ಬಿಸಿ ಬಿಸಿ ಅನ್ನದೊಂದಿಗೆ ಸವಿಯಿರಿ ನೆಲ್ಲಿಕಾಯಿ-ಶುಂಠಿ ಚಟ್ನಿ: ರುಚಿ ಅದ್ಭುತ, ಆರೋಗ್ಯಕ್ಕೂ ಪ್ರಯೋಜನಕಾರಿ
ನೆಲ್ಲಿಕಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅದೇ ರೀತಿ ಶುಂಠಿ ಕೂಡ ಆರೋಗ್ಯಕ್ಕೆ ತುಂಬಾನೇ ಉತ್ತಮವಾಗಿದೆ. ನೆಲ್ಲಿಕಾಯಿ ಮತ್ತು ಶುಂಠಿ ಮಿಶ್ರಣದ ಚಟ್ನಿಯನ್ನು ಮಾಡಿ ಸವಿಯಬಹುದು. ಬಿಸಿ ಅನ್ನದೊಂದಿಗೆ ತಿನ್ನಲು ತುಂಬಾ ರುಚಿಕರವಾಗಿರುತ್ತದೆ. ಇಲ್ಲಿದೆ ರೆಸಿಪಿ.
ನೆಲ್ಲಿಕಾಯಿಯು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ವಿಟಮಿನ್ ಸಿ, ಬಿ 6, ಎ, ಕ್ಯಾಲ್ಸಿಯಂ ಮತ್ತು ಕಬ್ಬಿಣವನ್ನು ಒಳಗೊಂಡಂತೆ ಹೆಚ್ಚಿನ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತದೆ. ನೆಲ್ಲಿಕಾಯಿಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದರಿಂದ ದೇಹಕ್ಕೆ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಅದಕ್ಕಾಗಿಯೇ ಈ ಚಳಿಗಾಲದಲ್ಲಿ ನೆಲ್ಲಿಕಾಯಿಯನ್ನು ಸೇವಿಸುವುದು ಉತ್ತಮ. ನೆಲ್ಲಿಕಾಯಿಯ ಚಟ್ನಿ ಮಾಡಿ ತಿನ್ನಬಹುದು. ಇದಕ್ಕೆ ಶುಂಠಿ ಸೇರಿಸುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳ ಜತೆಗೆ ರುಚಿಯನ್ನು ಮತ್ತಷ್ಟು ಹೆಚ್ಚಿಸಬಹುದು. ಈ ನೆಲ್ಲಿಕಾಯಿ-ಶುಂಠಿ ಚಟ್ನಿ ಮಾಡುವ ವಿಧಾನ ಇಲ್ಲಿದೆ.
ನೆಲ್ಲಿಕಾಯಿ-ಶುಂಠಿ ಚಟ್ನಿ ಮಾಡುವ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು: ನೆಲ್ಲಿಕಾಯಿ- 200 ಗ್ರಾಂ, ಶುಂಠಿ- 1 ಇಂಚಿನಷ್ಟು, ಎಣ್ಣೆ- ಎರಡು ಚಮಚ, ಮೆಂತ್ಯ ಕಾಳು- ಒಂದು ಟೀ ಚಮಚ, ಒಣ ಮೆಣಸಿನಕಾಯಿ- 8, ಹಸಿರು ಮೆಣಸಿನಕಾಯಿಗಳು- 5, ಸಾಸಿವೆ- ಒಂದು ಟೀ ಚಮಚ, ಉದ್ದಿನ ಬೇಳೆ- ಒಂದು ಟೀ ಚಮಚ, ಅರಶಿನ- ಸ್ವಲ್ಪ, ಕೊತ್ತಂಬರಿ ಸೊಪ್ಪು- ಒಂದು ಗೊಂಚಲು, ಕರಿಬೇವು ಸೊಪ್ಪು- 8 ರಿಂದ 10 ಎಲೆ, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಸ್ಟೌವ್ ಮೇಲೆ ಕಡಾಯಿ ಇಟ್ಟು ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ನಂತರ, ಮೊದಲು ಮೆಂತ್ಯ ಮತ್ತು ಸಾಸಿವೆ ಹಾಕಿ. ಮೆಂತ್ಯ ಬೀಜಗಳು ಬಣ್ಣ ಬದಲಾಗುವವರೆಗೆ ಫ್ರೈ ಮಾಡಿ. ಬಣ್ಣ ಬದಲಾಗದಿದ್ದರೆ, ಅವು ಕಹಿಯಾಗಿರುತ್ತವೆ. ನಂತರ ಉದ್ದಿನ ಬೇಳೆ ಹಾಕಿ. ಬಳಿಕ ಶುಂಠಿಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಹಾಕಿ, 20 ಸೆಕೆಂಡುಗಳ ಕಾಲ ಫ್ರೈ ಮಾಡಿ. ನಂತರ ಕರಿಮೆಣಸು ಸೇರಿಸಿ ಸ್ವಲ್ಪ ಬೇಯಿಸಲು ಬಿಡಿ. ಹಸಿಮೆಣಸಿನಕಾಯಿ ಹಾಕಿ ಹುರಿಯಿರಿ. ಇವನ್ನು ಹುರಿದ ನಂತರ ಬೀಜಗಳನ್ನು ಬೇರ್ಪಡಿಸಿ ಕತ್ತರಿಸಿದ ನೆಲ್ಲಿಕಾಯಿ, ಅರಿಶಿನ, ಕರಿಬೇವು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಸ್ವಲ್ಪ ಇದನ್ನು ಬೇಯಲು ಬಿಡಬೇಕು. ಚೆನ್ನಾಗಿ ಮಿಶ್ರಣ ಮಾಡಬೇಕು.
ಈ ಮಿಶ್ರಣವನ್ನು ಸ್ವಲ್ಪ ಸಮಯ ತಣ್ಣಗಾಗಲು ಬಿಟ್ಟು ನಂತರ ಮಿಕ್ಸಿ ಜಾರಿಗೆ ಹಾಕಿ. ಇದಕ್ಕೆ ಕೊತ್ತಂಬರಿ ಸೊಪ್ಪು ಹಾಗೂ ನೀರು ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ. ಇದನ್ನು ಒಂದು ಬೌಲ್‍ಗೆ ವರ್ಗಾಯಿಸಿದರೆ ನೆಲ್ಲಿಕಾಯಿ-ಶುಂಠಿ ಚಟ್ನಿ ಸಿದ್ಧ. ಈ ಚಟ್ನಿಯನ್ನು ಬಿಸಿ ಬಿಸಿ ಅನ್ನದಲ್ಲಿ ಬೆರೆಸಿ ತಿಂದರೆ ರುಚಿ ಅದ್ಭುತವಾಗಿರುತ್ತದೆ. ಇದು ದೋಸೆ ಮತ್ತು ಚಪಾತಿಗೂ ತಿನ್ನಲು ರುಚಿಕರವಾಗಿರುತ್ತದೆ. ಹುಳಿ ಮತ್ತು ಮಸಾಲೆಯುಕ್ತ ಚಟ್ನಿ ಇದಾಗಿರುವುದರಿಂದ ತುಂಬಾ ರುಚಿಕರವಾಗಿರುತ್ತದೆ.
ನೆಲ್ಲಿಕಾಯಿಯ ಆರೋಗ್ಯ ಪ್ರಯೋಜನಗಳು
ನೆಲ್ಲಿಕಾಯಿ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಅವು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ನೆಲ್ಲಿಕಾಯಿ ತಿನ್ನುವುದರಿಂದ ರೋಗಗಳು ಮತ್ತು ಸೋಂಕುಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಕೂಡ ಹೆಚ್ಚಿದೆ. ನೆಲ್ಲಿಕಾಯಿಯು ಹೃದಯದ ಆರೋಗ್ಯಕ್ಕೂ ಒಳ್ಳೆಯದು. ಶುಂಠಿಯು ಶಕ್ತಿಯುತವಾದ ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತದ ಗುಣಲಕ್ಷಣಗಳನ್ನು ಸಹ ಹೊಂದಿದೆ. ಈ ಎರಡರ ಸಂಯೋಜನೆಯು ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿಯಾಗಿದೆ.