ನಿಮ್ಮ ಜೀವ ವಿಮೆ ಪಾಲಿಸಿಯನ್ನು ಸರಂಡರ್ ಮಾಡುವಾಗ ಹೆಚ್ಚು ಹಣ ಪಡೆಯುವುದು ಹೇಗೆ; ಹೊಸ ನಿಯಮದ ಲೆಕ್ಕಾಚಾರ ಹೀಗಿದೆ
ಜೀವ ವಿಮೆಯಲ್ಲಿ ಎಂಡೋಮೆಂಟ್ ಪಾಲಿಸಿಗಳದ್ದು ಒಂದು ವರ್ಗ. ಇದು ವಿಮೆಯಾದರೂ ಉಳಿತಾಯದ ಮಾದರಿಯ ಸೌಲಭ್ಯವಿದ್ದ ಕಾರಣ ಇದನ್ನು ಅನೇಕರು ಖರೀದಿಸಿದ್ದು, ಸರಂಡರ್ ಮೌಲ್ಯದ ವಿಚಾರದಲ್ಲಿ ಅಸಮಾಧಾನ ಇದ್ದೇ ಇದೆ. ಈಗ ಹೊಸ ನಿಯಮ ಜಾರಿಗೆ ಬಂದಿರುವ ಕಾರಣ, ಜೀವ ವಿಮೆ ಪಾಲಿಸಿಯನ್ನು ಸರಂಡರ್ ಮಾಡುವಾಗ ಹೆಚ್ಚು ಹಣ ಪಡೆಯಬಹುದು. ಹೇಗಂತೀರಾ, ಹೊಸ ನಿಯಮದ ಲೆಕ್ಕಾಚಾರ ಹೀಗಿದೆ ಗಮನಿಸಿ.
ನವದೆಹಲಿ/ಬೆಂಗಳೂರು: ವಿಮಾ ನಿಯಂತ್ರಕ ಸಂಸ್ಥೆ ಐಆರ್‌ಡಿಎಐ ಜೀವ ವಿಮಾ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಿ ಜಾರಿಗೊಳಿಸಿದೆ. ಇದು ಪಾಲಿಸಿದಾರರಿಗೆ ಹೆಚ್ಚಿನ ಅನುಕೂಲವನ್ನು ಮಾಡಿಕೊಟ್ಟಿದ್ದು, ಈಗ, ಪಾಲಿಸಿಯನ್ನು ಅವಧಿಗೂ ಮೊದಲೇ ಸರಂಡರ್ ಮಾಡಿದರೆ ಗ್ರಾಹಕರಿಗೆ ಹಚ್ಚಿನ ಮರುಪಾವತಿ ಮೌಲ್ಯ ಸಿಗಲಿದೆ. ಸರಂಡರ್ ಮೌಲ್ಯಕ್ಕೆ ಸಂಬಂಧಿಸಿದ ವಿಶೇಷ ನಿಯಮ ಅಕ್ಟೋಬರ್ 1 ರಿಂದ ಜಾರಿಗೆ ಬಂದಿದ್ದು, ಪಾಲಿಸಿ ಖರೀದಿಸಿ ವರ್ಷದೊಳಗೆ ಅದನ್ನು ಸರಂಡರ್ ಮಾಡುವವರಿಗೂ ಹೆಚ್ಚು ಪ್ರಯೋಜನ ಸಿಗಲಿದೆ. ಅವರು ಕಟ್ಟಿದ ಎಲ್ಲ ಹಣವೂ ನಷ್ಟವಾಗುವುದಿಲ್ಲ. ತಪ್ಪಾಗಿ ಮಾರಾಟ ಮಾಡಲ್ಪಟ್ಟ ಪಾಲಿಸಿಯನ್ನು ಕೂಡ ಸುಲಭವಾಗಿ ಹಿಂದಿರುಗಿಸಬಹುದು. ಅಂದ ಹಾಗೆ, ಪಾಲಿಸಿ ಮೆಚ್ಯುರಿಟಿ ಆಗುವ ಮೊದಲೇ ಅದನ್ನು ಜೀವ ವಿಮಾ ಕಂಪನಿಗೆ ಹಿಂದಿರುಗಿಸಿದಾಗ, ಅದು ನೀಡುವ ಮೊತ್ತವನ್ನು ಸರಂಡರ್ ಮೌಲ್ಯ ಎನ್ನುತ್ತಾರೆ. ಈ ಮೌಲ್ಯವನ್ನು ಪಾವತಿಸಿದ ಒಟ್ಟು ಪ್ರೀಮಿಯಂ ಆಧರಿಸಿ ನಿರ್ಧರಿಸಲಾಗುತ್ತದೆ.
ಹೊಸ ಸರಂಡರ್ ನಿಯಮ ಅನ್ವಯವಾಗುವ ಪಾಲಿಸಿಗಳಿವು
ಹೊಸ ಸರಂಡರ್ ನಿಯಮವು ಜೀವ ವಿಮೆಯ ಎಂಡೋಮೆಂಟ್ ಪಾಲಿಸಿಗಳಿಗೆ ಮಾತ್ರ ಅನ್ವಯಿಸುತ್ತದೆ. ಎಂಡೋಮೆಂಟ್ ಪಾಲಿಸಿ ಎಂದರೆ ವಿಮೆಯ ಜೊತೆಗೆ ಉಳಿತಾಯದ ಅಂಶವನ್ನು ಹೊಂದಿರುವ ಪಾಲಿಸಿ. ಹೊಸ ನಿಯಮದ ಅನುಷ್ಠಾನದಿಂದ, ಎಂಡೋಮೆಂಟ್ ಪಾಲಿಸಿಗಳಲ್ಲಿ ವಿಮಾ ಕಂಪನಿಗಳ ಲಾಭದ ಮಾರ್ಜಿನ್ ಕಡಿಮೆಯಾಗುತ್ತದೆ. ಯುಲಿಪ್ ಮತ್ತು ಟರ್ಮ್ ಇನ್ಶೂರೆನ್ಸ್ ಪಾಲಿಸಿಗಳಿಗೆ ಹೊಸ ನಿಯಮ ಅನ್ವಯಿಸುವುದಿಲ್ಲ.
ಈ ಮೊದಲು, ಪಾಲಿಸಿದಾರರು ಒಂದು ವರ್ಷದ ನಂತರ ಜೀವ ವಿಮಾ ಪಾಲಿಸಿಯನ್ನು ಮುಚ್ಚಿದರೆ ಅಥವಾ ನಿಲ್ಲಿಸಿದರೆ, ಆಗ ಅವರ ಸಂಪೂರ್ಣ ಪ್ರೀಮಿಯಂ ಅವರಿಗೆ ನಷ್ಟವಾಗುತ್ತಿತ್ತು. ಹೊಸ ವಿಶೇಷ ಸರೆಂಡರ್ ಮೌಲ್ಯದ ನಿಯಮಗಳೊಂದಿಗೆ, ಮೊದಲ ವರ್ಷದ ನಂತರವೂ ಪಾಲಿಸಿಯನ್ನು ಹಿಂತಿರುಗಿಸಿದರೆ ಪಾಲಿಸಿದಾರರು, ಸರಂಡರ್ ಮೌಲ್ಯ ಪಡೆಯಲು ಅರ್ಹರಾಗಿರುತ್ತಾರೆ. ಆದಾಗ್ಯೂ, ಇದಕ್ಕಾಗಿ, ಪಾಲಿಸಿದಾರರು ಕನಿಷ್ಠ ಒಂದು ವರ್ಷದವರೆಗೆ ಪ್ರೀಮಿಯಂ ಪಾವತಿಸಬೇಕಾಗುತ್ತದೆ, ಆಗ ಮಾತ್ರ ಅವರು ಈ ನಿಯಮದ ಪ್ರಯೋಜನವನ್ನು ಪಡೆಯಲು ಸಾಧ್ಯವಾಗುತ್ತದೆ.
ಹೊಸ ನಿಯಮದ ಪ್ರಕಾರ ಸರಂಡರ್ ಲೆಕ್ಕ
ಸರಂಡರ್ ಅವಧಿ | ವಿಮೆ ಮೊತ್ತ ಮತ್ತು ಬೋನಸ್ (ರೂಪಾಯಿ) | ಸರಂಡರ್ ಮೌಲ್ಯ (ರೂಪಾಯಿ) | ಪ್ರೀಮಿಯಂನ ಶೇಕಡಾವಾರು (%) |
---|---|---|---|
1 ವರ್ಷ | 60000 | 31295 | 62.59 |
2 ವರ್ಷ | 120000 | 67284 | 67.28 |
3 ವರ್ಷ | 180000 | 108495 | 72.33 |
4 ವರ್ಷ | 240000 | 155510 | 77.76 |
5 ವರ್ಷ | 300000 | 208967 | 83.59 |
7 ವರ್ಷ | 420000 | 338083 | 96.60 |
9 ವರ್ಷ | 540000 | 502235 | 111.7 |
ಗಮನಿಸಿ: 50,000 ರೂಪಾಯಿಗಳ ವಾರ್ಷಿಕ ಪ್ರೀಮಿಯಂ ಮತ್ತು 5 ಲಕ್ಷ ರೂಪಾಯಿಗಳ ವಿಮಾ ಮೊತ್ತದ ಮೇಲೆ 10,000 ರೂಪಾಯಿಗಳ ಬೋನಸ್ ಆಧಾರದ ಮೇಲೆ 10 ವರ್ಷಗಳ ಪಾಲಿಸಿಗಾಗಿ ಈ ಲೆಕ್ಕಾಚಾರವನ್ನು ಮಾಡಲಾಗಿದೆ. ಇವು ನಿಖರ ಲೆಕ್ಕಾಚಾರವಲ್ಲ. ಆದರೆ ಸರಂಡರ್ ಮೌಲ್ಯ ತಿಳಿಯುವುದಕ್ಕಾಗಿ ಅದನ್ನು ಅರ್ಥಮಾಡಿಸುವ ಸಲುವಾಗಿ ನೀಡಿದ ಲೆಕ್ಕಾಚಾರ ಎಂಬುದನ್ನು ನೆನಪಿಟ್ಟುಕೊಳ್ಳಿ.
ಈ ಹಿಂದೆ ಸರಂಡರ್ ಮಾಡಿದಾಗ ಸಿಕ್ತಾ ಇದ್ದದ್ದು ಇಷ್ಟೆ
ಹಳೆಯ ನಿಯಮಗಳ ಪ್ರಕಾರ, ಒಂದು ವರ್ಷದ ನಂತರ ಜೀವ ವಿಮೆಯ ಪಾಲಿಸಿಯ ಸರೆಂಡರ್ ಮೇಲೆ ಪಾವತಿಸಿದ ಪ್ರೀಮಿಯಂ ಮರುಪಾವತಿಗೆ ಯಾವುದೇ ಅವಕಾಶವಿಲ್ಲ. ಎರಡು ವರ್ಷಗಳ ನಂತರ ಪಾಲಿಸಿಯನ್ನು ಹಿಂತಿರುಗಿಸಿದಾಗ, ಪಾವತಿಸಿದ ಒಟ್ಟು ವಿಮಾ ಪ್ರೀಮಿಯಂನ 30% ಅನ್ನು ಮರುಪಾವತಿ ಪಡೆಯಲು ಸಾಧ್ಯವಿತ್ತು. ನೀವು ಮೂರು ವರ್ಷಗಳ ನಂತರ ಪಾಲಿಸಿಯನ್ನು ಹಿಂತಿರುಗಿಸಿದರೆ, ನೀವು ಶೇಕಡ 35 ಮೊತ್ತ ಪಡೆಯುವ ಅವಕಾಶವಿತ್ತು. ನೀವು ಅದನ್ನು ನಾಲ್ಕರಿಂದ ಏಳು ವರ್ಷಗಳ ನಡುವೆ ಹಿಂತಿರುಗಿಸಿದರೆ, ಆಗ ಶೇಕಡ 50 ಮತ್ತು ನೀವು ಪಾಲಿಸಿಯ ಮುಕ್ತಾಯಕ್ಕೆ ಎರಡು ವರ್ಷಗಳ ಮೊದಲು ನೀವು ಪಾಲಿಸಿಯನ್ನು ಹಿಂದಿರುಗಿಸಿದರೆ, ಶೇಕಡ 90 ಮರುಪಾವತಿ ಪಡೆಯುವ ಅವಕಾಶವಿತ್ತು. ಪರಿಷ್ಕೃತ ನಿಯಮ ವಿಮಾ ಕ್ಷೇತ್ರದಲ್ಲಿ ಗ್ರಾಹಕರಿಗೆ ಆಶ್ವಾಸನೆ ನೀಡಿದ್ದು, ವೈಯಕ್ತಿಕ ಹಣಕಾಸು ವಿಚಾರದಲ್ಲೂ ಭರವಸೆ ಮೂಡಿಸಿದೆ.