ಕೈತೋಟದ ಗಿಡ ಸೊಂಪಾಗಿ ಬೆಳೆಯಬೇಕಂದ್ರೆ ಕಾಲಕಾಲಕ್ಕೆ ಈ ಕೆಲಸ ಮಾಡಿ; ಮಣ್ಣು ಫಲವತ್ತಾಗಿದ್ರೆ ಸಸ್ಯವೂ ಫಲ ಕೊಡುತ್ತೆ
Fertile Soil: ಮನೆಯ ಕೈತೋಟ ಅಥವಾ ಹೂದೋಟದಲ್ಲಿ ಬೆಳೆಯುವ ಗಿಡಗಳಿಗೆ ಮಣ್ಣು ಫಲವತ್ತಾಗಿರಬೇಕು. ಆಗ ಮಾತ್ರ ಸೊಂಪಾಗಿ ಬೆಳೆದು ಫಲ ನೀಡುತ್ತವೆ. ಇದು ಸಾಧ್ಯವಾಗಬೇಕಾದರೆ, ನೀವು ಕೆಲವೊಂದು ಕೆಲಸಗಳನ್ನು ಆಗಾಗ ಮಾಡುತ್ತಿರಬೇಕು.
ಗಾರ್ಡನಿಂಗ್ ಹವ್ಯಾಸ ಹಲವರಿಗಿದೆ. ಮನೆಯ ಸುತ್ತಮುತ್ತ ಬಗೆಬಗೆಯ ಹೂಗಿಡಗಳನ್ನು ನೆಟ್ಟು ನಿತ್ಯವೂ ಅದರ ಆರೈಕೆ ಮಾಡುವುದು ಒಂದು ರೀತಿ ಖುಷಿ. ಇನ್ನೂ ಕೆಲವರು ಮನೆ ಖರ್ಚಿಗೆಂದು ಬಗೆಬಗೆಯ ತರಕಾರಿ, ಸೊಪ್ಪುಗಳು, ಹಣ್ಣಿನ ಗಿಡಗಳನ್ನು ಕೂಡಾ ಬೆಳೆಸುತ್ತಾರೆ. ಹೂಗಿಡ ಸೇರಿದಂತೆ ಯಾವುದೇ ಗಿಡಗಳು ಚೆನ್ನಾಗಿ ಬೆಳೆಯಬೇಕೆಂದರೆ ಆರೈಕೆ ಕೂಡಾ ಮಾಡಬೇಕು. ಮುಖ್ಯವಾಗಿ ಗಿಡ ನೆಡುವುದಕ್ಕೂ ಮುಂಚೆ ಮಣ್ಣನ್ನು ಸರಿಯಾಗಿ ಸಿದ್ಧಪಡಿಸಿಕೊಳ್ಳಬೇಕು. ಗಿಡ ಬೆಳೆಯುತ್ತಿರುವಾಗಲು ಮಣ್ಣಿನ ಆರೈಕೆ ಮಾಡಬೇಕಾಗುತ್ತದೆ. ಆಗ ಮಾತ್ರ ನೀವು ನಿರೀಕ್ಷೆ ಮಾಡಿದ ಹಾಗೆ ಗಿಡ ಬರಲು ಸಾಧ್ಯ.
ಹೂಕುಂಡ ಅಥವಾ ನೆಲದ ಮೇಲೆ ನೇರವಾಗಿ ಗಿಡಗಳನ್ನು ನೆಟ್ಟ ನಂತರ, ಕಾಲ ಕಾಲಕ್ಕೆ ಮಣ್ಣಿನ ಫಲವತ್ತತೆ ಪರೀಕ್ಷೆ ಮಾಡಬೇಕು. ಗಿಡ ನೆಡುವಾಗ ಅಗತ್ಯ ಗೊಬ್ಬರ ಹಾಕಿದರೂ, ಆ ನಂತರ ಕೆಲ ವಾರಗಳು ದಾಟಿದ ಬಳಿಕ ಮತ್ತೆ ಗೊಬ್ಬರ ಹಾಕಬೇಕಾಗುತ್ತದೆ. ಮಣ್ಣಿನ ಫಲವತ್ತತೆಯನ್ನು ಗಿಡ ಹೀರಿಕೊಳ್ಳುವುದರಿಂದ ಅದಕ್ಕೆ ಮತ್ತೆ ಫಲವತ್ತತೆ ಬೇಕಾಗುತ್ತದೆ. ಇದಕ್ಕೆ ಕೆಲವೊಂದು ಅಗತ್ಯ ಸಲಹೆಗಳು ಇಲ್ಲಿವೆ.
ರಸಗೊಬ್ಬರ
ಮಣ್ಣು ಫಲವತ್ತಾಗಿರಲು ಎರಡು ಮೂರು ತಿಂಗಳಿಗೊಮ್ಮೆ ರಸಗೊಬ್ಬರ ಬಳಸಿ. ದನದದ ಕೊಟ್ಟಿಗೆ ಗೊಬ್ಬರ ಅಥವಾ ಎರೆಹುಳು ಗೊಬ್ಬರ ಉತ್ತಮ. ಹೀಗೆ ಮಾಡುವುದರಿಂದ ಮಣ್ಣಿನಲ್ಲಿ ಸೂಕ್ಷ್ಮ ಪೋಷಕಾಂಶಗಳು ಹೆಚ್ಚುತ್ತವೆ. ಇದು ಸಿಗದಿದ್ದರೆ ಅಡುಗೆ ಮನೆಯ ಹಸಿಕಸದಿಂದ ಮಾಡುವ ಕಾಂಪೋಸ್ಟ್ ಗೊಬ್ಬರ ಬಳಸಬಹುದು. ಇಲ್ಲವಾದಲ್ಲಿ ಅಡುಗೆ ಮನೆಯ ಕಸವನ್ನು ಗುಂಡಿಗಳಲ್ಲಿ ಹಾಕಿ ಹೂಳಬೇಕು. ಅದು ಕ್ರಮೇಣ ಗೊಬ್ಬರವಾಗಿ ಬದಲಾಗಿ ಮಣ್ಣನ್ನು ಫಲವತ್ತಾಗಿಸುತ್ತದೆ. ಈ ರೀತಿಯ ಮಣ್ಣಿನಲ್ಲಿ ಎರೆಹುಳು ಬೆಳೆಯುತ್ತವೆ. ಎರೆಹುಳು ಇರುವ ಮಣ್ಣು ತುಂಬಾ ಫಲವತ್ತಾಗುತ್ತದೆ. ಸಸ್ಯ ಸ್ನೇಹಿ ಸೂಕ್ಷ್ಮಾಣು ಜೀವಿಗಳು ಬೆಳೆದರೆ ಗಿಡಗಳಿಗೆ ಒಳ್ಳೆಯದು.
ಹಸುವಿನ ಸಗಣಿ
ಹೆಚ್ಚಾಗಿ ಗಿಡಗಳಿಗೆ ಹಸುವಿನ ಸಗಣಿ ಬಳಕೆ ಮಾಡಲಾಗುತ್ತದೆ. ಇದು ಮಣ್ಣನ್ನು ಫಲವತ್ತಾಗಿಸುವಲ್ಲಿ ಭಾರಿ ಒಳ್ಳೆಯ ಗೊಬ್ಬರ. ಮಣ್ಣಿನೊಂದಿಗೆ ಮಿಶ್ರಣವಾಗಿ ಗಿಡಕ್ಕೆ ಬೇಕಾದ ಫಲವತ್ತತೆ ಒದಗಿಸುತ್ತದೆ.
ಸುಡುವ ಕಸವನ್ನು ಗೊಬ್ಬರವಾಗಿಸಿ
ಮನೆಯ ಸುತ್ತಮುತ್ತ ಮರಗಿಡಗಳಿದ್ದರೆ ಅಥವಾ ತೋಟದಲ್ಲಿ ಮರದ ಎಲೆಗಳು, ಒಣಗಿದ ಭಾಗಗಳು ಬಿದ್ದಿರುತ್ತದೆ. ಅದನ್ನು ಅಲ್ಲೇ ಸುಟ್ಟು ವ್ಯರ್ಥ ಮಾಡಬೇಡಿ. ಬೆಂಕಿ ಹಚ್ಚುವುದರಿಂದ ಅಲ್ಲಿನ ಭೂಮಿಗೆ ಹಾನಿಯಾಗುತ್ತದೆ. ಅಲ್ಲದೆ ಅಲ್ಲಿ ಸೂಕ್ಷ್ಮ ಜೀವಿಗಳು ಸಾಯುತ್ತವೆ. ಇಂಥಾ ಕಸ ಅಥವಾ ಒಣ ಎಲೆಗಳನ್ನು ಒಂದು ಗುಂಡಿಯಲ್ಲಿ ಹಾಕಿ. ಅದು ನಿಧಾನವಾಗಿ ಗೊಬ್ಬರವಾಗಿ ಮಾರ್ಪಡುತ್ತದೆ. ಇದಕ್ಕೆ ಸ್ವಲ್ಪ ಸೆಗಣಿ ಹಾಕಿದರೆ ಇನ್ನೂ ಉತ್ತಮ. ಈ ಗೊಬ್ಬರ ಭೂಮಿಯನ್ನು ಫಲವತ್ತಾಗಿಸಲು ಸಹಾಯ ಮಾಡುತ್ತದೆ.
ಕಳೆಗೆ ಔಷಧ ಸಿಂಪಡಣೆ ಬೇಡ
ಹೂದೋಟದಲ್ಲಿ ಗಿಡಗಳ ನಡುವೆ ಕಳೆಗಳು ಒಂದು ದೊಡ್ಡ ಸಮಸ್ಯೆ. ಕಳೆ ನಿರ್ಮೂಲನೆಗೆ ಸಾಮಾನ್ಯವಾಗಿ ಕಳೆನಾಶಕಗಳನ್ನು ಬಳಸಲಾಗುತ್ತದೆ. ಈ ರೀತಿ ಮಾಡುವುದರಿಂದ ಕಳೆಗಳು ಮಾತ್ರವಲ್ಲದೆ, ನೀವು ಬೆಳೆಸುತ್ತಿರುವ ಸಸ್ಯಗಳು ಬೆಳೆಯಲು ಸಹಾಯ ಮಾಡುವ ಮಣ್ಣಿನಲ್ಲಿರುವ ಅನೇಕ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಇದು ಮಣ್ಣಿನ ಸಾರವನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ. ಹೀಗಾಗಿ ಕಳೆ ನಾಶದೊಂದಿಗೆ ಮಣ್ಣಿಗೂ ಹಾನಿಯಾಗುತ್ತದೆ. ಹೀಗಾಗಿ ಕಳೆಯನ್ನು ಕೈಯಲ್ಲಿ ತೆಗೆಯುವ ಪ್ರಯತ್ನ ಮಾಡಿ. ಅಥವಾ ಯಂತ್ರಗಳನ್ನು ಬಳಸಿ.
ವಿಭಾಗ