ಕನ್ನಡ ಸುದ್ದಿ  /  ಜೀವನಶೈಲಿ  /  ಹುಷಾರು, ಮೊಬೈಲ್‌ ಮಾಯಾಂಗನೆಯ ಗೀಳಿನಲ್ಲಿ ಕಳೆದು ಹೋಗದಿರಲಿ ಬದುಕು, ಮಿತಿ ಇದ್ದರೆ ಎಲ್ಲವೂ ಚೆನ್ನ; ರಂಗ ನೋಟ ಅಂಕಣ

ಹುಷಾರು, ಮೊಬೈಲ್‌ ಮಾಯಾಂಗನೆಯ ಗೀಳಿನಲ್ಲಿ ಕಳೆದು ಹೋಗದಿರಲಿ ಬದುಕು, ಮಿತಿ ಇದ್ದರೆ ಎಲ್ಲವೂ ಚೆನ್ನ; ರಂಗ ನೋಟ ಅಂಕಣ

ರಂಗ ನೋಟ ಅಂಕಣ: ವಿಶ್ವ ವಿದ್ಯಮಾನಗಳನ್ನು ಕಟ್ಟಿಕೊಡುವ, ಒಳಿತಿನೆಡೆಗೆ ಮುನ್ನಡೆಯಲು ಪ್ರೇರಣೆ ಕೊಡುವ ವಿಶಿಷ್ಟ ಪಾಕ್ಷಿಕ ಅಂಕಣ “ರಂಗ ನೋಟ”. ವೈಯಕ್ತಿಕ ಹಣಕಾಸು, ಹೂಡಿಕೆ ಮತ್ತು ಆರ್ಥಿಕ ವಿಚಾರಗಳಲ್ಲಿ ತಳಸ್ಪರ್ಶಿ ಜ್ಞಾನವಿರುವ ರಂಗಸ್ವಾಮಿ ಮೂಕನಹಳ್ಳಿ ಈ ಅಂಕಣದ ಲೇಖಕರು. ಮೊಬೈಲ್‌ ಗೀಳಿನಿಂದ ಆಗುತ್ತಿರುವ ಅನಾಹುತಗಳ ಬಗ್ಗೆ ಎಚ್ಚರಿಸುವ ಪ್ರಯತ್ನ ಇಂದಿನ ಬರಹದಲ್ಲಿದೆ.

ಮೊಬೈಲ್ ಗೀಳು ಒಳ್ಳೆಯದಲ್ಲ: ರಂಗ ನೋಟ ಅಂಕಣ
ಮೊಬೈಲ್ ಗೀಳು ಒಳ್ಳೆಯದಲ್ಲ: ರಂಗ ನೋಟ ಅಂಕಣ (Rangaswamy Mookanahalli)

ವಿಶ್ವ ಆರ್ಥಿಕತೆಯಲ್ಲಿ ಭಾರತ ತನ್ನ ಹೆಸರನ್ನು ವೇಗವಾಗಿ ಮೇಲ್ಮಟ್ಟಕ್ಕೆ ಏರಿಸಿಕೊಂಡು ಸಾಗುತ್ತಿರುವ ಈ ದಿನಗಳಲ್ಲಿ ಸದ್ದಿಲ್ಲದೆ ಎಲ್ಲೆಡೆ ಆಕ್ರಮಿಸಿರುವ ಸಮಸ್ಯೆಯೊಂದಕ್ಕೆ ನಾವು ಬೇಗ ಮದ್ದು ಕಂಡುಕೊಳ್ಳಬೇಕಿದೆ. ಈಗ ನಾನು ಪ್ರಸ್ತಾಪಿಸಲು ಹೊರಟ ಸಮಸ್ಯೆ ವಿಶ್ವವ್ಯಾಪಿ. ಇದು ಕೊರೋನಾಗಿಂತ ಭಯಾನಕ ಬಿಮಾರಿ. ಇದಕ್ಕೆ ಹೆಣ್ಣು ಗಂಡು ಎನ್ನುವ ಲಿಂಗಭೇದವಿಲ್ಲ, ವಯಸ್ಸಿನ ಹಂಗಿಲ್ಲ, ಬಡವ -ಶ್ರೀಮಂತ ಎನ್ನುವ ವ್ಯತ್ಯಾಸ ತಿಳಿಯುವುದಿಲ್ಲ. ತನ್ನ ತೆಕ್ಕೆಗೆ ಸಿಕ್ಕವರನ್ನೆಲ್ಲಾ ಸೇರಿಸಿಕೊಳ್ಳುತ್ತ ಸಾಗುತ್ತದೆ. ಸಾಗುತ್ತಿರುವುದು ಎಲ್ಲಿಗೆ? ಎಂದು ಚಿಂತಿಸುವ ವ್ಯವಧಾನ ಕೂಡ ನಮ್ಮಲ್ಲಿ ಯಾರಿಗೂ ಇಲ್ಲ.

ಟ್ರೆಂಡಿಂಗ್​ ಸುದ್ದಿ

ಇದು ಕೊರೋನಾಗಿಂತ ಹೆಚ್ಚು ಭಯಾನಕ ಅಂದಿದ್ದು ಏಕೆ ಗೊತ್ತೇ? ಕೊರೋನಾ ಸಮಸ್ಯೆ ಟೈಮ್ ಬೌಂಡ್ ಆಗಿತ್ತು. ಇವತ್ತಿಗೆ ಅದರ ಅರ್ಭಟ ಇಲ್ಲವೆನ್ನುವಷ್ಟು ಗೌಣವಾಗಿದೆ. ಆದರೆ ಇಂದು ಹೇಳಲು ಹೊರಟಿರುವ ಸಮಸ್ಯೆಗೆ ಸಮಯ ಮಿತಿಯಿಲ್ಲ. ಇನ್‌ಫ್ಯಾಕ್ಟ್‌ ಸಮಯ ಸರಿಯುತ್ತಾ ಹೋದಂತೆ ಈ ರೋಗಕ್ಕೆ ಬಲಿಯಾಗುವರ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತದೆ. ನಾವು ಇಂತಹ ಒಂದು ದೊಡ್ಡ ಸಮಸ್ಯೆಯ ಸುಳಿಯಲ್ಲಿ ಸಿಲುಕಿದ್ದೇವೆ ಎನ್ನುವುದು ಕೂಡ ನಮಗೂ, ನಮ್ಮ ಸುತ್ತಮುತ್ತಲಿನವರಿಗೂ ತಿಳಿಯದೆ ಹೋಗುತ್ತಿರುವುದು ಮಾತ್ರ ಆಶ್ಚರ್ಯದ ವಿಷಯ. ಮೊಬೈಲ್ ಗೀಳು, ಹೆಚ್ಚುತ್ತಿರುವ ಸ್ಕ್ರೀನ್ ಟೈಮ್ ಇಂದು ಜಾಗತಿಕ ಪಿಡುಗಾಗಿ ಬೆಳೆದು ನಿಂತಿದೆ.

ಬೆಳಗಿನ ನಡಿಗೆಯಲ್ಲಿ ಪತ್ನಿ ರಮ್ಯಾಳ ಜೊತೆಯ ಮಾತುಕತೆಯಲ್ಲಿ ನಾನು ಸದಾ ಒಂದು ಮಾತನ್ನು ಹೇಳುತ್ತಿರುತ್ತೇನೆ 'ಬಡವರ ಮಕ್ಕಳಲ್ಲಿ ಹಸಿವು ಹೆಚ್ಚು, ಈ ಸಮಾಜದಲ್ಲಿ ತನ್ನ ಜಾಗವನ್ನು ಸೃಷ್ಟಿಸಿಕೊಳ್ಳುವ ಹಸಿವು ಹೆಚ್ಚು, ಬದುಕು ಕಟ್ಟಿಕೊಳ್ಳುವ, ಇತರರಿಗೆ, ಸಮಾಜಕ್ಕೆ ತನ್ನ ತಾಕತ್ತು ತೋರಿಸುವ ಜಿದ್ದು, ಹುಮ್ಮಸ್ಸು ಹೆಚ್ಚಾಗಿರುತ್ತದೆ' ಎನ್ನುವುದು ಆ ಮಾತುಗಳು. ಇಂದಿಗೆ ಆ ಮಾತುಗಳ ಮೇಲೆ ಅಪನಂಬಿಕೆ ಶುರುವಾಗಿದೆ.

ಇಂದು ಬೆಳಿಗ್ಗೆ ಕೂಡ ಕೆಲಸದ ನಿಮಿತ್ತ ಇಬ್ಬರೂ ಒಂದು ಸರ್ಕಾರಿ ಕಚೇರಿಗೆ ಹೋಗಿದ್ದೆವು. ಅದ್ಯಾವ ಕಾರಣಕ್ಕೊ ಅಲ್ಲಿನ ಸೆಕ್ಯುರಿಟಿ ತನ್ನ ಮಗುವನ್ನು ಕೆಲಸದ ಜಾಗಕ್ಕೆ ಕರೆ ತಂದಿದ್ದಾರೆ. ಮಗು ಯಾರನ್ನೂ ತಲೆ ಎತ್ತಿ ಕೂಡ ನೋಡುತ್ತಿರಲಿಲ್ಲ! ಮೊಬೈಲ್ ಮಾಯಾಂಗನೆಯ ತೆಕ್ಕೆಯಲ್ಲಿ ವಿಹರಿಸುತ್ತಿತ್ತು. ಇಂತಹುದೆ ದೃಶ್ಯ ಕಟ್ಟಡ ಕಟ್ಟುವ ಕಾರ್ಮಿಕರ ವಾಸದ ಜಾಗದಲ್ಲಿ, ತರಕಾರಿ ಮಾರುವ ಜನರ ಮನೆಗಳಲ್ಲಿ, ಅಂಗಡಿಗಳಲ್ಲಿ, ಹೋಟೆಲ್, ಮೊಬೈಲ್ ಶಾಪ್, ಇನ್ಯಾವುದೇ ಶೋ ರೂಮ್, ಅಂಗಡಿ ಮುಂಗಟ್ಟುಗಳಲ್ಲಿ ಗಮನಿಸಿ ನೋಡಿ ಏಲ್ಲರೂ ಮೊಬೈಲ್‌ನಲ್ಲಿ ಮಗ್ನರು. ಕೆಲವೊಮ್ಮೆ ಅಂಗಡಿಯೊಳಗೆ ಬಂದ ಗ್ರಾಹಕನನ್ನು ಅದೇಕೆ ಬಂದೆ? ಎನ್ನುವಂತೆ ನೋಡುವ ಕೆಲಸಗಾರರನ್ನು ಕಂಡಿದ್ದೇನೆ.

ಮೊಬೈಲ್ ಪ್ರಪಂಚದಿಂದ ಹೊರಬಂದು 'ನಮಸ್ತೆ, ಹೇಗಿದ್ದೀರಿ?' ಎಂದು ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿಸುವ ಸಂಸ್ಕಾರ ಮರೆಯಾಗಿ ಹೋಗುತ್ತಿದೆ. ಅದರಲ್ಲೂ ಟೀನೇಜ್ ಮಕ್ಕಳು ತಮ್ಮದೇ ಆದ ಸರ್ಕಲ್ ಬಿಟ್ಟು ಬೇರೆಯವರನ್ನು ಕಣ್ಣೆತ್ತಿ ಸಹ ನೋಡುವುದಿಲ್ಲ. ಹೋಗಲಿ ಆ ಮಕ್ಕಳು ತಮ್ಮ ಸಾಮರ್ಥ್ಯದಿಂದ ಬದುಕನ್ನು ಕಟ್ಟಿಕೊಳ್ಳುವ ಕ್ಷಮತೆ ಹೊಂದಿದ್ದಾರೆಯೇ? ಇಲ್ಲ, ಅದು ಕೂಡ ಇಲ್ಲ. ಭ್ರಾಮಕ ಜಗತ್ತಿನಲ್ಲಿ ವಿಹರಿಸುವುದು ಅವರಿಗೆ ಖುಷಿ ನೀಡುತ್ತಿದೆ.

ಮೊಬೈಲ್ ಗೀಳಿನ ಅಪಾಯದ ಬಗ್ಗೆ ಇರಲಿ ಎಚ್ಚರ
ಮೊಬೈಲ್ ಗೀಳಿನ ಅಪಾಯದ ಬಗ್ಗೆ ಇರಲಿ ಎಚ್ಚರ (Rangaswamy Mookanahalli)

ಹೀಗಿದೆ ಭಾರತದಲ್ಲಿ ಮೊಬೈಲ್‌ ನೋಡುವ ಅವಧಿ

ಅಮೆರಿಕದಲ್ಲಿ ಈ ಮೊಬೈಲ್‌ನಲ್ಲಿ ಕಳೆಯುವ ಸಮಯ 2:55, ಅಂದರೆ ಎರಡು ಗಂಟೆ ಐವತೈದು ನಿಮಿಷ! ಭಾರತದಲ್ಲಿ ಈ ಸಮಯ 7 ಗಂಟೆ 50 ನಿಮಿಷ ಎನ್ನುತ್ತದೆ ಅಂಕಿ-ಅಂಶ. ಜಗತ್ತಿನ ಅತಿ ಹೆಚ್ಚು ಸಮಯವನ್ನು ಮೊಬೈನ್‌ನಲ್ಲಿ ಕಳೆಯುವ ದೇಶಗಳ ಪ್ರಥಮ ಇಪ್ಪತ್ತು ದೇಶದ ಪಟ್ಟಿ ಮಾಡಿದರೆ ಅವೆಲ್ಲವೂ ಅಭಿವೃದ್ಧಿ ಹೊಂದುತ್ತಿರುವ ದೇಶಗಳಾಗಿವೆ. ಮುಂದುವರೆದ ದೇಶಗಳು ಕಡಿಮೆ ಅಂತಲ್ಲ, ಇದ್ದುದರಲ್ಲಿ ಸ್ವಲ್ಪ ವಾಸಿ ಅಷ್ಟೇ. ನಾವು ಯಾವುದಕ್ಕೆ ಈ ಮೊಬೈಲ್ ಬಳಸುತ್ತಿದ್ದೇವೆ ಎನ್ನುವುದು ಮುಖ್ಯ.

ಕೆಲವು ದೇಶಗಳಲ್ಲಿ ನಿತ್ಯವೂ ಜನ ಸರಾಸರಿ 10 ಗಂಟೆಯನ್ನು ಮೊಬೈಲ್‌ನಲ್ಲಿ ಕಳೆಯುತ್ತಿದ್ದಾರೆ. ಇಷ್ಟೊಂದು ವೇಳೆ ಅವರು ಅದರಲ್ಲಿ ಹೇಗೆ ಕಳೆಯುತ್ತಾರೆ? ಎನ್ನುವುದು ಕಳವಳಕಾರಿ ಅಂಶ. ಮೊಬೈಲ್ ಗೇಮ್ಸ್, ಸೋಶಿಯಲ್ ಮೀಡಿಯಾ, ಆನ್‌ಲೈನ್‌ ಗೇಮ್ಸ್ ಇತ್ಯಾದಿಗಳು ಈ ಸಮಯದ ಸಿಂಹಪಾಲು ಪಡೆಯುತ್ತವೆ. ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ ದಿನಕ್ಕೆ ಎರಡು ಗಂಟೆಗಿಂತ ಹೆಚ್ಚು ಮೊಬೈಲ್ ವೀಕ್ಷಣೆ ಮಾಡುವುದು ಮನೋದೈಹಿಕ ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಈ ಮಾನದಂಡವನ್ನು ಯಾವ ದೇಶವೂ ಪಾಲಿಸುತ್ತಿಲ್ಲ. ಇದೊಂದು ದೊಡ್ಡ ಪಿಡುಗಾಗಿ ಮಾರ್ಪಾಟಾಗಿದೆ. ಮೊನ್ನೆ ನನ್ನ ಮೊಬೈಲ್ ಫೋನ್ ಕೆಟ್ಟು ಕುಳಿತ್ತಿತ್ತು . ಎದುರಿಗೆ ಸಿಕ್ಕವರೆಲ್ಲಾ 'ಮೊಬೈಲ್ ಬಿಟ್ಟು ಹೇಗಿರುತ್ತೀರಿ?, ಎರಡು ದಿನ ಊಟ ಬಿಟ್ಟು ಬೇಕಾದರೂ ಇರಬಹುದು, ಒಪ್ಪೊತ್ತು ಮೊಬೈಲ್ ಬಿಟ್ಟಿರಲಾಗದು' ಎನ್ನುವ ಮಾತುಗಳನ್ನು ಆಡಿದರು.

ನನ್ನ ಮೊಬೈಲ್ ಅಪ್ಪಲ್ ಸ್ಟೋರಿನವರು ಸರಿ ಮಾಡಿ ಕೊಡುವಷ್ಟರಲ್ಲಿ ಮೂರು ದಿನವಾಗಿತ್ತು. ಮೊಬೈಲ್ ಸರಿಯಾದ ಮರುಗಳಿಗೆ ಸಿಮ್ ಹಾಕಿದೆ, ಮೂರು ದಿನದಲ್ಲಿ ಬಂದ ಒಟ್ಟು ಸಂದೇಶಗಳ ಸಂಖ್ಯೆ 473! ದಶಕದ ಹಿಂದೆ ವಾಟ್ಸ್‌ಆಪ್‌ ಇರಲಿಲ್ಲ, ನಾವು ಬದುಕುತ್ತಿರಲಿಲ್ಲವೇ? ಇಂದಿನ ಕೆಲಸಗಳು ಆಗುತ್ತಿರಲಿಲ್ಲವೇ? ಆದರೆ ಮನುಷ್ಯ ಹೊಸ ಬದಲಾವಣೆಗೆ, ಅದರಲ್ಲೂ ಅವನಿಗೆ ಸುಲಭ ಮಾಡುವ ಬದಲಾವಣೆಗಳನ್ನು ಬಹುಬೇಗ ಅಪ್ಪಿಕೊಂಡು ಬಿಡುತ್ತಾನೆ. ನಂತರದ ದಿನಗಳಲ್ಲಿ ಅದಿಲ್ಲದೆ ಬದುಕಿಲ್ಲ ಎನ್ನುವ ಮಟ್ಟಕ್ಕೆ ಅದು ಬದಲಾಗಿಬಿಡುತ್ತದೆ.

ಎಷ್ಟು ಬಳಸಬೇಕೆಂಬ ಪರಿಜ್ಞಾನ ಅಗತ್ಯ

ನಾವು ತಂತ್ರಜ್ಞಾನವನ್ನೂ ಅಥವಾ ಹೊಸ ಅವಿಷ್ಕಾರಗಳನ್ನೋ ದೂರುವ ಪ್ರಮೇಯವಿಲ್ಲ. ಮನುಷ್ಯನ ಸೃಷ್ಟಿಯಾದ ದಿನದಿಂದ ಆಹಾರವಿದೆ. ಎಷ್ಟು ತಿನ್ನಬೇಕು, ಯಾವಾಗ ತಿನ್ನಬೇಕು ಎನ್ನುವ ವಿವೇಚನೆ ನಮಗಿರಬೇಕು. ಸುಮ್ಮನೆ ತಿನ್ನುತ್ತಾ ಹೋದರೆ ಆರೋಗ್ಯ ಹಾಳಾಗುವುದು ಗ್ಯಾರೆಂಟಿ. ಮೊಬೈಲ್ ಕೂಡ ಹಾಗೆ , ಬೇಡ ಎನ್ನುವಂತಿಲ್ಲ, ಇದು ಇಂದಿನ ಅವಶ್ಯಕತೆಯಾಗಿ ಬದಲಾಗಿದೆ. ಎಷ್ಟು ಬಳಸಬೇಕು, ಏಕೆ, ಯಾವಾಗ ಎನ್ನುವ ಪರಿಜ್ಞಾನ ನಮಗಿರಬೇಕು.

ಭಾರತದಂತಹ ಅತಿ ದೊಡ್ಡ ದೇಶದಲ್ಲಿ ಇರುವ ಮ್ಯಾನ್ ಪವರ್ ಸರಿಯಾಗಿ ಬಳಕೆಯಾದರೆ, ಬಳಕೆ ಮಾಡಿಕೊಂಡರೆ ನಾವು ಜಗತ್ತಿನ ಬಲಿಷ್ಠ ದೇಶವಾಗಬಹುದು. ಆದರೆ ನಮ್ಮ ಮೊಬೈಲ್ ದಾಸ್ಯ, ವ್ಯಸನ, ಅಡಿಕ್ಷನ್ ಎಷ್ಟರಮಟ್ಟಿಗೆ ಇದೆಯೆಂದರೆ ಸಣ್ಣ ಸಣ್ಣ ವಿಷಯವೂ ತಿಳುವಳಿಕೆಗೆ ಬಾರದ ಒಂದು ದೊಡ್ಡ ಜನಾಂಗವನ್ನು ನಾವು ಸೃಷ್ಟಿಸುತ್ತಿದ್ದೇವೆ. ನಿಮ್ಮ ಸ್ಕ್ರೀನ್ ಟೈಮ್ ಎಷ್ಟು? ಎಷ್ಟು ತಾಸು ಮೊಬೈಲ್‌ನಲ್ಲಿರುತ್ತೀರಿ? ಅಷ್ಟು ತಾಸು ಯಾವ ಕೆಲಸಕ್ಕೆ ವ್ಯವಯಿಸಿದ್ದೀರಿ ಎನ್ನುವುದನ್ನು ಲೆಕ್ಕ ಹಾಕಿ. ಸೋಶಿಯಲ್ ಮೀಡಿಯಾದಲ್ಲಿ ನೀವು ಎರಡು ಗಂಟೆಗಿಂತ ಹೆಚ್ಚಿದ್ದರೆ ಅದನ್ನು ನಿಯಂತ್ರಿಸಲು ಇಂದೇ ಕಾರ್ಯೋನ್ಮುಖರಾಗಿ.

(ಬರಹ: ರಂಗಸ್ವಾಮಿ ಮೂಕನಹಳ್ಳಿ)

(This copy first appeared in Hindustan Times Kannada website. For latest updates on Karnataka news, lifestyle, cricket, lifestyle and many more subjects please visit kannada.hindustantimes.com )