ಮಲಗುವಾಗ ಬಾಯಿಗೆ ಟೇಪ್ ಹಾಕಿದ್ರೆ ಗೊರಕೆ ನಿಲ್ಲುತ್ತಾ? ಏನಿದು ವೈರಲ್ ಸುದ್ದಿ, ಮೌತ್ ಟೇಪಿಂಗ್‌ ಬಗ್ಗೆ ತಜ್ಞರು ಏನಂತಾರೆ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಲಗುವಾಗ ಬಾಯಿಗೆ ಟೇಪ್ ಹಾಕಿದ್ರೆ ಗೊರಕೆ ನಿಲ್ಲುತ್ತಾ? ಏನಿದು ವೈರಲ್ ಸುದ್ದಿ, ಮೌತ್ ಟೇಪಿಂಗ್‌ ಬಗ್ಗೆ ತಜ್ಞರು ಏನಂತಾರೆ ನೋಡಿ

ಮಲಗುವಾಗ ಬಾಯಿಗೆ ಟೇಪ್ ಹಾಕಿದ್ರೆ ಗೊರಕೆ ನಿಲ್ಲುತ್ತಾ? ಏನಿದು ವೈರಲ್ ಸುದ್ದಿ, ಮೌತ್ ಟೇಪಿಂಗ್‌ ಬಗ್ಗೆ ತಜ್ಞರು ಏನಂತಾರೆ ನೋಡಿ

ಇತ್ತೀಚಿನ ದಿನಗಳಲ್ಲಿ ಹಲವರು ಗೊರಕೆ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಮೌತ್‌ ಟೇಪಿಂಗ್‌ ಅಥವಾ ಬಾಯಿಗೆ ಟೇಪ್ ಧರಿಸಿ ಮಲಗುವುದು ಪರಿಹಾರ, ಇದರಿಂದ ಗೊರಕೆ ಕಡಿಮೆಯಾಗಿ ನಿದ್ದೆಯೂ ಚೆನ್ನಾಗಿ ಬರುತ್ತದೆ ಎಂಬ ಮಾಹಿತಿ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಹರಿದಾಡುತ್ತಿದೆ. ಈ ಬಗ್ಗೆ ತಜ್ಞರು ಏನಂತಾರೆ ನೋಡಿ.

ಗೊರಕೆ ನಿಲ್ಲಿಸಲು ಮೌತ್ ಟೇಪಿಂಗ್‌ ಪರಿಹಾರವೇ?
ಗೊರಕೆ ನಿಲ್ಲಿಸಲು ಮೌತ್ ಟೇಪಿಂಗ್‌ ಪರಿಹಾರವೇ? (PC: Canva)

ಗೊರಕೆ ಹೊಡೆಯುವ ಅಭ್ಯಾಸ ನಿಮಗೂ ಇರಬಹುದು, ಆದರೆ ನೀವು ಗೊರಕೆ ಹೊಡೆಯುವುದು ನಿಮಗೆ ತಿಳಿಯುವುದಿಲ್ಲ. ಬೇರೆಯವರಿಗೆ ನಿಮ್ಮ ಗೊರಕೆಯಿಂದ ನಿದ್ದೆ ಬರುವುದಿಲ್ಲ. ಮೂಗಿನ ಮೂಲಕ ಉಸಿರಾಟ ಮಾಡಲು ಸಾಧ್ಯವಾಗದೇ ಇದ್ದಾಗ ಬಾಯಿಯಿಂದ ಉಸಿರಾಡುತ್ತೇವೆ, ಆಗ ಅದು ಗೊರಕೆ ರೂಪದಲ್ಲಿ ಜೋರಾದ ಶಬ್ಧ ಬರುತ್ತದೆ. ಅದೇನೇ ಇರಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಗೊರಕೆಗೆ ಒಂದು ಪರಿಹಾರ ಕಂಡುಹಿಡಿದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಮೌತ್ ಟೇಪಿಂಗ್‌ ಎನ್ನುವ ಪದ ಹಾಗೂ ಇದರ ಉಪಯೋಗದ ಬಗ್ಗೆ ಸಾಕಷ್ಟು ಕೇಳಿ ಬರುತ್ತಿದೆ. ಗೊರಕೆ ನಿಲ್ಲಿಸಲು ಇದುವೇ ಉತ್ತಮ ಪರಿಹಾರ ಎನ್ನಲಾಗುತ್ತಿದೆ. ಹಾಗಾದರೆ ನಿಜಕ್ಕೂ ಮೌತ್‌ ಟೇಪಿಂಗ್‌ ಅಂದರೆ ರಾತ್ರಿ ಮಲಗುವ ಮುನ್ನ ಬಾಯಿಗೆ ಟೇಪ್ ಹಾಕಿಕೊಂಡು ಮಲಗುವುದು ಪ್ರಯೋಜನಕಾರಿಯೇ ಇದರಿಂದ ಏನಾದ್ರೂ ಅಪಾಯ ಇದ್ಯಾ, ಇದರ ಸಾಧಕ ಬಾಧಕಗಳ ಬಗ್ಗೆ ವೈದ್ಯರು ಏನು ಹೇಳುತ್ತಾರೆ ನೋಡಿ.

ಮೌತ್ ಟೇಪಿಂಗ್‌ ಎಂದರೇನು?

ರಾತ್ರಿ ಮಲಗುವಾಗ ಬಾಯಿಗೆ ಟೇಪ್ ಹಾಕಿಕೊಂಡು ಮಲಗುವುದು. ಇದರಿಂದ ನಾವು ಬಾಯಿಂದ ಉಸಿರಾಡಲು ಆಗುವುದಿಲ್ಲ. ಮೂಗಿನಿಂದಲೇ ಉಸಿರಾಡಬೇಕಾಗುತ್ತದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಮೌತ್ ಟೇಪಿಂಗ್‌ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವೈದ್ಯರು ಹೇಳುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಹೇಳುವಂತೆ ಬಾಯಿಗೆ ಟೇಪ್ ಧರಿಸಿ ಮಲಗುವುದರಿಂದ ನಿದ್ದೆಯ ಗುಣಮಟ್ಟದ ಸುಧಾರಿಸುತ್ತದೆ, ಗೊರಕೆ ಕಡಿಮೆಯಾಗುತ್ತದೆ, ದವಡೆಯ ಆಕಾರ ಸುಧಾರಿಸುತ್ತದೆ ಎಂಬುದು ಒಪ್ಪುವ ಮಾತಲ್ಲ ಎಂದು ಹೇಳುತ್ತಾರೆ.

ಮೈಲ್ಡ್ ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ (OSA) ಹೊಂದಿರುವ ಜನರು ತಮ್ಮ ತುಟಿಗಳ ಮೇಲೆ ಟೇಪ್ ಅಥವಾ ಪ್ಯಾಚ್‌ ಧರಿಸಿದಾಗ ಮಲಗಿದಾಗ ಗೊರಕೆ ಹೊಡೆಯುವ ಪ್ರಮಾಣ ಗಣನೀಯವಾಗಿ ಕಡಿಮೆ ಆಗಿತ್ತು ಎಂಬುದನ್ನು ವಿದೇಶದಲ್ಲಿ ನಡೆದ 2 ಅಧ್ಯಯನಗಳು ಸಾಬೀತು ಪಡಿಸಿವೆ ಎಂಬುದನ್ನು ನಾವು ಈ ವೇಳೆ ಗಮನಿಸಬಹುದು. ಆದರೆ ಇದರ ಪರಿಣಾಮದ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯ ಎಂಬುದು ಒಂದು ನಿದ್ರೆಯ ಅಸ್ವಸ್ಥತೆಯಾಗಿದ್ದು, ಇದರಲ್ಲಿ ಪದೇ ಪದೇ ಉಸಿರಾಟ ನಿಂತಂತಾಗುತ್ತದೆ.

ಮೌತ್ ಟೇಪಿಂಗ್‌ ಬಗ್ಗೆ ವೈದ್ಯರು ಹೇಳುವುದು ಹೀಗೆ

ನಿದ್ರಾ ತಜ್ಞ ಮತ್ತು ಶ್ವಾಸಕೋಶಶಾಸ್ತ್ರಜ್ಞರಾದ ಡಾ ಮಂಜುನಾಥ್ ಎಚ್. ಕೆ. ಇದೊಂದು ನಿಷ್ಪಲ ಪ್ರಯೋಗ ಎಂದು ಹೇಳುತ್ತಾರೆ. ಅಬ್ಸ್ಟ್ರಕ್ಟಿವ್ ಸ್ಲೀಪ್ ಅಪ್ನಿಯದಲ್ಲಿ ಸಮಸ್ಯೆಯು ಗಂಟಲಕುಳಿಯಲ್ಲಿದೆ. ಮೌತ್ ಟೇಪಿಂಗ್‌ನಿಂದ ನಿಮಗೆ ಕೆಲವು ಬಾರಿ ಚೆನ್ನಾಗಿ ನಿದ್ದೆ ಬರಬಹುದು, ಆದರೆ ಇದು ಖಂಡಿತ ಮೂಲ ಸಮಸ್ಯೆ ಪರಿಹಾರ ನೀಡುವುದಿಲ್ಲ ಎಂದು ಡೆಕ್ಕನ್ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಮೂಗಿನ ಮೂಲಕ ಉಸಿರಾಡುವುದು ನೈಸರ್ಗಿಕ ಹಾಗೂ ಶಾರೀರಿಕ ಪ್ರಕ್ರಿಯೆಯಾಗಿದೆ. ಆದರೆ ವಾಯುಮಾರ್ಗ ಅಥವಾ ಶ್ವಾಸನಾಳದಲ್ಲಿ ತೊಂದರೆಗಳಿದ್ದರೆ ಜನರು ಬಾಯಿಯಿಂದ ಉಸಿರಾಡುತ್ತಾರೆ.

‘ಬಾಯಿಯ ಮೂಲಕ ಉಸಿರಾಡುವುದನ್ನು ನಿರ್ಬಂಧಿಸಿದರೆ, ಮೂಗಿನ ಮೂಲಕವೂ ಉಸಿರಾಡಲು ಸಾಧ್ಯವಾಗದೇ ಇದ್ದರೆ ಇದರಿಂದ ಅಪಾಯ ಇನ್ನಷ್ಟು ಹೆಚ್ಚಬಹುದು. ಅಲ್ಲದೇ ಆಗಾಗ ಬಾಯಿಗೆ ಟೇಪ್ ಧರಿಸುವುದರಿಂದ ಚರ್ಮದ ಕಿರಿಕಿರಿ ಉಂಟಾಗಬಹುದು‘ ಎಂದು ವೈದ್ಯರು ಎಚ್ಚರಿಸುತ್ತಾರೆ.

ಮಕ್ಕಳು, ಹಿರಿಯ ನಾಗರಿಕರು ಮತ್ತು ಹೃದಯ ಸಂಬಂಧಿ ಸಮಸ್ಯೆಗಳು, ಮಧುಮೇಹ ಮತ್ತು ಏರಿಳಿತದ ರಕ್ತದೊತ್ತಡ ಹೊಂದಿರುವವರು ಎಂದಿಗೂ ಮೌತ್ ಟೇಪಿಂಗ್‌ ಮಾಡಬಾರದು ಎಂದು ಶ್ವಾಸಕೋಶಶಾಸ್ತ್ರಜ್ಞ ಡಾ ಸಚಿನ್ ಕುಮಾರ್ ಡೆಕ್ಕನ್ ಹೆರಾಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಈ ರೀತಿ ಸಮಸ್ಯೆ ಇರುವವರು ಮೌತ್ ಟೇಪಿಂಗ್‌ ಮಾಡುವುದರಿಂದ ಉಸಿರಾಟಕ್ಕೆ ತೊಂದರೆ ಆಗಬಹುದು.

ಗೊರಕೆ ಸಮಸ್ಯೆ ಇರುವವರು ಇಂತಹ ಆಧಾರ ರಹಿತ ಟೆಕ್ನಿಕ್‌ಗಳನ್ನು ಪ್ರಯೋಗ ಮಾಡುವ ಬದಲು‌ ವೈದ್ಯಕೀಯ ವೃತ್ತಿಪರರನ್ನು ಸಂಪರ್ಕಿಸಬೇಕು. ಜೀವನಶೈಲಿಯನ್ನು ಬದಲಿಸಿಕೊಳ್ಳಬೇಕು ಹಾಗೂ ಕೆಲವೊಮ್ಮೆ ನಿದ್ದೆಯಲ್ಲಿ ಉಸಿರುಗಟ್ಟಲು ಅಲರ್ಜಿ ಕೂಡ ಕಾರಣವಾಗಬಹುದು. ಅದನ್ನ ಗುರುತಿಸಿ ಸರಿ ಪಡಿಸಿಕೊಳ್ಳಬೇಕು, ಆಗ ಗೊರಕೆಗೆ ಖಂಡಿತ ಪರಿಹಾರ ಸಿಗುತ್ತದೆ ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ.

Whats_app_banner