ವಿದ್ಯಾರ್ಥಿಗಳು ಕಲಿಯಲೇಬೇಕಾದ ಪ್ರಮುಖ ಟೆಕ್ ಕೌಶಲ್ಯಗಳಿವು; ಇಷ್ಟಿದ್ದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭ
ಕನ್ನಡ ಸುದ್ದಿ  /  ಜೀವನಶೈಲಿ  /  ವಿದ್ಯಾರ್ಥಿಗಳು ಕಲಿಯಲೇಬೇಕಾದ ಪ್ರಮುಖ ಟೆಕ್ ಕೌಶಲ್ಯಗಳಿವು; ಇಷ್ಟಿದ್ದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭ

ವಿದ್ಯಾರ್ಥಿಗಳು ಕಲಿಯಲೇಬೇಕಾದ ಪ್ರಮುಖ ಟೆಕ್ ಕೌಶಲ್ಯಗಳಿವು; ಇಷ್ಟಿದ್ದರೆ ಉದ್ಯೋಗ ಗಿಟ್ಟಿಸಿಕೊಳ್ಳುವುದು ಸುಲಭ

Tech Skills for Students: ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲೇ ಕೆಲವೊಂದು ತಾಂತ್ರಿಕ ಕೌಶಲ್ಯಗಳನ್ನು ಬೆಳೆಸಿಕೊಂಡರೆ, ಮುಂದೆ ಉದ್ಯೋಗ ಗಿಟ್ಟಿಸಿಕೊಳ್ಳುವಾಗ ನೆರವಾಗುತ್ತದೆ. ವೃತ್ತಿಜೀವನದಲ್ಲಿ ಬೇಗನೆ ಯಶಸ್ಸು ಗಳಿಸಲು ಕೆಲವೊಂದು ಟೆಕ್‌ ಕೌಶಲ್ಯಗಳು ಅಗತ್ಯ. ಅವುಗಳ ವಿವರವಾದ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿಗಳು ಕಲಿಯಬೇಕಾದ ಪ್ರಮುಖ ಟೆಕ್ ಕೌಶಲ್ಯಗಳು
ವಿದ್ಯಾರ್ಥಿಗಳು ಕಲಿಯಬೇಕಾದ ಪ್ರಮುಖ ಟೆಕ್ ಕೌಶಲ್ಯಗಳು (Pixabay)

ಆಧುನಿಕ ಜಗತ್ತಿನಲ್ಲಿ ಮಕ್ಕಳು ಹುಟ್ಟುತ್ತಲೇ ಡಿಜಿಟಲ್‌ ಮಾಧ್ಯಮಗಳ ಒಡನಾಟ ಬೆಳೆಸಿಕೊಳ್ಳುತ್ತಾರೆ. ಪೋಷಕರು ಕೂಡಾ ಮಕ್ಕಳಿಗೆ ಡಿಜಿಟಲ್‌ ಸಾಧನಗಳ ಬಳಕೆಯನ್ನು ಬೇಗನೆ ಹೇಳಿಕೊಡುತ್ತಾರೆ. ಮಕ್ಕಳಿಗೂ ಅದರ ಆಸಕ್ತಿ ಬೇಗನೆ ಬೆಳೆಯುತ್ತದೆ. ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳ ಬಳಕೆ ಹೊಸತೇನಲ್ಲ. ಪ್ರಾಥಮಿಕ ಶಿಕ್ಷಣದ ಸಮಯದಲ್ಲೇ ಹಲವು ಅಪ್ಲಿಕೇಶನ್ ಅಥವಾ ಡಿಜಿಟಲ್ ಸಾಧನಗಳ ಬಳಕೆಯನ್ನು ಪೋಷಕರಿಗರಿಗಿಂತ ಬೇಗನೆ ಮಕ್ಕಳು ಕಲಿತುಬಿಡುತ್ತಾರೆ. ಆದರೆ, ಅನೇಕ ವಿದ್ಯಾರ್ಥಿಗಳು ಡಿಜಿಟಲ್‌ ಸಾಧನೆಗಳನ್ನು ಬಳಸಿದರೂ ಅಗತ್ಯ ತಂತ್ರಜ್ಞಾನ ಕೌಶಲ್ಯಗಳನ್ನು ಬೆಳೆಸಿಕೊಳ್ಳುವಲ್ಲಿ ಹಿಂದೆ ಬೀಳುತ್ತಾರೆ. ಶೈಕ್ಷಣಿಕ ಹಂತ ಮುಗಿಸಿದ ನಂತರ ಉದ್ಯೋಗ ಗಿಟ್ಟಿಸಿಕೊಳ್ಳಲು ತಾಂತ್ರಿಕ ಕೌಶಲ್ಯಗಳು ಅಗತ್ಯ.

ಶೈಕ್ಷಣಿಕ ಹಂತದಲ್ಲೇ ಕೆಲವೊಂದು ತಾಂತ್ರಿಕ ಕೌಶಲ್ಯ ಹಾಗೂ ಡಿಜಿಟಲ್ ಸಾಕ್ಷರತೆ ಮುಖ್ಯ. ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು, ವೆಬ್‌ ಬ್ರೌಸರ್‌ನಲ್ಲಿ ಹುಡುಕುವುದು, ಆನ್‌ಲೈನ್‌ನಲ್ಲಿ ಎಚ್ಚರದಿಂದ ಇರುವುದು, ಪರಿಣಾಮಕಾರಿ ಇಮೇಲ್ ಸಂದೇಶವನ್ನು ಬರೆಯುವುದು, ಹೀಗೆ ವೃತ್ತಿಜೀವನದಲ್ಲಿನ ಯಶಸ್ಸಿಗೆ ಇಂತಹ ತಾಂತ್ರಿಕ ಕೌಶಲ್ಯಗಳು ಅಗತ್ಯ.

ಬೇಸಿಕ್‌ ಕಂಪ್ಯೂಟರ್ ಕೌಶಲ್ಯ

ಈಗಿನ ಬಹುತೇಕ ಎಲ್ಲಾ ಕೆಲಸಗಳು ಕಂಪ್ಯೂಟರ್‌ ಅಥವಾ ಲ್ಯಾಪ್‌ಟಾಪ್‌ ಮೂಲಕ ಆಗುತ್ತವೆ. ಹೀಗಾಗಿ ಕಂಪ್ಯೂಟರ್ ಕುರಿತ ಮೂಲ ಮಾಹಿತಿ ಇರಬೇಕು. ಅದನ್ನು ಆನ್ ಮಾಡುವುದು ಹೇಗೆ, ಫೈಲ್ ಓಪನ್‌ ಮಾಡುವುದು, ಡಾಕ್ಯುಮೆಂಟ್ ರಚನೆ, ಫೈಲ್‌ ಸೇವ್‌ ಮಾಡುವುದು ಇಂತಹ ಕಂಪ್ಯೂಟರ್ ಜ್ಞಾನ ಮತ್ತು ಕೌಶಲ್ಯಗಳು ವಿದ್ಯಾರ್ಥಿಗಳಲ್ಲಿ ಇರಬೇಕು. ಕಂಪ್ಯೂಟರ್ ಕೀಬೋರ್ಡ್‌ನಲ್ಲಿ ನಿಯಮಿತವಾಗಿ ಟೈಪಿಂಗ್ ಕೌಶಲ್ಯವನ್ನು ಬೆಳೆಸಿಕೊಳ್ಳಬೇಕು.

ಡಿಜಿಟಲ್ ಸಂವಹನ ಕೌಶಲ್ಯ

ಗೂಗಲ್‌ ವರ್ಕ್‌ಸ್ಪೇಸ್‌ ಬಳಕೆ ಕಲಿಯುವುದು ತುಂಬಾ ಮುಖ್ಯ. ಇಮೇಲ್ ಕಳುಹಿಸುವುದು, ಸಾಮಾಜಿಕ ಮಾಧ್ಯಮ ಬಳಕೆ, ವೀಡಿಯೊ ಕಾನ್ಫರೆನ್ಸ್ ಅಥವಾ ಮೀಟಿಂಗ್, ಗೂಗಲ್ ಡಾಕ್ಸ್ ಅಥವಾ ಪವರ್‌ಪಾಯಿಂಟ್‌ನಂತಹ ತಂತ್ರಜ್ಞಾನವನ್ನು ಬಳಸುವುದು ಕಲಿಯಬೇಕು. ತಂತ್ರಜ್ಞಾನ ಬಳಸಿಕೊಂಡು ವಿದ್ಯಾರ್ಥಿಗಳು ತಮ್ಮ ಆಲೋಚನೆಗಳನ್ನು ಸ್ಪಷ್ಟವಾಗಿ ಸಂವಹನ ಮಾಡಲು ಕಲಿಯುವುದು ಮುಖ್ಯ.

ಮಾಧ್ಯಮ ಸಾಕ್ಷರತೆ

ಮಾಧ್ಯಮ ಸಾಕ್ಷರತೆ ಎಂದರೆ ಯಾವುದೇ ಮಾಹಿತಿಯನ್ನು ಪಡೆಯಲು, ಅದನ್ನು ವಿಶ್ಲೇಷಿಸಲು ಮತ್ತು ಮೌಲ್ಯಮಾಪನ ಮಾಡಲು ಅಗತ್ಯ ಕೌಶಲ್ಯಗಳನ್ನು ಹೊಂದಿರುವುದು. ಅದು ಮುದ್ರಣ ಮಾಧ್ಯಮವಿರಬಹುದು, ಟಿವಿ ಅಥವಾ ಇಂಟರ್ನೆಟ್ ಮೂಲಕವೇ ಆಗಿರಬಹುದು. ಯಾವುದು ತಪ್ಪು ಮತ್ತು ಯಾವುದು ಸರಿ ಎಂದು ಪ್ರತ್ಯೇಕಿಸುವ ಕೌಶಲ್ಯ ಇರಬೇಕು. ವಿದ್ಯಾರ್ಥಿಗಳು ವಿಮರ್ಶಾತ್ಮಕವಾಗಿ ಯೋಚಿಸುವ ಕಲೆ ಬೆಳೆಸಿಕೊಳ್ಳಬೇಕು. ಆನ್‌ಲೈನ್‌ನಲ್ಲಿ ನೋಡುವ ಮತ್ತು ಕೇಳುವ ಮಾಹಿತಿಯು ಎಷ್ಟು ಸತ್ಯ ಎಂಬುದನ್ನು ವಿಮರ್ಷಿಸಲು ಬರಬೇಕು.

ಸಂಶೋಧನೆ/ಡೇಟಾ ವಿಶ್ಲೇಷಣೆ

ಇಂಟರ್ನೆಟ್‌ನಲ್ಲಿ ಪರಿಣಾಮಕಾರಿ ಹುಡುಕಾಟ ಕೌಶಲ್ಯಗಳನ್ನು ಹೊಂದಿರುವುದು ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ಆನ್‌ಲೈನ್‌ನಲ್ಲಿ ಮಾಹಿತಿಯ ಸಾಗರವೇ ಇರುತ್ತದೆ. ಅದರಿಂದ ಬೇಕಾದ ಮಾಹಿತಿಯನ್ನು ಶೋಧಿಸಲು ಸಾಧ್ಯವಾಗುವ ಕಲೆ ಇರಬೇಕು. ಬಳಸಲು ಅಥವಾ ಹಂಚಿಕೊಳ್ಳಲು ಯೋಗ್ಯವಾದುದನ್ನು ವಿಶ್ಲೇಷಿಸುವ ಜ್ಞಾನ ಬೆಳೆಸಿಕೊಳ್ಳಬೇಕು.

ಸೈಬರ್ ಭದ್ರತೆ

ಈಗೀಗ ಸುಶಿಕ್ಷಿತರೇ ಸೈಬರ್‌ ವಂಚನೆಗೆ ಒಳಗಾಗುತ್ತಿದ್ದಾರೆ. ಎಷ್ಟೇ ವಿದ್ಯಾವಂತರಾಗಿದ್ದರೂ, ಇಂಥಾ ವಿಚಾರಗಳಲ್ಲಿ ಎಚ್ಚರ ತಪ್ಪುವವರು ಹೆಚ್ಚು. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಸೂಕ್ಷ್ಮ ಮಾಹಿತಿಯನ್ನು ಸೈಬರ್ ಕ್ರಿಮಿನಲ್‌ಗಳಿಂದ ರಕ್ಷಿಸುವ ಕೌಶಲ್ಯ ಹೊಂದಿರುವುದು ಅಗತ್ಯ. ತಂತ್ರಜ್ಞಾನಗಳು ಬೆಳೆದಂತೆ ವಂಚಕರ ಜಾಲ ಕೂಡಾ ಬೆಳೆಯುತ್ತಾ ಹೋಗುತ್ತದೆ. ಹೀಗಾಗಿ ವೈಯಕ್ತಿಕ ಮಾಹಿತಿಯ ಗೌಪ್ಯತೆ, ಸುರಕ್ಷಿತ ಮತ್ತು ಕಾನೂನುಬದ್ಧವಾಗಿರುವ ವೆಬ್‌ಸೈಟ್ ಗುರುತಿಸುವುದು, ಹ್ಯಾಕರ್‌ಗಳಿಂದ ಇಮೇಲ್ ಅಥವಾ ಗೂಗಲ್‌ ಅಕೌಂಟ್‌ಗಳನ್ನು ರಕ್ಷಿಸುವ ಮಾಹಿತಿ ಕಲಿಯಬೇಕು.

Whats_app_banner