ಜಿಮ್‌ಗೆ ಹೋಗದೆ ಫಿಟ್ ಆಗ್ಬೇಕಾ; ಈ ಮೋಜಿನ ಚಟುವಟಿಕೆ ದೇಹಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಒಳ್ಳೇದು-health and fitness how to stay fit without going to gym best fun exercises to try at home mental health jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಜಿಮ್‌ಗೆ ಹೋಗದೆ ಫಿಟ್ ಆಗ್ಬೇಕಾ; ಈ ಮೋಜಿನ ಚಟುವಟಿಕೆ ದೇಹಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಒಳ್ಳೇದು

ಜಿಮ್‌ಗೆ ಹೋಗದೆ ಫಿಟ್ ಆಗ್ಬೇಕಾ; ಈ ಮೋಜಿನ ಚಟುವಟಿಕೆ ದೇಹಕ್ಕೆ ಮಾತ್ರವಲ್ಲ, ಮಾನಸಿಕ ಆರೋಗ್ಯಕ್ಕೂ ಒಳ್ಳೇದು

ಫಿಟ್‌ ಆಗಿರೋಕೆ ಜಿಮ್‌ಗೆ ಹೋಗಲೇಬೇಕು ಎಂದೇನಿಲ್ಲ. ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡರೆ ಸಾಕು. ಮನೆಯಲ್ಲೇ ಕೆಲವೊಂದು ಮೋಜಿನ ವ್ಯಾಯಾಮ, ಚಟುವಟಿಕೆ, ಹವ್ಯಾಸಗಳನ್ನು ಬೆಳೆಸಿಕೊಂಡರೆ ಆರೋಗ್ಯವಂತ ದೇಹ ನಿಮ್ಮದಾಗುತ್ತದೆ. ಜೊತೆಗೆ ಮಾನಸಿಕ ಆರೋಗ್ಯವೂ ಸುಧಾರಣೆಯಾಗುತ್ತದೆ.

ಜಿಮ್‌ಗೆ ಹೋಗದೆ ಫಿಟ್ ಆಗ್ಬೇಕಾ; ಈ ಮೋಜಿನ ಚಟುವಟಿಕೆಗಳನ್ನು ನಿತ್ಯ ಟ್ರೈ ಮಾಡಿ
ಜಿಮ್‌ಗೆ ಹೋಗದೆ ಫಿಟ್ ಆಗ್ಬೇಕಾ; ಈ ಮೋಜಿನ ಚಟುವಟಿಕೆಗಳನ್ನು ನಿತ್ಯ ಟ್ರೈ ಮಾಡಿ

ನಿತ್ಯ ಜೀವನದಲ್ಲಿ ಆರೋಗ್ಯ ಹಾಗೂ ಫಿಟ್‌ನೆಸ್‌ ಕಾಯ್ದುಕೊಳ್ಳಲು ಇನ್ನಿಲ್ಲದ ಕಸರತ್ತು ಮಾಡುವವರು ಹಲವರು. ಜಿಮ್‌ ಹೋಗುವುದು, ವ್ಯಾಯಾಮ ಮಾಡುವುದು ಅಥವಾ ಯೋಗ ಮಾಡುವುದನ್ನು ದೊಡ್ಡ ಕೆಲಸವೆಂದು ಭಾವಿಸಿ ಮಾಡುವರೂ ಇದ್ದಾರೆ. ದೇಹವನ್ನು ದಂಡಿಸುವ ಈ ಯಾವುದೇ ಕ್ರಿಯೆಗಳನ್ನು ಇಷ್ಟಪಟ್ಟು ಮಾಡದಿದ್ದರೆ, ನಿತ್ಯ ಜೀವನದಲ್ಲಿ ಖುಷಿಯ ಕ್ಷಣಗಳು ಕಡಿಮೆಯಾಗುತ್ತವೆ. ನಾವು ಬದುಕುವುದೇ ಖುಷಿಯ ದಿನಗಳಿಗಾಗಿ. ಆ ಖುಷಿಗಾಗಿ ದೇಹಕ್ಕೆ ಆರೋಗ್ಯ ಹಾಗೂ ಫಿಟ್‌ನೆಸ್‌ ಮುಖ್ಯ. ಅದಕ್ಕಾಗಿ ಒತ್ತಡದಿಂದ, ಬೇರೆ ದಾರಿ ಇಲ್ಲ ಎಂಬಂತೆ ಫಿಟ್‌ನೆಸ್‌ ದಿನಚರಿಯನ್ನು ಅಳವಡಿಸಿಕೊಳ್ಳುವುದು ಸರಿಕಾಣುವುದಿಲ್ಲ. ಖುಷಿ, ಲವಲವಿಕೆ, ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇದ್ದರೆ ಅದು ದೇಹಕ್ಕೆ ಒಪ್ಪಿಗೆಯಾಗುತ್ತದೆ.

ಆರೋಗ್ಯವಂತ ದೇಹಕ್ಕೆ ನಿತ್ಯ ಸಕ್ರಿಯವಾಗಿರುವುದು ಅಗತ್ಯ. ಇದಕ್ಕಾಗಿ ಕಟ್ಟುನಿಟ್ಟಾದ ಜಿಮ್‌ ವರ್ಕೌಟ್‌ ಅನುಸರಿಸುವುದು ಎಲ್ಲರಿಗೂ ಇಷ್ಟವಾಗುವುದಿಲ್ಲ. ವ್ಯಾಯಾಮವನ್ನು ಕೆಲಸವೆಂದು ಭಾವಿಸದೆ ಇಚ್ಛೆಯಿಂದ ಮಾಡಿದರೆ ಒಳ್ಳೆಯದು. ಹೀಗಾಗಿ ನಿಮಗೆ ವರ್ಕೌಟ್‌ ಮಾಡುವುದು ಕೆಲಸ ಅಥವಾ ಹೊರೆಯಂತೆ ಭಾಸವಾದರೆ, ಅದಕ್ಕಾಗಿ ಪರ್ಯಾಯ ಮಾರ್ಗಗಳಿವೆ.

ನೀವು ಖುಷಿಯಿಂದ, ಆನಂದಿಸಿಕೊಂಡು ಮಾಡಬಹುದಾದ ಪರಿಣಾಮಕಾರಿ ಚಟುವಟಿಕೆಗಳಿವೆ. ಮೋಜಿನೊಂದಿಗೆ, ನಗುತ್ತಾ ಈ ಚಟುವಟಿಕೆಗಳನ್ನು ಮಾಡಿದರೆ, ದೇಹವೂ ಆರೋಗ್ಯವಾಗಿರುತ್ತದೆ.

ಡಾನ್ಸ್‌ ಮಾಡಿ

ನಿಮಗೆ ತಿಳಿದಿರುವಂತೆ ಡಾನ್ಸ್‌ ಮಾಡುವಾಗ ಸಂಪೂರ್ಣ ದೇಹ ಮಾತ್ರವಲ್ಲದೆ ಮನಸ್ಸು ಕೂಡಾ ಸಕ್ರಿಯವಾಗಿರುತ್ತದೆ. ಇದೊಂದು ಒಳ್ಳೆಯ ತಾಲೀಮು. ಮಾಡೋದು ಕೂಡ ವಿನೋದಮಯವಾಗಿರುತ್ತದೆ. ನಿಮಗೆ ಇಷ್ಟವಾಗುವ ಶೈಲಿಯ ಡಾನ್ಸ್‌ ಮಾಡಬಹುದು. ನೃತ್ಯವು ಹೃದಯರಕ್ತನಾಳದ ಆರೋಗ್ಯ ಸುಧಾರಿಸುತ್ತದೆ. ನಿಮ್ಮ ಮನಸ್ಥಿತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಮನೆಯಲ್ಲೇ ನಿಮಗಿಷ್ಟದ ಹಾಡು ಹಾಕಿ ಮನಬಿಚ್ಚಿ ಕುಣಿಯಿರಿ. ನಿತ್ಯ ಇದೇ ಅಭ್ಯಾಸ ಮುಂದುವರೆಸಿ.

ಹೊರಾಂಗಣ ಚಟುವಟಿಕೆಗಳು

ಪ್ರಕೃತಿಯನ್ನು ಸವಿಯುತ್ತಾ ದೈಹಿಕ ಚಟುವಟಿಕೆಗಳಲ್ಲಿ ಭಾಗಿಯಾಗಿ, ಹೈಕಿಂಗ್, ಕಯಾಕಿಂಗ್ ಮತ್ತು ಸೈಕ್ಲಿಂಗ್ ಮೂಲಕ ಅಪರೂಪಕ್ಕೆ ಒಮ್ಮೆಯಾದರೂ ಹೊಸ ಪ್ರದೇಶಗಳಿಗೆ ಹೋಗಿ. ಟ್ರೆಕಿಂಗ್‌, ನಡಿಗೆ, ಜಾಗಿಂಗ್‌ನಲ್ಲಿ ಭಾಗಿಯಾಗಿ. ಸ್ಕಿಪ್ಪಿಂಗ್‌ ಕೂಡಾ ಮಾಡಬಹುದು. ಹೊಸ ಹೊಸ ಸ್ಥಳಗಳಿಗೆ ಭೇಡಿ ನೀಡಿ ಪರಿಸರವನ್ನು ಆನಂದಿಸಿ. ಮನೆ ಪಕ್ಕ ಪಾರ್ಕ್‌ ಅಥವಾ ನಿಸರ್ಗಧಾಮಗಳಿದ್ದರೆ ಅಲ್ಲಿಗೆ ಹೋಗಬಹುದು.

ಆಟಗಳನ್ನು ಆಡಿ

ದೇಹಕ್ಕೆ ವ್ಯಾಯಾಮಗಳು ಮಾತ್ರವೇ ಬದಲಾವಣೆ ತರಬಲ್ಲ ಚಟುವಟಿಕೆಗಳು ಅಲ್ಲ. ಕ್ರೀಡೆಗಳಿಂದಲೂ ಸಾಧ್ಯ. ಮನೆಯಲ್ಲೇ ಮಕ್ಕಳು ದೊಡ್ಡವರು ಸೇರಿ ನಿತ್ಯ ಆಡುವುದು, ಸ್ನೇಹಿತರೊಂದಿಗೆ ಸಣ್ಣ ಪುಟ್ಟ ಆಟಗಳಲ್ಲಿ ಭಾಗಿಯಾಗುವುದು, ಬ್ಯಾಡ್ಮಿಂಟನ್‌, ಟೆನಿಸ್, ಫುಟ್ಬಾಲ್, ಕ್ರಿಕೆಟ್‌, ಟೇಬಲ್‌ ಟೆನಿಸ್‌ ಹೀಗೆ ಹಲವು ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು. ಇವು ಮನಸ್ಸು ಹಾಗೂ ದೇಹವನ್ನು ರಿಫ್ರೆಶ್‌ ಮಾಡುತ್ತದೆ.

ಹವ್ಯಾಸಗಳನ್ನು ಬೆಳೆಸಿಕೊಳ್ಳಿ

ಮನೆಯಲ್ಲೇ ಬೋರಾಗುತ್ತದೆ ಎಂದು ಸುಮ್ಮನೆ ಕುಳಿತುಕೊಳ್ಳುವ ಬದಲಿಗೆ; ತೋಟಗಾರಿಕೆ, ಕ್ರಾಫ್ಟ್‌, ಕ್ಲೇ ಮಾಡೆಲಿಂಗ್‌ ಹೀಗೆ ವಿವಿಧ ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ಗಾರ್ಡನಿಂಗ್‌ ಇಷ್ಟವಾದರೆ ಗಿಡ ನೆಡುವಿಕೆ, ಅಗೆಯುವುದು ಅಥವಾ ಕಳೆ ತೆಗೆಯುವಂತಹ ಕೆಲಸ ಮಾಡಿ. ದೇಹಕ್ಕೆ ಚಲನೆ ಹಾಗೂ ವ್ಯಾಯಾಮ ಸಿಗುವ ಕೆಲಸ ಮಾಡಿ.

ತಲೆಗೆ ಕೆಲಸ ಕೊಡುವ ಚಟುವಟಿಕೆಗಳು

ಗೆಳೆಯರ ಜೊತೆಗೆ ಹಾಸ್ಯ ವಿನಿಮಯ, ಪ್ರಶ್ನೆಗಳ ವಿನಿಮಯ ಮಾಡಿಕೊಂಡು ಎಂಜಾಯ್‌ ಮಾಡಿ. ಕಾರಣ ಇದ್ದರೂ ಇಲ್ಲದಿದ್ದರೂ ಜೋರಾಗಿ ನಗುವ ಚಟುವಟಿಕೆಗಳಲ್ಲಿ ಭಾಗಿಯಾಗಿ. ಮನೆಯವರು ಅಥವಾ ಸ್ನೇಹಿತರೊಂದಿಗೆ ಬ್ರೇನ್‌ ಟೀಸರ್‌, ಗಣಿತದ ಮೋಜು ಇಂತಹ ಚಟುವಟಿಕೆ ನಡೆಸಿ. ಇವು ಮಾನಸಿಕ ನೆಮ್ಮದಿ ಹೆಚ್ಚಿಸುತ್ತದೆ. ಮನಸ್ಸು ಖುಷಿಯಾಗಿದ್ದರೆ ದೇಹಕ್ಕೂ ಒಳ್ಳೆಯದು.

ಅಭ್ಯಾಸಗಳನ್ನು ಬದಲಿಸಿಕೊಳ್ಳಿ

ನಿತ್ಯ ಜೀವನದಲ್ಲಿ ಕೆಲವೊಂದು ಕೆಲಸಗಳಿಗೆ ಯಂತ್ರಗಳನ್ನು ಅವಲಂಬಿಸುತ್ತೇವೆ. ಯಂತ್ರಗಳು ನಮ್ಮ ಕೆಲಸವನ್ನು ಸಲಭಗೊಳಿಸುವ ಜೊತೆಯಲ್ಲಿ, ದೇಹಕ್ಕೆ ಸೋಮಾರಿತನವನ್ನು ಉಡುಗೊರೆಯಾಗಿ ನೀಡುತ್ತವೆ. ಹೀಗಾಗಿ ಮನೆಯಲ್ಲಿ ಲಿಫ್ಟ್‌ ಬದಲಿಗೆ ಮೆಟ್ಟಿಲುಗಳನ್ನು ಬಳಸಿ, ಗ್ರೈಂಡರ್‌ ಬದಲಿಗೆ ಕೈಯಲ್ಲಿ ರುಬ್ಬುವ ಹವ್ಯಾಸ ಬೆಳೆಸಿ, ಮನೆಯ ಅಕ್ಕ ಪಕ್ಕ ಹೋಗುವಾಗ ವಾಹನ ಬದಲು ನಡೆದುಕೊಂಡೇ ಹೋಗಿ. ಇಂಥಾ ಸಣ್ಣಪುಟ್ಟ ಬದಲಾವಣೆಗಳು ದೇಹಕ್ಕೆ ಆರೋಗ್ಯ ಕೊಡುತ್ತದೆ.

mysore-dasara_Entry_Point