ಪಟಾಕಿ ಹೊಡೆಯುವ ಭರದಲ್ಲಿ ಸಾಕುಪ್ರಾಣಿಗಳ ಸುರಕ್ಷತೆ ಮರಿಬೇಡಿ, ದೀಪಾವಳಿಯಲ್ಲಿ ಹೀಗಿರಲಿ ಪ್ರಾಣಿಗಳ ಕಾಳಜಿ
ದೀಪಾವಳಿ ಹಬ್ಬ ನಮಗೆಲ್ಲರಿಗೂ ಸಂಭ್ರಮವಾದರೆ ಪ್ರಾಣಿಗಳಿಗೆ ಒತ್ತಡ ತರುತ್ತದೆ. ಪಟಾಕಿ ಸದ್ದು ಪ್ರಾಣಿಗಳಲ್ಲಿ ಆತಂಕ ಸೃಷ್ಟಿಸುತ್ತದೆ. ಆ ಕಾರಣಕ್ಕೆ ಬೆಳಕಿನ ಹಬ್ಬದ ಸಂದರ್ಭದಲ್ಲಿ ಸಾಕುಪ್ರಾಣಿಗಳ ಮೇಲೆ ಹೆಚ್ಚಿನ ಗಮನ ಹರಿಸಬೇಕು. ದೀಪಾವಳಿಯಲ್ಲಿ ಸಾಕುಪ್ರಾಣಿಗಳ ಕಾಳಜಿ ಹೇಗೆ ಎಂಬ ಟಿಪ್ಸ್ ಇಲ್ಲಿದೆ.
ದೀಪಾವಳಿ ಹಬ್ಬ ಎಂದರೆ ನಮಗೆಲ್ಲ ಸಂತೋಷ, ಸಂಭ್ರಮ, ಸಡಗರ. ಆದರೆ ಈ ಹಬ್ಬವು ಪ್ರಾಣಿಗಳಿಗೆ ಸವಾಲು ಎನ್ನಿಸುವುದು ಸುಳ್ಳಲ್ಲ. ಪಟಾಕಿಗಳ ಅತಿಯಾದ ಶಬ್ದ, ಜಗಮಗಿಸುವ ಬೆಳಕು, ಹಾನಿಕಾರಕ ವಸ್ತುಗಳು ಪ್ರಾಣಿಗಳಿಗೆ ಒತ್ತಡ ತರಬಹುದು, ಇದರಿಂದ ಅವುಗಳಿಗೆ ಅಪಾಯವೂ ಉಂಟಾಗಬಹುದು. ಆ ಕಾರಣಕ್ಕೆ ನಿಮ್ಮ ಮುದ್ದಿನ ಸಾಕುಪ್ರಾಣಿ ಸುರಕ್ಷತೆ ಬಹಳ ಮುಖ್ಯವಾಗುತ್ತದೆ.
ನಿಮ್ಮ ಮನೆಯಲ್ಲಿ ನಾಯಿ, ಬೆಕ್ಕಿನಂತಹ ಸಾಕುಪ್ರಾಣಿಗಳಿದ್ದರೆ ಈ ದೀಪಾವಳಿಯ ಸಂದರ್ಭ ಅವುಗಳ ಕಾಳಜಿ ಮಾಡಲು ಮರೆಯಬೇಡಿ. ಪ್ರಾಣಿಗಳ ಸುರಕ್ಷತೆಗೆ ಈ ಟಿಪ್ಸ್‌ಗಳನ್ನ ತಪ್ಪದೇ ಪಾಲಿಸಬೇಕು. ಒಂದು ವೇಳೆ ನಿಮ್ಮ ಮುದ್ದಾದ ಪ್ರಾಣಿಗೆ ಯಾವುದಾದರೂ ತೊಂದರೆ ಆಗಿದ್ದರೆ ನೀವು ಈ ಕ್ರಮಗಳನ್ನು ತಪ್ಪದೇ ಅನುಸರಿಸಬೇಕು.
ಶಾಂತವಾಗಿರಿ
ಸಾಕುಪ್ರಾಣಿಗಳು ಗಾಯಗೊಂಡಾಗ ಅಥವಾ ಅಸ್ವಸ್ಥಗೊಂಡಾಗ ಆತಂಕಕ್ಕೆ ಒಳಗಾಗುವುದು ಸಹಜ. ಆದರೆ ಅಂತಹ ಸಂದರ್ಭದಲ್ಲಿ ನೀವು ಶಾಂತವಾಗಿರುವುದು ಅತ್ಯಗತ್ಯ. ಸಾಕುಪ್ರಾಣಿಗಳು ನಿಮ್ಮ ಭಾವನೆಗಳನ್ನು ಗಮನಿಸುತ್ತವೆ. ನೀವು ಆತಂಕ ಒತ್ತಡಕ್ಕೆ ಒಳಗಾದರೆ ಅವುಗಳು ಇನ್ನಷ್ಟು ಹೆದರುತ್ತವೆ. ಹಾಗಾಗಿ ದೀಪಾವಳಿ ಸಮಯದಲ್ಲಿ ಸಾಕುಪ್ರಾಣಿಗಳ ಮುಂದೆ ಶಾಂತ ರೀತಿಯಲ್ಲಿ ವರ್ತಿಸಿ.
ಪರಿಸ್ಥಿತಿಯನ್ನು ನಿರ್ಣಯಿಸಿ
ನಿಮ್ಮ ಸಾಕುಪ್ರಾಣಿಗಳ ಗಾಯ ಅಥವಾ ಅನಾರೋಗ್ಯದ ಪ್ರಮಾಣವನ್ನು ಅರ್ಥಮಾಡಿಕೊಳ್ಳಲು ಎಚ್ಚರಿಕೆಯಿಂದ ಅವುಗಳನ್ನು ಪರೀಕ್ಷಿಸಿ. ಹೆಚ್ಚು ರಕ್ತಸ್ರಾವವಾಗಿದ್ದರೆ ಅಥವಾ ಉಸಿರಾಟದ ತೊಂದರೆ ಹೊಂದಿದ್ದರೆ, ಇದು ಗಂಭೀರ ಸ್ಥಿತಿಯ ಸಂಕೇತವಾಗಿದೆ. ಹಾಗಾಗಿ ತಕ್ಷಣ ಪಶುವೈದ್ಯರ ಬಳಿಗೆ ಕರೆದೊಯ್ಯಬೇಕು. ಸಮಸ್ಯೆ ಕಡಿಮೆ ಇದ್ದರೆ ಸಾಕುಪ್ರಾಣಿಗಳನ್ನು ಪಶುವೈದ್ಯರ ಬಳಿಗೆ ಕರೆದೊಯ್ಯುವ ಮೊದಲು ತಾತ್ಕಾಲಿಕವಾಗಿ ಮನೆಯಲ್ಲಿ ಚಿಕಿತ್ಸೆ ನೀಡಲು ಸಾಧ್ಯವೇ ನೋಡಿ.
ಅಗತ್ಯವಿದ್ದರೆ ತಕ್ಷಣದ ಆರೈಕೆ ಒದಗಿಸಿ
ಸಾಕುಪ್ರಾಣಿಗಳ ಗಾಯ ಚಿಕ್ಕದಾಗಿದೆ ಎಂದು ಎನ್ನಿಸಿದರೆ ಮನೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಬಹುದು. ಗಾಯವಾಗಿದ್ದರೆ ಮೊದಲು ಗಾಯವನ್ನು ಸ್ವಚ್ಛ ಮಾಡಿ. ಆದರೆ ಚಿಕ್ಕ ಗಾಯವಾದರೂ ನಂತರ ಪಶುವೈದ್ಯರ ಬಳಿಗೆ ಕರೆದೊಯ್ಯುವುದಕ್ಕೆ ಮರೆಯಬೇಡಿ.
ಅನಾರೋಗ್ಯದ ಸಂಕೇತಗಳನ್ನು ಗುರುತಿಸಿ
ದೀಪಾವಳಿಯು ಸಾಕುಪ್ರಾಣಿಗಳನ್ನು ವಿಷಕಾರಿ ಹೊಗೆ ಮತ್ತು ಜೋರಾಗಿ ಶಬ್ದಗಳಿಗೆ ಒಡ್ಡಿಕೊಳ್ಳುವಂತೆ ಮಾಡಬಹುದು. ಅದು ಅನಾರೋಗ್ಯಕ್ಕೆ ಕಾರಣವಾಗಬಹುದು. ಈ ಅವಧಿಯಲ್ಲಿ ವಾಂತಿ, ಅತಿಸಾರ ಮತ್ತು ಆಲಸ್ಯದಂತಹ ಅನಾರೋಗ್ಯದ ಸಾಮಾನ್ಯ ಚಿಹ್ನೆಗಳು ಗೋಚರವಾಗಬಹುದು. ಈ ರೋಗಲಕ್ಷಣಗಳಲ್ಲಿ ಯಾವುದನ್ನಾದರೂ ನೀವು ಗಮನಿಸಿದರೆ, ನಿಮ್ಮ ಸಾಕುಪ್ರಾಣಿಗಳನ್ನು ತಕ್ಷಣವೇ ಪಶುವೈದ್ಯರ ಬಳಿಗೆ ಕರೆದೊಯ್ಯುವುದು ಬಹಳ ಮುಖ್ಯ. ಆರಂಭಿಕ ಪತ್ತೆ ಮತ್ತು ಚಿಕಿತ್ಸೆಯು ತ್ವರಿತ ಚೇತರಿಕೆಗೆ ಮುಖ್ಯವಾಗಿದೆ.
ಇತರ ಎಚ್ಚರಿಕೆ ಚಿಹ್ನೆಗಳಿಗೆ ಗಮನ ಕೊಡಿ
ಹಸಿವಿನ ಕೊರತೆ, ಉಸಿರಾಟದ ತೊಂದರೆ, ಮಸುಕಾದ ಒಸಡುಗಳು, ಹೆಚ್ಚಿದ ಬಾಯಾರಿಕೆ, ಜ್ವರ, ಕೆಮ್ಮು ಅಥವಾ ಸೀನುವಿಕೆಯಂತಹ ಇತರ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಈ ಲಕ್ಷಣಗಳು ಕಾಣಿಸಿದರೆ ತಕ್ಷಣಕ್ಕೆ ಪಶುವೈದ್ಯರನ್ನು ಸಂಪರ್ಕಿಸಬೇಕು.
ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ದೀಪಾವಳಿ ಹಬ್ಬದ ಸಂದರ್ಭ ಅವುಗಳನ್ನು ಸಾಧ್ಯವಾದಷ್ಟು ಒಳಗಡೆ ಕಟ್ಟಿ ಹಾಕಿ. ಅತಿಯಾದ ಶಬ್ದ ಹಾಗೂ ಬೆಳಕು ಅವುಗಳ ಕಣ್ಣು ಹಾಗೂ ಕಿವಿ ಮೇಲೆ ಬೀಳದಂತೆ ನೋಡಿಕೊಳ್ಳಿ. ಸಾಧ್ಯವಾದಷ್ಟು ಪಟಾಕಿ ಮಾಲಿನ್ಯದಿಂದ ನಿಮ್ಮ ಸಾಕುಪ್ರಾಣಿಗಳನ್ನು ದೂರ ಇರಿಸಿ.