊಳ್ಳಿ. ಮೂರು ನಿಮಿಷಗಳ ನಂತರ ಮತ್ತೊಂದು ಕಾಟನ್‌ ತುಂಡನ್ನು ತೆಗೆದುಕೊಂಡು ಮುಖಕ್ಕೆ ಹಚ್ಚಿದ್ದ ಮಾವಿನ ಪೇಸ್ಟ್ ಒರೆಸಿಕೊಳ್ಳಿ.

ಮಾವಿನ ಹಣ್ಣಿನ ಸ್ಕ್ರಬ್

ಈಗ ಬೌಲ್‌ನಲ್ಲಿ ಗ್ರೈಂಡ್‌ ಮಾಡಿಟ್ಟುಕೊಂಡ ಓಟ್ಸ್‌ ತೆಗೆದುಕೊಳ್ಳಿ. ಇದಕ್ಕೆ ಒಂದು ಚಮಚ ಮಾವಿನ ಪ್ಯೂರಿಯನ್ನು ಸೇರಿಸಿಕೊಳ್ಳಿ. ಇದನ್ನು ನಿಮ್ಮ ಮುಖಕ್ಕೆ ಹಚ್ಚಿ 2 ನಿಮಿಷಗಳ ಕಾಲ ಸ್ಕ್ರಬ್‌ ಮಾಡಿಕೊಳ್ಳಿ. ಮುಖದಲ್ಲಿ ಮೊಡವೆಗಳಿದ್ದರೆ ಆ ಭಾಗಕ್ಕೆ ಹಚ್ಚಿಕೊಳ್ಳಬೇಡಿ. ಓಟ್ಸ್‌ ಬಳಕೆಯು ಮುಖದಲ್ಲಿರುವ ಡೆಡ್‌ ಸೆಲ್ಸ್‌ ತೆಗೆದುಹಾಕಿ ತ್ವಚೆಯನ್ನು ಕೋಮಲವಾಗಿಸುತ್ತದೆ. ಮಾವಿನ ಹಣ್ಣಿನ ಪ್ಯೂರಿಯು ಸನ್‌ ಟ್ಯಾನ್‌ ನಿರ್ಮೂಲನೆ ಮಾಡಿ, ಮುಖದ ಕಪ್ಪು ಕಲೆಗಳನ್ನು ತೆಗೆದುಹಾಕಲು ಸಹಕಾರಿಯಾಗಿದೆ. 2 ನಿಮಷಗಳ ಮಸಾಜ್‌ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ.

ಮಾವಿನ ಹಣ್ಣಿನ ಫೇಸ್‌ ಪ್ಯಾಕ್‌

ಬೌಲ್‌ನಲ್ಲಿ ಮಾವಿಹಣ್ಣಿನ ತಿರುಳನ್ನು ತೆಗೆದುಕೊಂಡು ಚೆನ್ನಾಗಿ ಮ್ಯಾಶ್‌ ಮಾಡಿಕೊಳ್ಳಿ. ಅದಕ್ಕೆ ಅಳತೆಯಂತೆ ತೆಗೆದಿಟ್ಟ ಅಕ್ಕಿ ಹುಡಿ ಹಾಗೂ ಕಡ್ಲೆ ಹುಡಿಯನ್ನು ಒಂದೊಂದಾಗಿ ಹಾಕಿಕೊಂಡು ಕಾಳು ಕಟ್ಟದಂತೆ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ಈ ಮಿಶ್ರಣವನ್ನು ಮುಖಕ್ಕೆ ಹಚ್ಚಿಕೊಂಡು 20 ನಿಮಿಷಗಳ ನಂತರ ತಣ್ಣನೆಯ ನೀರಿನಿಂದ ಮುಖವನ್ನು ತೊಳೆಯಿರಿ. ಹೀಗೆ ವಾರಕ್ಕೆ ಎರಡು ಬಾರಿ ಮಾಡುವುದರಿಂದ ಮುಖದಲ್ಲಿರುವ ಮೊಡವೆಗಳು ದೂರವಾಗುತ್ತದೆ. ಮುಖದ ಸೌಂದರ್ಯ ಹೆಚ್ಚುತ್ತದೆ.

ಮಾವಿನ ಫೇಶಿಯಲ್ ಮಾಸ್ಕ್

ಬೌಲ್‌ನಲ್ಲಿ ಒಂದು ಮಾವಿನ ಹಣ್ಣನ್ನು ಸಿಪ್ಪೆ ತೆಗೆದು, ತಿರುಳನ್ನು ಸ್ಮ್ಯಾಶ್ ಮಾಡಿಕೊಳ್ಳಿ. ಅದಕ್ಕೆ ಸ್ವಲ್ಪ ಕಪ್ ಜೇನುತುಪ್ಪ ಹಾಗೂ 1 ಚಮಚ ಬಾದಾಮಿ ಎಣ್ಣೆಯನ್ನು ಸೇರಿಸಿಕೊಳ್ಳಿ. ಜೇನುತುಪ್ಪದ ಹೈಡ್ರೇಟಿಂಗ್ ಗುಣಲಕ್ಷಣಗಳು ಮತ್ತು ಮಾವಿನ ವಿಟಮಿನ್ ಸಿ ಜೊತೆಗೆ ಮುಖದ ಕಾಂತಿಯನ್ನು ಹೆಚ್ಚಿಸಲು ಬಾದಾಮಿ ಎಣ್ಣೆ, ಈ ಮೂರು ವಸ್ತುಗಳಿಂದ ಫೇಶಿಯಲ್‌ ಮಾಸ್ಕ್‌ ಸಿದ್ಧಪಡಿಸಿಕೊಳ್ಳಿ. ಇದನ್ನು ಮುಖದ ಮೇಲೆ ತೆಳ್ಳನೆ ಲೇಪಿಸಿಕೊಳ್ಳಿ.

ಇದನ್ನೂ ಓದಿ | ಅಂದಿನ ಶಿವರುದ್ರೇಗೌಡರ ಮಗಳು ಈಗ ಹೇಗೌವ್ರೆ ವಸಿ ನೋಡಿ; ಫ್ಯಾನ್ಸ್‌ ಧಡ್ಕನ್‌ ಹೆಚ್ಚಿಸ್ತಿದ್ದಾರೆ ಹೆಬಾ ಪಟೇಲ್ PHOTOS

20 ನಿಮಿಷಗಳ ಕಾಲ ಮುಖದಲ್ಲಿ ಈ ಮಾಸ್ಕ್‌ ಆರಲು ಬಿಟ್ಟು ನಂತರ ಬೆಚ್ಚಗಿನ ನೀರಿನಿಂದ ತೊಳೆಯಿರಿ. ವಾರಕ್ಕೆ ಒಂದು ಬಾರಿಯಾದರೂ ಈ ರೀತಿ ಮಾವಿನ ಫೇಶಿಯಲ್ ಮಾಸ್ಕ್ ಹಚ್ಚುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚುವುದಲ್ಲದೆ ಚರ್ಮ ಕೋಮಲವಾಗುತ್ತದೆ.

ಬೇಸಿಗೆಯಲ್ಲಿ ಮುಖದ ಸೌಂದರ್ಯವನ್ನು ಕಾಪಾಡಿಕೊಳ್ಳಲು ಮಾವಿನ ಹಣ್ಣಿನ ಫೇಶಿಯಲ್‌ ಬಲು ಉತ್ತಮ ಆಯ್ಕೆ. ಅದರಲ್ಲೂ ಬೇಸಿಗೆಯ ಕಿರಿಕಿರಿ, ಮುಖದಲ್ಲಿ ಮೊಡವೆಯುಂಟಾಗುವುದು, ಬೆವರಿನ ಕಾರಣದಿಂದ ಮುಖ ಕಳಾಹೀನವಾಗುವುದಿದ್ದರೆ ವಾರಕ್ಕೆ ಒಂದು ಬಾರಿಯಾದರೂ ಮನೆಯಲ್ಲೇ ಮಾವಿನ ಹಣ್ಣಿನ ಫೇಶಿಯಲ್‌ ಮಾಡಿಕೊಂಡು ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಿ.

Whats_app_banner