ಆಲೂ, ಪನೀರ್ ಪರೋಟಗಿಂತಲೂ ಹೆಚ್ಚು ರುಚಿ ಈ ಓಂಕಾಳು ಪರೋಟ: ಜೀರ್ಣಕ್ರಿಯೆಗೆ ಸಹಕಾರಿಯಾಗಿರುವ ಈ ರೆಸಿಪಿ ಮಾಡುವುದು ತುಂಬಾ ಸಿಂಪಲ್
ಆಲೂ ಪರೋಟ, ಪನೀರ್ ಪರೋಟ, ಈರುಳ್ಳಿ ಪರೋಟ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಆದರೆ,ಓಂಕಾಳು ಹಾಕಿ ಮಾಡಿದ ಪರೋಟ ರುಚಿಯೇ ಬೇರೆ. ಸುವಾಸನೆಯ ಜೊತೆಗೆ ರುಚಿಯೂ ಅದ್ಭುತ. ಅಷ್ಟೇ ಅಲ್ಲ, ಇದು ಹೊಟ್ಟೆಯ ಆರೋಗ್ಯಕ್ಕೂ ಉತ್ತಮ.ಓಂಕಾಳು ಪರೋಟ ಮಾಡುವ ಬಗೆ ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಆಲೂ ಪರೋಟ, ಪನೀರ್ ಪರೋಟ, ಈರುಳ್ಳಿ ಪರೋಟ ತಿನ್ನಲು ಬಹಳ ರುಚಿಕರವಾಗಿರುತ್ತದೆ. ಸ್ಟಫಿಂಗ್ ಮಾಡಿರುವ ಪರೋಟಗಳನ್ನು ತಿನ್ನುವುದೇ ಒಂದು ಮಜಾ. ಬೆಳಗಿನ ಉಪಾಹಾರಕ್ಕೆ ಪರೋಟ ಮಾಡಿ ತಿನ್ನುವುದು ಚೆನ್ನಾಗಿರುತ್ತದೆ. ಪರೋಟದಲ್ಲಿ ಹಲವು ವಿಧಗಳಿವೆ. ಇವುಗಳಲ್ಲಿ ಓಂಕಾಳು ಪರೋಟವೂ ಒಂದು. ಇದು ಹೊಟ್ಟೆಯ ಆರೋಗ್ಯಕ್ಕೆ ಉತ್ತಮ. ಓಂಕಾಳು ಸೇವನೆಯು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರ, ಅಜೀರ್ಣದಿಂದ ಪರಿಹಾರ ಒದಗಿಸುವುದು ಸೇರಿದಂತೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಈ ಓಂಕಾಳು ಪರೋಟ ಮಾಡುವ ಬಗೆ ಹೇಗೆ ಎಂಬುದನ್ನು ಇಲ್ಲಿ ನೀಡಲಾಗಿದೆ.
ಓಂಕಾಳು ಪರೋಟ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಪದಾರ್ಥಗಳು: ಗೋಧಿ ಹಿಟ್ಟು- 2 ಕಪ್, ಓಂಕಾಳು- 1/2 ಚಮಚ, ಉಪ್ಪು- ರುಚಿಗೆ ತಕ್ಕಷ್ಟು, ಎಣ್ಣೆ- 3 ಚಮಚ, ನೀರು- ಬೇಕಾಗುವಷ್ಟು.
ತಯಾರಿಸುವ ವಿಧಾನ: ಮೊದಲು ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಎಣ್ಣೆ ಹಾಕಿ. ಅವುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ. ಹಿಟ್ಟಿಗೆ ನೀರನ್ನು ಒಂದೇ ಬಾರಿಗೆ ಸೇರಿಸುವ ಬದಲು ಸ್ವಲ್ಪ ಸ್ವಲ್ಪವಾಗಿ ಸೇರಿಸಬೇಕು. ನಂತರ ಹಿಟ್ಟನ್ನು 5 ನಿಮಿಷಗಳ ಕಾಲ ನಿಧಾನವಾಗಿ ಮಿಶ್ರಣ ಮಾಡಿ. 10 ನಿಮಿಷಗಳ ಹಿಟ್ಟನ್ನು ಚೆನ್ನಾಗಿ ಬೆರೆಸಿಕೊಳ್ಳಿ. ಕಲಸಿದ ಹಿಟ್ಟಿನ ಮೇಲೆ ಸ್ವಲ್ಪ ಎಣ್ಣೆ ಹಾಕಿ, ಅದರ ಮೇಲೆ ಒಂದು ಬಟ್ಟಲನ್ನು ಮುಚ್ಚಿ. 20 ನಿಮಿಷಗಳ ಕಾಲ ಅದನ್ನು ಬಿಡಿ. 20 ನಿಮಿಷಗಳ ನಂತರ, ಹಿಟ್ಟನ್ನು ಸಣ್ಣ ಉಂಡೆಗಳಾಗಿ ಮಾಡಿ ಚಪಾತಿ ಲಟ್ಟಿಸಿ. ಇದರ ಮೇಲೆ ಎಣ್ಣೆ ಅಥವಾ ತುಪ್ಪವನ್ನು ಸವರಿ. ಬಳಿಕ ಓಂಕಾಳುಗಳನ್ನು ಹಾಕಿ. ಚಪಾತಿಯನ್ನು ಮಡಚಿ ಮತ್ತೆ ಲಟ್ಟಿಸಿ.
ಬಾಣಲೆ ಅಥವಾ ತವಾ ಬಿಸಿಯಾದ ನಂತರ ಅದರ ಮೇಲೆ ಲಟ್ಟಿಸಿದ ಓಂಕಾಳು ಪರೋಟವನ್ನು ಹಾಕಿ. 30 ಸೆಕೆಂಡುಗಳ ಕಾಲ ಒಂದು ಬದಿಯಲ್ಲಿ ಫ್ರೈ ಮಾಡಿ. ನಂತರ ಅದನ್ನು ಇನ್ನೊಂದು ಬದಿಗೆ ತಿರುಗಿಸಿ, ಸ್ವಲ್ಪ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. 30 ಸೆಕೆಂಡುಗಳ ನಂತರ, ಮತ್ತೆ ತಿರುಗಿಸಿ ಇನ್ನೊಂದು ಬದಿಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ. ಪರೋಟ ಬೇಯಿಸುವಾಗ ಉಬ್ಬಿ ಬರುತ್ತದೆ. ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ಆದ ನಂತರ ಪರೋಟವನ್ನು ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ.
ಈ ಓಂಕಾಳು ಪರೋಟವನ್ನು ಕರಿ, ರಾಯಿತಾ ಅಥವಾ ಉಪ್ಪಿನಕಾಯಿಯೊಂದಿಗೂ ಸವಿಯಬಹುದು. ಬೆಳಗ್ಗೆ, ಮಧ್ಯಾಹ್ನ ಅಥವಾ ರಾತ್ರಿ ವೇಳೆಗೂ ಈ ರುಚಿಕರವಾದ ಹಾಗೂ ಆರೋಗ್ಯಕರ ಪರೋಟವನ್ನು ಮಾಡಿ ಸವಿಯಬಹುದು. ಮಕ್ಕಳ ಲಂಚ್ ಬಾಕ್ಸ್‌ಗೂ ಹಾಕಿ ಕಳುಹಿಸಬಹುದು.
ಜೀರ್ಣಕ್ರಿಯೆಗೆ ಉತ್ತಮ
ಓಂಕಾಳು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ವಿಶೇಷವಾಗಿ ಜೀರ್ಣಕ್ರಿಯೆಗೆ ಒಳ್ಳೆಯದು. ಇದು ಗ್ಯಾಸ್ ಮತ್ತು ಅಜೀರ್ಣದಂತಹ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. ಹೀಗಾಗಿ ಓಂಕಾಳಿನಿಂದ ಮಾಡಿದ ಈ ಪರೋಟಗಳು ಜೀರ್ಣಾಂಗ ವ್ಯವಸ್ಥೆಗೆ ಒಳ್ಳೆಯದು. ಇವುಗಳನ್ನು ತಿಂದರೆ ಹೊಟ್ಟೆಯ ಆರೋಗ್ಯಕ್ಕೆ ಉತ್ತಮ. ಇದು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಉಸಿರಾಟದ ತೊಂದರೆಗಳನ್ನು ಕಡಿಮೆ ಮಾಡಲು ಸಹ ಸಹಾಯ ಮಾಡುತ್ತದೆ.
ವಿಭಾಗ