Mexican mint: ದೊಡ್ಡಪತ್ರೆಯ ಪ್ರಯೋಜನವೂ ದೊಡ್ಡದು; ಮನೆಯಂಗಳದಲ್ಲಿ ಸಾಂಬ್ರಾಣಿ ಗಿಡವಿದ್ದರೆ ಆರೋಗ್ಯ ಭಾಗ್ಯ
ನಿಮ್ಮ ಹೂದೋಟದ ನಡುವೆ ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಗಿಡವಿದ್ದರೆ, ನಿಮ್ಮ ಮನೆಯಂಗಳದಲ್ಲಿಯೇ ಆರೋಗ್ಯವಿದ್ದಂತೆ. ಭಾರತದ ಸಾಂಪ್ರದಾಯಿಕ ಔಷಧಗಳಲ್ಲಿ ಒಂದಾಗಿರುವ ಈ ಎಲೆಗಳ ಪ್ರಯೋಜನಗಳು ಹಲವು. ಪುಟ್ಟ ಮಕ್ಕಳ ಅನಾರೋಗ್ಯ ಸಮಸ್ಯೆಗೂ ಈ ಎಲೆಯ ರಸ ಪರಿಣಾಮಕಾರಿ.
ಹಳ್ಳಿಗಳಲ್ಲಿ ಬಹುತೇಕ ಎಲ್ಲರ ಮನೆಯಲ್ಲೂ ದೊಡ್ಡಪತ್ರೆ ಅಥವಾ ಸಾಂಬ್ರಾಣಿ ಗಿಡಗಳು ಇರುತ್ತವೆ. ಈ ಗಿಡವನ್ನು ಬೆಳೆಸುವುದು ಸುಲಭ. ಕೇವಲ ಒಂದು ಸಣ್ಣ ಗಿಡದ ಕಡ್ಡಿಯನ್ನು ಕಿತ್ತು ನೆಟ್ಟರೆ ದಟ್ಟವಾಗಿ ಬೆಳೆಯುತ್ತದೆ. ಒಂದು ಗಿಡದಿಂದ ಹಲವು ಗಿಡ ಹುಟ್ಟುತ್ತವೆ. ದೊಡ್ಡಪತ್ರೆಯು ಹಲವಾರು ವರ್ಷಗಳಿಂದ ಭಾರತದ ಸಾಂಪ್ರದಾಯಿಕ ಔಷಧದ ಭಾಗವಾಗಿದೆ. ಹಿಂಡಿದರೆ ಭಾರಿ ಪ್ರಮಾಣದಲ್ಲಿ ಬರುವ ರಸವನ್ನು ವಿವಿಧ ದೈಹಿಕ ಕಾಯಿಲೆಗಳಿಗೆ ಪರಿಹಾರವಾಗಿ ಬಳಸಲಾಗುತ್ತದೆ. ದಕ್ಷಿಣ ಭಾರತದಲ್ಲಿ ಹೇರಳವಾಗಿ ಕಾಣುವ ಈ ಸಸ್ಯವನ್ನು ಹಲವು ಮನೆಗಳಲ್ಲಿ ಹೂದೋಟದ ನಡುವೆ ಬೆಳೆಯಲಾಗುತ್ತದೆ. ಸಣ್ಣ ಮಕ್ಕಳ ಆರೋಗ್ಯಕ್ಕೂ ಇದು ರಾಮಬಾಣ. ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ.
ದೊಡ್ಡಪತ್ರೆ ಎಲೆಗಳಲ್ಲಿರುವ ಹಲವು ಔಷಧೀಯ ಗುಣಗಳಿಗಾಗಿ ತಲೆಮಾರುಗಳಿಂದಲೂ ಇದರ ಬಳಕೆ ಇದೆ. ಅಸಂಖ್ಯಾತ ಔಷಧೀಯ ಗುಣಗಳು ಮತ್ತು ಪೋಷಕಾಂಶಗಳನ್ನು ಈ ಎಲೆಗಳು ಹೊಂದಿವೆ. ಇದರಲ್ಲಿ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು, ಜೀವಸತ್ವಗಳು ಮತ್ತು ಖನಿಜಗಳು ಹೇರಳವಾಗಿವೆ. ಇದರಲ್ಲಿರುವ ರೋಸ್ಮರಿನಿಕ್ ಆಮ್ಲವು ಉರಿಯೂತ ನಿವಾರಕವಾಗಿ ಕೆಲಸ ಮಾಡುತ್ತದೆ.
ಮಧುಮೇಹ ವಿರೋಧಿ ಗುಣ
ದೊಡ್ಡಪತ್ರೆಯು ಮಧುಮೇಹ ವಿರೋಧಿ ಗುಣಗಳನ್ನು ಹೊಂದಿವೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಇಲಿಗಳ ಮೇಲೆ ನಡೆಸಿದ ಪ್ರಯೋಗಗಳಲ್ಲಿ ಇದು ಪತ್ತೆಯಾಗಿದೆ. ದೊಡ್ಡಪತ್ರೆಯು ಬ್ಯಾಕ್ಟೀರಿಯಾ ವಿರೋಧಿ, ಶಿಲೀಂಧ್ರ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.
ಜೀರ್ಣಕ್ರಿಯೆಗೆ ಸಹಕಾರಿ
ಸಾಂಬ್ರಾಣಿ ಎಲೆಯಲ್ಲಿರುವ ಸಾರಭೂತ ತೈಲದ ಅಂಶವು ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಇದು ವಾಯು ಮತ್ತು ಮಲಬದ್ಧತೆ ನಿವಾರಿಸುವಲ್ಲಿ ದೇಹಕ್ಕೆ ನೆರವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಿ, ಉರಿಯೂತವನ್ನು ಕಡಿಮೆ ಮಾಡುತ್ತದೆ.
ಶೀತಕ್ಕೆ ರಾಮಬಾಣ
ಚಿಕ್ಕ ಮಕ್ಕಳಿಗೆ ಶೀತವಾದರೆ ಹಳ್ಳಿಗಳಲ್ಲಿ ದೊಡ್ಡಪತ್ರೆಯನ್ನೇ ಬಳಸಲಾಗುತ್ತದೆ. ಎಲೆಗಳನ್ನು ಕೆಂಡದಲ್ಲಿ ಸ್ವಲ್ಪ ಬಾಡಿಸಿ ಅದರ ರಸವನ್ನು ಮಕ್ಕಳ ತಲೆಗೆ ಹಚ್ಚಲಾಗುತ್ತದೆ. ಮಕ್ಕಳ ಶೀತ ನಿವಾರಣೆಯಾಗುತ್ತದೆ. ಕೆಮಿಕಲ್ ಇಲ್ಲದ ಎಲೆ ಆಗಿರುವುದರಿಂದ ಇದನ್ನು ಪುಟ್ಟ ಮಕ್ಕಳಿಗೂ ಬಳಸಬಹುದು.
ಕೆಮ್ಮು, ಉಸಿರಾಟದ ವ್ಯವಸ್ಥೆ
ಶೀತ ಮತ್ತು ಕೆಮ್ಮಿಗೂ ಇದು ಪರಿಹಾರವಾಗಿದೆ. ಈ ಎಲೆ ಉಸಿರಾಟದ ತೊಂದರೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಉಸಿರಾಟದ ಸೋಂಕುಗಳನ್ನು ತಡೆಯುತ್ತದೆ. ಇದರ ಆಂಟಿ-ವೈರಲ್ ಗುಣಲಕ್ಷಣಗಳು ಶೀತ ಮತ್ತು ಕೆಮ್ಮನ್ನು ಉಂಟುಮಾಡುವ ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.
ಮುಟ್ಟಿನ ನೋವು ಕಡಿಮೆ ಮಾಡುತ್ತದೆ
ಮಹಿಳೆಯರಲ್ಲಿ ಮುಟ್ಟಿನ ನೋವನ್ನು ನಿವಾರಿಸಲು ದೊಡ್ಡಪತ್ರೆ ಸಹಾಯ ಮಾಡುತ್ತದೆ. ಇದರ ನೋವು ನಿವಾರಕ ಗುಣಲಕ್ಷಣಗಳು ನೋವನ್ನು ಕಡಿಮೆ ಮಾಡುತ್ತದೆ. ಋತುಚಕ್ರವನ್ನು ನಿಯಂತ್ರಣದಲ್ಲಿಡುತ್ತದೆ. ಮುಟ್ಟಿಗೆ ಸಂಬಂಧಿಸಿದ ಇತರ ರೋಗಲಕ್ಷಣಗಳನ್ನು ಸಹ ನಿವಾರಿಸುತ್ತದೆ.
ಚರ್ಮ ರೋಗಗಳಿಗೂ ಈ ಎಲೆ ಮದ್ದು. ಮೊಡವೆ, ಕೀಟ ಕಡಿತ, ದದ್ದುಗಳಿಗೆ ಇದರ ರಸ ಬಳಸಬಹುದು. ಎಲೆಗಳನ್ನು ರುಬ್ಬಿಕೊಳ್ಳಿ ಸಮಸ್ಯೆ ಇರುವ ಭಾಗಕ್ಕೆ ಹಚ್ಚಿ, ಉಗುರು ಬೆಚ್ಚಗಿನ ನೀರಿನಿಂದ ತೊಳೆಯಬಹುದು.
ದೊಡ್ಡಪತ್ರೆ ಎಲೆಯನ್ನು ಬಾಡಿಸಿ ಅದರ ರಸವನ್ನು ನೇರವಾಗಿ ಬಳಸಬಹುದು. ಇಲ್ಲವಾದಲ್ಲಿ ಚಹಾ ಮಾಡಿ ಅದಕ್ಕೆ ಜೇನುತುಪ್ಪ ಬೆರೆಸಿ ಕುಡಿಯಬಹುದು.
ಇನ್ನಷ್ಟು ಆರೋಗ್ಯ ಸಲಹೆಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವ ಬದಲು ಈ ರೀತಿ ಲವಂಗದ ನೀರು ಮಾಡಿ ಕುಡಿಯಿರಿ; ಆರೋಗ್ಯ ಸುಧಾರಣೆಗೆ ಇದು ಉಪಯುಕ್ತ