10 ನಿಮಿಷದಲ್ಲಿ ತಯಾರಾಗುತ್ತೆ ಗರಿಗರಿ ಇನ್‌ಸ್ಟಂಟ್ ದೋಸೆ, ರುಚಿ ಕೂಡ ಸೂಪರ್ ಆಗಿದ್ದು, ಬ್ಯಾಚುಲರ್‌ಗಳಿಗಿದು ಬೆಸ್ಟ್ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  10 ನಿಮಿಷದಲ್ಲಿ ತಯಾರಾಗುತ್ತೆ ಗರಿಗರಿ ಇನ್‌ಸ್ಟಂಟ್ ದೋಸೆ, ರುಚಿ ಕೂಡ ಸೂಪರ್ ಆಗಿದ್ದು, ಬ್ಯಾಚುಲರ್‌ಗಳಿಗಿದು ಬೆಸ್ಟ್ ರೆಸಿಪಿ

10 ನಿಮಿಷದಲ್ಲಿ ತಯಾರಾಗುತ್ತೆ ಗರಿಗರಿ ಇನ್‌ಸ್ಟಂಟ್ ದೋಸೆ, ರುಚಿ ಕೂಡ ಸೂಪರ್ ಆಗಿದ್ದು, ಬ್ಯಾಚುಲರ್‌ಗಳಿಗಿದು ಬೆಸ್ಟ್ ರೆಸಿಪಿ

ಬ್ಯಾಚುಲರ್‌ಗಳಿಗೆ ನಿಜವಾದ ಸವಾಲು ಎಂದರೆ ಅಡುಗೆ ಮಾಡುವುದು, ಹಾಗಂತ ತಿನ್ನದೇ ಇರಲು ಸಾಧ್ಯವಿಲ್ಲ, ಹಸಿವು ಕಾಡುತ್ತದೆ. ಸಮಯ, ಶ್ರಮ ಎರಡೂ ಉಳಿಸುವ ಸಲುವಾಗಿ ಅವರು ಇನ್‌ಸ್ಟಂಟ್ ಅಡುಗೆ ಮೇಲೆ ಒಲವು ತೋರುತ್ತಾರೆ. ಇಲ್ಲೊಂದು ಬ್ಯಾಚುಲರ್‌ಗಳಿಗಾಗಿ ಹೇಳಿ ಮಾಡಿಸಿದ ದೋಸೆ ರೆಸಿಪಿ ಇದೆ. 10 ನಿಮಿಷಗಳಲ್ಲಿ ಗರಿಗರಿಯಾಗಿ ದೋಸೆ ಮಾಡಬಹುದು, ರೆಸಿಪಿ ಇಲ್ಲಿದೆ ನೋಡಿ.

ಇನ್‌ಸ್ಟಂಟ್ ದೋಸೆ ರೆಸಿಪಿ
ಇನ್‌ಸ್ಟಂಟ್ ದೋಸೆ ರೆಸಿಪಿ (PC: Canva)

ದೋಸೆ ಇಷ್ಟ, ಆದರೆ ದೋಸೆ ಹಿಟ್ಟು ಮಾಡೋದು ಕಷ್ಟ, ಇದಕ್ಕೆ ಸಾಕಷ್ಟು ಸಮಯ ಬೇಕು ಎಂದು ಬ್ಯಾಚುಲರ್‌ಗಳು ಗೋಳು ತೋಡಿಕೊಳ್ಳುತ್ತಾರೆ. ಹಾಗಂತ ಯಾವಾಗ್ಲೂ ಹೋಟೆಲ್‌ ಅಲ್ಲೇ ತಿಂದ್ರೆ ಏನು ಚೆನ್ನಾಗಿರುತ್ತೆ ಹೇಳಿ. ಮನೆಯಲ್ಲಿ ದೋಸೆ ಮಾಡೋಕೆ ಟೈಮ್ ಇಲ್ಲ ಅನ್ನೋರು ಇನ್‌ಸ್ಟಂಟ್ ದೋಸೆ ಮಾಡಿ ತಿನ್ನಬಹುದು. ಕೇವಲ 10 ನಿಮಿಷಗಳಲ್ಲಿ ದೋಸೆ ತಯಾರಾಗುತ್ತೆ ಅಂದ್ರೆ ನೀವು ನಂಬಲೇಬೇಕು.

ಈ ಪ್ಲೇನ್ ದೋಸೆಯನ್ನು 10 ನಿಮಿಷದಲ್ಲಿ ಸಿಂಪಲ್ ಆಗಿ ಮಾಡೋದಾದ್ರೂ ಇದರ ರುಚಿ ಮಾತ್ರ ಸಖತ್ ಆಗಿರುತ್ತೆ, ತೆಂಗಿನಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿ ಇದ್ರೆ ಈ ದೋಸೆ ನಿಮಗೆ ಇಷ್ಟವಾಗದೆ ಇರೋಕೆ ಸಾಧ್ಯವೇ ಇಲ್ಲ. ಹಾಗಾದರೆ ಈ ಇನ್‌ಸ್ಟಂಟ್ ದೋಸೆ ಮಾಡೋಕೆ ಏನೆಲ್ಲಾ ಬೇಕು,ಇದನ್ನ ಮಾಡೋದು ಹೇಗೆ ನೋಡಿ.

ಇನ್‌ಸ್ಟಂಟ್ ದೋಸೆಗೆ ಬೇಕಾಗುವ ಸಾಮಗ್ರಿಗಳು

ರವೆ – 1ಕಪ್‌, ಅವಲಕ್ಕಿ – 2ಚಮಚ, ಗೋಧಿಹಿಟ್ಟು – 2ಚಮಚ, ಉಪ್ಪು – ರುಚಿಗೆ ತಕ್ಕಷ್ಟು, ಮೊಸರು – 1 ಕಪ್‌, ನೀರು – 1 ಕಪ್‌, ಸಕ್ಕರೆ – 1ಚಮಚ, ಅಡುಗೆ ಸೋಡಾ– ಚಿಟಿಕೆ, ಅಡುಗೆ ಎಣ್ಣೆ

ಇನ್‌ಸ್ಟಂಟ್ ದೋಸೆ ಮಾಡುವ ವಿಧಾನ

ಮೊದಲು ರವೆ ಹಾಗೂ ಅವಲಕ್ಕಿಯನ್ನು ನುಣ್ಣಗೆ ಪುಡಿ ಮಾಡಿಟ್ಟುಕೊಳ್ಳಿ. ಇದನ್ನು ಒಂದು ಪಾತ್ರೆಯಲ್ಲಿ ಜಾಡಿ ಹಿಡಿಯಿರಿ. ಜಾಡಿ ಹಿಡಿದ ಹಿಟ್ಟಿಗೆ ಗೋಧಿಹಿಟ್ಟು, ಸಕ್ಕರೆ, ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಕಲೆಸಿ. ಸ್ವಲ್ಪ ನೀರು ಸೇರಿಸಿ ಗಂಟಿಲ್ಲದಂತೆ ಕಲೆಸಿ. ಈಗ ನಿಮ್ಮ ಮುಂದೆ ದೋಸೆ ಹಿಟ್ಟು ಸಿದ್ಧವಾಗಿದೆ. ಇದನ್ನು ಒಂದು 5 ನಿಮಿಷಗಳ ಕಾಲ ಹಾಗೇ ಇಡಿ. ಈಗ ಅಡುಗೆಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ತವಾ ಬಿಸಿ ಮಾಡಿ, ಅದಕ್ಕೆ ಎಣ್ಣೆ ಸವರಿ. ನಂತರ ದೋಸೆಹಿಟ್ಟು ಹಾಕಿ ತೆಳುವಾಗಿ ಹರಡಿ. ದೋಸೆ ಬಣ್ಣ ಬದಲಾಗುವವರೆಗೂ ಚೆನ್ನಾಗಿ ಕಾಯಿಸಿ, ನಂತರ ಇನ್ನೊಂದು ಭಾಗವನ್ನು ಕೆಲ ಹೊತ್ತು ಕಾಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಇನ್‌ಸ್ಟಂಟ್ ದೋಸೆ ತಿನ್ನಲು ಸಿದ್ಧ.

ಈ ದೋಸೆಯು ಆರೋಗ್ಯಕ್ಕೂ ಉತ್ತಮ. ಚಟ್ನಿಯನ್ನು ಕೂಡ ಒಮ್ಮೆ ಮಾಡಿಟ್ಟುಕೊಂಡರೆ ಕೆಲವು ದಿನಗಳವರೆಗೆ ಸಂಗ್ರಹಿಸಿ ಇಡಬಹುದು. ಅದನ್ನು ಹೇಗೆ ಸಂಗ್ರಹಿಸಬೇಕು ಎಂಬುದನ್ನು ಈ ಲೇಖನದಲ್ಲಿ ಹೇಳಿದ್ದೇವೆ. ಇದರ ಲಿಂಕ್ ಇಲ್ಲಿದೆ ಕ್ಲಿಕ್ ಮಾಡಿ.

ಈ ರೀತಿ ದೋಸೆ ಮಾಡಿದ್ರೆ ನಿಮಗೆ ಸಮಯ ವ್ಯರ್ಥ ಆಗೋಲ್ಲ, ದೋಸೆ ತಿನ್ನಬೇಕು ಅನ್ನೋ ಬಯಕೆ ಕೂಡ ಈಡೇರುತ್ತೆ. ಟಿಫಿನ್ ಬಾಕ್ಸ್ ತೆಗೆದುಕೊಂಡು ಹೋಗುವ ಅಭ್ಯಾಸ ನಿಮಗಿದ್ರೆ ಅದಕ್ಕೂ ಕೂಡ ಈ ದೋಸೆ ಹೇಳಿ ಮಾಡಿಸಿದಂತಿರುತ್ತದೆ. 

Whats_app_banner