Monsoon Health: ಮಳೆಗಾಲದಲ್ಲಿ ಕಾಡುವ ಉಸಿರಾಟದ ಸಮಸ್ಯೆಗಳಿಂದ ದೂರವಿರಲು ತಜ್ಞರ ಸಲಹೆ ಹೀಗಿದೆ; ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health: ಮಳೆಗಾಲದಲ್ಲಿ ಕಾಡುವ ಉಸಿರಾಟದ ಸಮಸ್ಯೆಗಳಿಂದ ದೂರವಿರಲು ತಜ್ಞರ ಸಲಹೆ ಹೀಗಿದೆ; ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಿ

Monsoon Health: ಮಳೆಗಾಲದಲ್ಲಿ ಕಾಡುವ ಉಸಿರಾಟದ ಸಮಸ್ಯೆಗಳಿಂದ ದೂರವಿರಲು ತಜ್ಞರ ಸಲಹೆ ಹೀಗಿದೆ; ಪಾಲಿಸಿ, ಆರೋಗ್ಯ ಕಾಪಾಡಿಕೊಳ್ಳಿ

Tips For Respiratory Problems ಮಳೆಗಾಲದಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಶೀತ, ಅಸ್ತಮಾ, ನ್ಯುಮೋನಿಯಾ ಹಾಗೂ ಬ್ರಾಂಕೈಟಿಸ್‌ನಂತಹ ಸಮಸ್ಯೆಗಳು ಹೆಚ್ಚಾಗಿ ಕಾಡುತ್ತವೆ. ಇದಕ್ಕೆ ಕಾರಣಗಳು ಹಲವಿರಬಹುದು. ಆದರೆ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಅವುಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ವೈದ್ಯರು.

ಮಳೆಗಾಲದಲ್ಲಿ ಕಾಡುವ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಈ ಸಲಹೆ ಪಾಲಿಸಿ (ಸಾಂಕೇತಿಕ ಚಿತ್ರ)
ಮಳೆಗಾಲದಲ್ಲಿ ಕಾಡುವ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ದೂರವಿರಲು ಈ ಸಲಹೆ ಪಾಲಿಸಿ (ಸಾಂಕೇತಿಕ ಚಿತ್ರ)

ಮಳೆಗಾಲದಲ್ಲಿ ಆಹಾರ, ನೀರು, ವಾತಾವರಣದ ಕಾರಣದಿಂದ ಹಲವು ಸಮಸ್ಯೆಗಳು ಬಾಧಿಸುವುದು ಸಹಜ. ಜ್ವರ, ಕೆಮ್ಮು, ನೆಗಡಿಯಂತಹ ಆರೋಗ್ಯ ಸಮಸ್ಯೆಗಳ ಜೊತೆಗೆ ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗುತ್ತವೆ. ಮಳೆಗಾಲದಲ್ಲಿ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಲು ಹಲವು ಕಾರಣಗಳಿವೆ.

ʼಹೆಚ್ಚಿದ ಆರ್ದ್ರತೆ, ಕಲುಷಿತ ವಾತಾವರಣ, ಗಾಳಿಯಲ್ಲಿನ ಸೋಂಕುಗಳು, ನೀರಿನಿಂದ ಹರಡುವ ರೋಗಗಳು, ಮಾಲಿನ್ಯ ಈ ಎಲ್ಲಾ ಅಂಶಗಳು ಉಸಿರಾಟದ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗಬಹುದುʼ ಎನ್ನುತ್ತಾರೆ ತಜ್ಞರು.

ʼಮಾನ್ಸೂನ್‌ ಋತುವಿನಲ್ಲಿ ಆರ್ದ್ರತೆಯ ಮಟ್ಟ ಹೆಚ್ಚಿರುತ್ತದೆ. ಇದು ಶೀಲಿಂಧ್ರ ಸೋಂಕು, ಧೂಳು, ಅಲರ್ಜಿ ಅಂಶಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಅಲರ್ಜಿ ಅಂಶಗಳು ಆಸ್ತಮಾ, ಅಲರ್ಜಿಕ್‌ ರಿನಿಟಿಸ್‌ನಂತಹ ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದುʼ ಎನ್ನುತ್ತಾರೆ ಪುಣೆ ಡಿಪಿಯು ಖಾಸಗಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರಾದ ಡಾ. ರಾಹುಲ್‌ ಕೇಂದ್ರೆ.

ಅವರ ಪ್ರಕಾರ ಇನ್ಫ್ಲುಯೆಂಜಾ, ಸಾಮಾನ್ಯ ಶೀತ, ಅಸ್ತಮಾ, ನ್ಯುಮೋನಿಯಾ ಹಾಗೂ ಬ್ರಾಂಕೈಟಿಸ್‌ ಇವು ಮಳೆಗಾಲದಲ್ಲಿ ಕಾಡುವ ಸಾಮಾನ್ಯ ಉಸಿರಾಟದ ಸಮಸ್ಯೆಗಳಾಗಿವೆ.

ಫ್ಲೂ ಎಂದು ಕರೆಯುವ ಇನ್ಫ್ಲುಯೆಂಜಾವು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಮಳೆಗಾಲದಲ್ಲಿ ಜನನಿಬಿಡದ ಪ್ರದೇಶಗಳಲ್ಲಿ ಇದು ಸುಲಭವಾಗಿ ಹರಡುತ್ತದೆ. ತಾಪಮಾನದ ಏರಿಳಿತ ಹಾಗೂ ತೇವಾಂಶದ ಹೆಚ್ಚಳವು ವೈರಸ್‌ ವ್ಯಕ್ತಿಯಿಂದ ವ್ಯಕ್ತಿಗೆ ಹರಡಲು ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆʼ ಎನ್ನುತ್ತಾರೆ ವೈದ್ಯರು.

ʼನಿಕಟ ಸಂಪರ್ಕ ಹಾಗೂ ಕಲುಷಿತ ನೀರು, ಆಹಾರಗಳ ಸೇವನೆಯು ಸಾಮಾನ್ಯ ಶೀತಕ್ಕೆ ಕಾರಣವಾಗುತ್ತದೆ. ಮಳೆಗಾಲದಲ್ಲಿ ಜನರು ಹೆಚ್ಚು ಮನೆಯೊಳಗೆ ಇರುವುದರಿಂದ ಇದು ಒಬ್ಬರಿಂದ ಒಬ್ಬರಿಗೆ ಬೇಗನೆ ವೈರಸ್‌ ಹರಡಲು ಸುಲಭವಾಗುತ್ತದೆ ಎಂದು ಡಾ. ಕೇಂದ್ರೆ ಹೇಳುತ್ತಾರೆ.

ʼಶೀಲಿಂಧ್ರ ಬೆಳವಣಿಗೆ, ಒದ್ದೆಯಾದ ಪ್ರದೇಶಗಳಿಂದ ಉಂಟಾಗುವ ಅಲರ್ಜಿ ವ್ಯಕ್ತಿಗಳಲ್ಲಿ ಅಸ್ತಮಾ ದಾಳಿಯನ್ನು ಪ್ರಚೋದಿಸಬಹುದುʼ ಎನ್ನುವುದು ವೈದ್ಯರ ಅಭಿಪ್ರಾಯ.

ಮಳೆಗಾಲದಲ್ಲಿ ನಿಂತ ನೀರು, ಹೆಚ್ಚಿದ ತೇವಾಂಶವು ಸೊಳ್ಳೆಗಳು ಮತ್ತು ಇತರ ಕೀಟಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ ಹಾಗೂ ಇದು ನ್ಯೂಮೋನಿಯಾವನ್ನು ಉಂಟು ಮಾಡುವ ರೋಗಗಳನ್ನು ಹರಡುತ್ತದೆ. ಇದು ಬ್ರಾಂಕೈಟಿಸ್‌ ಬೆಳವಣಿಗೆಯ ಅಪಾಯವನ್ನು ಹೆಚ್ಚಿಸಬಹುದುʼ ಎನ್ನುತ್ತಾರೆ ವೈದ್ಯರು.

ಮಳೆಗಾಲದಲ್ಲಿ ಹೆಚ್ಚುವ ಉಸಿರಾಟದ ಕಾಯಿಲೆಗಳ ಅಪಾಯವನ್ನು ತಡೆಗಟ್ಟಲು ಅಥವಾ ಕಡಿಮೆ ಮಾಡಲು ನೆರವಾಗುವ ಕೆಲವು ಸಲಹೆಗಳನ್ನು ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ ಡಾ. ಕೇಂದ್ರೆ.

ಉತ್ತಮ ನೈಮರ್ಲ್ಯ ಅಭ್ಯಾಸ

* ಆಗಾಗ ಶುದ್ಧ ನೀರು, ಸೋಪ್‌ ಅಥವಾ ಹ್ಯಾಂಡ್‌ ವಾಶ್‌ನಿಂದ ಕೈ ತೊಳೆಯುತ್ತಿರಿ. ಅದರಲ್ಲೂ ಊಟ, ತಿಂಡಿ ಮಾಡುವ ಮುನ್ನ ಕೈ ತೊಳೆಯಲು ಮರೆಯದಿರಿ. ನಿಮ್ಮ ಮುಖ, ಬಾಯಿ ಹಾಗೂ ಮೂಗನ್ನು ಮುಟ್ಟುವ ಮುನ್ನ ಕೈ ತೊಳೆಯಿರಿ. ಸೋಪ್‌ ಇಲ್ಲದ ಸಮಯದಲ್ಲಿ ಹ್ಯಾಂಡ್‌ ಸ್ಯಾನಿಟೈಸರ್‌ ಬಳಸಲು ಮರೆಯದಿರಿʼ ಎಂದು ಅವರು ಹೇಳುತ್ತಾರೆ.

ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿರಿಸಿಕೊಳ್ಳುವುದು

ʼನೀವು ವಾಸಿಸುವ ಹಾಗೂ ಕೆಲಸ ಮಾಡುವ ಪರಿಸರವನ್ನು ಸ್ವಚ್ಛವಾಗಿ ಹಾಗೂ ಒಣಗಿಸಿ ಇರಿಸಿಕೊಳ್ಳಿ. ಮನೆಯ ಸುತ್ತ ನೀರು ನಿಲ್ಲದಂತೆ ನೋಡಿಕೊಳ್ಳಿ. ಇದರಿಂದ ಸೊಳ್ಳೆ, ಸೂಕ್ಷ್ಮ ಜೀವಿಗಳು ಉತ್ಪತ್ತಿಯಾಗುವುದನ್ನು ತಪ್ಪಿಸಿ. ವೈರಸ್‌ಗಳು ಹಾಗೂ ಬ್ಯಾಕ್ಟೀರಿಯಾಗಳ ಹರಡುವಿಕೆಯನ್ನು ಕಡಿಮೆ ಮಾಡಲು ಮನೆಯ ಗೋಡೆ, ಬಾಗಿಲಿನ ಮೇಲ್ಮೈ, ಹಿಡಿಕೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ ಮತ್ತು ಸೋಂಕು ರಹಿತಗೊಳಿಸಿ.

ಜನಜಂಗುಳಿ ಇರುವ ಜಾಗಕ್ಕೆ ಹೋಗದಿರಿ

ಮಳೆಗಾಲದಲ್ಲಿ ಹೆಚ್ಚು ಜನರಿರುವ ಜಾಗದಲ್ಲಿ ಓಡಾಡುವುದನ್ನು ತಪ್ಪಿಸಬೇಕು. ಇದರಿಂದ ರೋಗಾಣುಗಳು ಹರಡುವ ಸಾಧ್ಯತೆ ಹೆಚ್ಚಿದೆ. ಒಂದು ಹೆಚ್ಚು ಜನ ಇರುವ ಜಾಗದಲ್ಲಿ ಓಡಾಡುವ ಸಂದರ್ಭ ಬಂದರೆ ಮಾಸ್ಕ್‌ ಧರಿಸಿ, ದೈಹಿಕ ಅಂತರ ಕಾಪಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ನಿರ್ಜಲೀಕರಣ ಉಂಟಾಗದಂತೆ ನೋಡಿಕೊಳ್ಳಿ

ಮಳೆಗಾಲದಲ್ಲೂ ಸಾಕಷ್ಟು ನೀರು ಕುಡಿಯುವುದು ಅವಶ್ಯ. ಶ್ವಾಸಕೋಶ ವ್ಯವಸ್ಥೆಯಲ್ಲಿ ತೇವಾಂಶ ಉಳಿಸಿಕೊಳ್ಳಲು, ಶ್ವಾಸನಾಳ ಒಣಗಿದಂತೆ, ಕಿರಿಕಿರಿ ಉಂಟಾಗುವುದನ್ನು ತಪ್ಪಿಸಲು ಸಾಕಷ್ಟು ನೀರು ಕುಡಿಯುವುದು ಅವಶ್ಯ. ಅಲ್ಲದೆ ಸೋಂಕು ನಿವಾರಣೆಗೂ ಇದು ಅಗತ್ಯ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ

ಆರೋಗ್ಯಕರ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ. ಹಣ್ಣು, ತರಕಾರಿ, ಧಾನ್ಯಗಳ ಸೇವನೆಯೊಂದಿಗೆ ಸಮತೋಲಿತ ಡಯೆಟ್‌ ಕ್ರಮವನ್ನು ಪಾಲಿಸಿ. ಪ್ರತಿದಿನ ವ್ಯಾಯಾಮ ಮಾಡುವುದು, ಸಮರ್ಪಕ ನಿದ್ದೆ, ಒತ್ತಡ ನಿರ್ವಹಣೆ ಇದು ಕೂಡ ಬಹಳ ಮುಖ್ಯ. ಶ್ವಾಸಕೋಶದ ಸೋಂಕಿನಿಂದ ದೇಹವನ್ನು ರಕ್ಷಿಸಿಕೊಳ್ಳಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯʼ ಎನ್ನುತ್ತಾರೆ ವೈದ್ಯರು.

ಅಲರ್ಜಿನ್‌ಗಳಿಗೆ ಒಡ್ಡಿಕೊಳ್ಳುವುದನ್ನು ತಪ್ಪಿಸಿ

ಅಸ್ತಮಾ ಅಥವಾ ಅಲರ್ಜಿ ಸಮಸ್ಯೆ ಇದ್ದವರು ಮಳೆಗಾಲದಲ್ಲಿ ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಅವಶ್ಯ ಎಂದು ಡಾ. ಕೇಂದ್ರೆ ಹೇಳುತ್ತಾರೆ. ತೇವಾಂಶದಲ್ಲಿ ಹೆಚ್ಚಿದ ಶೀಲಿಂಧ್ರ ಇರುವ ಪ್ರದೇಶಗಳು, ಧೂಳಿನ ಪರಿಸರಗಳಿಂದ ದೂರವಿರಿ. ಏರ್‌ ಪ್ಯೂರಿಫೈಯರ್‌ಗಳನ್ನು ಬಳಸಿ ಮತ್ತು ಸಾಧ್ಯವಾದರೆ ಅಲರ್ಜಿನ್‌ ಫಿಲ್ಟರ್‌ ಮಾಡುವ ಮಾಸ್ಕ್‌ಗಳನ್ನು ಧರಿಸಿ.

ಲಸಿಕೆ ಹಾಕಿಸಿ

ಇನ್ಫ್ಲುಯೆಂಜಾದಂತಹ ಕೆಲವು ಉಸಿರಾಟದ ಸಮಸ್ಯೆಗಳಿಗೆ ಲಸಿಕೆಗಳು ರಕ್ಷಣೆ ನೀಡಬಹುದು. ಆರೋಗ್ಯ ತಜ್ಞರನ್ನು ಸಂಪರ್ಕಿಸಿ, ಸೂಕ್ತ ಲಸಿಕೆ ಪಡೆಯಿರಿ ಎಂದು ವೈದ್ಯರು ಸಲಹೆ ನೀಡುತ್ತಾರೆ.

ಮಳೆಗಾಲದಲ್ಲಿ ಉಸಿರಾಟ ಮಾತ್ರವಲ್ಲ, ಯಾವುದೇ ರೀತಿ ಸಮಸ್ಯೆ ಕಾಣಿಸಿಕೊಂಡರು ವೈದ್ಯರ ಬಳಿ ಹೋಗುವುದನ್ನು ನಿರ್ಲಕ್ಷ್ಯ ಮಾಡದಿರಿ. ಸಾಧ್ಯವಾದಷ್ಟು ಸ್ವಯಂ ಔಷಧಿ ತೆಗೆದುಕೊಳ್ಳುವುದಕ್ಕೆ ಕಡಿವಾಣ ಹಾಕಿ. ಅದರಲ್ಲೂ ಉಸಿರಾಟಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲ.

Whats_app_banner