ಕಷ್ಟಪಟ್ಟು ದುಡಿದ ಹಣ ಉಳಿತಾಯ ಆಗ್ತಿಲ್ವ? ಈ ರೀತಿಯ ಖರ್ಚುಗಳಿಗೆ ಇಂದೇ ಕಡಿವಾಣ ಹಾಕಿ, ಹಣ ಉಳಿಸಲು ಇಲ್ಲಿದೆ ಸೂಪರ್ ಟಿಪ್ಸ್
ಈಗಿನ ಕಾಲದಲ್ಲಿ ಹಣವಿಲ್ಲದೇ ಜೀವನವಿಲ್ಲ. ಪ್ರತಿಯೊಂದನ್ನು ಹಣ ಕೊಟ್ಟೇ ಖರೀದಿಸಬೇಕು. ಹಾಗಂತ ಅಗತ್ಯಕ್ಕಿಂತ ಅನಗತ್ಯ ವಸ್ತುಗಳನ್ನೇ ಹೆಚ್ಚು ಖರೀದಿಸಿದರೆ, ಕಷ್ಟ ಪಟ್ಟು ದುಡಿದ ಹಣ ಅನಾವಶ್ಯಕವಾಗಿ ಖರ್ಚಾಗುತ್ತದೆ. ಹಾಗಾದರೆ ಯಾವ ವಸ್ತುಗಳನ್ನು ಖರೀದಿಸುವ ಮೊದಲು ಯೋಚಿಸಬೇಕು ಇಲ್ಲಿದೆ ಓದಿ.
ಎಷ್ಟು ದುಡಿದರೂ ಕೈಯಲ್ಲಿ ಹಣವೇ ನಿಲ್ಲುವುದಿಲ್ಲ ಎಂದು ಹೇಳುವುದನ್ನು ನಾವು ಸಾಕಷ್ಟು ಸಲ ಕೇಳಿರುತ್ತೇವೆ. ಅಲ್ಲಿ ದುಡಿಮೆ ಚೆನ್ನಾಗಿಲ್ಲ ಎಂದು ಅರ್ಥವಲ್ಲ, ಹಣವನ್ನು ಸರಿಯಾಗಿ ಖರ್ಚು ಮಾಡುವ ವಿಧಾನ ತಿಳಿಯದಿರಬಹುದು. ಅಂದರೆ ಅನಗತ್ಯವಾಗಿ ಹಣವನ್ನು ಖರ್ಚು ಮಾಡುವ ಅಭ್ಯಾಸ ಬೆಳೆಸಿಕೊಂಡಿರಬಹುದು. ಎಷ್ಟೋ ಸಲ ಹಣ ಎಲ್ಲಿ ಖರ್ಚಾಗುತ್ತಿದೆ ಎಂದೇ ತಿಳಿದುಬರುವುದಿಲ್ಲ. ಉಳಿತಾಯ ಮಾಡಬಹುದಾದ ಕಡೆಗಳಲ್ಲಿಯೂ ಹಣ ಪೋಲಾಗುತ್ತಿರುತ್ತದೆ. ಹಣ ಉಳಿತಾಯ ಮಾಡಬೇಕೆಂದರೆ ಯಾವುದು ಬೇಕು, ಯಾವುದು ಬೇಡ ಎಂಬುದನ್ನು ಮೊದಲು ಸರಿಯಾಗಿ ತಿಳಿದಿರಬೇಕು. ಆಗ ಅರಿವಿಲ್ಲದೇ ಹಣ ಸೋರಿಕೆಯಾಗುವುದನ್ನು ತಡೆಯಬಹುದು. ಹಣ ಹೆಚ್ಚಾಗಿ ಖರ್ಚಾಗುವುದು ದಿನನಿತ್ಯದ ವಸ್ತುಗಳು ಮತ್ತು ಆಕರ್ಷಕವಾಗಿ ಕಾಣಿಸುವ ವಸ್ತುಗಳ ಖರೀದಿಯಲ್ಲಿ. ಅಷ್ಟೇ ಅಲ್ಲ ಈಗೀಗ ಕಣ್ಣಿಗೆ ಕಂಡ ವಸ್ತುಗಳೆಲ್ಲವನ್ನು ಖರೀದಿಸುವ ಅಭ್ಯಾಸ ಹೆಚ್ಚಾಗುತ್ತಿದೆ. ಆ ವಸ್ತುಗಳ ಅವಶ್ಯಕತೆ ತಮಗೆ ಇದೆಯೇ ಅಥವಾ ಇಲ್ಲವೇ ಎಂದು ಯೋಚಿಸುವುದೂ ಇಲ್ಲ. ಇದರಿಂದ ಆರ್ಥಿಕವಾಗಿ ಕಷ್ಟ ಎದುರಿಸುವ ಸಂದರ್ಭ ಬರುತ್ತದೆ. ಹಾಗಾಗಿ ಕೆಲವೊಂದರಲ್ಲಿ ಹಣ ಉಳಿತಾಯ ಮಾಡಿದರೆ ಅಗತ್ಯವಿರುವಲ್ಲಿ ಖರ್ಚು ಮಾಡಬಹುದಾಗಿದೆ. ಹಾಗಾದರೆ ಹಣ ಎಲ್ಲೆಲ್ಲಿ ಉಳಿತಾಯ ಮಾಡಬಹುದು ಇಲ್ಲಿದೆ ಓದಿ.
ನೀರಿನ ಬಾಟಲಿ: ಇತ್ತೀಚೆಗೆ ನೀವು ಗಮನಿಸಿರಬಹುದು, ಮನೆಯಿಂದ ಹೊರಗೆ ಹೊರಟರೆ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಹೋಗುವ ಅಭ್ಯಾಸ ಕಡಿಮೆಯಾಗುತ್ತಿದೆ. ಮನೆಯಿಂದ ಕೊಂಡೊಯ್ಯುವ ವೃಥಾ ಚಿಂತೆ ಏಕೆ? ಅಲ್ಲಿಯೇ ದುಡ್ಡು ಕೊಟ್ಟು ಕೊಂಡರಾಯಿತು ಎನ್ನುವ ಯೋಚನೆಯೇ ಹೆಚ್ಚು. ಇದಕ್ಕೆ ಕಾರಣವಿಷ್ಟೇ ಈಗ ಎಲ್ಲ ಕಡೆ ದುಡ್ಡು ಕೊಟ್ಟರೆ ಸಾಕು ನೀರಿನ ಬಾಟಲಿಗಳು ಸಿಗುತ್ತವೆ. ಆದರೆ ಹಾಗೆ ಮಾಡಿದರೆ ನಿಮ್ಮ ಹಣ ಸುಮ್ಮನೆ ವ್ಯಯವಾಗುತ್ತದೆ. ಅದರ ಬದಲಿಗೆ ಮನೆಯಿಂದ ಹೊರಡುವಾಗ ನೀರು ತೆಗೆದುಕೊಂಡು ಹೋಗುವ ಅಭ್ಯಾಸ ಮಾಡಿಕೊಂಡರೆ, ನೀರಿಗಾಗಿ ಖರ್ಚಾಗುವ ಹೆಚ್ಚುವರಿ ಹಣವನ್ನು ಉಳಿತಾಯ ಮಾಡಬಹುದು. ಜೊತೆಗೆ ಪ್ಲಾಸ್ಟಿಕ್ ಬಾಟಲಿಗಳ ಬಳಕೆಯೂ ಕಡಿಮೆಯಾಗುತ್ತದೆ.
ಪುಸ್ತಕ ಮತ್ತು ಮ್ಯಾಗಝಿನ್‌ಗಳು: ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲಾ ಪುಸ್ತಕಗಳನ್ನು ಖರೀದಿಸಿ ಓದಬೇಕೆಂದಿಲ್ಲ. ಬಹುತೇಕ ಎಲ್ಲಾ ಪುಸ್ತಕಗಳು ಆನ್‌ಲೈನ್ ಆವೃತ್ತಿಯಲ್ಲಿ ಸಿಗುತ್ತವೆ. ಕೆಲವು ಉಚಿತವಾಗಿ ಲಭ್ಯವಿದ್ದರೆ ಇನ್ನು ಕೆಲವನ್ನು ಬಾಡಿಗೆಗೆ ಖರೀದಿಸಬಹುದು ಅಥವಾ ಪೂರ್ತಿ ಹಣ ನೀಡಿ ಪಿಡಿಎಫ್ ಮಾದರಿಯಲ್ಲಿ ಖರೀದಿಸಿಟ್ಟುಕೊಳ್ಳಬಹುದು. ಪುಸ್ತಕಗಳ ಖರೀದಿಗೆಂದು ಹಣ ಖರ್ಚು ಮಾಡುವ ಬದಲಿಗೆ ಈಗಿರುವ ಆಯ್ಕೆಗಳನ್ನು ಬಳಸಿಕೊಳ್ಳಬಹುದು. ನಿಮ್ಮ ಊರಿನಲ್ಲಿರುವ ಗ್ರಂಥಾಲಯದಲ್ಲಿ ಹೆಸರು ನೋಂದಾಯಿಸಿ, ಅಲ್ಲಿರುವ ಪುಸ್ತಕಗಳನ್ನು ವಾರ ಅಥವಾ ತಿಂಗಳು ಲೆಕ್ಕದಲ್ಲಿ ತೆಗೆದುಕೊಂಡು ಓದಿ ಹಿಂತಿರುಗಿಸಬಹುದು. ಅತಿ ಅಗತ್ಯವಿರುವ ಪುಸ್ತಕಗಳನ್ನಷ್ಟೇ ಖರೀದಿಸಿಟ್ಟುಕೊಳ್ಳಬಹುದು. ಇದರಿಂದ ನಿಮ್ಮ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಹಣವೂ ಉಳಿತಾಯವಾಗುತ್ತದೆ.
ದುಬಾರಿ ಉಡುಪು ಮತ್ತು ಸೀರೆಗಳು: ಈಗೀಗ ಬಟ್ಟೆಯ ಮೇಲಿನ ವ್ಯಾಮೋಹ ಅತಿಯಾಗುತ್ತಿದೆ. ಒಂದು ಸಮಾರಾಂಭಕ್ಕೆ ತೊಟ್ಟಿದ್ದ ಉಡುಪು ಅಥವಾ ಸೀರೆಯನ್ನು ಮತ್ತೊಂದು ಸಮಾರಂಭಕ್ಕೆ ತೊಡಲು ಮನಸ್ಸು ಮಾಡದವರಿದ್ದಾರೆ. ಅಷ್ಟೇ ಅಲ್ಲದೇ ಎಲ್ಲಾ ಸಂದರ್ಭಗಳಲ್ಲೂ ದುಬಾರಿ ಬಟ್ಟೆಗಳನ್ನು ಆಯ್ದುಕೊಳ್ಳುವ ಅಭ್ಯಾಸ ರೂಢಿಸಿಕೊಳ್ಳುತ್ತಿದ್ದಾರೆ. ಆದರೆ ಆ ರೀತಿ ಮಾಡುವುದರಿಂದ ಅವಶ್ಯಕತೆ ಇಲ್ಲದ ಕಡೆಯಲ್ಲೂ ಹೆಚ್ಚು ಹಣ ಖರ್ಚಾಗುತ್ತದೆ. ಹಾಗಾಗಿ ಬಟ್ಟೆಗಳನ್ನು ದಿನನಿತ್ಯಕ್ಕೆ ಬೇರೆ ರೀತಿ ಮತ್ತು ವಿಶೇಷ ಸಮಾರಂಭ, ಪ್ರವಾಸಗಳಿಗೆ ಬೇರೆ ರೀತಿಯಾಗಿ ಖರೀದಿಸಿದರೆ ಆಗ ನಿಮ್ಮ ಹಣ್ಣ ಉಳಿತಾಯವಾಗುತ್ತದೆ.
OTT ಚಂದಾದಾರಿಕೆ: ಈಗಂತೂ OTT ಯ ಕಾಲ. ಮನೆಯಲ್ಲಿಯೇ ಕುಳಿತು ಸಿನೆಮಾ, ವೆಬ್ ಸೀರಿಸ್ ನೋಡುವುದಕ್ಕೆ ಜನ ಹೆಚ್ಚು ಆಸಕ್ತಿವಹಿಸುತ್ತಿದ್ದಾರೆ. ಹಾಗಾಗಿ ಬಹಳಷ್ಟು OTT ಸೈಟ್‌ಗಳ ಚಂದಾದಾರಿಕೆಯನ್ನು ಪಡೆದುಕೊಂಡಿರುತ್ತಾರೆ. ಆದರೆ ಕೆಲವು ಮೂವಿ ಮತ್ತು ಹಾಡುಗಳು ಆನ್‌ಲೈನ್‌ನಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಹಾಗಾಗಿ ಎಲ್ಲಾ OTT ಫ್ಲಾಟಫಾರ್ಮ್‌ಗಳ ಚಂದಾದಾರಿಕೆ ಪಡೆದು ಹಣ ವ್ಯಯ ಮಾಡುವ ಬದಲಿಗೆ ಮುಖ್ಯವಾಗಿ ಬೇಕಾಗಿರುವುದಕ್ಕೆ ಮಾತ್ರ ಚಂದಾದಾರರಾಗಬಹುದು.
ಗ್ರಹೋಪಯೋಗಿ ವಸ್ತುಗಳು: ಡಿಟರ್ಜೆಂಟ್, ಸಾಬೂನು, ಹಾಗೂ ಡಿಶ್‌ವಾಶ್‌ಗಳು ಈಗ ದುಬಾರಿಯಾಗಿದೆ. ಹಾಗಾಗಿ ದೊಡ್ಡ ಬ್ರಾಂಡ್‌ಗಳನ್ನು ಖರೀದಿಸಬೇಡಿ. ಬದಲಿಗೆ ಉತ್ತಮ ಗುಣಮಟ್ಟವಿರುವ ಕಡಿಮೆ ಬೆಲೆಯ ವಸ್ತುಗಳನ್ನು ಖರೀದಿಸಬಹುದು. ಪ್ರತಿಯೊಂದು ಕೆಲಸಕ್ಕೂ ಟಿಶ್ಯೂ ಪೇಪರ್ ಅಥವಾ ಪೇಪರ್ ಟವಲ್ ಬಳಸುವ ಬದಲಿಗೆ ಹತ್ತಿ ಬಟ್ಟೆಯ ನ್ಯಾಪ್ಕಿನ್‌ಗಳನ್ನು ಬಳಸಬಹುದು. ಏಕೆಂದರೆ ಅವುಗಳನ್ನು ತೊಳೆದು ಮರುಬಳಕೆ ಮಾಡಬಹುದು. ಒಮ್ಮೆ ಖರೀದಿಸಿದರೆ ಬಹಳ ದಿನಗಳವರೆಗೆ ಉಪಯೋಗಕ್ಕೆ ಬರುವುದಿರಿಂದ ಅನಾವಶ್ಯಕವಾಗಿ ಹಣ ಪೋಲಾಗುವುದು ನಿಲ್ಲುತ್ತದೆ.
ವಾರ್ಷಿಕ ಚಂದಾದಾರಿಕೆಗೆ ಆದ್ಯತೆ ಕೊಡಿ: ಕೆಲವು ಪೇಪರ್ ಮತ್ತು ನಿಯತಕಾಲಿಕಗಳು ರಿಯಾಯಿತಿ ದರದಲ್ಲಿ ವಾರ್ಷಿಕ ಚಂದಾದಾರಿಕೆಯನ್ನು ನೀಡುತ್ತವೆ. ಅಂತಹವುಗಳಿಗೆ ಹೆಚ್ಚು ಆದ್ಯತೆ ಕೊಡಿ. ಪ್ರತಿ ತಿಂಗಳು ಹಣ ಪಾವತಿಸಿ ಹೆಚ್ಚಿಗೆ ಹಣ ನೀಡುವ ಬದಲಿಗೆ ವಾರ್ಷಿಕ ಅಥವಾ ಅರ್ಧವಾರ್ಷಿಕ ಚಂದಾದಾರಿಕೆ ಪಡೆದರೆ ಅದು ಹಣ ಉಳಿತಾಯ ಮಾಡುವ ಉತ್ತಮ ಯೋಜನೆಯಾಗಬಲ್ಲದು. ಮೊಬೈಲ್ ಡೇಟಾ ಪ್ಯಾಕ್ ಆಯ್ದುಕೊಳ್ಳುವಾಗಲೂ ಅದೇ ರೀತಿ ಯೋಚಿಸದರೆ ಹಣ ಉಳಿತಾಯವಾಗುತ್ತದೆ. ದಿನಕ್ಕೆ ಎಷ್ಟು ಡಾಟಾ ಬಳಸುತ್ತೀರಿ ಎಂದು ಅರಿತು ಪ್ಲಾನ್ ಆಯ್ದುಕೊಳ್ಳುವುದು ಜಾಣತನ.
ಆಟಿಕೆಗಳು: ಮಕ್ಕಳಿಗೆ ಆಟ ಆಡಲು ಬೇಕು ಎಂದು ಸಿಕ್ಕ ಸಿಕ್ಕ ವಸ್ತುಗಳೆಲ್ಲವನ್ನು ಖರೀದಿಸಬೇಡಿ. ಮಕ್ಕಳ ವಯಸ್ಸಿಗೆ ಅನುಗುಣವಾಗಿ ವಸ್ತುಗಳನ್ನು ಖರೀದಿಸಿ. ಚಿಕ್ಕ ಮಕ್ಕಳಿಗೆ ದೊಡ್ಡ ಕಾರು, ದುಬಾರಿ ಆಟಿಕೆ ಮತ್ತು ಗ್ಯಾಜೆಟ್‌ಗಳೆಲ್ಲವನ್ನು ಖರೀದಿಸಲು ಹಣವನ್ನು ವ್ಯಯ ಮಾಡಬೇಡಿ. ಒಮ್ಮೆ ಆಟ ಆಡಿ, ಮೂಲೆಗೆ ಸೇರುವ ಆಟಿಕೆಗಳು ಬೇಡವೇ ಬೇಡ. ಅದರ ಬದಲಿಗೆ ಮಕ್ಕಳ ಬುದ್ಧಿಶಕ್ತಿ ಮತ್ತು ಯೋಚನಾ ಶಕ್ತಿ ಹೆಚ್ಚಿಸುವ ಆಟಿಕೆಗಳನ್ನು ಖರೀದಿಸಿ. ಉಪಯುಕ್ತವೆನಿಸುವ ವಸ್ತುಗಳನ್ನು ಮಾತ್ರ ಖರೀದಿಸಿ. ಚಿಕ್ಕ ಮಕ್ಕಳ ಸಲುವಾಗಿ ಅನಗತ್ಯ ವಸ್ತುಗಳನ್ನು ಖರೀದಿಸಿ ದುಡ್ಡು ಹಾಳುಮಾಡುವುದರ ಬದಲಿಗೆ ಅದೇ ಹಣ ಕೂಡಿಟ್ಟರೆ ಮಕ್ಕಳ ಭವಿಷ್ಯಕ್ಕೆ ನೆರವಾಗುತ್ತದೆ.
ವಿಭಾಗ