ದಕ್ಷಿಣ ಭಾರತದ ಫೇಮಸ್‌ ಚಟ್ನಿ ರೆಸಿಪಿ: ಈ ಪ್ರಯೋಜನಗಳು ತಿಳಿದಿದ್ರೆ, ನೀವೂ ಬೆಳಿಗ್ಗೆ ಥಟ್‌ ಅಂತ ತೆಂಗಿನಕಾಯಿ ಚಟ್ನಿ ತಯಾರಿಸ್ತಿರಾ
ಕನ್ನಡ ಸುದ್ದಿ  /  ಜೀವನಶೈಲಿ  /  ದಕ್ಷಿಣ ಭಾರತದ ಫೇಮಸ್‌ ಚಟ್ನಿ ರೆಸಿಪಿ: ಈ ಪ್ರಯೋಜನಗಳು ತಿಳಿದಿದ್ರೆ, ನೀವೂ ಬೆಳಿಗ್ಗೆ ಥಟ್‌ ಅಂತ ತೆಂಗಿನಕಾಯಿ ಚಟ್ನಿ ತಯಾರಿಸ್ತಿರಾ

ದಕ್ಷಿಣ ಭಾರತದ ಫೇಮಸ್‌ ಚಟ್ನಿ ರೆಸಿಪಿ: ಈ ಪ್ರಯೋಜನಗಳು ತಿಳಿದಿದ್ರೆ, ನೀವೂ ಬೆಳಿಗ್ಗೆ ಥಟ್‌ ಅಂತ ತೆಂಗಿನಕಾಯಿ ಚಟ್ನಿ ತಯಾರಿಸ್ತಿರಾ

Coconut Chutney: ಬೆಳಗ್ಗಿನ ಉಪಹಾರಗಳಾದ ದೋಸೆ, ಇಡ್ಲಿಯ ಜೊತೆ ಸವಿಯುವ ಚಟ್ನಿಯಿಂದ ಆರೋಗ್ಯಕ್ಕೆ ಹಲವಾರು ಪ್ರಯೋಜನವಿದೆ. ಅದರಲ್ಲೂ ತೆಂಗಿನಕಾಯಿ ಚಟ್ನಿ ಬಹಳ ವಿಶೇಷವಾಗಿದೆ. ತೆಂಗಿನಕಾಯಿ ಚಟ್ನಿ ಪಾಕವಿಧಾನ ತಿಳಿಯುವುದರ ಜೊತೆಗೆ ಅದರಲ್ಲಿ ಬಳಸುವ ಪ್ರತಿಯೊಂದು ಪದಾರ್ಥಗಳ ಪ್ರಯೋಜನಗಳು ಹೀಗಿವೆ. (ಅರ್ಚನಾ ವಿ.ಭಟ್)

ತೆಂಗಿನಕಾಯಿ ಚಟ್ನಿ
ತೆಂಗಿನಕಾಯಿ ಚಟ್ನಿ (PC: Freepik)

ಚಟ್ನಿ ಇದೊಂದು ಸೂಪರ್‌ ಸೈಡ್‌ ಡಿಶ್‌. ಬೆಳಗ್ಗಿನ ಉಪಹಾರವಾದ ದೋಸೆ, ಇಡ್ಲಿಯಿಂದ ಹಿಡಿದು ಪರಾಠಾ, ಸ್ಯಾಂಡವಿಚ್‌, ಪಕೋಡ ಮುಂತಾದವುಗಳನ್ನು ಸವಿಯಲು ಅಗತ್ಯವಾಗಿ ಬೇಕು. ಮಕ್ಕಳಿಂದ ದೊಡ್ಡವರವರೆಗೂ ಇಲ್ಲಾ ವಯಸ್ಸಿನವರು ಇಷ್ಟಪಡುವ ಒಂದು ಪಾಕವಿಧಾನ ಇದು. ಈಗೀಗ ಉಪಹಾರಗಳನ್ನು ಸವಿಯಲು ಟೊಮೆಟೊ ಸಾಸ್‌, ರೆಡಿ ಟು ಈಟ್‌ ಚಟ್ನಿಗಳನ್ನು ಬಳಸಲಾಗುತ್ತಿದೆ. ಟೊಮೆಟೊ ಸಾಸ್‌ಗಳನ್ನು ಟೊಮೆಟೊದಿಂದನೇ ತಯಾರಿಸಲಾಗುತ್ತದೆಯೇ ಅಥವಾ ಇಲ್ಲವೇ ಎಂಬುದು ಸರಿಯಾಗಿ ತಿಳಿದಿಲ್ಲ. ಆದರೆ ಸಾಸ್‌ ಚಟ್ನಿಗಳಲ್ಲಿ ಸಾಕಷ್ಟು ಸಕ್ಕರೆ, ಸಂರಕ್ಷಕಗಳನ್ನು ಬಳಸಲಾಗುತ್ತದೆ. ಪ್ರತಿನಿತ್ಯ ಅವುಗಳನ್ನು ತಿನ್ನುವುದರಿಂದ ಆರೋಗಕ್ಕೆ ಹಾನಿಯನ್ನುಂಟು ಮಾಡುತ್ತದೆ. ಬೆಳಗ್ಗಿನ ಉಪಹಾರದಲ್ಲೆ ದೇಹವು ಸಕ್ಕರೆ, ಸಂರಕ್ಷಕಗಳನ್ನು ಹೀರಿಕೊಳ್ಳುವುದರಿಂದ ಆರೋಗ್ಯ ಹದಗೆಡುತ್ತದೆ. ದಿನಪೂರ್ತಿ ಕೆಲಸ ಮಾಡಲು ಶಕ್ತಿ ನೀಡುವ ತಿಂಡಿಗಳು ಸಂಪೂರ್ಣ ಆರೋಗ್ಯವನ್ನು ನೀಡುವಂತಾಗಿರಬೇಕು. ಮನೆಯಲ್ಲಿಯೇ ತಾಜಾವಾಗಿ ತಯಾರಿಸುವ ಚಟ್ನಿಗಳು ಆರೋಗ್ಯಕ್ಕೆ ಉತ್ತಮವಾಗಿವೆ. ಅದರಲ್ಲೂ ದಕ್ಷಿಣ ಭಾರತದ ಫೇಮಸ್‌ ತೆಂಗಿನಕಾಯಿ ಚಟ್ನಿ ಬಹಳ ಪ್ರಯೋಜನಕಾರಿಯಾಗಿದೆ. ಇದರಲ್ಲಿ ಬಳಸುವ ಪ್ರತಿಯೊಂದು ಪದಾರ್ಥಗಳು ದೇಹಕ್ಕೆ ಲಾಭವನ್ನು ನೀಡುತ್ತವೆ. ಹಾಗಾದ್ರೆ ಸುಲಭವಾಗಿ ತೆಂಗಿನಕಾಯಿ ಚಟ್ನಿ ತಯಾರಿಸುವುದು ಹೇಗೆ ಮತ್ತು ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳೋಣ.

ತೆಂಗಿನಕಾಯಿ ಚಟ್ನಿ ತಯಾರಿಸಲು ಬೇಕಾಗುವ ಪದಾರ್ಥಗಳು

ತುರಿದ ತಾಜಾ ತೆಂಗಿನಕಾಯಿ 1 ಕಪ್‌

ಹಸಿರು ಮೆಣಸಿನಕಾಯಿ 2–3

ಶುಂಠಿ 1 ಇಂಚು

ಪುಟಾಣಿ (ಕಡ್ಲೆಪಪ್ಪು) 2 ಚಮಚ

ರುಚಿಗೆ ತಕ್ಕಷ್ಟು ಉಪ್ಪು

ನೀರು ಅಗತ್ಯವಿದ್ದಷ್ಟು

ಹಣಸೆಹಣ್ಣು ಸ್ವಲ್ಪ

ಎಣ್ಣೆ 1 ಚಮಚ

ಸಾಸಿವೆ 1 ಚಮಚ

ಉದ್ದಿನ ಬೇಳೆ 1 ಚಮಚ

ಕರಿಬೇವಿನ ಎಲೆ 8–10

ಕೆಂಪು ಮೆಣಸಿನಕಾಯಿ 1

ಇಂಗು ಚಿಟಿಕೆ

ತೆಂಗಿನಕಾಯಿ ಚಟ್ನಿ ತಯಾರಿಸುವ ವಿಧಾನ

– ಒಂದು ಮಿಕ್ಸ್‌ ಜಾರ್‌ನಲ್ಲಿ ತುರಿದ ತೆಂಗಿನಕಾಯಿ, ಹಸಿರು ಮೆಣಸಿನಕಾಯಿ, ಶುಂಠಿ, ಪುಟಾಣಿ, ಹುಣಸೆಹಣ್ಣು ಮತ್ತು ಉಪ್ಪು ಸೇರಿಸಿ.

– ಸ್ವಲ್ಪ ಸ್ವಲ್ಪವಾಗಿ ನೀರು ಸೇರಿಸುತ್ತಾ ಗಟ್ಟಿಯಾಗಿ ಚಟ್ನಿ ರುಬ್ಬಿಕೊಳ್ಳಿ.

– ಒಂದು ಬೌಲ್‌ಗೆ ಇದನ್ನು ವರ್ಗಾಯಿಸಿಕೊಳ್ಳಿ.

– ಈಗ ಚಿಕ್ಕ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಅದಕ್ಕೆ ಸಾಸಿವೆ ಹಾಕಿ. ಅದು ಚಟಪಟ ಅಂದ ಮೇಲೆ ಉದ್ದಿನ ಬೇಳೆ, ಕರಿಬೇವಿನ ಸೊಪ್ಪು, ಕೆಂಪು ಮೆಣಸಿನಕಾಯಿ ಮತ್ತು ಇಂಗು ಸೇರಿಸಿ.

– ಉದ್ದಿನ ಬೇಳೆ ಸ್ವಲ್ಪ ಕಂದು ಬಣ್ಣಕ್ಕೆ ಬರುವವರೆಗೆ ಫ್ರೈ ಮಾಡಿ.

– ಅದನ್ನು ರುಬ್ಬಿಟ್ಟುಕೊಂಡ ತೆಂಗಿನಕಾಯಿ ಚಟ್ನಿಯ ಮೇಲೆ ಹಾಕಿ, ಚೆನ್ನಾಗಿ ಮಿಕ್ಸ್‌ ಮಾಡಿ.

– ಇಡ್ಲಿ, ದೋಸಾ, ಚಪಾತಿ ಎಲ್ಲದಕ್ಕೂ ಹೊಂದಿಕೆಯಾಗುವ ಸೂಪರ್‌ ತೆಂಗಿನಕಾಯಿ ಚಟ್ನಿ ಸವಿಯಲು ಸಿದ್ಧ.

ತೆಂಗಿನಕಾಯಿ ಚಟ್ನಿ ಏಕೆ ಒಳ್ಳೆಯದು?

ತೆಂಗಿನಕಾಯಿ ಚಟ್ನಿ ಮಾಡಲು ಬಳಸುವ ಪದಾರ್ಥಗಳು ನಿಮ್ಮ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತವೆ. ಹಾಗಾಗಿ ಈ ಚಟ್ನಿ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು. ಈಗ ತೆಂಗಿನಕಾಯಿ ಚಟ್ನಿಯಲ್ಲಿ ಬಳಸುವ ಪದಾರ್ಥಗಳು ಮತ್ತು ಅದರ ಪ್ರಯೋಜನಗಳನ್ನು ತಿಳಿಯೋಣ.

ತೆಂಗಿನಕಾಯಿ: ಇದು ಆರೋಗ್ಯಕರ ಕೊಬ್ಬುಗಳಿಂದ ಸಮೃದ್ಧವಾಗಿದೆ. ವಿಶೇಷವಾಗಿ ಇದರಲ್ಲಿ ಟ್ರೈಗ್ಲಿಸರೈಡ್‌ಗಳಿವೆ. ಅವು ತ್ವರಿತವಾಗಿ ಶಕ್ತಿ ಬಿಡುಗಡೆ ಮಾಡುತ್ತವೆ. ಚಯಾಪಚಯವನ್ನು ಉತ್ತೇಜಿಸುವ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ತೆಂಗಿನಕಾಯಿಯು ನಾರಿನಾಂಶ, ವಿಟಮಿನ್ ಸಿ, ಇ, ಬಿ1, ಬಿ3, ಬಿ5 ಮತ್ತು ಬಿ6 ಜೀವಸತ್ವಗಳು ಮತ್ತು ಕಬ್ಬಿಣ, ಸೆಲೆನಿಯಮ್, ಸೋಡಿಯಂ, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕದಂತಹ ಅಗತ್ಯ ಖನಿಜಗಳನ್ನು ಸಹ ಒಳಗೊಂಡಿದೆ.

ಹಸಿರು ಮೆಣಸಿನಕಾಯಿ: ತೆಂಗಿನಕಾಯಿ ಚಟ್ನಿಯಲ್ಲಿ ಬಳಸುವ ತಾಜಾ ಹಸಿರು ಅಥವಾ ಕೆಂಪು ಮೆಣಸಿನಕಾಯಿಯಲ್ಲಿ ವಿಟಮಿನ್ ಸಿ ಮತ್ತು ಕ್ಯಾಪ್ಸೈಸಿನ್ ಸಮೃದ್ಧವಾಗಿದೆ. ಇದು ಉರಿಯೂತ ಶಮನ ಮತ್ತು ಚಯಾಪಚಯವನ್ನು ಉತ್ತೇಜಿಸುವ ಗುಣಗಳನ್ನು ಹೊಂದಿದೆ.

ಶುಂಠಿ: ಶುಂಠಿಯು ಉರಿಯೂತ ಶಮನ ಮತ್ತು ಜೀರ್ಣಕಾರಿ ಪ್ರಯೋಜನಗಳಿಗೆ ಹೆಸರುವಾಸಿಯಾಗಿದೆ. ಶುಂಠಿಯು ಚಟ್ನಿಗೆ ಕಟುವಾದ ಪರಿಮಳವನ್ನು ನೀಡುತ್ತದೆ. ಶುಂಠಿಯಿಂದ ಇನ್ನೂ ಅನೇಕ ಆರೋಗ್ಯ ಪ್ರಯೋಜನಗಳಿವೆ.‌

ಕರಿಬೇವಿನ ಎಲೆಗಳು: ಈ ಎಲೆಗಳು ಉತ್ಕರ್ಷಣ ನಿರೋಧಕಗಳಾಗಿವೆ. ಇದು ವಿಟಮಿನ್ ಎ, ಬಿ, ಸಿ ಮತ್ತು ಇ ಗಳಿಂದ ಸಮೃದ್ಧವಾಗಿದೆ. ಮಧುಮೇಹ ನಿಯಂತ್ರಿಸುವ ಮತ್ತು ಕೊಲೆಸ್ಟ್ರಾಲ್‌ ಕಡಿಮೆಗೊಳಿಸುವ ಗುಣಲಕ್ಷಣಗಳನ್ನು ಹೊಂದಿವೆ.

ಹುಣಸೆಹಣ್ಣು: ಹುಳಿ ರುಚಿಯನ್ನು ನೀಡುವ ಹುಣಸೆಹಣ್ಣು ಉತ್ಕರ್ಷಣ ನಿರೋಧಕವಾಗಿದೆ. ಇದರಲ್ಲಿರುವ ವಿಟಮಿನ್ ಸಿ ಮತ್ತು ವಿವಿಧ ಪ್ರಯೋಜನಕಾರಿ ಸಂಯುಕ್ತಗಳು ಆರೋಗ್ಯಕ್ಕೆ ಅಧಿಕ ಲಾಭವನ್ನು ನೀಡುತ್ತವೆ.

ಸಾಸಿವೆ ಮತ್ತು ಉದ್ದಿನ ಬೇಳೆ: ಒಗ್ಗರಣೆಯಲ್ಲಿ ಪ್ರಮುಖವಾಗಿ ಬಳಸುವ ಸಾಸಿವೆ ವಿಶಿಷ್ಟ ಪರಿಮಳ ನೀಡುವುದರ ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಉದ್ದಿನ ಬೇಳೆಯು ಪ್ರೋಟೀನ್, ಆಹಾರದ ಫೈಬರ್ ಮತ್ತು ಅಗತ್ಯ ಖನಿಜಗಳ ಉತ್ತಮ ಮೂಲವಾಗಿದೆ.

Whats_app_banner