ಕನ್ನಡ ಸುದ್ದಿ  /  ಜೀವನಶೈಲಿ  /  ದೋಸೆ, ಚಪಾತಿ ತಿಂದು ಬೇಸರ ಆಗಿದ್ರೆ, ಪನೀರ್‌ ಪರೋಟ ಟ್ರೈ ಮಾಡಿ; ಬ್ಯಾಚುಲರ್ಸ್‌ಗೂ ಇಷ್ಟ ಆಗೋ ಸಿಂಪಲ್‌ ರೆಸಿಪಿ ಇದು

ದೋಸೆ, ಚಪಾತಿ ತಿಂದು ಬೇಸರ ಆಗಿದ್ರೆ, ಪನೀರ್‌ ಪರೋಟ ಟ್ರೈ ಮಾಡಿ; ಬ್ಯಾಚುಲರ್ಸ್‌ಗೂ ಇಷ್ಟ ಆಗೋ ಸಿಂಪಲ್‌ ರೆಸಿಪಿ ಇದು

ಪನೀರ್‌ನಿಂದ ಮಾಡಿದ ಖಾದ್ಯಗಳು ವಿಶೇಷ ರುಚಿ ಇರುವ ಕಾರಣ ಇದನ್ನು ಮಕ್ಕಳಿಂದ ಹಿರಿಯರವರೆಗೆ ಇಷ್ಟಪಟ್ಟು ತಿನ್ನುತ್ತಾರೆ. ಪ್ರತಿದಿನ ಬ್ರೇಕ್‌ಫಾಸ್ಟ್‌ಗೆ ದೋಸೆ, ಚಪಾತಿ ತಿಂದು ಬೇಸರ ಆಗಿದ್ರೆ ಪನೀರ್‌ ಪರೋಟ ಟ್ರೈ ಮಾಡಬಹುದು. ಸರಳವಾಗಿ, ಸುಲಭವಾಗಿ ತಯಾರಿಸಬಹುದಾದ ರೆಸಿಪಿ ಇದು.

ಪನೀರ್‌ ಪರೋಟ
ಪನೀರ್‌ ಪರೋಟ

ಮನೆಯಲ್ಲಿ ಪ್ರತಿದಿನ ಅಡುಗೆ ಮಾಡೋರಿಗೆ ನಾಳೆ ಏನು ತಿಂಡಿ ಮಾಡೋಣ, ಊಟಕ್ಕೆ ಏನು ಮಾಡೋದು ಅನ್ನೋ ಚಿಂತನೇ ಕಾಡುತ್ತೆ. ಯಾವಾಗ್ಲೂ ಒಂದೇ ರೀತಿ ಅಡುಗೆ ಮಾಡಿದ್ರೆ ಮಕ್ಕಳು ಗೊಣಗಿಕೊಳ್ಳುತ್ತಾರೆ. ಯಾವಾಗ್ಲೂ ದೋಸೆನಾ, ಅಯ್ಯೋ ಇವತ್ತೂ ಚಪಾತಿನಾ ಅಂತ ಬೇಸರ ಮಾಡಿಕೊಳ್ತಾರೆ. ಹೋಟೆಲ್‌ನಲ್ಲಿ ಸಿಗುವ ಬಗೆ ಬಗೆಯ ಖಾದ್ಯಗಳ ಹೆಸರು ಹೇಳುವ ಮಕ್ಕಳು ಅದನ್ನು ಮಾಡೋಕಾಗೊಲ್ವಾ, ಇದನ್ನು ಮಾಡೋಕಾಗೊಲ್ವಾ ಅಂತ ಅಮ್ಮನ್ನಾ ಕೇಳ್ತಾರೆ. ಅಂತಹ ಮಕ್ಕಳಿಗೆ ನೀವು ಸ್ಪೆಷಲ್‌ ಆಗಿ ಮನೆಯಲ್ಲೇ ಪನೀರ್‌ ಪರೋಟ ಮಾಡಿ ಕೊಡಬಹುದು.

ಪನೀರ್‌ನಿಂದ ಮಾಡಿದ ಖಾದ್ಯಗಳನ್ನು ವಯಸ್ಕರು ಮತ್ತು ಮಕ್ಕಳು ಇಷ್ಟಪಟ್ಟು ತಿನ್ನುತ್ತಾರೆ. ಪನೀರ್ ಬಟರ್ ಮಸಾಲಾ, ಪಾಲಕ್ ಪನೀರ್, ಪನೀರ್ ಪಕೋಡ ಹೀಗೆ ಬಗೆ ಬಗೆಯ ಖಾದ್ಯಗಳನ್ನು ಇದರಿಂದ ತಯಾರಿಸಲಾಗುತ್ತದೆ. ಅವುಗಳಲ್ಲಿ ಆರೋಗ್ಯಕ್ಕೂ ರುಚಿಗೂ ಬೆಸ್ಟ್‌ ಎನ್ನಿಸುವುದು ಪನೀರ್‌ ಪರೋಟ. ಬೆಳಗಿನ ಉಪಾಹಾರಕ್ಕೆ ಇದು ಹೇಳಿ ಮಾಡಿಸಿದ್ದು. ರಾತ್ರಿ ಊಟಕ್ಕೂ ಇದು ಹೊಂದುತ್ತದೆ. ಇದನ್ನು ಹೇಗೆ ಮಾಡೋದು ನೋಡಿ.

ಪನೀರ್‌ ಪರೋಟ

ಟ್ರೆಂಡಿಂಗ್​ ಸುದ್ದಿ

ಬೇಕಾಗುವ ಸಾಮಗ್ರಿಗಳು: ಪನೀರ್ - ನೂರು ಗ್ರಾಂ, ಈರುಳ್ಳಿ - ಒಂದು, ಉಪ್ಪು - ರುಚಿಗೆ, ಗೋಧಿಹಿಟ್ಟು - ಒಂದು ಕಪ್, ನೀರು - ಅಗತ್ಯಕ್ಕೆ ತಕ್ಕಷ್ಟು, ಧನಿಯಾ ಪುಡಿ - ಎರಡು ಚಮಚ, ಮೆಣಸಿನ ಪುಡಿ - ಒಂದು ಚಮಚ, ಕೊತ್ತಂಬರಿ ಪುಡಿ - ಒಂದು ಚಮಚ, ಹಸಿಮೆಣಸು - 2,

ತಯಾರಿಸುವ ವಿಧಾನ: ಪನೀರ್‌ ಅನ್ನು ಚಿಕ್ಕದಾಗಿ ಕತ್ತರಿಸಿ, ಅದನ್ನು ಮಿಕ್ಸಿ ಜಾರಿಗೆ ಹಾಕಿ ಒಂದೆರಡು ಸುತ್ತು ರುಬ್ಬಿಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅದೇ ಪಾತ್ರೆಗೆ ಖಾರದ ಪುಡಿ, ಧನಿಯಾ ಪುಡಿ, ಚಿಕ್ಕದಾಗಿ ಹೆಚ್ಚಿಕೊಂಡ ಈರುಳ್ಳಿ, ಉಪ್ಪು, ಚಿಕ್ಕದಾಗಿ ಹೆಚ್ಚಿಕೊಂಡ ಹಸಿಮೆಣಸು ಸೇರಿಸಿ ಎಲ್ಲವನ್ನೂ ಸೇರಿಸಿ ಚೆನ್ನಾಗಿ ಕಲೆಸಿ. ಇನ್ನೊಂದು ಪಾತ್ರೆಯಲ್ಲಿ ನೀರು, ಉಪ್ಪು ಮಿಶ್ರಣ ಮಾಡಿ ಅದಕ್ಕೆ ಗೋಧಿಹಿಟ್ಟು ಸೇರಿಸಿ ಚೆನ್ನಾಗಿ ಕಲೆಸಿ. ಇದನ್ನು ಚಪಾತಿ ಹಿಟ್ಟಿನ ಹದಕ್ಕೆ ನಾದಿಕೊಳ್ಳಿ. ನಾದಿಕೊಂಡ ಹಿಟ್ಟನ್ನು ಹತ್ತು ನಿಮಿಷಗಳ ಕಾಲ ಪಾತ್ರೆಯೊಂದರಲ್ಲಿ ಮುಚ್ಚಿ ಇಡಿ. ಈ ನಾದಿಕೊಂಡ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ತಯಾರಿಸಿಕೊಳ್ಳಿ. ಅದನ್ನು ಸಣ್ಣ ತೂತು ಮಾಡಿ ಅದರೊಳಗೆ ಮೊದಲೇ ತಯಾರಿಸಿಟ್ಟುಕೊಂಡ ಪನೀರ್‌ ಮಿಶ್ರಣವನ್ನು ಇರಿಸಿ. ನಂತರ ಲಟ್ಟಿಸಿಕೊಳ್ಳಿ. ಎಷ್ಟು ಸಾಧ್ಯವೋ ಅಷ್ಟು ತೆಳುವಾಗಿ ಲಟ್ಟಿಸಿ. ನಂತರ ತವಾದಲ್ಲಿ ಎರಡೂ ಕಡೆ ಪರೋಟವನ್ನು ಕಾಯಿಸಿ. ಈಗ ನಿಮ್ಮ ಮುಂದೆ ರುಚಿಯಾದ ಪನೀರ್‌ ಪರೋಟ ಸವಿಯಲು ಸಿದ್ಧ.

ಪನೀರ್‌ನಿಂದ ಮಾಡಿದ ಖಾದ್ಯಗಳು ಟೇಸ್ಟಿ ಆಗಿರುವುದು ಮಾತ್ರವಲ್ಲ ಆರೋಗ್ಯಕ್ಕೂ ಉತ್ತಮ. ಪನೀರ್‌ನಲ್ಲಿ ಪ್ರೊಟೀನ್ ಅತ್ಯಧಿಕವಾಗಿದೆ. ತೂಕ ಇಳಿಸಿಕೊಳ್ಳಲು ಪನೀರ್ ಉತ್ತಮ. ಬೆಳಗಿನ ಉಪಾಹಾರಕ್ಕೆ ಪನೀರ್ ತಿನ್ನುವುದರಿಂದ ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ. ಪನೀರ್ ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಇದನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿಯೂ ವೃದ್ಧಿಯಾಗುತ್ತದೆ. ಮೆದುಳಿನ ಆರೋಗ್ಯಕ್ಕೂ ಪನೀರ್ ಉತ್ತಮ.

ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಪನೀರ್ ಅನ್ನು ಆಗಾಗ್ಗೆ ತಿನ್ನಬೇಕು. ಮೂಳೆಗಳು ಮತ್ತು ಹಲ್ಲುಗಳು ಬಲವಾಗಿರಲು, ನೀವು ವಾರಕ್ಕೆ ಎರಡರಿಂದ ಮೂರು ಬಾರಿ ಪನೀರ್ ಸೇವಿಸಬೇಕು. ಸಸ್ಯಾಹಾರಿಗಳಿಗೆ ಸಾಕಷ್ಟು ಪ್ರೋಟೀನ್ ಪಡೆಯಲು ಪನೀರ್ ಸೇವನಗೆ ಒತ್ತು ನೀಡಬೇಕು. ಮಧುಮೇಹಿಗಳಿಗೆ ಪನೀರ್ ತುಂಬಾ ಒಳ್ಳೆಯದು. ಇದರಲ್ಲಿರುವ ಜೀವಸತ್ವಗಳು ಮತ್ತು ಖನಿಜಗಳು ಮಧುಮೇಹಿಗಳಿಗೆ ಒಳ್ಳೆಯದು.

(This copy first appeared in Hindustan Times Kannada website. To read more like this please logon to kannada.hindustantimes.com)