ಪನೀರ್ ಅಸಲಿಯೋ, ನಕಲಿಯೋ ಬಳಸುವ ಮೊದಲೇ ಹೀಗೆ ಪತ್ತೆ ಮಾಡಿ; ಇಲ್ಲಿದೆ ನೋಡಿ ಸೂಪರ್ ಟಿಪ್ಸ್
ಮಾರುಕಟ್ಟೆಯಲ್ಲಿ ಇತ್ತೀಚೆಗೆ ಕಲಬೆರಕೆ ಪನೀರ್ ಹಾವಳಿ ಹೆಚ್ಚಾಗಿದೆ. ಪನೀರ್‌ನ ಶುದ್ಧತೆ ಕಂಡುಕೊಳ್ಳುವುದು ಹೇಗೆ ಎಂದು ಆಹಾರ ಸುರಕ್ಷಾ ಪ್ರಾಧಿಕಾರವು ಸಲಹೆಗಳನ್ನು ನೀಡಿದೆ. ನಿಮ್ಮ ಮನೆಗಳಲ್ಲಿಯೇ ಅತ್ಯಂತ ಸುಲಭವಾಗಿ ಪನ್ನೀರ್‌ನ ಶುದ್ಧತೆ ಪರಿಶೀಲಿಸಬಹುದಾಗಿದೆ.
ಹೊಟೇಲ್, ರೆಸ್ಟೋರೆಂಟ್‌ಗೆ ಹೋಗುವ ಬಹುತೇಕ ಜನರು ಅಲ್ಲಿನ ಮೆನು ಕಾರ್ಡ್‌ನಲ್ಲಿ ಮೊದಲು ಕಣ್ಣಾಡಿಸುವುದು ಪನ್ನೀರ್‌ನಿಂದ ತಯಾರಿಸುವ ಅಡುಗೆಗಳನ್ನು. ಪನ್ನೀರ್ ಅಷ್ಟು ಫೇಮಸ್. ಪನ್ನೀರ್‌ನಿಂದ ಅಷ್ಟು ವೈವಿಧ್ಯಮಯ ಅಡುಗೆಗಳನ್ನು ತಯಾರಿಸಲಾಗುತ್ತದೆ. ಪನ್ನೀರ್ ಮಸಾಲ, ಮಟರ್ ಪನ್ನೀರ್, ಪನ್ನೀರ್ ಕರಿ, ಪನ್ನೀರ್ ಬುರ್ಜಿ ಒಂದೇ ಎರಡೇ. ಪನ್ನೀರ್ ಪೋಷಕಾಂಶಗಳಿಂದ ತುಂಬಿರುವ ಡೈರಿ ಉತ್ಪನ್ನವಾಗಿದೆ. ಪ್ರೋಟೀನ್, ವಿಟಮಿನ್‌ಗಳಿಂದ ತುಂಬಿದ್ದು, ದಿನವೊಂದಕ್ಕೆ ಬೇಕಾದ ಪೋಷಕಾಂಶಗಳನ್ನು ಇದು ಪೂರೈಸುತ್ತದೆ. ಸಸ್ಯಾಹಾರಿಗಳು ಪನ್ನೀರ್ ಅನ್ನು ಬಹಳ ಇಷ್ಟ ಪಟ್ಟು ತಿನ್ನುತ್ತಾರೆ. ವಿಶೇಷ ದಿನಗಳಲ್ಲಿ, ವಾರಾಂತ್ಯದಲ್ಲಿ ಮನೆಯಲ್ಲಿಯೇ ಪನ್ನೀರ್‌ನಿಂದ ವಿವಿಧ ಅಡುಗೆಗಳನ್ನು ತಯಾರಿಸಿ ಸವಿಯುತ್ತಾರೆ. ಪನ್ನೀರ್ ಅನ್ನು ಅಂಗಡಿಗಳಿಂದ ಖರೀದಿಸಿ ತರುವವರೇ ಹೆಚ್ಚು. ಖರೀದಿಸಿ ತಂದ ಪನ್ನೀರ್ ಕಲಬೆರೆಕೆಯದಾಗಿದ್ದರೆ? ಇತ್ತೀಚೆಗೆ ಕಲಬೆರಕೆ ಪನ್ನೀರ್ ಸಹ ಮಾರಾಟವಾಗುತ್ತಿದೆ. ಅದನ್ನು ಗುರುತಿಸುವುದು ಹೇಗೆ? ಈ ಲೇಖನದಲ್ಲಿದೆ ವಿವರ.
ಮುಂಬೈನಲ್ಲಿ ಪೊಲೀಸರು ಇತ್ತೀಚೆಗೆ ಪ್ರಕರಣವೊಂದರಲ್ಲಿ 1300 ಕೆಜಿ ಕಲಬೆರಕೆ ಪನ್ನೀರ್ ವಶಪಡಿಸಿಕೊಂಡರು. 2022 ರಲ್ಲಿ ಮಂಬೈ ಪೊಲೀಸರು 2 ಫ್ಯಾಕ್ಟರಿಗಳಿಂದ ಸುಮಾರು 2000 ಕೆಜಿಗಳಷ್ಟು ಕಲಬೆರಕೆ ಪನ್ನೀರ್ ವಶಪಡಿಸಿಕೊಂಡಿದ್ದರು. ಹಾಲಿನ ಪುಡಿಗೆ ನೀರು ಬೆರೆಸಿ, ಅದಕ್ಕೆ ಲಿಂಬು ರಸ ಮತ್ತು ಆಸಿಟಿಕ್ ಆಸಿಡ್ ಸೇರಿಸಲಾಗಿತ್ತು. ಅದು ನಯವಾಗಿ ಮತ್ತು ಮೃದುವಾಗಿ ಕಾಣುವ ಸಲುವಾಗಿ ಅದಕ್ಕೆ ತಾಳೆ ಎಣ್ಣೆ ಸೇರಿಸಲಾಗಿತ್ತು. ಆದರೆ ಇಲ್ಲಿ ಪ್ರಶ್ನೆಯೆಂದರೆ ಅಂಗಡಿಯಿಂದ ಖರೀದಿಸಿ ತಂದ ಪನ್ನೀರ್ ಕಲಬೆರೆಕೆಯೇ ಅಥವಾ ಅಲ್ಲವೇ ಎಂದು ಪರೀಕ್ಷಿಸುವುದು ಹೇಗೆ? 'ಭಾರತೀಯ ಆಹಾರ ಸುರಕ್ಷಾ ಪ್ರಾಧಿಕಾರ'ವು (ಫುಡ್ ಸೇಫ್ಟಿ ಆಂಡ್ ಸ್ಟಾಡರ್ಡ್ ಆಥಾರಿಟಿ ಆಫ್ ಇಂಡಿಯಾ - FSSAI) ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮನೆಯಲ್ಲಿಯೇ ಪರೀಕ್ಷಿಸುವ ಕೆಲವು ವಿಧಾನಗಳನ್ನು ಸಲಹೆ ಮಾಡಿದೆ.
ಕಲಬೆರೆಕೆ ಪನ್ನೀರ್ ಪತ್ತೆಮಾಡಲು 5 ಟಿಪ್ಸ್
1) ನಿಮ್ಮ ಕೈಗಳನ್ನು ಬಳಸಿ: ನೀವು ಖರೀದಿಸಿ ತಂದ ಪನ್ನೀರ್‌ನ ಸಣ್ಣ ತುಂಡನ್ನು ನಿಮ್ಮ ಕೈಯಲ್ಲಿ ತೆಗೆದುಕೊಳ್ಳಿ. ಕಲಬೆರೆಕೆ ಪನ್ನೀರ್ ಸಹ ಹಾಲಿನಿಂದ ತಯಾರಿಸಿದ್ದರೂ ಕೂಡಾ ಕೈಯಲ್ಲಿ ಒತ್ತಿ ಹಿಡಿದಾಗ ಅದು ಜಾರುತ್ತದೆ.
2) ಐಯೋಡಿನ್ ಟಿಂಚರ್ ಬಳಸಿ: ಒಂದು ಪಾತ್ರೆಗೆ ನೀರು ಹಾಕಿ ಅದರಲ್ಲಿ ಪನ್ನೀರ್ ಇಡಿ. ಅದನ್ನು ಕಾಯಿಸಿ. ಅದನ್ನು ತಣ್ಣಗಾಗಲು ಬಿಡಿ. ನಂತರ ಐಯೋಡಿನ್ ಟಿಂಚರ್‌ನ ಕೆಲವು ಹನಿಗಳನ್ನು ಅದರ ಮೇಲೆ ಹಾಕಿ. ಪನ್ನೀರ್‌ನ ಬಣ್ಣವು ನೀಲಿಯಾಗಿ ಬದಲಾದರೆ ಅದು ಕಲಬೆರಕೆ ಪನ್ನೀರ್ ಎಂದು ತಿಳಿಯಿರಿ. ಈ ರೀತಿ ಐಯೋಡಿನ್ ಟಿಂಚರ್‌ನಿಂದಲೂ ಪರೀಕ್ಷಿಸಬಹುದು.
3) ತೊಗರಿ ಬೇಳೆಯಿಂದ ಪರೀಕ್ಷಿಸಿ: ಮೊದಲು ಪಾತ್ರೆಗೆ ನೀರು ಮತ್ತು ಪನ್ನೀರ್ ಹಾಕಿ ಕುದಿಸಿ. ಅದನ್ನು ಆರಲು ಬಿಡಿ. ನಂತರ ತೊಗರಿಬೇಳೆಯ ಪುಡಿಯನ್ನು ಹಾಕಿ. 10 ನಿಮಿಷಗಳ ಕಾಲ ಹಾಗೆಯೇ ಬಿಡಿ. ಪನ್ನೀರ್‌ನ ಬಣ್ಣವು ತೆಳುಗೆಂಪಿಗೆ ಬದಲಾದರೆ ಅದು ಕಲಬೆರೆಕೆ ಪನ್ನೀರ್ ಎಂದು ಅರ್ಥ. ಪನ್ನೀರ್‌ನಲ್ಲಿ ಡಿಟರ್ಜೆಂಟ್ ಅಥವಾ ಯೂರಿಯಾ ಇದ್ದರೆ ಬಣ್ಣವು ಆ ರೀತಿ ಬದಲಾಗುತ್ತದೆ.
4) ರುಚಿ ನೋಡಿ: ನೀವು ಪನ್ನೀರ್ ಅನ್ನು ಮುಕ್ತ ಮಾರುಕಟ್ಟೆಯಲ್ಲಿ ಖರೀದಿಸಿ ತರುವ ಮೊದಲು ಅದರ ರುಚಿ ನೋಡಿ. ಅದು ಅಂಟಾಗಿದ್ದು, ಅತಿಯಾಗಿ ಹುಳಿಯಾಗಿದ್ದರೆ ಕಲಬೆರೆಕೆ ಎಂದು ತಿಳಿದುಕೊಳ್ಳಬಹುದು. ಅದರಲ್ಲಿ ಡಿಟರ್ಜಂಟ್ ಅಥವಾ ಕಳಪೆ ಗುಣಮಟ್ಟದ ಉತ್ಪನ್ನಗಳನ್ನು ಬಳಸಲಾಗಿದೆ ಎಂದು ತಿಳಿಯಿರಿ.
5) ಸೋಯಾಬಿನ್ ಪುಡಿ ಬಳಸಿ: ಒಂದು ಪಾತ್ರೆಯಲ್ಲಿ ನೀರು ಮತ್ತು ಪನ್ನೀರ್ ಹಾಕಿ ಕುದಿಸಿ, ಆರಲು ಬಿಡಿ. ನಂತರ ಅದಕ್ಕೆ ಸೋಯಾಬಿನ್ ಪುಡಿ ಹಾಕಿ. ಪನ್ನೀರ್‌ನ ಬಣ್ಣವು ತಿಳಿಗೆಂಪು ಬಣ್ಣಕ್ಕೆ ತಿರುಗಿದರೆ ಪನ್ನೀರ್ ತಯಾರಿಕೆಯಲ್ಲಿ ಡಿಟರ್ಜಂಟ್ ಅಥವಾ ಯೂರಿಯಾ ಬಳಕೆ ಮಾಡಲಾಗಿದೆ ಎಂದು ತಿಳಿದುಕೊಳ್ಳಬಹುದು.
ಪನ್ನೀರ್‌ನಿಂದ ನಿಮ್ಮ ದೇಹಕ್ಕೆ 8 ಮುಖ್ಯ ಪ್ರಯೋಜನ
1) ಸ್ನಾಯುಗಳನ್ನು ಬಲ ಪಡಿಸಲು ಮತ್ತು ಮರು ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ.
2) ಪನ್ನೀರ್‌ನಲ್ಲಿ ಕ್ಯಾಲ್ಸಿಯಂ ಮತ್ತು ಫಾಸ್ಪರಸ್ ಇರುವುದರಿಂದ ಅದು ಮೂಳೆಗಳನ್ನು ಬಲಪಡಿಸಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮವಾಗಿದೆ. ಅದು ಮೂಳೆ ಮುರಿತ ಮತ್ತು ಅಸ್ಥಿರಂದ್ರತೆ (ಆಸ್ಟಿಯೊಪೊರೋಸಿಸ್) ಅನ್ನು ಕಡಿಮೆ ಮಾಡುತ್ತದೆ.
3) ಪನ್ನೀರ್ ಪ್ರೋಟೀನ್‌ನಿಂದ ಸಮೃದ್ಧವಾಗಿದೆ. ಹಾಗಾಗಿ ಸಸ್ಯಾಹಾರಿಗಳು ಡಯಟ್‌ನಲ್ಲಿ ಸೇರಿಸಿಕೊಳ್ಳಬಹುದಾದ ಪ್ರೋಟೀನ್ ಆಗಿದೆ.
4) ಪನ್ನೀರ್‌ನಲ್ಲಿ 9 ರೀತಿಯ ಅಮಿನೊ ಆಸಿಡ್‌ಗಳಿವೆ. ಅವು ಸ್ನಾಯುಗಳ ಬೆಳವಣಿಗೆ ಮತ್ತು ದುರಸ್ತಿಗೆ ಅವಶ್ಯಕವಾಗಿದೆ.
5) ಪನ್ನೀರ್ ನಲ್ಲಿ ಸ್ಯಾಚುರೇಟೆಡ್ ಕೊಬ್ಬು ಇರುವುದರಿಂದ ಅದು ಹೃದಯದ ಆರೋಗ್ಯಕ್ಕೂ ಉತ್ತಮವಾಗಿದೆ.
6) ಪ್ರೋಬಯೋಟಿಕ್‌ಗಳು ಪನ್ನೀರ್ ನಲ್ಲಿರುವುದರಿಂದ ಅದು ಕರುಳಿನ ಆರೋಗ್ಯಕ್ಕೂ ಉತ್ತಮವಾಗಿದೆ.
7) ಪನ್ನೀರ್‌ನಲ್ಲಿ ಕಡಿಮೆ ಕಾರ್ಬೋಹೈಡ್ರೇಟ್ಸ್ ಇರುವುದರಿಂದ ಕೀಟೋಜೆನಿಕ್ ಡಯಟ್‌ಗೂ ಉತ್ತಮವಾಗಿದೆ.
8) ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ ಮತ್ತು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ.
ಇಷ್ಟೆಲ್ಲಾ ಪ್ರಯೋಜನಗಳಿರುವ ಪನ್ನೀರ್ ಅನ್ನು ಮಾರುಕಟ್ಟೆಯಿಂದ ಖರೀದಿಸಿ ತರುವ ಮೊದಲು ಒಮ್ಮೆ ಯೋಚಿಸಿ. ಅನುಮಾನ ಬಂದಲ್ಲಿ ಅದನ್ನು ಮೇಲೆ ಹೇಳಿದ ರೀತಿಯಲ್ಲಿ ಪರೀಕ್ಷಿಸಿ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಯಾವುದೋ ಪನ್ನೀರ್ ಖರೀದಿಸಿ ತರಬೇಡಿ. ನಿಮ್ಮ ಆರೋಗ್ಯವನ್ನು ನೀವೇ ಕಾಪಾಡಿಕೊಳ್ಳಿ.
(ಬರಹ: ಅರ್ಚನಾ ವಿ.ಭಟ್)