ಕನ್ನಡ ಸುದ್ದಿ  /  ಜೀವನಶೈಲಿ  /  ಹೋಟೆಲ್‌ ಶೈಲಿಯ ಹೈದ್ರಾಬಾದಿ ಮಟನ್‌ ಬಿರಿಯಾನಿಯನ್ನ ಮನೆಯಲ್ಲೇ ಮಾಡ್ಕೊಳ್ಳಿ; ಸಖತ್‌ ಸಿಂಪಲ್‌ ರೆಸಿಪಿ ಇದು

ಹೋಟೆಲ್‌ ಶೈಲಿಯ ಹೈದ್ರಾಬಾದಿ ಮಟನ್‌ ಬಿರಿಯಾನಿಯನ್ನ ಮನೆಯಲ್ಲೇ ಮಾಡ್ಕೊಳ್ಳಿ; ಸಖತ್‌ ಸಿಂಪಲ್‌ ರೆಸಿಪಿ ಇದು

ಬಿರಿಯಾನಿಗೆ ಕೇರಾಫ್‌ ಅಡ್ರೆಸ್‌ ಅಂದ್ರೆ ಹೈದ್ರಾಬಾದಿ ಬಿರಿಯಾನಿ. ಅದ್ರಲ್ಲೂ ಹೈದ್ರಾಬಾದಿ ಮಟನ್‌ ಬಿರಿಯಾನಿ ತುಂಬಾನೇ ಫೇಮಸ್‌. ಒಮ್ಮೆ ಇದರ ರುಚಿ ನೋಡಿದ್ರೆ ಮತ್ತೆ ಮತ್ತೆ ಬೇಕು ಅನ್ನಿಸುತ್ತೆ. ಹೋಟೆಲ್‌ನಲ್ಲಿ ತಿಂದ ಮಟನ್‌ ಬಿರಿಯಾನಿ ರುಚಿಯನ್ನು ಮನೆಯಲ್ಲೂ ಟ್ರೈ ಮಾಡಬೇಕು ಅಂದ್ರೆ ಇಲ್ಲಿದೆ ರೆಸಿಪಿ.

ಹೈದ್ರಾಬಾದಿ ಮಟನ್‌ ಬಿರಿಯಾನಿ
ಹೈದ್ರಾಬಾದಿ ಮಟನ್‌ ಬಿರಿಯಾನಿ

ಬಿರಿಯಾನಿ ಹೆಸರು ಕೇಳಿದ್ರೆ ಮಾಂಸಾಹಾರಿಗಳ ಬಾಯಲ್ಲಿ ನೀರು ಸುರಿಯುತ್ತದೆ. ಹೊಟ್ಟೆ ಹಸಿವು ಹೆಚ್ಚುತ್ತದೆ. ಅದ್ರಲ್ಲೂ ಮಟನ ಬಿರಿಯಾನಿ ಹಲವರ ಫೇವರಿಟ್‌. ಇದನ್ನ ಒಮ್ಮೆ ತಿಂದ್ರೆ ಮತ್ತೆ ಮತ್ತೆ ಬೇಕು ಅನ್ನಿಸುತ್ತೆ. ಹೈದ್ರಾಬಾದಿ ಸ್ಪೆಷಲ್‌ ಮಟನ್‌ ಬಿರಿಯಾನಿ ತಿನ್ನೋಕೆ ನೀವು ಹೈದ್ರಾಬಾದ್‌ಗೆ ಹೋಗಬೇಕು ಅಂತಿಲ್ಲ, ಆಂಧ್ರ ಹೋಟೆಲ್‌ಗಳನ್ನು ಹುಡುಕಿ ಹೋಗಬೇಕು ಅಂತೇನೂ ಇಲ್ಲ. ಮನೆಯಲ್ಲೇ ಸುಲಭವಾಗಿ ಹೋಟೆಲ್‌ ರುಚಿಯ ಬಿರಿಯಾನಿ ಮಾಡಿ ಸವಿಯಬಹುದು. ಬಹಳ ಸರಳವಾಗಿ, ಸುಲಭವಾಗಿ ತಯಾರಿಸಬಹುದಾದ ರೆಸಿಪಿ ಇದು.

ಟ್ರೆಂಡಿಂಗ್​ ಸುದ್ದಿ

ಹೈದ್ರಾಬಾದಿ ಮಟನ್‌ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಮಟನ್ - 1 ಕೆಜಿ, ಬಾಸ್ಮತಿ ಅಕ್ಕಿ - ಅರ್ಧ ಕೆಜಿ, ಗರಂ ಮಸಾಲಾ ಪುಡಿ - ಎರಡು ಚಮಚ, ಶುಂಠಿ ಬೆಳ್ಳುಳ್ಳಿ ಪೇಸ್ಟ್ - ಎರಡು ಚಮಚ, ಪುದಿನ ರಸ - ಒಂದು ಕಪ್, ಈರುಳ್ಳಿ - ಮೂರು, ಮೊಸರು - ಒಂದು ಕಪ್, ಅರಿಶಿನ - ಚಿಟಿಕೆ, ಕೇಸರಿ ದಳಗಳು - ಆರು, ಗೋಡಂಬಿ - ಒಂದು ಮುಷ್ಟಿ, ಮೆಣಸಿನಕಾಯಿ - ಎರಡೂವರೆ ಚಮಚ, ಎಣ್ಣೆ - ಒಂದು ಕಪ್, ಹಾಲು - ಎರಡು ಚಮಚ, ಉಪ್ಪು - ರುಚಿಗೆ, ಕೊತ್ತಂಬರಿ ಪುಡಿ - ಅರ್ಧ ಕಪ್

ತಯಾರಿಸುವ ವಿಧಾನ: ಮಟನ್ ಅನ್ನು ಸ್ವಚ್ಛವಾಗಿ ತೊಳೆದು ಬೌಲ್‌ಗೆ ಹಾಕಿ. ಅದಕ್ಕೆ ಗರಂಮಸಾಲಾ, ಉಪ್ಪು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಮೆಣಸಿನಕಾಯಿ, ಅರಿಶಿನ ಮತ್ತು ಮೊಸರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು ನಾಲ್ಕರಿಂದ ಐದು ಗಂಟೆಗಳ ಕಾಲ ಫ್ರಿಜ್‌ನಲ್ಲಿಡಿ. ಫ್ರಿಜ್‌ನಲ್ಲಿಟ್ಟರೆ ಚೆನ್ನಾಗಿ ಮ್ಯಾರಿನೇಟ್ ಆಗುತ್ತದೆ. ನಂತರ ಬಾಸ್ಮತಿ ಅಕ್ಕಿಯನ್ನು ಚೆನ್ನಾಗಿ ತೊಳೆದು ಶೇ 50 ರಷ್ಟು ಬೇಯಿಸಿಕೊಂಡು ಅಗಲವಾದ ಪ್ಲೇಟ್‌ನಲ್ಲಿ ಹರಡಿ. ಈಗ ಒಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಬಿಸಿಯಾದ ಮೇಲೆ ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೂ ಹುರಿದುಕೊಳ್ಳಿ. ನಂತರ ಅದರಲ್ಲಿ ಸ್ವಲ್ಪ ಈರುಳ್ಳಿಯನ್ನು ಎತ್ತಿಟ್ಟಕೊಳ್ಳಿ. ಅದೇ ಪಾತ್ರೆಗೆ ಮ್ಯಾರಿನೇಟ್‌ ಮಾಡಿಟ್ಟುಕೊಂಡು ಮಾಂಸವನ್ನು ಹಾಕಿ. ಸ್ವಲ್ಪ ಕೈಯಾಡಿಸಿ. ನಂತರ ಅರ್ಧ ಬೇಯಿಸಿಟ್ಟುಕೊಂಡ ಅನ್ನವನ್ನು ಸೇರಿಸಿ. ಕೇಸರಿದಗಳನ್ನು ಮೊದಲೇ ಹಾಲಿನಲ್ಲಿ ನೆನೆಸಿಟ್ಟುಕೊಳ್ಳಬೇಕು. ಈಗ ಪಾತ್ರೆಯಲ್ಲಿರುವ ಅಕ್ಕಿ ಹಾಗೂ ಮಾಂಸಕ್ಕೆ ಕೇಸರಿಹಾಲು, ಪುದಿನಾ ಸೊಪ್ಪು, ಕೊತ್ತಂಬರಿ ಸೊಪ್ಪು ಮತ್ತು ಹುರಿದ ಈರುಳ್ಳಿ ಸೇರಿಸಿ ಮುಚ್ಚಿ. ಚಪಾತಿ ಹಿಟ್ಟನ್ನು ಕಲೆಸಿ ಮುಚ್ಚಳದ ಸುತ್ತ ಸುತ್ತಿ ಇದರಿಂದ ಉಗಿ ಹೊರ ಬರದಂತೆ ನೋಡಿಕೊಳ್ಳಿ. ಇದನ್ನು ಮಧ್ಯಮ ಉರಿಯಲ್ಲಿ ಸುಮಾರು 45 ನಿಮಿಷದಿಂದ ಒಂದು ಗಂಟೆಯವರೆಗೆ ಬೇಯಲು ಬಿಡಿ. ನಂತರ ಚಪಾತಿ ಹಿಟ್ಟನ್ನು ಬಿಡಿಸಿ, ಬಿರಿಯಾನಿಯನ್ನು ಮಿಶ್ರಣ ಮಾಡಿ. ಈಗ ನಿಮ್ಮ ಮುಂದೆ ರುಚಿಯಾದ ಹೈದ್ರಾಬಾದ್‌ ಮಟನ್‌ ಬಿರಿಯಾನಿ ತಿನ್ನಲು ಸಿದ್ಧ.

ಮಟನ್‌ ಮಾಂಸ ದೇಹಕ್ಕೆ ತಂಪು, ಆ ಕಾರಣಕ್ಕೆ ಬೇಸಿಗೆಯಲ್ಲಿ ಚಿಕನ್‌ ಮಾಂಸಕ್ಕಿಂತ ಮಟನ್‌ ಮಾಂಸ ಉತ್ತಮ. ನಿಮಗೆ ಮಟನ್‌ ಇಷ್ಟವಿಲ್ಲ ಎಂದರೆ ಇದೇ ಮಾರ್ಗ ಅನುಸರಿಸಿ ಚಿಕನ್‌ ಬಿರಿಯಾನಿಯನ್ನೂ ಮಾಡಿಕೊಂಡು ಸವಿಯಬಹುದು.