ದಾಸವಾಳ ಸೊಪ್ಪಿನಿಂದಲೂ ಮಾಡಬಹುದು ಗರಿಗರಿ ದೋಸೆ; ಇದು ರುಚಿಗಷ್ಟೇ ಅಲ್ಲ, ಆರೋಗ್ಯಕ್ಕೂ ಬೆಸ್ಟ್, ರೆಸಿಪಿ ಇಲ್ಲಿದೆ ನೋಡಿ
ದಾಸವಾಳದ ಹೂವನ್ನು ದೇವರ ಅಲಂಕಾರಕ್ಕೆ ಇಡುವ ಕಾರಣ ಬಹುತೇಕರ ಮನೆಯಲ್ಲಿ ದಾಸವಾಳ ಗಿಡ ಇರುತ್ತದೆ. ದಾಸವಾಳದ ಎಲೆಯನ್ನೂ ಕೂದಲಿನ ಆರೈಕೆಗೆ ಬಳಸಲಾಗುತ್ತದೆ. ಆದರೆ ಇದರಿಂದ ದೋಸೆ ಕೂಡ ಮಾಡೋಕೆ ಆಗುತ್ತೆ ಅನ್ನೋದು ಹಲವರಿಗೆ ತಿಳಿದಿಲ್ಲ. ಈ ದೋಸೆ ಟೇಸ್ಟ್‌ಗಷ್ಟೇ ಅಲ್ಲ, ಆರೋಗ್ಯಕ್ಕೂ ಬೆಸ್ಟ್.
ದಾಸವಾಳ ಎಂದಕ್ಷಾಣ ನಮಗೆ ಕೂದಲಿಗೆ ಆರೋಗ್ಯವೇ ನೆನಪಾಗುತ್ತದೆ. ಕೂದಲು ಸೊಂಪಾಗಿ ಬೆಳೆಯಲು ದಾಸವಾಳದ ಹೂ ಹಾಗೂ ಸೊಪ್ಪು ಅನ್ನು ಅರೆದು ಹಚ್ಚುವ ಅಭ್ಯಾಸ ಹಿಂದಿನಿಂದಲೂ ರೂಢಿಯಲ್ಲಿತ್ತು. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುವುದು ಮಾತ್ರವಲ್ಲ, ಕೂದಲನ್ನು ನಯವಾಗಿಸುತ್ತದೆ. ಹಲವು ಆರೋಗ್ಯ ಪ್ರಯೋಜನಗಳನ್ನೂ ಹೊಂದಿರುವ ದಾಸವಾಳ ಸೊಪ್ಪಿನಿಂದ ದೋಸೆ, ಇಡ್ಲಿಯನ್ನೂ ಮಾಡಬಹುದು. ಇದು ರುಚಿ ಕೂಡ ಭಿನ್ನ, ಜೊತೆಗೆ ಆರೋಗ್ಯಕ್ಕೂ ಉತ್ತಮ. ಇದಕ್ಕೆ ತೆಂಗಿನೆಣ್ಣೆ ನೆಂಜಿಕೊಂಡು ತಿನ್ನುತ್ತಿದ್ದರೆ ಅದರ ರುಚಿಯನ್ನ ತಿಂದವರೇ ಬಲ್ಲರು. ಹಾಗಾದರೆ ದಾಸವಾಳ ಸೊಪ್ಪಿನ ದೋಸೆ ಮಾಡುವುದು ಹೇಗೆ, ಇದಕ್ಕೆ ಏನೆಲ್ಲಾ ಬೇಕು ನೋಡಿ.
ದಾಸವಾಳ ಸೊಪ್ಪಿನ ದೋಸೆ
ಬೇಕಾಗುವ ಸಾಮಗ್ರಿಗಳು: ದಾಸವಾಳ ಸೊಪ್ಪು - 3 ಕಪ್, ಅಕ್ಕಿ- ಒಂದೂವರೆ ಕಪ್, ಉದ್ದು - ಕಾಲು ಕಪ್ (ಉದ್ದು ಬೇಡವೆಂದರೂ ಬಿಡಬಹುದು), ನೀರು, ಉಪ್ಪು - ರುಚಿಗೆ, ಮೆಂತ್ಯೆ - ಐದಾರು ಕಾಳು
ತಯಾರಿಸುವ ವಿಧಾನ: ದಾಸವಾಳ ಸೊಪ್ಪಿನ ದೋಸೆ ತಯಾರಿಸಲು ಮೊದಲು ಅಕ್ಕಿ ಹಾಗೂ ಉದ್ದನ್ನು 6 ಗಂಟೆಗಳ ಕಾಲ ನೆನೆಸಿ. ನಂತರ ಚೆನ್ನಾಗಿ ತೊಳೆದು ಅಕ್ಕಿ, ಉದ್ದು, ದಾಸವಾಳ ಎಲೆ, ಉಪ್ಪು ಸೇರಿಸಿ ಚೆನ್ನಾಗಿ ರುಬ್ಬಿಕೊಳ್ಳಿ. ಇದರಿಂದ ತಕ್ಷಣಕ್ಕೆ ದೋಸೆ ಮಾಡಬಹುದು. ಭಿನ್ನ ರುಚಿ ಹೊಂದಿರುವ ದಾಸವಾಳ ಸೊಪ್ಪಿನ ದೋಸೆ ಜೊತೆ ಚಟ್ನಿ ಅಥವಾ ತೆಂಗಿನೆಣ್ಣೆ ನೆಂಜಿಕೊಂಡು ತಿನ್ನಬಹುದು.
ಕರಾವಳಿ ಭಾಗದಲ್ಲಿ ದಾಸವಾಳ ಸೊಪ್ಪಿನ ದೋಸೆಯನ್ನು ಹೆಚ್ಚು ತಯಾರಿಸುತ್ತಾರೆ. ಈ ಭಾಗದಲ್ಲಿ ವರ್ಷದಲ್ಲಿ ಒಮ್ಮೆಯಾದ್ರೂ ದಾಸವಾಳ ಸೊಪ್ಪಿನ ದೋಸೆ ತಿನ್ನುತ್ತಾರೆ. ಆಮಶಂಕೆ ನಿವಾರಣೆಗೆ ದಾಸವಾಳ ಸೊಪ್ಪಿನ ದೋಸೆಗಿಂತ ಉತ್ತಮ ಮನೆಮದ್ದಿಲ್ಲ. ಮಲಬದ್ಧತೆ ನಿವಾರಣೆಗೂ ಈ ದೋಸೆ ಉತ್ತಮ. ತಂಪಿನ ಗುಣ ಇರುವ ದಾಸವಾಳ ಸೊಪ್ಪು ದೇಹವನ್ನು ತಂಪು ಮಾಡುವ ಜೊತೆಗೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಆದರೆ ಮಳೆಗಾಲದಲ್ಲಿ ದಾಸವಾಳ ಸೊಪ್ಪು ಬಳಸುವಾಗ ಸಾಕಷ್ಟು ಎಚ್ಚರವಿರಬೇಕು. ಬಳಸುವ ಮುನ್ನ ಇದನ್ನು ಚೆನ್ನಾಗಿ ತೊಳೆದಿರಬೇಕು.
ದಾಸವಾಳ ಸೊಪ್ಪಿನಲ್ಲಿ ಸಾಕಷ್ಟು ಪೋಷಕಾಂಶಗಳಿರುತ್ತವೆ. ಇದು ಉತ್ಕರ್ಷಣ ನಿರೋಧಕವೂ ಹೌದು. ಇದು ದೇಹದಿಂದ ಅಪಾಯಕಾರಿ ಮತ್ತು ಅನಪೇಕ್ಷಿತ ಮಾಲಿನ್ಯಕಾರಕಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ. ಮುಟ್ಟಿನ ಸಮಸ್ಯೆ ಅಥವಾ ಮುಟ್ಟಿನ ಸಮಯದಲ್ಲಿ ಅಧಿಕ ರಕ್ತಸ್ರಾವ ಹೊಂದಿರುವ ಮಹಿಳೆಯರಿಗೂ ಇದು ಪ್ರಯೋಜನಕಾರಿ. ದಾಸವಾಳ ಸೊಪ್ಪಿನಿಂದ ಇದೇ ವಿಧಾನದಲ್ಲಿ ಇಡ್ಲಿಯನ್ನೂ ಮಾಡಿ ತಿನ್ನಬಹುದು. ವರ್ಷದಲ್ಲಿ ಒಂದೆರಡು ಬಾರಿಯಾದ್ರೂ ದಾಸವಾಳದ ರೆಸಿಪಿಗಳನ್ನು ತಿನ್ನಬೇಕು ಎಂದು ಹೇಳಲಾಗುತ್ತದೆ.
ವಿಭಾಗ