ವೈರಲ್ ಆಯ್ತು ಬೇಯಿಸಿದ ಮೊಟ್ಟೆ ಫ್ರೈ ರೆಸಿಪಿ, ಪಾಟ್ನಾ ಶೈಲಿಯ ಈ ಚಾಟ್ಸ್‌ ನಿಮ್ಮ ಬಾಯಲ್ಲಿ ನೀರೂರಿಸದೇ ಇರೊಲ್ಲ
ಕನ್ನಡ ಸುದ್ದಿ  /  ಜೀವನಶೈಲಿ  /  ವೈರಲ್ ಆಯ್ತು ಬೇಯಿಸಿದ ಮೊಟ್ಟೆ ಫ್ರೈ ರೆಸಿಪಿ, ಪಾಟ್ನಾ ಶೈಲಿಯ ಈ ಚಾಟ್ಸ್‌ ನಿಮ್ಮ ಬಾಯಲ್ಲಿ ನೀರೂರಿಸದೇ ಇರೊಲ್ಲ

ವೈರಲ್ ಆಯ್ತು ಬೇಯಿಸಿದ ಮೊಟ್ಟೆ ಫ್ರೈ ರೆಸಿಪಿ, ಪಾಟ್ನಾ ಶೈಲಿಯ ಈ ಚಾಟ್ಸ್‌ ನಿಮ್ಮ ಬಾಯಲ್ಲಿ ನೀರೂರಿಸದೇ ಇರೊಲ್ಲ

ಮೊಟ್ಟೆ ಪ್ರಿಯರು ನೀವಾಗಿದ್ದರೆ ನಿಮಗಾಗಿ ಇಲ್ಲೊಂದು ಸ್ಪೆಷಲ್ ರೆಸಿಪಿ ಇಲ್ಲಿದೆ. ಈ ರೆಸಿಪಿ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಅದುವೇ ಪಾಟ್ನಾ ಸ್ಟೈಲ್ ಬೇಯಿಸಿದ ಮೊಟ್ಟೆ ಫ್ರೈ ರೆಸಿಪಿ. ಈ ರೆಸಿಪಿ ತಿನ್ನೋದು ನೋಡಿದ್ರೇನೆ ಬಾಯಲ್ಲಿ ನೀರು ಬರುತ್ತೆ, ಇದನ್ನು ಮಾಡೋದು ಹೇಗೆ ನೋಡಿ.

ವೈರಲ್ ಆದ ಬೇಯಿಸಿದ ಮೊಟ್ಟೆ ಫ್ರೈ ವಿಡಿಯೊ ಚಿತ್ರಗಳು
ವೈರಲ್ ಆದ ಬೇಯಿಸಿದ ಮೊಟ್ಟೆ ಫ್ರೈ ವಿಡಿಯೊ ಚಿತ್ರಗಳು

ಮೊಟ್ಟೆ ಅಂದ್ರೆ ಮಕ್ಕಳಿಗೂ ಇಷ್ಟ. ಮೊಟ್ಟೆಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮೊಟ್ಟೆಯ ಖಾದ್ಯಗಳ ರುಚಿಯೂ ಅದ್ಭುತ. ಮೊಟ್ಟೆಯಿಂದ ಸಾರು, ಆಮ್ಲೇಟ್‌, ಬೊಂಡಾ ಹೀಗೆ ಹಲವು ಬಗೆಯ ಖಾದ್ಯಗಳನ್ನ ತಯಾರಿಸಬಹುದು. ಬೇಯಿಸಿದ ಮೊಟ್ಟೆಯನ್ನು ನೇರವಾಗಿ ತಿನ್ನಲು ಕೂಡ ಸಖತ್ ಆಗಿರುತ್ತೆ, ಅಂಥದ್ರದಲ್ಲಿ ಬೇಯಿಸಿದ ಮೊಟ್ಟೆಯಿಂದ ರೆಸಿಪಿ ಮಾಡಿದ್ರೆ ಹೇಗಿರಬಹುದು ಅಲ್ವಾ?

ಖಂಡಿತ ಈ ಯೋಚನೆಗೆ ತಕ್ಕಂತೆ ಬೇಯಿಸಿದ ಮೊಟ್ಟೆ ರೆಸಿಪಿ ವಿಡಿಯೊವೊಂದು ಈ ಭಾರಿ ವೈರಲ್ ಆಗಿದೆ. ಈ ರೆಸಿಪಿಯ ಹೆಸರು ಬೇಯಿಸಿದ ಮೊಟ್ಟೆ ಫ್ರೈ. ಇದು ಪಾಟ್ನಾ ಶೈಲಿಯ ರೆಸಿಪಿಯಾಗಿದ್ದು, ಬಹಳ ವಿಭಿನ್ನವಾಗಿ ಇದನ್ನು ಮಾಡಲಾಗುತ್ತದೆ. ಇದರ ರುಚಿಯನ್ನು ತಿಂದು ನೋಡಿ ಫಿದಾ ಆದವರಿಗಿಂತ, ವಿಡಿಯೊ ನೋಡಿ ಬಾಯಲ್ಲಿ ನೀರೂರಿಸಿಕೊಂಡವರೇ ಹೆಚ್ಚು.

Mi_nashikkar ಎನ್ನುವ ಫೇಸ್‌ಬುಕ್ ಪುಟ ನಿರ್ವಹಣೆ ಮಾಡುವವರು ಈ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ನವೆಂಬರ್ 3ರಂದು ಪೋಸ್ಟ್ ಮಾಡಲಾದ ಈ ವಿಡಿಯೊವನ್ನು 8l ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. ಇದಕ್ಕೆ ಹಲವರು ಕಾಮೆಂಟ್ ಕೂಡ ಮಾಡಿದ್ದಾರೆ. ಕೆಲವು ರೆಸಿಪಿಯನ್ನು ಅದ್ಭುತ ಎಂದು ಹಾಡಿ ಹೊಗಳಿದ್ರೆ, ಕೆಲವರು ಬೇಯಿಸಿದ ಮೊಟ್ಟೆಯನ್ನು ಫ್ರೈ ಮಾಡುವುದು ಆರೋಗ್ಯಕ್ಕೆ ಹಾನಿಕರ ಎಂದಿದ್ದಾರೆ. ತಿನ್ನುವ ವಿಚಾರದಲ್ಲಿ ಇಂತಹ ದ್ವಂದಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿರುವುದು ಸುಳ್ಳಲ್ಲ. ಅದೇನೆ ಇರಲಿ, ಈಗ ಬೇಯಿಸಿದ ಮೊಟ್ಟೆ ಫ್ರೈ ಮಾಡೋದು ಹೇಗೆ, ಅದಕ್ಕೆ ಏನೆಲ್ಲಾ ಬೇಕು ನೋಡಿ.

ಬೇಯಿಸಿದ ಮೊಟ್ಟೆ ಫ್ರೈ ರೆಸಿಪಿ

ಬೇಕಾಗುವ ಸಾಮಗ್ರಿಗಳು: ಬೇಯಿಸಿದ ಮೊಟ್ಟೆ – 6, ಎಣ್ಣೆ – 4 ಚಮಚ, ಕ್ಯಾಪ್ಸಿಕಂ – ಅರ್ಧ (ಚಿಕ್ಕದ್ದಾಗಿ ಹೆಚ್ಚಿದ್ದು), ಟೊಮೆಟೊ – 1 ಉದ್ದಕ್ಕೆ, ತೆಳುವಾಗಿ ಹೆಚ್ಚಿದ್ದು, ಶುಂಠಿ – ಅರ್ಧ ಇಂಚು (ಚಿಕ್ಕದಾಗಿ ಹೆಚ್ಚಿದ್ದು), ಬೆಳ್ಳುಳ್ಳಿ – ಐದಾರು ಎಸಳು (ಚಿಕ್ಕದಾಗಿ ಹೆಚ್ಚಿದ್ದು), ಹಸಿಮೆಣಸು – ಚಿಕ್ಕದಾಗಿ ಹೆಚ್ಚಿದ್ದು, ಕೊತ್ತಂಬರಿ ಸೊಪ್ಪು – ಚಿಕ್ಕದಾಗಿ ಹೆಚ್ಚಿದ್ದು, ಈರುಳ್ಳಿ – 2 ಮಧ್ಯಮ ಗಾತ್ರದ್ದು (ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ), ಚಾಟ್‌ ಮಸಾಲಾ, ಕಾಳುಮೆಣಸಿನ ಪುಡಿ, ಉಪ್ಪು,

ಬೇಯಿಸಿದ ಮೊಟ್ಟೆ ಫ್ರೈ ಮಾಡುವ ವಿಧಾನ

ಮೊದಲು ಮೊಟ್ಟೆಯನ್ನು ಬೇಯಿಸಿ, ಸಿಪ್ಪೆ ತೆಗೆದು ಇಡಿ. ಅಗಲವಾದ ತವಾದ ಮೇಲೆ ಎಣ್ಣೆ ಹಾಕಿ ಕಾಯಲು ಬಿಡಿ. ಎಣ್ಣೆ ಬಿಸಿಯಾದ ಮೇಲೆ ಮೊಟ್ಟೆಯನ್ನು ಎರಡು ಭಾಗ ಕತ್ತರಿಸಿ. ಮೊಟ್ಟೆಯನ್ನು ಎಣ್ಣೆಯ ಮೇಲೆ ಹಳದಿ ಭಾಗ ಕೆಳಗೆ ಇರುವಂತೆ ಇಡಿ. ನಂತರ ಹೆಚ್ಚಿಟ್ಟುಕೊಂಡ ಕ್ಯಾಪ್ಸಿಕಂ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸು, ಹಸಿಮೆಣಸು, ಕೊತ್ತಂಬರಿ ಸೊಪ್ಪು ಎಲ್ಲವನ್ನೂ ಒಂದರ ಮೇಲೆ ಒಂದರಂತೆ ಹರಡಿ. ನಂತರ ಚಾಟ್‌ಮಸಾಲಾ, ಕಾಳುಮೆಣಸಿನ ಪುಡಿ, ಉಪ್ಪು ಉದುರಿಸಿ ಚೆನ್ನಾಗಿ ಬೇಯಲು ಬಿಡಿ. ಕೊನೆಗೆ ಮೊಟ್ಟೆಯನ್ನ ಒಂದೊಂದಾಗಿ ಮಗುಚಿ ಹಾಕಿ. ಉಳಿದ ಪದಾರ್ಥಗಳನ್ನು ಮುಗುಚಿ ಹಾಕಿ. ಈ ಎಲ್ಲವೂ ಚೆನ್ನಾಗಿ ಬೆಂದಿದ ಅನ್ನಿಸಿದ ಮೇಲೆ ಇದನ್ನು ಪ್ಲೇಟ್‌ನಲ್ಲಿ ಹಾಕಿ ತಿನ್ನಲು ಕೊಡಿ. ಇದೊಂಥರ ಡಿಫ್ರೆಂಟ್ ರೆಸಿಪಿ ಆಗಿದ್ದು, ಸಖತ್ ಆಗಿರುತ್ತೆ ಅಂತ ವಿಡಿಯೊ ನೋಡಿದ್ರೆ ಅನ್ನಿಸುತ್ತೆ.

ಈ ಬೇಯಿಸಿದ ಮೊಟ್ಟೆ ಫ್ರೈ ರುಚಿ ಹೇಗಿರುತ್ತೆ ಅಂತ ತಿಳಿಯಬೇಕು ಅಂದ್ರೆ ನೀವು ಒಮ್ಮೆ ಮನೆಯಲ್ಲಿ ಇದನ್ನು ಮಾಡಿ ತಿನ್ನಬೇಕು. ಖಾರ ಸ್ವಲ್ಪ ಕಡಿಮೆ ಹಾಕಿದ್ರೆ ಮಕ್ಕಳು ಕೂಡ ಬಾಯಿ ಚಪ್ಪರಿಸಿಕೊಂಡು ತಿಂತಾರೆ.

Whats_app_banner