Chicken Fingers: ಶ್ರಾವಣ ಮುಗಿತು, ಏನಾದ್ರೂ ಸ್ಪೆಷಲ್ ನಾನ್‌ವೆಜ್ ತಿನ್ಬೇಕು ಅಂತಿದ್ರೆ, ಚಿಕನ್ ಫಿಂಗರ್ಸ್ ಟ್ರೈ ಮಾಡಿ, ರೆಸಿಪಿ ಇಲ್ಲಿದೆ
Chicken Fingers Recipe: ಶ್ರಾವಣ ಮಾಸದಲ್ಲಿ ಬಹುತೇಕರು ನಾನ್‌ವೆಜ್ ತಿನ್ನುವುದಿಲ್ಲ. ಈಗಷ್ಟೇ ಶ್ರಾವಣ ಮಾಸ ಮುಗಿದಿದ್ದು, ಇನ್ನೇನು ಗಣೇಶನ ಹಬ್ಬ ಶುರುವಾಗುತ್ತದೆ. ಈ ನಡುವೆ ಸ್ಪೆಷಲ್ ಆಗಿ ಏನಾದ್ರೂ ಚಿಕನ್ ಖಾದ್ಯ ತಿನ್ಬೇಕು ಅಂತಿದ್ರೆ ಚಿಕನ್ ಫಿಂಗರ್ಸ್ ಟ್ರೈ ಮಾಡಿ. ಅರ್ಧ ಗಂಟೆ ಒಳಗೆ ಮಾಡಬಹುದಾದ ಸುಲಭದ ರೆಸಿಪಿ ಇದು.
Chicken Fingers Recipe: ಬಹುತೇಕ ಕಡೆ ಮಳೆ ಹಾಗೂ ಮೋಡದ ವಾತಾವರಣವಿದ್ದು, ಸಂಜೆಯಾಗುತ್ತಿದ್ದಂತೆ ಏನಾದ್ರೂ ಗರಿಗರಿಯಾಗಿರುವ ತಿನಿಸು ತಿನ್ನಬೇಕು ಅನ್ನಿಸುತ್ತೆ. ಇಷ್ಟು ದಿನ ಶ್ರಾವಣ ಮಾಸವಿತ್ತು, ಇನ್ನೇನು ಎರಡು ದಿನಗಳಲ್ಲಿ ಗಣೇಶನ ಹಬ್ಬವಿದೆ. ಹಾಗಾಗಿ ನಾನ್‌ವೆಜ್ ತಿನ್ನುವುದು ಕಷ್ಟವಾಗುತ್ತದೆ. ಇಂದೇ ಏನಾದ್ರೂ ಸ್ಪೆಷಲ್ ಸ್ನ್ಯಾಕ್ಸ್ ಮಾಡಬೇಕು ಅಂದುಕೊಳ್ಳುತ್ತಿದ್ದರೆ ಚಿಕನ್ ಫಿಂಗರ್ಸ್ ಟ್ರೈ ಮಾಡಿ. ಬೋಂಡಾ, ಬಜ್ಜಿ ತಿಂದು ಬೋರಾದವರಿಗೆ ಈ ರೆಸಿಪಿ ಖಂಡಿತ ಇಷ್ಟ ಆಗುತ್ತೆ.
ಕೇವಲ ಅರ್ಧ ಗಂಟೆಯೊಳಗೆ ಮಾಡಬಹುದಾದ ಈ ರೆಸಿಪಿ ನಾನ್ ವೆಜ್ ಪ್ರಿಯರಿಗೆ ಖಂಡಿತ ಇಷ್ಟವಾಗುತ್ತದೆ. ಹೊರಗಡೆ ಚಿಕನ್ ಫಿಂಗರ್ಸ್‌ಗೆ ಕಾಸ್ಟ್ಲಿ, ಆದ್ರೆ ಅದೇ ರುಚಿಯಲ್ಲಿ ಕಡಿಮೆ ಖರ್ಚು ಮಾಡಿ ಮನೆಯಲ್ಲೇ ರುಚಿ ರುಚಿಯಾಗಿ ಗರಿಗರಿಯಾದ ಚಿಕನ್ ಫಿಂಗರ್ಸ್ ಮಾಡಿ ತಿನ್ನಬಹುದು. ಹಾಗಾದರೆ ಇದನ್ನು ತಯಾರಿಸಲು ಏನೇನು ಬೇಕು, ಮಾಡುವುದು ಹೇಗೆ ಎಂಬಿತ್ಯಾದಿ ವಿವರ ಇಲ್ಲಿದೆ.
ಚಿಕನ್ ಫಿಂಗರ್ಸ್ ಮಾಡಲು ಬೇಕಾಗುವ ಸಾಮಗ್ರಿಗಳು
ಮೂಳೆ ರಹಿತ ಕೋಳಿ - ಅರ್ಧ ಕೆಜಿ, ಮೊಟ್ಟೆ - ಒಂದು, ಬೆಳ್ಳುಳ್ಳಿ ಪುಡಿ– 1 ಚಮಚ, ಮೈದಾಹಿಟ್ಟು – 1ಕಪ್, ಬ್ರೆಡ್ ಕ್ರಂಬ್ಸ್ – 1 ಕಪ್, ಅಡುಗೆ ಸೋಡಾ – ಚಿಟಿಕೆ, ಖಾರದ ಪುಡಿ – ಸ್ವಲ್ಪ, ಉಪ್ಪು – ರುಚಿಗೆ, ನಿಂಬೆ ರಸ - ಎರಡು ಚಮಚ, ಎಣ್ಣೆ - ಕರಿಯಲು,
ಚಿಕನ್ ಫಿಂಗರ್ಸ್ ಮಾಡುವ ವಿಧಾನ
ಈ ರೆಸಿಪಿ ತಯಾರಿಸಲು ಬೋನ್‌ಲೆಸ್ ಚಿಕನ್ ಆಯ್ಕೆ ಮಾಡಿಕೊಳ್ಳಬೇಕು. ಚಿಕನ್ ತುಂಡುಗಳನ್ನು ಚೆನ್ನಾಗಿ ತೊಳೆದು ಉದ್ದಕ್ಕೆ ಮತ್ತು ತೆಳುವಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಬೌಲ್‌ನಲ್ಲಿ ಮೊಟ್ಟೆ ಒಡೆದು ಹಾಕಿ. ಒಂದು ಚಮಚ ಎಣ್ಣೆ, ನಿಂಬೆರಸ, ಬೆಳ್ಳುಳ್ಳಿ ಪುಡಿ, ಮೈದಾಹಿಟ್ಟು, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ನಂತರ ಲಂಬವಾಗಿ ಕತ್ತರಿಸಿದ ಚಿಕನ್ ತುಂಡುಗಳನ್ನು ಸೇರಿಸಿ ಈ ಎಲ್ಲವನ್ನೂ ಚೆನ್ನಾಗಿ ಕಲೆಸಿ ಮತ್ತು ಅರ್ಧ ಗಂಟೆಯವರೆಗೆ ಮ್ಯಾರಿನೇಟ್ ಮಾಡಿ.
ಈಗ ಬ್ರೆಡ್ ತುಂಡುಗಳನ್ನು ಮಿಕ್ಸಿಯಲ್ಲಿ ತರಿತರಿಯಾಗಿ ಪುಡಿ ಮಾಡಿಕೊಳ್ಳಿ. ಇದನ್ನು ಒಂದು ತಟ್ಟೆಯಲ್ಲಿ ಹಾಕಿ. ಡೀಪ್ ಫ್ರೈಗೆ ಬೇಕಾದಷ್ಟು ಎಣ್ಣೆಯನ್ನು ಪಾತ್ರೆಗೆ ಹಾಕಿ ಒಲೆಯ ಮೇಲಿಡಿ. ಚಿಕನ್ ಫಿಂಗರ್ಸ್ ಅನ್ನು ನೀವು ಏರ್ ಫ್ರೈಯರ್‌ನಲ್ಲಿಯೂ ಮಾಡಬಹುದು. ಚಿಕನ್ ತುಂಡುಗಳನ್ನು ಒಂದೊಂದಾಗಿ ಹೊರತೆಗೆದು ಬ್ರೆಡ್ ಪುಡಿಯಲ್ಲಿ ರೋಲ್ ಮಾಡಿ ಮತ್ತು ಎಣ್ಣೆಯಲ್ಲಿ ಫ್ರೈ ಮಾಡಿ. ಗೋಲ್ಡನ್ ಬಣ್ಣಕ್ಕೆ ತಿರುಗುವವರೆಗೆ ಅವುಗಳನ್ನು ಫ್ರೈ ಮಾಡಿ ಮತ್ತು ಪಕ್ಕಕ್ಕೆ ಇರಿಸಿ. ಈಗ ನಿಮ್ಮ ಮುಂದೆ ಚಿಕನ್ ಫಿಂಗರ್ಸ್ ತಿನ್ನಲು ಸಿದ್ಧ. ಏರ್ ಫ್ರೈಯರ್ ಇರುವವರು ಅದರಲ್ಲಿ ಫ್ರೈ ಮಾಡಬಹುದು. ಕುರುಕುಲಾದ, ಗರಿಗರಿಯಾದ ಮತ್ತು ಟೇಸ್ಟಿ ಚಿಕನ್ ಫಿಂಗರ್ಸ್ ಅನ್ನು ನೀವೂ ಒಮ್ಮೆ ಮನೆಯಲ್ಲಿ ಪ್ರಯತ್ನಿಸಿ, ಖಂಡಿತ ಇದು ನಿಮಗೆ ಇಷ್ಟವಾಗುತ್ತದೆ.
ಚಿಕನ್‌ನಿಂದ ಈ ರೀತಿಯ ಖಾದ್ಯಗಳನ್ನ ಮಾಡಿಕೊಟ್ಟರೆ ಮನೆಮಂದಿಯೆಲ್ಲಾ ಇಷ್ಟಪಟ್ಟು ತಿನ್ನೋದು ಖಂಡಿತ, ಮಕ್ಕಳಿಗಂತೂ ಈ ರೀತಿಯ ರೆಸಿಪಿ ಸಖತ್ ಇಷ್ಟ ಆಗುತ್ತೆ. ಹೊರಗಡೆ ತಿಂದು ಆರೋಗ್ಯ ಕೆಡಿಸಿಕೊಳ್ಳುವ ಬದಲು ಮನೆಯಲ್ಲೇ ಇಂತಹ ಕುರುಕಲು ತಿಂಡಿಗಳನ್ನು ತಯಾರಿಸಿ ತಿಂದು ಖುಷಿ ಹೆಚ್ಚಿಸಿಕೊಳ್ಳಬಹುದು.