Commerce: ಬಿಕಾಂ, ವಾಣಿಜ್ಯ ಪದವಿಯೊಂದಿಗೆ ನಿಮ್ಮಲ್ಲಿ ಈ ಕೌಶಲ್ಯಗಳಿದ್ದರೆ ಕೆಲಸ ಪಡೆಯೋದು ಸುಲಭ-education news top skills bcom graduate must have to get job easy bachelor of commerce career finance jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Commerce: ಬಿಕಾಂ, ವಾಣಿಜ್ಯ ಪದವಿಯೊಂದಿಗೆ ನಿಮ್ಮಲ್ಲಿ ಈ ಕೌಶಲ್ಯಗಳಿದ್ದರೆ ಕೆಲಸ ಪಡೆಯೋದು ಸುಲಭ

Commerce: ಬಿಕಾಂ, ವಾಣಿಜ್ಯ ಪದವಿಯೊಂದಿಗೆ ನಿಮ್ಮಲ್ಲಿ ಈ ಕೌಶಲ್ಯಗಳಿದ್ದರೆ ಕೆಲಸ ಪಡೆಯೋದು ಸುಲಭ

ಬಿಕಾಂ ವ್ಯಾಸಂಗ ಮಾಡುವವರು ಮಾರುಕಟ್ಟೆ, ತೆರಿಗೆ, ಬ್ಯಾಂಕಿಂಗ್‌ ಹಣಕಾಸು, ವ್ಯಾಪಾರ ನಿರ್ವಹಣೆ ಹೀಗೆ ಹಲವು ಕ್ಷೇತ್ರಗಳ ಕುರಿತು ಅರಿತುಕೊಂಡಿರಬೇಕು. ತಮ್ಮ ವಾಣಿಜ್ಯ ಪದವಿ ಜೊತೆಗೆ ವಿದ್ಯಾರ್ಥಿಗಳು ಕೆಲವೊಂದು ಕೌಶಲ್ಯಗಳನ್ನು ಹೊಂದಿದ್ದರೆ ಭವಿಷ್ಯದಲ್ಲಿ ಕೆಲಸ ಪಡೆಯುವುದು ಸುಲಭವಾಗುತ್ತದೆ.

ಬಿಕಾಂ ಪದವಿಯೊಂದಿಗೆ ನಿಮ್ಮಲ್ಲಿ ಈ ಕೌಶಲ್ಯಗಳಿದ್ದರೆ ಕೆಲಸ ಪಡೆಯೋದು ಸುಲಭ
ಬಿಕಾಂ ಪದವಿಯೊಂದಿಗೆ ನಿಮ್ಮಲ್ಲಿ ಈ ಕೌಶಲ್ಯಗಳಿದ್ದರೆ ಕೆಲಸ ಪಡೆಯೋದು ಸುಲಭ (pixabay)

ವಾಣಿಜ್ಯ ವಿದ್ಯಾರ್ಥಿಗಳು ಬಿಕಾಂ ಪದವಿ ಪಡೆದ ಬಳಿಕ ಉದ್ಯೋಗದ ಹುಡುಕಾಟದಲ್ಲಿ ತೊಡಗುತ್ತಾರೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಎಐ ಅಥವಾ ಕೃತಕ ಬುದ್ಧಿಮತ್ತೆ ಎಲ್ಲಾ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿರುವುದು ಗೊತ್ತೇ ಇದೆ. ಹೀಗಾಗಿ ಮನುಷ್ಯರು ಮಾಡುವ ಬಹುತೇಕ ಕೆಲಸಗಳನ್ನು ತಂತ್ರಜ್ಞಾನಗಳು ಮಾಡಿಬಿಡುತ್ತದೆ. ಇದೇ ಕಾರಣದಿಂದ ಉದ್ಯೋಗ ಗಿಟ್ಟಿಸಿಕೊಳ್ಳುವುದು ದಿನಕಳೆದಂತೆ ಕಷ್ಟವಾಗುತ್ತಿದೆ. ಆದರೆ, ತಂತ್ರಜ್ಞಾನ ಎಷ್ಟೇ ಬೆಳೆದರೂ ಮನುಷ್ಯನಲ್ಲಿರುವ ಸೃಜನಶೀಲ ಕೌಶಲ್ಯ ಯಂತ್ರಗಳಲ್ಲಿಲ್ಲ. ಹೀಗಾಗಿ ಯಂತ್ರಗಳಿಂದ ಸಾಧ್ಯವಾಗದ ಕೆಲಸ ಮಾಡುವ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚು. ಸೃಜನಶೀಲತೆ, ಒಂದಷ್ಟು ಕೌಶಲ್ಯ ಇರುವವರಿಗೆ ಅವಕಾಶಗಳು ಹೆಚ್ಚು ಸಿಗುತ್ತವೆ. ಹಾಗಿದ್ದರೆ ಬಿಕಾಂ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದೊಂದಿಗೆ ಯಾವೆಲ್ಲಾ ಕೌಶಲ್ಯ ಹೊಂದಿದ್ದರೆ ಕೆಲಸ ಗಿಟ್ಟಿಸಿಕೊಳ್ಳುವುದು ಸುಲಭ ಎಂಬುದನ್ನು ನೋಡೋಣ.

ಬಿಕಾಂ ವ್ಯಾಸಂಗ ಮಾಡುವವರ ಸಂಖ್ಯೆ ಹೆಚ್ಚು. ಇದು ಒಂದು ಕ್ರಿಯಾತ್ಮಕ ಪದವಿಯಾಗಿದ್ದು; ವ್ಯಾಪಾರ ನಿರ್ವಹಣೆ, ಮಾರುಕಟ್ಟೆ, ತೆರಿಗೆ, ಬ್ಯಾಂಕಿಂಗ್‌ ಹಣಕಾಸು ಹೀಗೆ ಹಲವು ಕ್ಷೇತ್ರಗಳ ಕುರಿತು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತದೆ. ಅದಾಗಿಯೂ ಬಿಕಾಂ ಪದವಿ ಜೊತೆಗೆ ವಿದ್ಯಾರ್ಥಿಗಳು ಕೆಲವೊಂದು ಕೌಶಲ್ಯಗಳನ್ನು ಹೊಂದಿದ್ದರೆ ಕೆಲಸ ಗಿಟ್ಟಿಸಿಕೊಳ್ಳಲು ಸುಲಭ.

ನವನವೀನ ಕೌಶಲ್ಯಗಳು

ಎಐ ಯುಗದಲ್ಲಿ ಸೃಜನಶೀಲ, ನಾವೀನ್ಯ ಕೌಶಲ್ಯಗಳಿದ್ದರೆ ವೃತ್ತಿಜೀವನದಲ್ಲಿ ನೆಮ್ಮದಿ. ಯಾವುದೇ ಕಂಪನಿಗಳು ಉದ್ಯೋಗ ನೀಡಬಯಸುವ ಅಭ್ಯರ್ಥಿಯ ಕೌಶಲ್ಯವನ್ನು, ಯೋಚನಾ ಸಾಮರ್ಥ್ಯವನ್ನು ನೋಡುತ್ತದೆಯೇ ವಿನಃ, ಅವರು ಪಡೆದ ಅಂಕಗಳನ್ನಲ್ಲ. ಕಂಪನಿಯು ಅಭ್ಯರ್ಥಿಯಲ್ಲಿ ಆಲೋಚನೆಗಳು ಮತ್ತು ಅಭಿಪ್ರಾಯಗಳಲ್ಲಿ ಹೊಸತನವನ್ನು ಹುಡುಕುತ್ತದೆ. ಸಮಸ್ಯೆಯನ್ನು ನವೀನವಾಗಿ ಪರಿಹರಿಸುವ, ಉತ್ಪನ್ನವನ್ನು ಅಭಿವೃದ್ಧಿಪಡಿಸಲು ಸಲಹೆಗಳನ್ನು ನೀಡುವ ಅಥವಾ ವ್ಯಾಪಾರ ಪ್ರಕ್ರಿಯೆಗೆ ಕೊಡುಗೆ ನೀಡುವವರಿಗೆ ಬೇಡಿಕೆ ಹೆಚ್ಚು.

ವಿಶ್ಲೇಷಣಾತ್ಮಕ ಕೌಶಲ್ಯಗಳು

ಡೇಟಾ ಅಧ್ಯಯನ ಮಾಡುವ, ವಿಶ್ಲೇಷಿಸುವ ಮತ್ತು ಅರ್ಥೈಸುವ ಸಾಮರ್ಥ್ಯ ಬರಲು ವಿಶ್ಲೇಷಣಾತ್ಮಕ ಕೌಶಲ್ಯ ಇದ್ದರೆ ಒಳ್ಳೆಯದು. ವಾಣಿಜ್ಯ ಪದವೀಧರರು ಕೆಲಸದ ಭಾಗವಾಗಿ ಕಂಪನಿಯ ಹಣಕಾಸುಗಳನ್ನು ಪರಿಶೀಲಿಸುವ ಅಗತ್ಯ ಬರುತ್ತದೆ. ಆಗ ಡೇಟಾವನ್ನು ಅಧ್ಯಯನ ಮಾಡಲು, ವಿಮರ್ಶಾತ್ಮಕವಾಗಿ ವಿಶ್ಲೇಷಿಸಲು ಅದಕ್ಕೆ ತಕ್ಕನಾಗಿ ವರದಿ ಸಿದ್ಧಪಡಿಸಬೇಕಾಗುತ್ತದೆ. ಈ ವರದಿಗಳ ಆಧಾರದಲ್ಲಿ ಮ್ಯಾನೇಜ್‌ಮೆಂಟ್‌ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ. ಹೀಗಾಗಿ ಬಿಕಾಂ ಕೋರ್ಸ್‌ ಜೊತೆಗೆ ವಿದ್ಯಾರ್ಥಿಗಳು ವಿಶ್ಲೇಷಣಾತ್ಮಕ ಕೌಶಲ್ಯ ಅಭಿವೃದ್ಧಿಪಡಿಸಿಕೊಂಡರೆ ಭವಿಷ್ಯದಲ್ಲಿ ಸುಲಭವಾಗುತ್ತದೆ.

ಹಣಕಾಸು ವಿಶ್ಲೇಷಣೆ

ಇನ್ವೆಸ್ಟ್‌ಮೆಂಟ್ ಬ್ಯಾಂಕರ್, ಪೋರ್ಟ್‌ಫೋಲಿಯೋ ಮ್ಯಾನೇಜರ್, ಅಸೆಟ್ ಮ್ಯಾನೇಜರ್ ಅಥವಾ ಕಾರ್ಪೊರೇಟ್ ಫೈನಾನ್ಸ್‌ನಂತಹ ಕೆಲಸಗಳಿಗೆ ಮುಖ್ಯವಾಗಿ ಹಣಕಾಸು ವಿಶ್ಲೇಷಣಾ ಕೌಶಲ್ಯಗಳು ಬೇಕು. ಬಿಕಾಂ ಪದವಿಯು ಹಣಕಾಸಿನ ವಿಶ್ಲೇಷಣೆಗೆ ಅತ್ಯಗತ್ಯವಾಗಿರುವ ಸ್ಟಾಟಿಸ್ಟಿಕಲ್ ಸ್ಕಿಲ್ ಒದಗಿಸುತ್ತದೆ. ಇದಲ್ಲದೆ, ಮಾರುಕಟ್ಟೆ, ಶೇರು ಮಾರುಕಟ್ಟೆ, ಪೋರ್ಟ್‌ಫೋಲಿಯೊ ನಿರ್ವಹಣೆ ಇತ್ಯಾದಿಗಳ ಬಗ್ಗೆ ಜ್ಞಾನವನ್ನು ಕೂಡಾ ಕೋರ್ಸ್ ಒದಗಿಸುತ್ತದೆ.

ಅಕೌಂಟಿಂಗ್ ಕೌಶಲ್ಯಗಳು‌

ಲೆಕ್ಕಪತ್ರ ನಿರ್ವಹಣೆಯು ಸಂಸ್ಥೆಯ ಖಾತೆ ಪುಸ್ತಕಗಳ ನಿರ್ವಹಣೆಯಾಗಿದೆ. ಯಾವುದೇ ಬ್ಯುಸಿನೆಸ್‌ ಆಗಿದ್ದರೂ ಪ್ರತಿ ಸಂಸ್ಥೆಗೆ ಇದು ಅಗತ್ಯ. ಲೆಕ್ಕಪರಿಶೋಧನಾ ಕೌಶಲ್ಯ ಹೊಂದಿರುವ ಜನರಿಗೆ ಹೆಚ್ಚಿನ ಪ್ರಮಾಣದ ಉದ್ಯೋಗಗಳು ಲಭ್ಯವಿರುತ್ತದೆ. ಲೆಕ್ಕಪರಿಶೋಧಕನಿಗೆ ಪ್ರಾಥಮಿಕವಾಗಿ ಲೆಕ್ಕಪತ್ರ ನಿರ್ವಹಣೆಯ ತತ್ವಗಳು ಮತ್ತು ನಿಯಮಗಳು ತಿಳಿದಿರಬೇಕು.

ಸಂವಹನ ಕೌಶಲ್ಯ

ಇದು ವಾಣಿಜ್ಯ ಪದವೀಧರರಿಗೆ ಮಾತ್ರ ಇರಬೇಕಾದ ಅತ್ಯಗತ್ಯ ಕೌಶಲ್ಯವಲ್ಲ. ಬಹುತೇಕ ಎಲ್ಲಾ ಕೆಲಸಗಳಿಗೂ ಸಂವಹನ ಕಲೆ ಅಗತ್ಯ. ಉತ್ತಮ ಸಂವಹನ ಕೌಶಲ್ಯ ಹೊಂದಿರುವವರು ವಿಭಿನ್ನ ಪಾತ್ರಗಳ ನಡುವೆ ಉತ್ತಮ ಕೊಂಡಿಯಾಗಿ ಸಮತೋಲಿತ ಸಂಬಂಧವನ್ನು ನಿರ್ವಹಿಸಲು ಸಾಧ್ಯ. ಉದಾಹರಣೆ ಕಂಪನಿ ಮತ್ತು ಮಾರಾಟಗಾರರೊಂದಿಗೆ ಉತ್ತಮವಾಗಿ ಸಂವಹನ, ಕಂಪನಿ ಮತ್ತು ಕಚ್ಚಾ ವಸ್ತುಗಳ ಪೂರೈಕೆದಾರರೊಡನೆ ಉತ್ತಮ ಸಂವಹನ ಸಾಧಿಸುವುದು ಅನಿವಾರ್ಯ. ಯಾವುದೇ ಒಪ್ಪಂದಗಳನ್ನು ಕುದುರಿಸಲು ಮಾತನಾಡುವ ಕಲೆ ಇದ್ದರೆ ಕಂಪನಿಗೆ ಲಾಭದಾಯಕ ವ್ಯವಹಾರಗಳನ್ನು ತಂದುಕೊಡಲು ಸಾಧ್ಯವಾಗುತ್ತದೆ.

ಸಂಖ್ಯಾಶಾಸ್ತ್ರ ಕೌಶಲ್ಯಗಳು‌

ವಾಣಿಜ್ಯ ಪದವೀಧರರಲ್ಲಿ ಇರಬೇಕಾದ ಮುಖ್ಯ ಹಾಗೂ ನಿರ್ಣಾಯಕ ಕೌಶಲ್ಯವಾಗಿದೆ. ಬ್ಯಾಂಕಿಂಗ್, ಟ್ಯಾಕ್ಸ್ ಮತ್ತು ಡೇಟಾ ನಿರ್ವಹಣೆಯಲ್ಲಿನ ಉದ್ಯೋಗಗಳು ಮುಖ್ಯವಾಗಿ ಅಭ್ಯರ್ಥಿಯ ಪರಿಮಾಣಾತ್ಮಕ ಯೋಗ್ಯತೆಯನ್ನು ಆಧರಿಸಿವೆ. ಅಭ್ಯರ್ಥಿಯ ಸಂಖ್ಯಾ ಕೌಶಲ್ಯವನ್ನು ನಿರ್ಣಯಿಸಲು ಕೆಲವು ಕಂಪನಿಗಳು ಆಪ್ಟಿಟ್ಯೂಡ್ ಪರೀಕ್ಷೆಗಳನ್ನು ನಡೆಸುತ್ತವೆ.

ತೆರಿಗೆ ಕುರಿತ ಜ್ಞಾನ

ಕಾಮರ್ಸ್‌ ವಿದ್ಯಾರ್ಥಿಯಾದ ಮೇಲೆ ತೆರಿಗೆ ಕುರಿತ ಜ್ಞಾನ ಇರಬೇಕು.ಲೆಕ್ಕಪತ್ರ ನಿರ್ವಹಣೆಯ ಹೊರತಾಗಿ, ತೆರಿಗೆ ವ್ಯವಸ್ಥೆ ಕುರಿತ ಜ್ಞಾನ ಬೇಕು. ನೇರ ಮತ್ತು ಪರೋಕ್ಷ ತೆರಿಗೆಯನ್ನು ತಿಳಿದಿರುವ ವ್ಯಕ್ತಿಗೆ ಕಾರ್ಪೊರೇಟ್ ಕ್ಷೇತ್ರಗಳಲ್ಲಿ ಸಾಕಷ್ಟು ಬೇಡಿಕೆಯಿದೆ. ತೆರಿಗೆ ಸಲಹೆಗಾರರು ತೆರಿಗೆ ಲೆಕ್ಕಾಚಾರ ಮಾಡಬೇಕಾಗುತ್ತದೆ. ಡಿಡಕ್ಷನ್‌ಗಳು ರಿಟರ್ಸ್‌ ಕುರಿತ ಮಾಹಿತಿ ಇರಬೇಕು.

ಎಕ್ಸೆಲ್, ಸೇರಿದಂತೆ ಇತರ ಕಂಪ್ಯೂಟರ್‌ ಜ್ಞಾನ

ಎಂಎಸ್ ಎಕ್ಸೆಲ್ ಮತ್ತು ಗೂಗಲ್ ಶೀಟ್‌ಗಳಂತಹ ಸಾಫ್ಟ್‌ವೇರ್, ಕೆಲಸ ಮಾಡುವ ವಿಧಾನವನ್ನು ಬದಲಾಯಿಸಿದೆ. ಕಾರ್ಪೊರೇಟ್‌ ಕಂಪನಿಗಳು ಮತ್ತು ಸಂಸ್ಥೆಗಳು ವ್ಯಾಪಾರ ಕಾರ್ಯಾಚರಣೆಗಳನ್ನು ನಿರ್ವಹಿಸಲು ಇಂತಹಾ ಸಾಫ್ಟ್‌ವೇರ್‌ಗಳನ್ನು ವ್ಯಾಪಕವಾಗಿ ಬಳಸುತ್ತವೆ. ಡೇಟಾ ವಿಶ್ಲೇಷಣೆ, ನಿರ್ವಹಣೆ, ಟ್ರ್ಯಾಕಿಂಗ್ ವೆಚ್ಚ ಮತ್ತು ಬಜೆಟ್‌ನಂತಹ ಕಾರ್ಯಗಳಿಗೆ ಇವು ಬೇಕು. ಸ್ಪ್ರೆಡ್‌ಶೀಟ್‌ಗಳು ಕೂಡಾ ಬೃಹತ್ ಡೇಟಾವನ್ನು ನಿರ್ವಹಿಸುವಲ್ಲಿ ಸಹಾಯ ಮಾಡುತ್ತವೆ. ಹೀಗಾಗಿ ಕಂಪ್ಯೂಟರ್‌ ಜ್ಞಾನ, ಗೂಗಲ್‌ ವರ್ಕ್‌ಸ್ಪೇಸ್‌ ಜ್ಞಾನ ಕೂಡಾ ವಿದ್ಯಾರ್ಥಿಗಳಿಗೆ ಅಗತ್ಯವಿದೆ.

ನಾಯಕತ್ವ ಕೌಶಲ್ಯಗಳು

ಈ ಕೌಶಲ್ಯ ಕೂಡಾ ಎಲ್ಲಾ ಕ್ಷೇತ್ರಗಳಿಗೂ ಬೇಕು. ನಿರಂತರ ಸಂವಹನದ ಜೊತೆಗೆ ತಂಡದ ಭಾಗವಾಗಿ ಕೆಲಸ ಮಾಡಬೇಕಾಗುತ್ತದೆ. ಅದರಲ್ಲಿ ತಂಡವನ್ನು ಮುನ್ನಡೆಸುವಾತನೇ ನಾಯಕ. ಈ ನಾಯಕನಿಗೆ ತಾಳ್ಮೆ ಅಗತ್ಯ. ತನ್ನ ತಂಡದವರ ಮಾತನ್ನು ಕೇಳುವ, ಅದಕ್ಕೆ ಪ್ರತಿಕ್ರಿಯಿಸಿ ಪ್ರೋತ್ಸಾಹಿಸುವ ತಾಳ್ಮೆ ಬೇಕು. ಒತ್ತಡ ನಿಭಾಯಿಸಲು ಬರಬೇಕು.

ಸಮಸ್ಯೆ ಪರಿಹರಿಸುವ ಸಾಮರ್ಥ್ಯ

ಪ್ರತಿ ಕಂಪನಿಗಳು ಅಭ್ಯರ್ಥಿಯಲ್ಲಿ ಈ ಕೌಶಲ್ಯ ನೋಡುತ್ತದೆ. ಎಲ್ಲವನ್ನು ನಿಭಾಯಿಸುವ ಸಾಮರ್ಥ್ಯವಿದ್ದರೆ, ಅವರಿಗೆ ಬೇಡಿಕೆ ಹೆಚ್ಚು. ಪ್ರತಿ ವಾಣಿಜ್ಯ ಪದವೀಧರರು ತಮ್ಮ ಕೆಲಸದಲ್ಲಿ ತೊಂದರೆಗಳು ಮತ್ತು ಸಂದಿಗ್ಧತೆಗಳನ್ನು ಎದುರಿಸುತ್ತಾರೆ. ಆದರೆ ಆ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುವ ಕೌಶಲ್ಯವಿದ್ದರೆ ಅವರು ಗೆದ್ದಂತೆ. ಇದು ಬಿಕಾಂ ಪದವೀಧರರು ಎಂಬುದು ಮಾತ್ರವಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಬೇಕಾದ ಮೂಲಭೂತ ಕೌಶಲ್ಯ.

mysore-dasara_Entry_Point