ಕೈಲಾಸ ಮಾನಸ ಸರೋವರ ಯಾತ್ರೆಯ ಸಹಾಯಧನ ತಗೊಳಲ್ವಾ; ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಕೈಲಾಸ ಮಾನಸ ಸರೋವರ ಯಾತ್ರೆಯ ಸಹಾಯಧನ ತಗೊಳಲ್ವಾ; ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ

ಕೈಲಾಸ ಮಾನಸ ಸರೋವರ ಯಾತ್ರೆಯ ಸಹಾಯಧನ ತಗೊಳಲ್ವಾ; ಅರ್ಜಿ ಸಲ್ಲಿಸುವ ವಿಧಾನ, ಅಗತ್ಯ ದಾಖಲೆಗಳ ವಿವರ ಇಲ್ಲಿದೆ

ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಂಡವರು ಕರ್ನಾಟಕ ಸರ್ಕಾರ ಕೊಡುವ ಸಹಾಯಧನಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಇಂದು (ಅಕ್ಟೋಬರ್ 3) ಶುರುವಾಗಿದ್ದು, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳ ವಿವರ ಇಲ್ಲಿದೆ.

ಕೈಲಾಸ ಮಾನಸ ಸರೋವರ ಯಾತ್ರೆಯ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಶುರುವಾಗಿದೆ. (ಸಾಂಕೇತಿಕ ಚಿತ್ರ)
ಕೈಲಾಸ ಮಾನಸ ಸರೋವರ ಯಾತ್ರೆಯ ಸಹಾಯಧನಕ್ಕೆ ಅರ್ಜಿ ಸಲ್ಲಿಕೆ ಶುರುವಾಗಿದೆ. (ಸಾಂಕೇತಿಕ ಚಿತ್ರ)

ಬೆಂಗಳೂರು: ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗಿ ಬಂದಿದ್ದೀರಾ? ಜೀವನದಲ್ಲೊಮ್ಮೆ ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳಬೇಕು ಎಂಬುದು ಬಹುತೇಕ ಹಿಂದೂಗಳ ಕನಸು, ಆಸೆ. ಇದನ್ನು ಈಡೇರಿಸುವುದಕ್ಕೆ ಕರ್ನಾಟಕ ಸರ್ಕಾರ ಈ ಯಾತ್ರೆಗೆ 30,000 ರೂಪಾಯಿ ಸಹಾಯಧನ ನೀಡುತ್ತಿದೆ. ಆದರೆ ಮೊದಲೇ ಯಾತ್ರೆ ಕೈಗೊಂಡು ಬಂದ ನಂತರ ಈ ಸಹಾಯಧನವನ್ನು ಸರ್ಕಾರ ನೀಡುತ್ತಿದೆ. ಪ್ರಸಕ್ತ ವರ್ಷದ ಸಹಾಧಯನ ಪಡೆಯಲು ಇಂದಿನಿಂದ (ಅಕ್ಟೋಬರ್ 3) ಅರ್ಜಿ ಸಲ್ಲಿಸಬಹುದಾಗಿದೆ. ಈ ಸಹಾಯಧನ ಕರ್ನಾಟಕದವರಿಗಷ್ಟೆ ಸೀಮಿತ. ಕರ್ನಾಟಕ ಸರ್ಕಾರ ವಿವಿಧ ಯಾತ್ರಾರ್ಥಿಗಳಿಗೆ ಸಹಾಯಧನ ನೀಡುತ್ತಿದ್ದು, ಪ್ರಸಕ್ತ ವರ್ಷದ ಸಹಾಯಧನಕ್ಕಾಗಿ ಅರ್ಹರಿಂದ ಅರ್ಜಿಯನ್ನು ಅದು ಆಹ್ವಾನಿಸಿದೆ. 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದಿಂದ ಪ್ರಥಮ ಬಾರಿಗೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಕೈಗೊಂಡ ಯಾತ್ರಾರ್ಥಿಗಳು ಇದಕ್ಕೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದು ಹೇಗೆ, ಷರತ್ತುಗಳೇನು, ಏನೆಲ್ಲ ದಾಖಲೆ ಬೇಕು ಇತ್ಯಾದಿ ವಿವರಗಳು ಇಲ್ಲಿವೆ.

ಕೈಲಾಸ ಮಾನಸ ಸರೋವರ ಯಾತ್ರೆ ಸಹಾಯಧನಕ್ಕೆ ಅರ್ಜಿ ಸಲ್ಲಿಸುವುದು ಹೀಗೆ

ಕೈಲಾಸ ಮಾನಸ ಸರೋವರ ಯಾತ್ರೆ ಸಹಾಯಧನದ ಫಲಾನುಭವಿ ಅಂದರೆ ಯಾತ್ರಾರ್ಥಿಯು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಈ ಸಹಾಯಧನಕ್ಕೆ 2025ರ ಜನವರಿ 15ರ ಸಂಜೆ 4 ಗಂಟೆ ಒಳಗೆ ಅರ್ಜಿ ಸಲ್ಲಿಸಬೇಕು. ಸರ್ಕಾರವು ಅನುದಾನ ಲಭ್ಯತೆಗೆ ಅನುಗುಣವಾಗಿ ಬಿಡುಗಡೆ ಮಾಡಿರುವ ಮಾರ್ಗಸೂಚಿಯ ಅನ್ವಯ ಅನುದಾನವನ್ನು ವಿತರಿಸಲಿದೆ.

ಕೈಲಾಸ ಮಾನಸ ಸರೋವರ ಯಾತ್ರೆ ಸಹಾಯಧನಕ್ಕೆ ಯಾತ್ರಾರ್ಥಿಯು https://sevasindhuservices.karnataka.gov.in ತಾಣದಲ್ಲಿ ಲಾಗಿನ್ ಆಗಿ ಆನ್‌ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು.

ಕೈಲಾಸ ಮಾನಸ ಸರೋವರ ಯಾತ್ರೆ ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳಿವು

1) ಒಂದು ಭಾವಚಿತ್ರ (ಪಾಸ್‌ಪೋರ್ಟ್ ಅಳತೆ)

2) ಆಧಾರ್ ಕಾರ್ಡ್‌ನ ಎರಡೂ ಬದಿ ತಪ್ಪದೇ ಅಪ್‌ಲೋಡ್ ಮಾಡಬೇಕು.

3) ಚುನಾವಣಾ ಗುರುತಿನ ಚೀಟಿ / ರೇಷನ್ ಕಾರ್ಡ್

4) ಯಾತ್ರಾರ್ಥಿಯು 50 ರೂಪಾಯಿ ಇ ಛಾಪಾ ಕಾಗದದಲ್ಲಿ ಈ ಹಿಂದೆ ಸಹಾಯಧನವನ್ನು ಪಡೆದಿಲ್ಲವೆಂದು ಸ್ವಯಂ ದೃಢೀಕರಿಸಿ ನೋಟರಿ ಮೊಹರು ಮತ್ತು ಸಹಿಯೊಂದಿಗೆ ದೃಢೀಕರಣವನ್ನು ಅರ್ಜಿಯೊಂದಿಗೆ ಅಪ್‌ಲೋಡ್ ಮಾಡಬೇಕು.

5) ಕೈಲಾಸ ಮಾನಸ ಸರೋವರ ಯಾತ್ರೆ ಕೈಗೊಳ್ಳುವಾಗ ಕೇಂದ್ರ ಸರ್ಕಾರ ನಿರ್ದಿಷ್ಟಪಡಿಸಿರುವ ಮಾರ್ಗವಾಗಿ ತೆರಳಿದಲ್ಲಿ ಕೇಂದ್ರ ಸರ್ಕಾರದ ವತಿಯಿಂದ ನೀಡಲಾಗುವ ದೃಢೀಕರಣವನ್ನು ನೀಡಬೇಕು.

6) ನೇಪಾಳ / ಟಿಬೆಟ್ ಮಾರ್ಗವಾಗಿ ಯಾತ್ರೆ ಕೈಗೊಂಡಿದ್ದಲ್ಲಿ ಲಾಹ್ಸ, ಚೀನಾ ಸರ್ಕಾರ ನೀಡಿದ C.I.P.S.C ಪ್ರತಿಯನ್ನು ಒದಗಿಸಬೇಕು.

7) ಗ್ರೂಪ್ ವೀಸಾ

8) ಪಾಸ್‌ಪೋರ್ಟ್‌ನ ಮೊದಲ ಹಾಗೂ ಕೊನೆಯ ಪ್ರತಿ ಮತ್ತು ಸೀಲ್ ಇರುವಂತಹ ಪ್ರತಿಯ ಕಲರ್ ಜೆರಾಕ್ಸ್ ಅಪ್ಲೋಡ್ ಮಾಡಬೇಕು.

9) ಸಹಾಯಧನಕ್ಕೆ ಅರ್ಜಿ ಸಲ್ಲಿಸುವ ಯಾತ್ರಾರ್ಥಿಯ ಮಾನ್ಯವಾಗಿರುವ ಬ್ಯಾಂಕ್ ಖಾತೆ ಹೊಂದಿರಬೇಕು. ಆ ಖಾತೆಗೆ ಆಧಾರ್ ಲಿಂಕ್ ಆಗಿರಬೇಕು. ಎನ್‌ಪಿಸಿಐ ಆಕ್ಟಿವ್ ಇರಬೇಕು.

ಗಮನಿಸಿ: ಕರ್ನಾಕಟ ಸರ್ಕಾರದ ಮಾರ್ಗಸೂಚಿಯ ಪ್ರಕಾರ, ಆಯಾಯಾ ವರ್ಷದ ಅನುದಾನವನ್ನು ಆಯಾಯಾ ವರ್ಷ ಪಾವತಿಸಲು ಅವಕಾಶ. ಹಾಗಾಗಿ, ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಅನ್ನು ತಪ್ಪದೇ ಲಿಂಕ್ ಮಾಡಿ. ಅದೇ ರೀತಿ ಅರ್ಜಿ ಸಲ್ಲಿಸುವ ಮೊದಲೇ ಎನ್‌ಪಿಸಿಐ ಆಕ್ಟಿವ್‌ ಮಾಡಿಸಿಕೊಂಡಿರಬೇಕು. ಇದು ಯಾತ್ರಾರ್ಥಿಗಳೇ ಮಾಡಬೇಕಾದ ಕೆಲಸ. ಇದನ್ನು ಮಾಡದೇ ಸಹಾಯಧನಕ್ಕೆ ಅರ್ಜಿ ಸಲ್ಲಿಸಿದರೆ ಖಾತೆಗೆ ಜಮೆ ಆಗಲ್ಲ. ಅವಧಿ ಮುಗಿದ ಬಳಿಕ ಸಹಾಯಧನ ಕೋರಿ ಅರ್ಜಿ ಸಲ್ಲಿಸಿದರೆ ಸಹಾಯಧನವೂ ಸಿಗುವುದಿಲ್ಲ ಎಂದು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ತಿಳಿಸಿದೆ.

Whats_app_banner