ನಾಯಿ ಕಚ್ಚಿದ ತಕ್ಷಣ ಏನು ಮಾಡ್ಬೇಕು, ಯಾವ ಕೆಲಸ ಮಾಡಬಾರದು; ಸೋಂಕು ಉಂಟಾಗುವುದನ್ನು ತಡೆಯಲು ಕೂಡಲೇ ಈ ಕೆಲಸ ಮಾಡಿ
ನಾಯಿ ಕಚ್ಚಿದಾಗ ಜನರು ಹೆಚ್ಚಾಗಿ ಭಯಪಡುತ್ತಾರೆ, ಆದರೆ ಭಯ ಬೀಳಬಾರದು. ಜೊತೆಗೆ ಸೋಂಕಿನಿಂದ ತಪ್ಪಿಸಿಕೊಳ್ಳಲು ತಕ್ಷಣಕ್ಕೆ ಈ ಕೆಲವು ಕೆಲಸಗಳನ್ನು ಮಾಡಬೇಕು. ಹಾಗಾದರೆ ನಾಯಿ ಕಚ್ಚಿದ ತಕ್ಷಣ ನಾವು ಮಾಡಬೇಕಾದ ಕೆಲಸವೇನು, ಯಾವುದನ್ನು ಮಾಡಬಾರದು, ಸೋಂಕಿನ ಅಪಾಯ ಕಡಿಮೆ ಮಾಡಲು ಏನು ಮಾಡಬೇಕು ಎಂಬ ವಿವರ ಇಲ್ಲಿದೆ.
ಇತ್ತೀಚಿನ ವರ್ಷಗಳಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ಬೀದಿನಾಯಿಗಳು ಆಕ್ರಮಣಕಾರಿಯಾಗಿ ದಾಳಿ ಮಾಡುತ್ತಿವೆ. ನಾಯಿ ಕಚ್ಚುವುದರಿಂದ ರೆಬೀಸ್‌ಗೆ ತುತ್ತಾಗಬಹುದು. ಅಲ್ಲದೇ ಪ್ರಾಣಿಗಳಿಂದ ಕಚ್ಚಿಸಿಕೊಳ್ಳುವುದು ಸೋಂಕಿನ ಅಪಾಯವನ್ನು ಹೆಚ್ಚಿಸಬಹುದು. ಆ ಕಾರಣಕ್ಕೆ ಕಚ್ಚುವ ನಾಯಿ ವಿಚಾರದಲ್ಲಿ ಜನ ಸಾಕಷ್ಟು ಭಯ ಬೀಳುತ್ತಾರೆ.
ರೇಬಿಸ್‌ನಿಂದ ಅಪಾಯ
ಬೀದಿ ನಾಯಿ, ಸಾಕುನಾಯಿ, ಬೆಕ್ಕು ಇಂತಹ ಪ್ರಾಣಿಗಳು ಕಚ್ಚುವುದರಿಂದ ರೇಬಿಸ್ ಉಂಟಾಗಬಹುದು. ರೇಬಿಸ್‌ಗೆ ತಕ್ಷಣಕ್ಕೆ ಚಿಕಿತ್ಸೆ ಪಡೆದಿಲ್ಲ ಎಂದರೆ ಗಂಭೀರ ಸಮಸ್ಯೆಗಳು ಎದುರಾಗಬಹುದು. ಇದಕ್ಕಾಗಿ ಚುಚ್ಚುಮದ್ದನ್ನು ಪಡೆಯಬೇಕು, ಆದರೆ ನಾಯಿ ಕಚ್ಚಿದ ತಕ್ಷಣ ಈ ಕ್ರಮಗಳನ್ನು ಅನುಸರಿಸಿದ್ರೆ ಸೋಂಕಿನ ಅಪಾಯ ಕಡಿಮೆ.
ನಾಯಿ ಕಚ್ಚಿದ ಜಾಗವನ್ನು ಸ್ವಚ್ಛ ಮಾಡಿ
ನಾಯಿ ಕಚ್ಚಿದ ತಕ್ಷಣಕ್ಕೆ ಆ ಜಾಗವನ್ನು ಸೋಪ್ ಮತ್ತು ನೀರಿನಿಂದ ಗಾಯವನ್ನು ಸ್ವಚ್ಛಗೊಳಿಸಿ. ಕೊಳಕು, ಬ್ಯಾಕ್ಟೀರಿಯಾ ಮತ್ತು ಲಾಲಾರಸವನ್ನು ತೆಗೆದುಹಾಕಲು ಸಾಬೂನು ಮತ್ತು ನೀರಿನಿಂದ ಚೆನ್ನಾಗಿ ತೊಳೆಯಬೇಕು. ಇದರಿಂದ ಸೋಂಕು ಹರಡುವ ಸಾಧ್ಯತೆ ಕಡಿಮೆ.
ರಕ್ತವನ್ನು ಹೀಗೆ ನಿಲ್ಲಿಸಿ
ನಾಯಿಯು ಕಚ್ಚಿದರೆ ಮತ್ತು ಕಚ್ಚಿ ರಕ್ತಸ್ರಾವವಾಗುತ್ತಿದ್ದರೆ, ರಕ್ತಸ್ರಾವವನ್ನು ನಿಯಂತ್ರಿಸಲು ಲಘುವಾಗಿ ಬಿಗಿದು ಶುದ್ಧವಾದ ಬಟ್ಟೆಯನ್ನು ಕಟ್ಟಿಕೊಳ್ಳಿ. ಆದರೆ ಅತಿ ಬಿಗಿ ಕಟ್ಟಬೇಡಿ, ಇದರಿಂದ ರಕ್ತಹೆಪ್ಪುಗಟ್ಟಿ ಬೇರೆ ಸಮಸ್ಯೆಗೆ ಕಾರಣವಾಗಬಹುದು.
ಸಲಹೆ ಕೇಳುವ ಮುನ್ನ ಯೋಚಿಸಿ
ನಾಯಿ ಕಚ್ಚಿದ ನಂತರ, ನೀವು ಜನರಿಂದ ವಿವಿಧ ರೀತಿಯ ಸಲಹೆಗಳನ್ನು ಪಡೆಯಬಹುದು. ಆದರೆ ನೀವು ಯಾರನ್ನು ನಂಬುತ್ತೀರಿ ಮತ್ತು ಯಾರನ್ನು ನಂಬುವುದಿಲ್ಲ ಎಂಬುದು ನಿಮಗೆ ಬಿಟ್ಟದ್ದು. ನಾಯಿ ಕಡಿತದ ಮೇಲೆ ಹೈಡ್ರೋಜನ್ ಪೆರಾಕ್ಸೈಡ್ ಅಥವಾ ಆಲ್ಕೋಹಾಲ್ ಬಳಸುವುದನ್ನು ತಪ್ಪಿಸಿ, ಏಕೆಂದರೆ ಅವು ಗಾಯವನ್ನು ಮತ್ತಷ್ಟು ಕೆರಳಿಸಬಹುದು. ಇಂತಹ ಸಲಹೆಗಳು ಪಾಲಿಸದೇ ಇರುವುದು ಉತ್ತಮ.
ಈ ಚುಚ್ಚುಮದ್ದುಗಳನ್ನು ತಪ್ಪದೇ ತೆಗೆದುಕೊಳ್ಳಿ
ನಾಯಿಯಿಂದ ಕಚ್ಚಿದಾಗ, ಟೆಟನಸ್ ಚುಚ್ಚುಮದ್ದನ್ನು ಪಡೆಯುವುದು ಮುಖ್ಯ. ಆದರೆ ರೇಬೀಸ್ ಲಸಿಕೆಯನ್ನು ಐದು ಡೋಸ್‌ಗಳಲ್ಲಿ ನೀಡಲಾಗುತ್ತದೆ. ಇದು ಸಾಮಾನ್ಯವಾಗಿ ಕಚ್ಚಿದ ದಿನದಲ್ಲಿ ಐದು ಡೋಸ್‌ಗಳು ಮತ್ತು ನಂತರ ಮೂರನೇ ದಿನ, ಏಳನೇ ದಿನ, ಕಚ್ಚಿದ ನಂತರ ಹದಿನಾಲ್ಕನೇ ದಿನ ಮತ್ತು 30 ನೇ ದಿನದಲ್ಲಿ ಬೂಸ್ಟರ್ ಡೋಸ್, ಇದನ್ನು ತಪ್ಪದೇ ಪಡೆದುಕೊಳ್ಳಬೇಕು.
(ಗಮನಿಸಿ: ಈ ಸುದ್ದಿಯು ಸಾಮಾನ್ಯಜ್ಞಾನವನ್ನು ಆಧರಿಸಿದ್ದು, ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)
ವಿಭಾಗ