ಆಂಧ್ರ ಸ್ಟೈಲ್ ಫಿಶ್ ಇಗುರು; ಅಡುಗೆ ಬಾರದವರೂ ಸುಲಭವಾಗಿ ತಯಾರಿಸಬಹುದಾದ ರೆಸಿಪಿ ಇದು, ಮಾಡಿ ನೋಡಿ
ಮೀನು ಅಡುಗೆ ಮಾಡುವುದು ಕಷ್ಟ ಎನ್ನುವುದು ಹಲವರ ಅಭಿಪ್ರಾಯ. ಆದರೆ ಹೆಚ್ಚು ಮಸಾಲೆ ಬಳಸದೆ, ಅತಿ ಕಡಿಮೆ ಸಮಯದಲ್ಲಿ ತಯಾರಿಸುವ ಎಷ್ಟೋ ರೆಸಿಪಿಗಳಿವೆ. ಅವುಗಳಲ್ಲಿ ಆಂಧ್ರ ಶೈಲಿಯ ಫಿಶ್ ಇಗುರು ಕೂಡಾ ಒಂದು. ಚಾಪಲ ಇಗುರು ರೆಸಿಪಿ ಇಲ್ಲಿದೆ.
ನಾನ್ ವೆಜಿಟೆರಿಯನ್‌ಗಳಿಗೆ ಮಟನ್, ಚಿಕನ್, ಸೀ ಫುಡ್‌ನಲ್ಲಿ ಸಾಕಷ್ಟು ಆಯ್ಕೆಗಳಿವೆ. ಅದರಲ್ಲಿ ನಿರ್ದಿಷ್ಟವಾಗಿ ಸೀ ಫುಡ್ ಇಷ್ಟಪಡುವವರು ಸಾಕಷ್ಟು ಮಂದಿ ಇದ್ದಾರೆ. ಹೆಚ್ಚಿನ ಜನರು ಮೀನು ಹೊರತುಪಡಿಸಿ ಬೇರೇನೂ ತಿನ್ನಲು ಇಷ್ಟಪಡುವುದಿಲ್ಲ. ಪ್ರತಿ ಬಾರಿ ಹೊಸ ಹೊಸ ವೆರೈಟಿ ಡಿಶ್ ಸಿಕ್ಕರಂತೂ ತೃಪ್ತಿಯಾಗಿ ತಿನ್ನುತ್ತಾರೆ.
ಫಿಶ್ ಕರಿ, ಹೆಸರು ಒಂದೇ ಇದ್ದರೂ ಅದಕ್ಕೆ ಬಳಸುವ ಪದಾರ್ಥಗಳು, ರುಚಿ ಒಂದೊಂದು ಕಡೆ ಒಂದು ರೀತಿ ಇರುತ್ತದೆ. ಇಲ್ಲಿ ಆಂಧ್ರ ಶೈಲಿಯ ಫಿಶ್ ಇಗುರು (Fish Curry) ತಯಾರಿಸುವ ವಿಧಾನ ಹೇಗೆ ನೋಡೋಣ. ಇದನ್ನು ತೆಲುಗಿನಲ್ಲಿ ಚಾಪಲ ಇಗುರು ಎಂದು ಕರೆಯಲಾಗುತ್ತದೆ. ಫಿಶ್ ಇಗುರು ರೆಸಿಪಿಗೆ ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ಹೀಗಿದೆ.
ಫಿಶ್ ಇಗುರು ತಯಾರಿಸಲು ಬೇಕಾಗುವ ಪದಾರ್ಥಗಳು
- ಮೀನು - 1 ಕಿಲೋ
- ಧನಿಯಾ - 1 ಚಮಚ
- ಜೀರ್ಗೆ - 1 ಚಮಚ
- ತುರಿದ ಶುಂಠಿ - 2 ಚಮಚ
- ಅಚ್ಚ ಖಾರದ ಪುಡಿ - 1 ಟೀ ಸ್ಪೂನ್
- ಒಣ ಮೆಣಸಿನಕಾಯಿ - 4
- ಅರಿಶಿನ - 1/2 ಚಮಚ
- ಈರುಳ್ಳಿ - 1
- ಹಸಿ ಮೆಣಸಿನಕಾಯಿ - 3
- ಎಣ್ಣೆ - ಒಗ್ಗರಣೆಗೆ ಬೇಕಾಗುವಷ್ಟು
- ಬಿರ್ಯಾನಿ ಎಲೆ - 2
- ಉಪ್ಪು - ರುಚಿಗೆ ತಕ್ಕಷ್ಟು
ಇದನ್ನೂ ಓದಿ: ಚಿಕನ್ ಚಾಪ್ಸ್ ಫೋಟೋ ನೋಡಿದ ಕೂಡ್ಲೇ ಬಾಯಿ ಚಪ್ಪರಿಸುತ್ತಾ ಕೂರ್ಬೇಡಿ; ಈಸಿ ರೆಸಿಪಿ, ಮಾಡ್ಕೊಂಡು ತಿನ್ನಿ
ಫಿಶ್ ಇಗುರು ತಯಾರಿಸುವ ವಿಧಾನ
- ಮೊದಲು ಮೀನನ್ನು ಶುಚಿ ಮಾಡಿಕೊಂಡು ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ
- ದಪ್ಪ ತಳದ ಪಾತ್ರೆಗೆ ಸ್ವಲ್ಪ ಎಣ್ಣೆ ಸೇರಿಸಿ ಬಿಸಿ ಆಗಲು ಬಿಡಿ, ನಂತರ ಮೀನು ಸೇರಿಸಿ ಎರಡೂ ಕಡೆ ರೋಸ್ಟ್ ಮಾಡಿಕೊಳ್ಳಿ
- ರೋಸ್ಟ್ ಆದ ಮೀನು ತುಂಡುಗಳನ್ನು ಒಂದು ಪ್ಲೇಟ್‌ಗೆ ತೆಗೆದಿಡಿ.
- ಮಿಕ್ಸಿ ಜಾರ್‌ಗೆ ಧನಿಯಾ, ಶುಂಠಿ ತುರಿ, ಅರಿಶಿನ, ಖಾರಂ, ಉಪ್ಪು ಸ್ವಲ್ಪ ನೀರು ಸೇರಿಸಿ ನುಣ್ಣಗೆ ಗ್ರೈಂಡ್ ಮಾಡಿಕೊಳ್ಳಿ
- ಮೀನು ರೋಸ್ಟ್ ಮಾಡಿಕೊಂಡ ಪಾತ್ರೆಗೆ ಇನ್ನೂ ಸ್ವಲ್ಪ ಎಣ್ಣೆ ಸೇರಿಸಿ ಬಿಸಿ ಆದ ನಂತರ ಜೀರ್ಗೆ, ಒಣಮೆಣಸಿನಕಾಯಿ ಸೇರಿಸಿ
- ನಂತರ ಬಿರ್ಯಾನಿ ಎಲೆ, ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಸ್ವಲ್ಪ ಸಮಯ ರೋಸ್ಟ್ ಮಾಡಿ
- ನಂತರ ಮೊದಲೇ ಗ್ರೈಂಡ್ ಮಾಡಿಕೊಂಡ ಮಸಾಲೆ, ಉಪ್ಪು ಸೇರಿಸಿ ಸ್ವಲ್ಪವೇ ನೀರು ಸೇರಿಸಿ ಮಿಕ್ಸ್ ಮಾಡಿ
- ಇದು ಕುದಿಯಲು ಆರಂಭವಾಗುತ್ತಿದ್ದಂತೆ ರೋಸ್ಟ್ ಮಾಡಿಟ್ಟುಕೊಂಡ ಮೀನು ತುಂಡುಗಳನ್ನು ಸೇರಿಸಿ
- ಹಸಿಮೆಣಸಿನಕಾಯಿಯನ್ನು ಸೀಳಿ ಮಸಾಲೆಯೊಂದಿಗೆ ಸೇರಿಸಿ
- ಎಣ್ಣೆ ಬಿಡುವರೆಗೂ ಮಸಾಲೆಯನ್ನು ಕುದಿಸಿದರೆ ಆಂಧ್ರ ಶೈಲಿಯ ಚಾಪಲ ಇಗುರು (ಫಿಶ್ ಇಗುರು) ತಿನ್ನಲು ರೆಡಿ
ಇದನ್ನೂ ಓದಿ: ಮೊಟ್ಟೆ, ಕಡ್ಲೆ ಇಲ್ಲದೆ ತಯಾರಿಸಿ ರುಚಿಯಾದ ಕೈಮಾ ಉಂಡೆ ಸಾಂಬಾರ್; ರೆಸಿಪಿ ಕಲಿತುಕೊಳ್ಳಿ