ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ಮಳೆ ಶುರುವಾದ ಬೆನ್ನಲ್ಲೇ ಅತಿಯಾಗಿ ಕೂದಲು ಉದುರಲು ಆರಂಭವಾಗಿದ್ಯಾ? ಮಳೆಗಾಲದಲ್ಲಿ ಹೀಗಿರಲಿ ಕೂದಲ ಕಾಳಜಿ

Hair Care: ಮಳೆ ಶುರುವಾದ ಬೆನ್ನಲ್ಲೇ ಅತಿಯಾಗಿ ಕೂದಲು ಉದುರಲು ಆರಂಭವಾಗಿದ್ಯಾ? ಮಳೆಗಾಲದಲ್ಲಿ ಹೀಗಿರಲಿ ಕೂದಲ ಕಾಳಜಿ

ಮಳೆಗಾಲ ಆರಂಭಕ್ಕೂ ಮುನ್ನ ಮಳೆ ಬರುವುದನ್ನೇ ಕಾಯುವ ನಾವು ಮಳೆಗಾಲ ಶುರುವಾದ ಮೇಲೆ ಯಾಕಾದ್ರೂ ಮಳೆ ಬರುತ್ತೋ ಅಂದ್ಕೋತೀವಿ. ಅದಕ್ಕೆ ಕಾರಣ ಕೂದಲು ಹಾಗೂ ಚರ್ಮದ ಸಮಸ್ಯೆ. ಮಳೆಗಾಲದಲ್ಲಿ ಕೂದಲು ಉದುರುವುದನ್ನು ತಡೆದು ಕೂದಲಿನ ಕಾಳಜಿ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.

ಮಳೆ ಶುರುವಾದ ಬೆನ್ನಲ್ಲೇ ಕೂದಲು ಉದುರುತಿದ್ಯಾ ಇದ್ಯಾ, ಮಳೆಗಾಲದಲ್ಲಿ ಹೀಗಿರಲಿ ಕೂದಲ ಕಾಳಜಿ
ಮಳೆ ಶುರುವಾದ ಬೆನ್ನಲ್ಲೇ ಕೂದಲು ಉದುರುತಿದ್ಯಾ ಇದ್ಯಾ, ಮಳೆಗಾಲದಲ್ಲಿ ಹೀಗಿರಲಿ ಕೂದಲ ಕಾಳಜಿ

ಮಳೆಗಾಲ ಬಂದಾಕ್ಷಣ ಕೂದಲು ಉದುರುವ ಸಮಸ್ಯೆ ಜಾಸ್ತಿಯಾಗುತ್ತದೆ. ಇದಕ್ಕೆ ಕಾರಣಗಳು ಹಲವು. ಕೂದಲು ಸರಿಯಾಗಿ ಒಣಗದೇ ಇರುವುದು ಕೂದಲು ಉದುರಲು ಪ್ರಮುಖ ಕಾರಣವಾಗಬಹುದು. ಇದರೊಂದಿಗೆ ಸರಿಯಾಗಿ ಕೂದಲಿನ ಕಾಳಜಿ ಮಾಡದೇ ಇರುವುದರಿಂದ ಕೂಡ ಕೂದಲು ಉದುರುತ್ತದೆ. ಹಾಗಾದರೆ ಮಳೆಗಾಲದಲ್ಲಿ ಕೂದಲಿನ ಕಾಳಜಿ ಹೇಗಿರಬೇಕು, ಕೂದಲಿನ ಆರೈಕೆ ಹೇಗೆ ಮಾಡಬೇಕು ನೋಡಿ.

ಕೂದಲಿಗೆ ಎಣ್ಣೆ ಹಚ್ಚಿ

ಕೂದಲಿನ ಆರೈಕೆಯ ವಿಚಾರಕ್ಕೆ ಬಂದಾಗ ಕೂದಲಿಗೆ ಎಣ್ಣೆ ಹಚ್ಚುವುದು ಬಹಳ ಮುಖ್ಯ. ಇದರಿಂದ ಕೂದಲು ಬುಡದಿಂದಲೇ ಬಲಗೊಳ್ಳುತ್ತದೆ. ಮಳೆಗಾಲದಲ್ಲಿ ಕೂದಲಿಗೆ ಎಣ್ಣೆ ಹಚ್ಚುವುದರಿಂದ ನೆತ್ತಿಯ ವಿವಿಧ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಕೂದಲಿನ ಕಿರುಚೀಲಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಮಳೆಗಾಲದಲ್ಲಿ ತಪ್ಪದೇ ವಾರಕ್ಕೆ ಎರಡು ಬಾರಿ ಬಿಸಿಎಣ್ಣೆಯಿಂದ ಕೂದಲಿಗೆ ಮಸಾಜ್‌ ಮಾಡಬೇಕು. ಇದರಿಂದ ತಲೆಸ್ನಾನ ಮಾಡಿದಾಗ ಅತಿಯಾಗಿ ಕೂದಲಿನ ತೇವಾಂಶ ನಷ್ಟವಾಗುವುದನ್ನು ತಡೆಯಬಹುದು.

ಮಳೆಯಲ್ಲಿ ನೆನೆದಿದ್ದರೆ ಕೂದಲು ಒಣಗಿಸಲು ಮರೆಯದಿರಿ

ಮಳೆಗಾಲದಲ್ಲಿ ಕೂದಲ ಆರೈಕೆಯಲ್ಲಿ ಹೆಚ್ಚು ಗಮನ ಹರಿಸಬೇಕಾದ ಕ್ರಮವಿದು. ಪ್ರತಿ ಬಾರಿ ನೀವು ಮಳೆಯಲ್ಲಿ ನೆನೆದು ಬಂದಾಗಲೂ ತಲೆಸ್ನಾನ ಮಾಡುವುದನ್ನು ಮರೆಯಬೇಡಿ. ನೀವು ಒದ್ದೆಯಾದಾಗ, ಕೂದಲಿನಲ್ಲಿ ಸಿಲುಕಿರುವ ಮಳೆನೀರಿನ ಆಮ್ಲೀಯತೆಯು ನಿಮ್ಮ ನೆತ್ತಿಯ pH ನಲ್ಲಿ ಅಸಮತೋಲನವನ್ನು ಉಂಟುಮಾಡಬಹುದು ಮತ್ತು ಕೂದಲಿನ ಸಮಸ್ಯೆಗಳನ್ನು ಉಲ್ಬಣಗೊಳಿಸಬಹುದು. ನಿಮ್ಮ ಕೂದಲಿಗೆ ಹೊಂದುವ ಶಾಂಪೂ ಮತ್ತು ಕಂಡಿಷನರ್ ಅನ್ನು ಬಳಸುವುದರಿಂದ ನಿಮ್ಮ ಗ್ರಂಥಿಗಳು ಅತಿಯಾದ ಮೇದೋಗ್ರಂಥಿಗಳ ಸ್ರವಿಸುವಿಕೆಯನ್ನು ತಡೆಯುತ್ತದೆ ಮತ್ತು ಕೂದಲಿನ ಸಮಸ್ಯೆಗಳನ್ನು ದೂರವಿರಿಸುತ್ತದೆ. ಮಳೆಗಾಲದಲ್ಲಿ ಕೂದಲು ಉದುರುವುದನ್ನು ತಡೆಯಲು ನೈಸರ್ಗಿಕ ಅಂಶಗಳಿರುವ ಸೌಮ್ಯವಾದ ಶಾಂಪೂ ಬಳಸುವುದು ಉತ್ತಮ.

ಟ್ರೆಂಡಿಂಗ್​ ಸುದ್ದಿ

ಸಾಧ್ಯವಾದಷ್ಟು ಕೂದಲು ಒಣಗಿಸಿ

ಮಳೆಗಾಲದಲ್ಲಿ ಹಲವರು ಕೂದಲು ಹಾಗೂ ನೆತ್ತಿಯ ಭಾಗವನ್ನು ಸರಿಯಾಗಿ ಒಣಗಿಸುವುದಿಲ್ಲ. ಕೂದಲು ಒದ್ದೆಯಾಗಿದ್ದಾಗ ಹೆಚ್ಚು ದುರ್ಬಲವಾಗುತ್ತದೆ. ತಲೆಸ್ನಾನದ ನಂತರ ಕೂದಲು ಚೆನ್ನಾಗಿ ಒಣಗಿಸುವುದನ್ನು ಮರೆಯಬೇಡಿ. ಕೂದಲನ್ನು ನೈಸರ್ಗಿಕವಾಗಿ ಒಣಗಲು ಬಿಡಿ, ನಂತರವಷ್ಟೇ ಕೂದಲು ಕಟ್ಟಿ. ಮಳೆಗಾಲದಲ್ಲಿ ಸಾಧ್ಯವಾದಷ್ಟು ಮಳೆನೀರು ಕೂದಲಿಗೆ ತಾಕದಂತೆ ಛತ್ರಿ, ಕ್ಯಾಪ್‌, ಸ್ಕ್ರಾಪ್‌ಗಳನ್ನು ಬಳಸಿ.

ಬಾಚಣಿಗೆ ಬಳಸುವ ಕ್ರಮ ತಿಳಿದಿರಲಿ

ಬಾಚಣಿಗೆ ಬಳಸುವ ಕ್ರಮವು ಮಳೆಗಾಲದ ಕೂದಲ ಕಾಳಜಿಗೆ ಮುಖ್ಯವಾಗುತ್ತದೆ. ಕೂದಲಿನ ಸಿಕ್ಕು ಬಿಡಿಸಲು ಅಗಲವಾದ ಹಲ್ಲಿನ ಬಾಚಣಿಗೆ ಬಳಸಿ. ಕೂದಲು ಒದ್ದೆಯಿದ್ದಾಗ ತಪ್ಪಿಯೂ ಬಾಚಬೇಡಿ. ಇದರಿಂದ ಕೂದಲು ಸೀಳುವ ಸಾಧ್ಯತೆ ಹೆಚ್ಚು. ಮಳೆಗಾಲದಲ್ಲಿ ಶಿಲೀಂಧ್ರ ಸೋಂಕನ್ನು ತಡೆಯಲು ಬಾಚಣಿಗೆಯನ್ನು ಬೇರೆಯವರ ಜೊತೆ ಹಂಚಿಕೊಳ್ಳುವುದನ್ನು ತಪ್ಪಿಸಿ.

ಕೂದಲು ಉದುರುವುದು ಮತ್ತು ಸೀಳುವುದನ್ನು ತಪ್ಪಿಸಿ ಕೂದಲನ್ನು ರಕ್ಷಿಸಲು ಇರುವ ಒಂದು ಉತ್ತಮ ವಿಧಾನ ಎಂದರೆ ವಾರಕ್ಕೊಮ್ಮೆ ಡೀಪ್‌ ಕಂಡೀಷನಿಂಗ್ ಮಾಡುವುದು. ಡೀಪ್‌ ಕಂಡೀಷನಿಂಗ್‌ನಿಂದ ಕೂದಲು ಬುಡದಿಂದಲೇ ಬಲಗೊಳ್ಳುತ್ತದೆ.

ಪೌಷ್ಟಿಕ ಆಹಾರ ಸೇವಿಸಿ

ಈ ಎಲ್ಲದರ ಜೊತೆಗೆ ನಾವು ಸೇವಿಸುವ ಆಹಾರವು ನಮ್ಮ ಕೂದಲಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಸಮತೋಲಿನ ಆಹಾರ ಸೇವನೆಯಿಂದ ಕೂದಲಿನ ಆರೋಗ್ಯವು ವೃದ್ಧಿಯಾಗುತ್ತದೆ. ಮಳೆಗಾಲದಲ್ಲಿ ಸಾಧ್ಯವಾದಷ್ಟು ಜಂಕ್‌ ಫುಡ್‌ಗಳಿಂದ ದೂರವಿರಿ. ತಾಜಾ ಆಹಾರಗಳನ್ನು ಹೆಚ್ಚು ಸೇವಿಸಿ. ನಿಮ್ಮ ಕೂದಲಿಗೆ ಹೊಳಪನ್ನು ಒದಗಿಸುವುದರಿಂದ ನಿಮ್ಮ ನಿಯಮಿತ ಆಹಾರದಲ್ಲಿ ಪ್ರೊಟೀನ್ ಮತ್ತು ವಿಟಮಿನ್ ಭರಿತ ಆಹಾರಗಳನ್ನು ಸೇರಿಸಿ. ಕೂದಲು ಬೆಳವಣಿಗೆಗೆ ಕೆಲವು ಉತ್ತಮ ಆಹಾರಗಳೆಂದರೆ ಹಣ್ಣುಗಳು, ಬೀಜಗಳು, ಪಾಲಕ್‌ ಮತ್ತು ಗೆಣಸು.

ಈ ಎಲ್ಲಾ ಕ್ರಮಗಳನ್ನು ಪಾಲಿಸುವ ಮೂಲಕ ಮಳೆಗಾಲದಲ್ಲಿ ನಿಮ್ಮ ಕೂದಲಿನ ಆರೈಕೆ ಮಾಡಿಕೊಳ್ಳಬಹುದು.