ಪ್ರೊಟೀನ್ ಸೇವನೆ ಅತಿಯಾದ್ರೆ ದೇಹಕ್ಕೆ ವಿಷವಾಗುವುದು ಖಂಡಿತ; ಇದರಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿವು
ದೇಹಕ್ಕೆ ಅಗತ್ಯ ಪೋಷಕಾಂಶಗಳಲ್ಲಿ ಪ್ರೊಟೀನ್ ಪ್ರಮುಖವಾದದ್ದು. ಹಾಗಂತ ಪ್ರೊಟೀನ್ ಸೇವನೆ ಅತಿಯಾದ್ರೆ ಅಪಾಯ ಖಂಡಿತ ತಪ್ಪಿದ್ದಲ್ಲ. ಪ್ರೊಟೀನ್ ಜೊತೆಗೆ ಇತರ ಪೋಷಕಾಂಶಗಳ ಸಮತೋಲನವು ಅಷ್ಟೇ ಮುಖ್ಯ. ಪ್ರೊಟೀನ್ ಸೇವನೆ ಅತಿಯಾದ್ರೆ ಉಂಟಾಗುವ ಸಮಸ್ಯೆಗಳು ಹೀಗಿವೆ ನೋಡಿ. ಪ್ರೊಟೀನ್ ಸೇವನೆಗೂ ಮುನ್ನ ಪ್ರಮಾಣದ ಬಗ್ಗೆ ಗಮನ ಹರಿಸಲು ಮರೆಯದಿರಿ.
ಮಾನವನ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳಲ್ಲಿ ಪ್ರೊಟೀನ್ ಕೂಡ ಒಂದು. ಪ್ರೊಟೀನ್ ಕೊರತೆಯಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಕಾಡಬಹುದು. ಇದು ರೋಗನಿರೋಧಕ ಶಕ್ತಿಯನ್ನೂ ಕಡಿಮೆ ಮಾಡುತ್ತದೆ. ಪ್ರೊಟೀನ್ ಕೊರತೆಯಿಂದ ಕೂದಲು ಹಾಗೂ ಚರ್ಮದ ಅಂದಗೆಡುತ್ತದೆ, ಸ್ನಾಯುವಿನ ದ್ರವ್ಯರಾಶಿಯ ನಷ್ಟ ಮತ್ತು ಆಯಾಸಕ್ಕೂ ಇದು ಕಾರಣವಾಗುತ್ತದೆ. ಆದರೆ ಪ್ರೊಟೀನ್ ಸೇವನೆ ಅತಿಯಾದರೂ ಸಮಸ್ಯೆ ತಪ್ಪಿದ್ದಲ್ಲ. ನೀವು ಪ್ರೊಟೀನ್ ಅಂಶ ಇರುವ ಆಹಾರವನ್ನು ಅತಿಯಾಗಿ ಸೇವಿಸುತ್ತಿದ್ದು, ಕಾರ್ಬೋಹೈಡ್ರೇಟ್, ವಿಟಮಿನ್, ಖನಿಜಾಂಶ ಹಾಗೂ ನಾರಿನಾಂಶದಂತಹ ಇತರ ಪೋಷಕಾಂಶಗಳೊಂದಿಗೆ ಅದನ್ನು ಸಮತೋಲನಗೊಳಿಸಲು ವಿಫಲವಾದರೆ ಹಲವು ತೊಂದರೆಗಳು ಕಾಡಬಹುದು.
ಹೆಚ್ಚು ಪ್ರೊಟೀನ್ ಅಂಶ ಹೊಂದಿರುವ ಆಹಾರಗಳು ನಿರ್ಜಲೀಕರಣವನ್ನು ಉಂಟು ಮಾಡಬಹುದು. ಆ ಕಾರಣಕ್ಕೆ ಅದರೊಂದಿಗೆ ಸಾಕಷ್ಟು ನಾರಿನಾಂಶ ಹಾಗೂ ನೀರಿನ ಸೇವನೆಯೂ ಅಗತ್ಯ. ಆಹಾರದಲ್ಲಿ ಪ್ರೊಟೀನ್ ಅಂಶ ಹೆಚ್ಚಿದ್ದು, ನಾರಿನಾಂಶ ಕಡಿಮೆ ಇದ್ದರೆ ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು ಎದುರಾಗಬಹುದು. ಹೆಚ್ಚಿನ ಪ್ರೊಟೀನ್ ಅಂಶ ಇರುವ ಆಹಾರಗಳ ಸೇವನೆಯಿಂದ ಮೂತ್ರದ ಮೂಲಕ ಕ್ಯಾಲ್ಸಿಯಂ ಅಂಶವು ಹೊರ ಹೋಗಬಹುದು.
ದೇಹಕ್ಕೆ ಪ್ರೊಟೀನ್ ಅವಶ್ಯವಾಗಿದ್ದರೂ ಇದರ ಪ್ರಮಾಣ ಹೆಚ್ಚಾದರೆ ಕೆಲವು ಸಂಭಾವ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ಎನ್ನುತ್ತಾರೆ ಪೌಷ್ಟಿಕ ತಜ್ಞೆ ಜೂಹಿ ಕಪೂರ್.
ಮೂತ್ರಪಿಂಡದ ಸಮಸ್ಯೆ
ಅತಿಯಾದ ಪ್ರೊಟೀನ್ ಸೇವನೆಯು ಮೂತ್ರಪಿಂಡಗಳ ಮೇಲೆ ಒತ್ತಡವನ್ನು ಉಂಟು ಮಾಡಬಹುದು. ಈ ಮೊದಲೇ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಸಮಸ್ಯೆ ಇನ್ನಷ್ಟು ಹೆಚ್ಚಲು ಕಾರಣವಾಗಬಹುದು.
ನಿರ್ಜಲೀಕರಣ
ಪ್ರೊಟೀನ್ ಅಂಶವುಳ್ಳ ಆಹಾರಗಳ ಸೇವನೆ ಅತಿಯಾದ್ರೆ ಮೂತ್ರದ ವಿರ್ಸಜನೆಯ ಪ್ರಮಾಣವು ಏರಿಕೆಯಾಗಿದೆ, ದೇಹದಲ್ಲಿ ನೀರಿನ ಕೊರತೆ ಉಂಟಾಗಬಹುದು. ಆಗ ದೇಹಕ್ಕೆ ಅಗತ್ಯವಿರುವಷ್ಟು ನೀರು ಕುಡಿಯದೇ ಇದ್ದರೆ ನಿರ್ಜಲೀಕರಣ ಸಮಸ್ಯೆ ಕಾಡಬಹುದು.
ಪೋಷಕಾಂಶದ ಅಸಮತೋಲನ
ಪ್ರೊಟೀನ್ ಮೇಲೆ ಗಮನ ಹರಿಸಿ ಭರದಲ್ಲಿ ಕಾರ್ಬೋಹೈಡ್ರೇಟ್, ನಾರಿನಾಂಶ, ವಿಟಮಿನ್ ಹಾಗೂ ಖನಿಜಾಂಶಗಳಂತಹ ಇತರ ಅಗತ್ಯ ಪೋಷಕಾಂಶಗಳ ಸೇವನೆಯನ್ನು ನಿರ್ಲಕ್ಷಿಸಬಹುದು. ಇದರಿಂದ ದೇಹದಲ್ಲಿ ಪೋಷಕಾಂಶಗಳ ಅಸಮತೋಲನ ಉಂಟಾಗಬಹುದು.
ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳು
ದೇಹದಲ್ಲಿ ಪ್ರೊಟೀನ್ ಅಂಶ ಅಧಿಕವಾಗುವುದರಿಂದ ಮಲಬದ್ಧತೆ ಸೇರಿದಂತೆ ಇತರ ಜೀರ್ಣಕ್ರಿಯೆಗೆ ಸಂಬಂಧಿಸಿದ ಇತರ ಸಮಸ್ಯೆಗಳೂ ಉಂಟಾಗಬಹುದು.
ಮೂಳೆಗಳ ಆರೋಗ್ಯ
ಅತಿಯಾದ ಪ್ರೊಟೀನ್ ಸೇವನೆಯು ಮೂತ್ರದ ಮೂಲಕ ಕ್ಯಾಲ್ಸಿಯಂ ನಷ್ಟಕ್ಕೆ ಕಾರಣವಾಗುತ್ತದೆ. ಇದರಿಂದ ಕಾಲಾನಂತರದಲ್ಲಿ ಮೂಳೆಗಳ ಆರೋಗ್ಯದ ಮೇಲೆ ಪ್ರಭಾವ ಬೀರಬಹುದು.
ತೂಕ ಹೆಚ್ಚಳವಾಗಬಹುದು
ಅತಿಯಾದ ಕ್ಯಾಲೊರಿ ಅಂಶದ ಸೇವನೆ ಹಾಗೂ ಪ್ರೊಟೀನ್ ಅಂಶವುಳ್ಳ ಆಹಾರಗಳ ಸೇವನೆಯು ತೂಕ ಹೆಚ್ಚಳಕ್ಕೆ ಕಾರಣವಾಗಬಹುದು. ಹಾಗಾಗಿ ಕ್ಯಾಲೊರಿ ಸೇವನೆಯ ಪ್ರಮಾಣದ ಮೇಲೂ ಗಮನ ಹರಿಸಬೇಕು.
ಇದನ್ನೂ ಓದಿ
ಸಕ್ಕರೆಗೆ ಪರ್ಯಾಯವೇ ಬೆಲ್ಲ, ಜೇನುತುಪ್ಪ; ಪೌಷ್ಟಿಕ ತಜ್ಞರ ಅಭಿಪ್ರಾಯ ಹೀಗಿದೆ
ಆಧುನಿಕ ಬದುಕು ಹಾಗೂ ಜಡ ಜೀವನಶೈಲಿಯ ಅಪಾಯದ ನಡುವೆ ನಾವಿಂದು ಬದುಕು ಸಾಗಿಸುತ್ತಿದ್ದೇವೆ. ಹೆಚ್ಚುತ್ತಿರುವ ದೇಹತೂಕ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಜನರಲ್ಲಿ ತಿನ್ನುವ ಆಹಾರದ ಮೇಲೆ ಹೆಚ್ಚು ಜಾಗೃತರಾಗುವಂತೆ ಮಾಡುತ್ತಿದೆ. ಸಂಸ್ಕರಿಸಿದ ಸಕ್ಕರೆ, ಟ್ರಾನ್ಸ್ ಕೊಬ್ಬು ಹಾಗೂ ಜಂಕ್‌ಫುಡ್‌ನಂತಹ ಆಹಾರಗಳ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವಿದೆ. ಆ ಕಾರಣಕ್ಕೆ ಕೆಲವು ಆಹಾರ ಪದಾರ್ಥಗಳ ರುಚಿ ಹೆಚ್ಚಿಸಲು ಹಾಗೂ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಹಲವರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಇದಕ್ಕೆ ಪರ್ಯಾಯವಾಗಿ ಬೆಲ್ಲ ಅಥವಾ ಜೇನುತುಪ್ಪ ಸೇವಿಸುವುದು ಸಾಮಾನ್ಯವಾಗಿದೆ. ಹಾಗಾದರೆ ಸಕ್ಕರೆಯ ಬದಲು ಬೆಲ್ಲ, ಜೇನುತುಪ್ಪ ಸೇವಿಸುವುದು ಆರೋಗ್ಯಕ್ಕೆ ಉತ್ತಮವೇ, ಈ ಬಗ್ಗೆ ತಜ್ಞರ ಅಭಿಪ್ರಾಯ ಹೀಗಿದೆ.
ವಿಭಾಗ