ಕನ್ನಡ ಸುದ್ದಿ  /  ಜೀವನಶೈಲಿ  /  Athirasa Recipe: ಸಾಂಪ್ರದಾಯಿಕ ಶೈಲಿಯ ಕಜ್ಜಾಯ ಸವಿದಿದ್ದೀರಾ? ಇಲ್ಲಿದೆ ಅತಿರಸ ಮಾಡುವ ವಿಧಾನ

Athirasa Recipe: ಸಾಂಪ್ರದಾಯಿಕ ಶೈಲಿಯ ಕಜ್ಜಾಯ ಸವಿದಿದ್ದೀರಾ? ಇಲ್ಲಿದೆ ಅತಿರಸ ಮಾಡುವ ವಿಧಾನ

Athirasa Recipe in Kannada: ಅನೇಕರು ಅತಿರಸ ಅಥವಾ ಕಜ್ಜಾಯವನ್ನು ಟೇಸ್ಟ್ ಮಾಡಿ ಇರಲ್ಲ. ಇನ್ನು ಕೆಲವರು ರುಚಿ ಸವಿದಿರುತ್ತಾರೆ ಆದರೆ ಇದನ್ನು ಹೇಗೆ ಮಾಡೋದು ಅಂತ ಗೊತ್ತಿರಲ್ಲ. ಇಲ್ಲಿದೆ ನೋಡಿ ಅತಿರಸ ರೆಸಿಪಿ.

ಅತಿರಸ-ಕಜ್ಜಾಯ (Twitter: @22Signs & @tjbenavides3)
ಅತಿರಸ-ಕಜ್ಜಾಯ (Twitter: @22Signs & @tjbenavides3)

ದಕ್ಷಿಣ ಭಾರತದ ಸಿಹಿ ತಿನಿಸುಗಳಲ್ಲಿ ಅತಿರಸ ಕೂಡ ಒಂದು. ಕರ್ನಾಟಕದ ಹಲವು ಭಾಗಗಳಲ್ಲಿ ಇದು ಹೆಚ್ಚು ಖ್ಯಾತಿ ಪಡೆದಿದೆ. ಕರ್ನಾಟಕದ ವಿವಿಧ ಭಾಗಗಳಲ್ಲಿ ಒಂದೊಂದು ರೀತಿಯ ತಿನಿಸಿಗೆ ಕಜ್ಜಾಯ ಎಂಬ ಹೆಸರಿದೆ. ಅತಿರಸವೂ ಕೂಡ ಸಾಂಪ್ರದಾಯಿಕ ಶೈಲಿಯ ಕಜ್ಜಾಯ. ಇದನ್ನು ಒಂದು ತಿಂಗಳವರೆಗೆ ಕೂಡ ಇಟ್ಟು ತಿನ್ನಬಹುದು. ಈ ತಿನಿಸನ್ನ ಅನೇಕರು ಟೇಸ್ಟ್ ಮಾಡಿ ಇರಲ್ಲ. ಇನ್ನು ಕೆಲವರು ರುಚಿ ಸವಿದಿರುತ್ತಾರೆ ಆದರೆ ಇದನ್ನು ಹೇಗೆ ಮಾಡೋದು ಅಂತ ಗೊತ್ತಿರಲ್ಲ. ನಾವಿಲ್ಲಿ ನಿಮಗೆ ಅತಿರಸ ಮಾಡುವ ಸುಲಭ ವಿಧಾನವನ್ನು ಹೇಳುತ್ತಿದ್ದೇನೆ.

ಅತಿರಸ ಮಾಡಲು ಬೇಕಾಗುವ ಸಾಮಗ್ರಿಗಳು

ದಪ್ಪ ಅಕ್ಕಿ 250 ಗ್ರಾಂ

ಬೆಲ್ಲ 1 ಕೆ ಜಿ

ಕೊಬ್ಬರಿ 1 ಕಪ್

ತೆಂಗಿನ ತುರಿ 2 ಕಪ್

ತುಪ್ಪ 1/4 ಕೆಜಿ

ಬಿಳಿ ಯಳ್ಳು 100 ಗ್ರಾಂ

2 ಚಮಚ ಏಲಕ್ಕಿ ಪುಡಿ

ಒಂದು ಲೋಟ ಗೋಧಿ ಹಿಟ್ಟು

ಕರಿಯಲು ಎಣ್ಣೆ

ಅತಿರಸ ಮಾಡುವ ವಿಧಾನ

ಮೊದಲಿಗೆ 250 ಗ್ರಾಂ ದಪ್ಪ ಅಕ್ಕಿನಾ ಮೂರು ಸಲ ಚೆನ್ನಾಗಿ ತೊಳೆದು 8 ಗಂಟೆಗಳ ಕಾಲ ನೆನೆಸಿ ಇಡಬೇಕು ಆಮೇಲೆ ನೀರನ್ನೆಲ್ಲ ಸೋಸಿ ಒಂದು ಬಿಳಿ ಬಟ್ಟೆಯ ಮೇಲೆ ಎರಡು ಗಂಟೆಯ ಕಾಲ ನೆರಳಿನಲ್ಲಿ ಆರಿಹಾಕಬೇಕು. ತುಂಬಾ ಒಣಗಿಸಬಾರದು. ತೇವಾಂಶ ಹೋಗದೆ ಇರುವ ಹಾಗೆ ನೋಡಿಕೊಳ್ಳಬೇಕು. ಬೀಸೋ ಕಲ್ಲಿದ್ದರೆ ಅದರಲ್ಲಿ ಬೀಸಬಹುದು, ಇಲ್ಲವೇ ಮಿಕ್ಸಿ ಜಾರ್ ಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನುಣ್ಣಗೆ ಪುಡಿ ಆಗದೇ ಇದ್ದಲ್ಲಿ ಜರಡಿಯ ಸಹಾಯ ಪಡೆದುಕೊಳ್ಳಬಹುದು.

ಈಗ ಒಂದು ಮುಷ್ಟಿ ಕೊಬ್ಬರಿ, 2 ಮುಷ್ಟಿ ಅಷ್ಟು ಕಾಯಿತುರಿ, 2 ಚಮಚ ಏಲಕ್ಕಿ ಪುಡಿ ಹಾಕಿ ತರಿ ತರಿ ಯಾಗಿ ನೀರು ಹಾಕದೆ ರುಬ್ಬಿ. ಏಲಕ್ಕಿಯನ್ನು ಇಡಿಯಾಗಿಯೇ ಹಾಕಿದರೆ ಅದು ಪುಡಿ ಆಗೋದಿಲ್ಲ. ಅದಕ್ಕೆ ಪುಡಿಯನ್ನೇ ಹಾಕಿ ರುಬ್ಬಿಕೊಳ್ಳಬೇಕು. ನಂತರ 1 ದೊಡ್ಡ ಪಾತ್ರೆಗೆ 3 ಲೋಟ ರುಬ್ಬಿಕೊಂಡ ಅಕ್ಕಿಹಿಟ್ಟು, ರುಬ್ಬಿದ ಕಾಯಿಯ ಮಿಶ್ರಣ, 2 ಚಿಟಿಕೆ ಉಪ್ಪು ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಒಂದು ಲೋಟ ಹಿಟ್ಟಿಗೆ ಒಂದೂವರೆ ಲೋಟ ಬೆಲ್ಲ, ಅಂದರೆ ನಾಲ್ಕೂವರೆ ಲೋಟ ಬೆಲ್ಲ ತೆಗೆದಿಟ್ಟುಕೊಳ್ಳಿ, ನಂತರ ಕಲಸಿ ಇಟ್ಟ ಅಕ್ಕಿ ಹಿಟ್ಟಿಗೆ ಒಂದು ಲೋಟ ಗೋಧಿ ಹಿಟ್ಟನ್ನು ಸೇರಿಸಿ, ಹೀಗೆ ಗೋಧಿ ಹಿಟ್ಟನ್ನು ಸೇರಿಸೋದರಿಂದ ಕಜ್ಜಾಯದ ಅಂಚು ಒಡಿಯದೆ ಒಳ್ಳೆಯ ಫಿನಿಷಿಂಗ್ ಬರುತ್ತದೆ.

ಈಗ ನಾಲ್ಕುವರೆ ಲೋಟ ಬೆಲ್ಲವನ್ನು ಒಂದು ದೊಡ್ಡ ಬಾಣಲೆಗೆ ಹಾಕಿ ಸ್ವಲ್ಪ ನೀರು ಹಾಕಿ ಬಿಸಿ ಮಾಡಿ, ತುಂಬಾ ಪಾಕ ಬರಬೇಕಂತ ಇಲ್ಲ. ಬೆಲ್ಲ ಕರಗುವ ತನಕ ಬಿಸಿ ಮಾಡಿದರೂ ಸಾಕು. ಬೆಲ್ಲ ಚನ್ನಾಗಿ ಕರಗಿ ಕುದಿ ಬಂದಮೇಲೆ ರೆಡಿಮಾಡಿಟ್ಟುಕೊಂಡ ಹಿಟ್ಟನ್ನ ಸ್ವಲ್ಪ ಸ್ವಲ್ಪ ಸೇರಿಸ್ತಾ ಹೋಗಿ ಚೆನ್ನಾಗಿ ಕಾಯಿಸಿ ಕೊಳ್ಳಬೇಕು. ತೀರಾ ಗಟ್ಟಿ ಆಗೋದು ಬೇಡ. ಸ್ವಲ್ಪ ಗಟ್ಟಿ ಆದರೆ ಸಾಕು, ಏಕೆಂದರೆ ಈ ಹಿಟ್ಟನ್ನ ಮೂರು ದಿನದ ನಂತರ ಕಜ್ಜಾಯ ಮಾಡಲು ಬಳಸುತ್ತೇವೆ. ಕೊನೆಯಲ್ಲಿ ಇದರ ಘಮಕ್ಕೆಂದು 150 ಗ್ರಾಂ ತುಪ್ಪವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಸಿಹಿ ತಿನಿಸುಗಳಿಗೆಲ್ಲ ತುಪ್ಪ ಹಾಕಿದರೆ ಅದರ ರುಚಿ ಇನ್ನೂ ಹೆಚ್ಚು. ಹಿಟ್ಟು ಬಿಸಿಯಾಗಿದ್ದಾಗ ಗಟ್ಟಿ ಎನಿಸಿದರೂ ತಣ್ಣಗಾದ ಮೇಲೆ ಸರಿಯಾದ ಹದಕ್ಕೆ ಬರುತ್ತದೆ. ಈಗ ಈ ಹಿಟ್ಟನ್ನು ಒಂದು ಗಾಳಿಯಾಡದ ಬಾಕ್ಸ್ ಗೆ ಹಾಕಿ 36 ಗಂಟೆಗಳ ಕಾಲ ಬಿಡಬೇಕು. ಹೀಗೆ ಮಾಡುವದರಿಂದ ಹಿಟ್ಟು ಸರಿಯಾಗಿ ಬೆಲ್ಲವನ್ನು ಹೀರಿಕೊಂಡು ರುಚಿಯನ್ನು ಹೆಚ್ಚಿಸುತ್ತದೆ.

36 ಗಂಟೆಗಳ ನಂತರ ಹಿಟ್ಟನ್ನು ತೆಗದು ಗೋಲ ಉಂಡೆಗಳನ್ನು ಮಾಡಿ ಈ ಉಂಡೆಗಳು ಕೈಗೆ ಅಂಟುವಂತೆ ಇರಬಾರದು. ಈ ಹೂರಣವನ್ನು ಒಂದು ತಿಂಗಳ ಕಾಲ ಫ್ರಿಡ್ಜಲ್ಲಿ ಇಟ್ಟರೂ ಹಾಳಾಗುವುದಿಲ್ಲ. ಈಗ ಎಣ್ಣೆಯನ್ನು ಕಾಯಲು ಇಟ್ಟು, ಒಂದು ತಟ್ಟೆಗೆ ಎಣ್ಣೆ ಸವರಿ ಒಂದು ಲಿಂಬೆ ಗಾತ್ರದ ಉಂಡೆ ಮಾಡಿ ಇಟ್ಟುಕೊಳ್ಳಿ, ನಂತರ ಬಾಳೆ ಎಲೆಯಲ್ಲಿ ಗೋಲಾಕಾರದಲ್ಲಿ ತಟ್ಟಿ ಒಂದು ಬದಿಗೆ ಸ್ವಲ್ಪ ಬಿಳಿಯಳ್ಳನ್ನ ಹಾಕಿ ತಟ್ಟಿ ಸಣ್ಣ ಉರಿ ಇಟ್ಟುಕೊಂಡು ಎಣ್ಣೆಯಲ್ಲಿ ಹೊಂಬಣ್ಣಕ್ಕೆ ಬರುವ ತನಕ ಕರಿದು ತೆಗೆದರೆ ಕಜ್ಜಾಯ ಅಥವಾ ಅತಿರಸ ರೆಡಿ. ಇದನ್ನು ಒಂದು ತಿಂಗಳ ತನಕ ಸಹ ಇಟ್ಟು ತಿನ್ನಬಹುದು.

ವಿಭಾಗ