Guillain Barre Syndrome: ಗಿಲ್ಲೆನ್ ಬ್ಯಾರಿ ಸಿಂಡ್ರೋಮ್ ಆತಂಕ, ಪೆರುವಿನಲ್ಲಿ ತುರ್ತು ಪರಿಸ್ಥಿತಿ, ಏನಿದು ಕಾಯಿಲೆ, ಲಕ್ಷಣಗಳೇನು
Guillain-Barre Syndrome: ಪೆರು ದೇಶದಲ್ಲಿ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಪ್ರಕರಣಗಳು ಹೆಚ್ಚಾಗಿದ್ದು, ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಲಾಗಿದೆ. ಏನಿದು ಕಾಯಿಲೆ, ರೋಗ ಲಕ್ಷಣಗಳೇನು? ಚಿಕಿತ್ಸೆ ಇರುವುದೇ? ಇತ್ಯಾದಿ ವಿವರ ಇಲ್ಲಿದೆ.
ಪೆರು ದೇಶದಲ್ಲಿ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ (ಇದನ್ನೂ ಗಿಲನ್ ಬಾ ಸಿಂಡ್ರೋಮ್ ಎಂದೂ ಉಚ್ಚರಿಸಲಾಗುತ್ತದೆ ) ಪ್ರಕರಣಗಳು ಗಮನಾರ್ಹ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದು, ಪೆರುವಿಯನ್ ಸರಕಾರವು 90 ದಿನಗಳ ಕಾಲ ರಾಷ್ಟ್ರವ್ಯಾಪಿ ಆರೋಗ್ಯ ನೈರ್ಮಲ್ಯ ತುರ್ತು ಪರಿಸ್ಥಿತಿ ಘೋಷಿಸಿದೆ. ಸೋಂಕಿತರ ಪ್ರಕರಣಗಳನ್ನು ಕಡಿಮೆ ಮಾಡುವುದು, ಜನರಿಗೆ ಮತ್ತು ಆರೋಗ್ಯ ಕಾರ್ಯಕರ್ತರಿಗೆ ತಿಳುವಳಿಕೆ ನೀಡುವುದು ಸೇರಿದಂತೆ ಒಟ್ಟಾರೆ ಈ ಸಿಂಡ್ರೋಮ್ ವಿರುದ್ಧ ಹೋರಾಡಲು 327 ಕೋಟಿ ಡಾಲರ್ ಅನ್ನು ಸರಕಾರ ವಿನಿಯೋಗಿಸಲು ನಿರ್ಧರಿಸಿದೆ.
ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಬಾಧಿತ ರೋಗಿಗಳ ಆರೈಕೆ ಹಲವು ತುರ್ತು ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ. ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ ಮತ್ತು ಹ್ಯೂಮನ್ ಅಲ್ಬುಮಿನ್ ಸಂಗ್ರಹವೂ ಈ ತುರ್ತು ಕ್ರಮಗಳಲ್ಲಿ ಸೇರಿದೆ. ಜತೆಗೆ, ಈ ಅಸ್ವಸ್ಥತೆಗೆ ಕಾರಣವಾಗುವ ಜೈವಿಕ ಅಂಶಗಳನ್ನು ಗುರುತಿಸಲು ಕೂಡ ಈ ಹಣ ಬಳಕೆಯಾಗಲಿದೆ. ತುರ್ತು ಪರಿಸ್ಥಿತಿಯಲ್ಲಿ ರೋಗಿಗಳಿಗೆ ಆಮ್ಲಜನಕ ಪೂರೈಕೆ ಇತ್ಯಾದಿ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಎಕಾನಮಿಕ್ ಟೈಮ್ಸ್ ವರದಿ ತಿಳಿಸಿದೆ. ಪೆರುವಿನ ಪ್ರತಿ ಪ್ರಾಂತ್ಯಗಳಲ್ಲಿಯೂ ಕನಿಷ್ಠ 18 ಗಿಲ್ಲೆನ್ ಬ್ಯಾರಿ ಸಿಂಡ್ರೋಮ್ ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆಯ ಅಂಕಿಅಂಶಗಳು ತಿಳಿಸಿವೆ.
ಏನಿದು ಗಿಲ್ಲೆನ್-ಬ್ಯಾರಿ ಸಿಂಡ್ರೋಮ್?
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂರೋಲಾಜಿಕಲ್ ಡಿಸಾರ್ಡರ್ಸ್ ಆಂಡ್ ಸ್ಟ್ರೋಕ್ (ಎನ್‌ಐಎಚ್) ಪ್ರಕಾರ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಎನ್ನುವುದು ನರವೈಜ್ಞಾನಿಕ ತೊಂದರೆ. ವ್ಯಕ್ತಿಯ ಸ್ವರಕ್ಷಣಾ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುವ ಅಸ್ವಸ್ಥತೆಯಾಗಿದೆ. ಪ್ರತಿರಕ್ಷಣಾ ವ್ಯವಸ್ಥೆಯಿಂದ ಬಾಹ್ಯ ನರಮಂಡಲಕ್ಕೆ ತೊಂದರೆಯಾಗುವಂತಹ ಪರಿಸ್ಥಿತಿ ಇದಾಗಿದೆ. ಮಿದುಳು ಮತ್ತು ಬೆನ್ನುಹುರಿ ಹೊರಗಿನ ನರಗಳ ಜಾಲಗಳಿಗೆ ಇದರಿಂದ ಹಾನಿಯಾಗಬಹುದು. ಈ ಅಸ್ವಸ್ಥತೆಗೆ ಈಡಾದವರಿಗೆ ಸೌಮ್ಯವಾದ ತೊಂದರೆಗಳಿಂದ ಹಿಡಿದು ಲಕ್ವ ಅಥವಾ ಪಾರ್ಶ್ವವಾಯುವಿನಿಂತಹ ಸ್ಥಿತಿಯೂ ಉಂಟಾಗಬಹುದು. ಈ ತೊಂದರೆಗೆ ಈಡಾದವರು ಸೂಕ್ತ ಚಿಕಿತ್ಸೆ ಮೂಲಕ ಅಂತಿಮವಾಗಿ ಚೇತರಿಸಿಕೊಳ್ಳುತ್ತಾರೆ. ಇದರಿಂದ ಪಾರ್ಶ್ವವಾಯುವಿಗೆ ಈಡಾದವರೂ ಚೇತರಿಸಿಕೊಳ್ಳುತ್ತಾರೆ. ಆದರೆ, ದೇಹದಲ್ಲಿ ಕೆಲವೊಂದು ದೌರ್ಬಲ್ಯಗಳು ಉಳಿಯಬಹುದು. ಈ ಕಾಯಿಲೆಯ ರೋಗ ಲಕ್ಷಣವು ಕೆಲವು ಗಂಟೆಗಳಲ್ಲಿ, ದಿನಗಳಲ್ಲಿ ಅಥವಾ ವಾರಗಳಲ್ಲಿ ಹೆಚ್ಚುತ್ತ ಹೋಗಬಹುದು. ಅಂತಿಮವಾಗಿ ಸ್ನಾಯುಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಬಹುದು. ಉಸಿರಾಟ, ರಕ್ತದೊತ್ತಡ ಮತ್ತು ಹೃದಯಬಡಿತ ನಿಲ್ಲಿಸುವ ಮೂಲಕ ಮಾರಣಾಂತಿಕ ಪರಿಣಾಮಗಳು ಗಿಲ್ಲೆನ್-ಬ್ಯಾರಿ ಸಿಂಡ್ರೋಮ್‌ನಿಂದ ಉಂಟಾಗಬಹುದು.
ಲಕ್ಷಣಗಳೇನು?
ದೌರ್ಬಲ್ಯ: ದೇಹವು ದುರ್ಬಲವಾದಂತೆ ಅನಿಸುವುದು. ಆಗಾಗ ಕಾಲುಗಳಿಂದ ದೌರ್ಬಲ್ಯ ಆರಂಭವಾಗಬಹುದು. ಅಂತಿಮವಾಗಿ ತೋಳುಗಳು, ಮುಖ, ಸ್ನಾಯುಗಳು ಬಿಗಿಯಾಗುವುದು ಇತ್ಯಾದಿ ಲಕ್ಷಣಗಳು ಕಾಣಿಸಿಕೊಳ್ಳಬಹುದು. ತೀವ್ರ ದುರ್ಬಲತೆ ಉಂಟಾದಗ ಉಸಿರಾಟದ ಸಹಾಯದ ಅಗತ್ಯವಿರುತ್ತದೆ.
ಸಂವೇದನೆಯಲ್ಲಿ ಬದಲಾವಣೆ: ದೇಹವು ಜುಮ್ಮೆನ್ನುವುದು, ಟಚ್ ಮಾಡುವಾಗ ಸಂವೇದನೆ ರಹಿತವಾದಂತೆ ಭಾಸವಾಗುವುದು, ಚರ್ಮದಡಿ ಕೀಟಗಳು ತೆವಳಿದಂತೆ ಭಾಸವಾಗುವುದು, ದೇಹ ಜೋಮು ಹಿಡಿದಂತೆ ಭಾಸವಾಗುವುದು ಇತ್ಯಾದಿ.
ನೋವು: ಬೆನ್ನು ಮತ್ತು ಕಾಲುಗಳಲ್ಲಿ ತೀವ್ರ ನೋವು ಕಾಡಬಹುದು.
ಇತರ ಲಕ್ಷಣಗಳು: ಕಣ್ಣಿನ ಸ್ನಾಯುಗಳು ಮತ್ತು ದೃಷ್ಟಿಗೆ ತೊಂದರೆ, ನುಂಗಲು, ಮಾತನಾಡಲು ಅಥವಾ ಅಗಿಯಲು ತೊಂದರೆಯಾಗುವುದು, ರಾತ್ರಿಯ ಸಮಯದಲ್ಲಿ ವಿಶೇಷವಾಗಿ ಹೆಚ್ಚು ನೋವು, ಹೃದಯದ ಬಡಿತದ ಏರುಪೇರು, ಜೀರ್ಣಕ್ರಿಯೆ ಸಮಸ್ಯೆ ಇತ್ಯಾದಿ ಹಲವು ಲಕ್ಷಣಗಳು ಕಾಣಿಸಬಹುದು.
ಚಿಕಿತ್ಸೆ ಏನು?
ಜಿಬಿಎಸ್ ಅಥವಾ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್‌ಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೂ, ರೋಗದ ತೀವ್ರತೆ ಕಡಿಮೆ ಮಾಡುವ ಮತ್ತು ಚೇತರಿಕೆ ಪ್ರಕ್ರಿಯೆ ವೇಗಗೊಳಿಸುವ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ಪ್ಲಾಸ್ಮಾ ವಿನಿಮಯ ಮತ್ತು ಇಂಟ್ರಾವೆನಸ್ ಇಮ್ಯುನೊಗ್ಲಾಬ್ಯುಲಿನ್ ಥೆರಪಿ ಮೂಲಕ ಚಿಕಿತ್ಸೆ ನೀಡಬಹುದು. ಇದರೊಂದಿಗೆ ಉಸಿರಾಟದ ತೊಂದರೆಯಿದ್ದಲ್ಲಿ ಕೃತಕ ಉಸಿರಾಟದ ಬೆಂಬಲ, ಸ್ವನಿಯಂತ್ರಿತ ನರಮಂಡಲದ ಮೇಲ್ವಿಚಾರಣೆ, ಬಾಯಿ ಮತ್ತು ಗಂಟಲಿನ ಸ್ರವಿಸುವಿಕೆಯ ನಿರ್ವಹಣೆ ಇತ್ಯಾದಿ ಚಿಕಿತ್ಸೆ ಕೈಗೊಳ್ಳಲಾಗುತ್ತದೆ. ಕೆಲವರಿಗೆ ದೀರ್ಘಕಾಲ ವೆಂಟಿಲೇಟರ್ ಬೆಂಬಲ ಬೇಕಾಗಬಹುದು.
ಎಫ್‌ಎಕ್ಯೂ: ಹೆಚ್ಚು ಕೇಳಲಾದ ಪ್ರಶ್ನೆಗಳು
ಏನಿದು ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ?
- ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಎನ್ನುವುದು ನರವೈಜ್ಞಾನಿಕ ತೊಂದರೆ. ವ್ಯಕ್ತಿಯ ಸ್ವರಕ್ಷಣಾ ವ್ಯವಸ್ಥೆಯು ಬಾಹ್ಯ ನರಗಳ ಮೇಲೆ ದಾಳಿ ಮಾಡುವ ಅಸ್ವಸ್ಥತೆಯಾಗಿದೆ.
ಈಗ ಏಕೆ ಸುದ್ದಿಯಲ್ಲಿದೆ?
ಪೆರು ದೇಶದಲ್ಲಿ ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ಕಾರಣದಿಂದ 90 ದಿನಗಳ ತುರ್ತು ಆರೋಗ್ಯ ಪರಿಸ್ಥಿತಿ ಘೋಷಿಸಲಾಗಿದೆ.
ಗಿಲ್ಲೆನ್-ಬ್ಯಾರಿ ಸಿಂಡ್ರೋಮ್ ರೋಗ ಲಕ್ಷಣಗಳೇನು?
ದೇಹದಲ್ಲಿ ದೌರ್ಬಲ್ಯತೆ, ಉಸಿರಾಟದ ತೊಂದರೆ, ಬೆನ್ನು ಮತ್ತು ಕಾಲುಗಳಲ್ಲಿ ತೀವ್ರ ನೋವು
ಚಿಕಿತ್ಸೆ ಇದೆಯೇ?
ನೇರವಾದ ಚಿಕಿತ್ಸೆ ಇಲ್ಲ. ಆದರೆ, ರೋಗ ಲಕ್ಷಣಗಳಿಗೆ ತಕ್ಕಂತೆ ಚಿಕಿತ್ಸೆ ನೀಡಿ ರೋಗಿ ಚೇತರಿಸಿಕೊಳ್ಳುವಂತೆ ಮಾಡಲಾಗುತ್ತದೆ.