Health Tips: ದೀರ್ಘಕಾಲ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳೋದು ಅಪಾಯ; ಕಿವಿಗೆ ಆಗೋ ಹಾನಿ ಒಂದೆರಡಲ್ಲ-health tips problems of using earphones for long hours headphones can harm your hearing jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ದೀರ್ಘಕಾಲ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳೋದು ಅಪಾಯ; ಕಿವಿಗೆ ಆಗೋ ಹಾನಿ ಒಂದೆರಡಲ್ಲ

Health Tips: ದೀರ್ಘಕಾಲ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳೋದು ಅಪಾಯ; ಕಿವಿಗೆ ಆಗೋ ಹಾನಿ ಒಂದೆರಡಲ್ಲ

ಇಯರ್‌ಫೋನ್‌ ಅನ್ನು ಕಿವಿಯ ತೂತಿಗೆ ಸಿಕ್ಕಿಸಿ ನಿರಂತರವಾಗಿ ಆಲಿಸುವುದರಿಂದ ಆರೋಗ್ಯಕ್ಕೆ ಭಾರಿ ಪ್ರಮಾಣದ ಹಾನಿ ಇದೆ. ಅತ್ಯಂತ ಹತ್ತಿರದಿಂದ ಶಬ್ದ ಕಿವಿಗೆ ಕೇಳುವುದರಿಂದ ಕಿವಿಗೆ ಗಂಭೀರ ಸಮಸ್ಯೆಗಳಾಗಬಹುದು. ಇದು ಶಾಶ್ವತ ಸಮಸ್ಯೆಗಳಿಗೂ ಕಾರಣವಾಗುತ್ತವೆ.

ದೀರ್ಘಕಾಲ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳೋದು ಅಪಾಯ
ದೀರ್ಘಕಾಲ ಇಯರ್‌ಫೋನ್ ಹಾಕಿಕೊಂಡು ಹಾಡು ಕೇಳೋದು ಅಪಾಯ (Pixabay)

ದಿನದ ಹೆಚ್ಚು ಹೊತ್ತು ಇಯರ್‌ಫೋನ್‌, ಹೆಡ್‌ ಫೋನ್‌ ಅಥವಾ ಇಯರ್‌ ಬಡ್ಸ್‌ ಹಾಕಿ ಹಾಡು ಕೇಳುವುದು ಕೆಲವೊಬ್ಬರ ಅಭ್ಯಾಸ. ಬಸ್‌ ಅಥವಾ ವಾಹನಗಳಲ್ಲಿ ಪ್ರಯಾಣಿಸುವಾಗ, ಜಿಮ್‌ ವರ್ಕೌಟ್‌ ಮಾಡುವಾಗ, ಮನೆ ಕೆಲಸಗಳನ್ನು ಮಾಡುವಾಗ ಅಥವಾ ಮಲಗಿಕೊಂಡು ಹಾಡು ಕೇಳುವ ಸಲುವಾಗಿ ಹೆಚ್ಚು ಹೊತ್ತು ಕಿವಿಗೆ ಹೆಡ್‌ಫೋನ್‌ ಸಿಕ್ಕಿಸಿಕೊಳ್ಳುವ ಅಭ್ಯಾಸ ಹಲವರದ್ದು. ಇನ್ನೂ ಕೆಲವು ಸಂದರ್ಭಗಳಲ್ಲಿ ಆನ್‌ಲೈನ್ ಮೀಟಿಂಗ್‌ ಅಥವಾ‌ ಬೇರೆಬೇರೆ ಕಾರಣಗಳಿಂದ ಇಯರ್‌ಫೋನ್‌ ಧರಿಸುತ್ತೇವೆ. ಹೆಚ್ಚಿನ ಜನರ ಜೀವನದಲ್ಲಿ ಇಯರ್‌ಫೋನ್‌ಗಳು ಅವಿಭಾಜ್ಯ ಅಂಗವಾಗಿದೆ. ಪ್ರಯಾಣ ಅಥವಾ ಎಲ್ಲಾದರೂ ಹೊರಗಡೆ ಹೋಗಿದ್ದಾಗ ಇಯರ್‌ಫೋನ್‌ ತರೋದು ಮರೆತಿದ್ದರೆ, ಸಂಕಟಪಡುವವರು ಹಲವರಿದ್ದಾರೆ. ವಾಸ್ತವದಲ್ಲಿ ಹೆಚ್ಚು ಹೊತ್ತು ಇಯರ್‌ಫೋನ್‌ ಬಳಸುವುದು ಸಮಸ್ಯೆಗೆ ಕಾರಣವಾಗಬಹುದು.

ನಿಮಗೆ ಅರಿವಿರುವಂತೆ, ಇಯರ್‌ಫೋನ್‌ ಅಥವಾ ಇಯರ್‌ ಬಡ್‌ ಏನೇ ಇದ್ದರೂ ಕಿವಿಯ ಹತ್ತಿರದಲ್ಲೇ ಇದ್ದು ಶಬ್ದವು ಕಿವಿಯ ಒಳಗೆ ಕೇಳಿಸುವಂತೆ ಮಾಡುತ್ತದೆ. ಅತ್ಯಂತ ಹತ್ತಿರದಿಂದ ಶಬ್ದ ಕಿವಿಗೆ ಕೇಳುವುದರಿಂದ ಕಿವಿಗೆ ಗಂಭೀರ ಸಮಸ್ಯೆಗಳಾಗಬಹುದು. ಇದು ಶಾಶ್ವತ ಹಾನಿಗೂ ಕಾರಣವಾಗಬಹುದು.

ವೈದ್ಯರು ಹೇಳುವ ಪ್ರಕಾರ ಇಯರ್‌ಫೋನ್‌ಗಳನ್ನು ಧರಿಸುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿವೆ. ಅವುಗಳ ವಿವರ ಇಲ್ಲಿದೆ.

ಆಲಿಸುವ ಸಾಮರ್ಥ್ಯ ನಷ್ಟ

ದೀರ್ಘಾವಧಿಗೆ ಇಯರ್‌ಫೋನ್‌ ಕಿವಿಗೆ ಸಿಕ್ಕಿಸುವುದರಿಂದ ನಿಮ್ಮ ಕಿವಿಗೆ ನೀವೇ ಹಾನಿ ಮಾಡಿಕೊಳ್ಳುತ್ತೀರಿ. ಈ ಅಭ್ಯಾಸ ಅಸುರಕ್ಷಿತ. ಇದರಿಂದ ಶಾಶ್ವತ ಅಥವಾ ತಾತ್ಕಾಲಿಕ ಶ್ರವಣ ದೋಷಕ್ಕೆ ಕಾರಣವಾಗಬಹುದು. ಕಿವಿಯಲ್ಲಾಗುವ ಕಂಪನದಿಂದಾಗಿ ಕೂದಲಿನ ಕೋಶಗಳು ತಮ್ಮ ಸೂಕ್ಷ್ಮತೆಯನ್ನು ಕಳೆದುಕೊಳ್ಳುತ್ತವೆ. ಇದು ತಾತ್ಕಾಲಿಕ ಅಥವಾ ಶಾಶ್ವತ ಶ್ರವಣ ನಷ್ಟಕ್ಕೆ ಕಾರಣವಾಗುತ್ತದೆ.

ಕಿವಿಯ ಸೋಂಕು

ಇಯರ್‌ಫೋನ್‌ಗಳನ್ನು ನೇರವಾಗಿ ಕಿವಿಯ ತೂತುಗಳಿಗೆ ಇಟ್ಟಾಗ,‌ ಕಿವಿಯೊಳಕ್ಕೆ ಹೋಗುವ ಗಾಳಿಯ ಹಾದಿಗೆ ಅಡ್ಡಿಪಡಿಸಿದಂತಾಗುತ್ತದೆ. ಇದು ಕಿವಿಯ ಸೋಂಕಿಗೆ ಆಹ್ವಾನ ಕೊಡುತ್ತದೆ. ಕಿವಿಯಲ್ಲಿ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗುತ್ತದೆ. ಇಯರ್‌ಫೋನ್‌ಗಳಲ್ಲಿ ಇರುವ ಬ್ಯಾಕ್ಟೀರಿಯಾಗಳು ಕಿವಿಗೆ ಪ್ರವೇಶಿಸಿ ಹಾನಿ ಮಾಡುತ್ತದೆ. ಬಳಕೆ ಹೆಚ್ಚಾದಂತೆ ಅಪಾಯ ಕೂಡಾ ಹೆಚ್ಚು. ಹೀಗಾಗಿ ಒಬ್ಬರ ಇಯರ್‌‌ಫೋನ್ ಮತ್ತೊಬ್ಬರು ಬಳಸುವುದನ್ನು ಮಾಡಬಾರದು.

ತಲೆತಿರುಗುವಿಕೆ

ಜಿಮ್‌ ವರ್ಕೌಟ್‌ ಮಾಡುವಾಗ ದಿಢೀರನೆ ತಲೆತಿರುಗಿ ಬೀಳುವ ಕೆಲವು ವಿಡಿಯೋಗಳನ್ನು ನೀವು ನೋಡಿರಬಹುದು. ನಿರಂತರ ಆಲಿಕೆಯಿಂದ ಈ ಸಮಸ್ಯೆಯಾಗುತ್ತದೆ. ಹೀಗಾಗಿ ಇಯರ್‌ಫೋನ್‌ ಬಳಕೆಯನ್ನು ಮಿತಿಗೊಳಿಸಬೇಕು. ಸುದೀರ್ಘ ಅವಧಿಗೆ ಜೋರಾದ ಶಬ್ದವು ಕಿವಿಗೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗಬಹುದು. ಇದು ನಿಮ್ಮ ಮಿದುಳು ಹಾಗೂ ತಲೆಗೂ ಕಿರಿಕಿರಿ ಉಂಟುಮಾಡುತ್ತದೆ. ಇದರಿಂದ ತಲೆತಿರುಗುವಂತೆ ಮಾಡುತ್ತದೆ.

ಇಯರ್ ವ್ಯಾಕ್ಸ್

ಇಯರ್‌ಫೋನ್‌ಗಳನ್ನು ದೀರ್ಘಕಾಲದವರೆಗೆ ಬಳಸುವುದರಿಂದ ಕಿವಿಯ ವ್ಯಾಕ್ಸ್‌ ಅಥವಾ ಅಂಟುರೂಪದ ಮೇಣದ ಬೆಳವಣಿಗೆ ಹೆಚ್ಚುತ್ತದೆ. ಅದು ಕಿವಿ ಸೋಂಕು, ಶ್ರವಣ ಸಮಸ್ಯೆಯ ಅಪಾಯ ಹೆಚ್ಚಿಸುತ್ತದೆ.

ಆಗಾಗ ಕಿವಿ ನೋವು, ತಲೆನೋವು

ದೀರ್ಘಕಾಲ ಇಯರ್ ಫೋನ್ ಬಳಕೆಯಿಂದ ಕಿವಿಯ ಒಳಗೆ ನೋವು ಉಂಟಾಗುತ್ತದೆ. ಇದೇ ವೇಳೆ ತಲೆನೋವು ಹೆಚ್ಚಾಗುವ ಸಾಧ್ಯತೆಯೂ ಇದೆ. ಹೀಗಾಗಿ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವ ಬದಲು ಇಯರ್‌ಫೋನ್‌ ಬಳಕೆ ಕಡಿಮೆ ಮಾಡುವುದು ಉತ್ತಮ.

mysore-dasara_Entry_Point