ಆರ್‌ಡಿ ಸೇರಿ ಅಂಚೆ ಕಚೇರಿಯ ಜನಪ್ರಿಯ ಉಳಿತಾಯ ಯೋಜನೆಗಳ ಬಡ್ಡಿದರ ಹೀಗಿದೆ: ಯಾವ ಯೋಜನೆಗೆ ಎಷ್ಟು ಸಿಗ್ತಿದೆ? ಇಲ್ಲಿದೆ ವಿವರ
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಸತತ 3ನೇ ತ್ರೈಮಾಸಿಕದಲ್ಲೂ ಸ್ಥಿರವಾಗಿದ್ದು 2024ರಲ್ಲಿ ಸ್ಥಿರವಾದಂತಾಗಿದೆ. ಪಿಪಿಎಫ್ ಬಡ್ಡಿದರ 3 ವರ್ಷ ಹಿಂದೆ ಇಳಿಕೆಯಾಗಿ ಸ್ಥಿರವಾಗಿದೆ. ಈಗ ಕೇಂದ್ರ ಸರ್ಕಾರದ ಪ್ರಾಯೋಜಕತ್ವದ ಸಣ್ಣ ಉಳಿತಾಯದ ಯಾವ ಯೋಜನೆಗೆ ಎಷ್ಟು ಬಡ್ಡಿದರ ಇದೆ ಎಂಬುದನ್ನು ತಿಳಿಯೋಣ.
ನವದೆಹಲಿ/ಬೆಂಗಳೂರು: ಕೇಂದ್ರ ಹಣಕಾಸು ಸಚಿವಾಲಯ ರಾಷ್ಟ್ರೀಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಸತತ ಮೂರನೇ ತ್ರೈಮಾಸಿಕಕ್ಕೂ ಸ್ಥಿರವಾಗಿ ಉಳಿಸಿದೆ. ಅಂದರೆ ಡಿಸೆಂಬರ್ 31ರ ವರೆಗೂ ಕಳೆದ ತ್ರೈಮಾಸಿಕ ಅವಧಿಯ ಬಡ್ಡಿದರವೇ ಮುಂದುವರಿಯಲಿದೆ. ಕೇಂದ್ರ ಸರ್ಕಾರ ಬಹುತೇಕ ಎಲ್ಲ ಯೋಜನೆಗಳನ್ನೂ ಅಂಚೆ ಕಚೇರಿ ಮೂಲಕವೇ ನಿರ್ವಹಿಸುತ್ತಿದೆ. ಕೇಂದ್ರ ಸರ್ಕಾರವೇ ಈ ಯೋಜನೆಗಳನ್ನು ನಡೆಸುತ್ತಿರುವ ಕಾರಣ ಇದಕ್ಕೆ ಆರ್ಥಿಕ ಭದ್ರತೆ ಹೆಚ್ಚು. ದೇಶದ ಬಹುಸಂಖ್ಯಾತರು ಬಡ ಮತ್ತು ಕೆಳಮಧ್ಯಮ ವರ್ಗದವರಿದ್ದು, ಎಲ್ಲರೂ ಆರ್ಥಿಕ ಭದ್ರತೆ ಒದಗಿಸುವ ಈ ಯೋಜನೆಗಳನ್ನೇ ನಂಬಿಕೊಂಡು ಹೂಡಿಕೆ ಮಾಡುತ್ತಿದ್ದಾರೆ. ಅಲ್ಲದೆ ಉತ್ತಮ ರಿಟರ್ನ್ಸ್ ಕೂಡ ಸಿಗುವ ಯೋಜನೆಗಳೂ ಇದರಲ್ಲಿರುವುದು ಅದಕ್ಕೆ ಕಾರಣ.
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ
ಇಂಡಿಯಾ ಪೋಸ್ಟ್ ಮಾಹಿತಿ ಪ್ರಕಾರ, 2024ರ ಡಿಸೆಂಬರ್ 31ರ ತನಕದ ವಿವಿಧ ರಾಷ್ಟ್ರೀಯ ಉಳಿತಾಯ ಯೋಜನೆಗಳ ಬಡ್ಡಿದರ ವಿವರ ಹೀಗಿದೆ-
1) ಅಂಚೆ ಕಚೇರಿ ಉಳಿತಾಯ ಖಾತೆ ಬಡ್ಡಿದರ- ಶೇಕಡ 4
2) 1 ವರ್ಷದ ಟೈಮ್ ಡೆಪಾಸಿಟ್ ಬಡ್ಡಿದರ - ಶೇಕಡ 6.9 (10,000 ರೂಪಾಯಿಗೆ ವಾರ್ಷಿಕ ಬಡ್ಡಿ 708 ರೂಪಾಯಿ)
3) 2 ವರ್ಷದ ಟೈಮ್ ಡೆಪಾಸಿಟ್ ಬಡ್ಡಿದರ - ಶೇಕಡ 7 ( 10,000 ರೂ ಗೆ ವಾರ್ಷಿಕ ಬಡ್ಡಿ 719 ರೂ)
4) 3 ವರ್ಷದ ಟೈಮ್ ಡೆಪಾಸಿಟ್ ಬಡ್ಡಿದರ - ಶೇಕಡ 7.1 ( 10,000 ರೂ ಗೆ ವಾರ್ಷಿಕ ಬಡ್ಡಿ 719 ರೂ)
5) 5 ವರ್ಷದ ಟೈಮ್ ಡೆಪಾಸಿಟ್ ಬಡ್ಡಿದರ - ಶೇಕಡ 7.5 ( 10,000 ರೂ ಗೆ ವಾರ್ಷಿಕ ಬಡ್ಡಿ 771 ರೂ)
6) ಅಂಚೆ ಕಚೇರಿಯ ಆರ್‌ಡಿ ಖಾತೆ: ಬಡ್ಡಿದರ ಶೇಕಡ 6.7
7) ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್): ಬಡ್ಡಿ ದರ ವಾರ್ಷಿಕ ಶೇಕಡ 8.2 (10,000 ರೂ ಗೆ ತ್ರೈಮಾಸಿಕ ಅವಧಿಗೆ 205 ರೂ)
8) ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (ಪಿಒಎಂಐಎಸ್): ಬಡ್ಡಿದರ ವಾರ್ಷಿಕ ಶೇಕಡ 7.4 (10,000 ರೂ ಗೆ ತಿಂಗಳಿಗೆ 62 ರೂ.)
9) ರಾಷ್ಟ್ರೀಯ ಉಳಿತಾಯ ಪ್ರಮಾಣ ಪತ್ರ (ಎನ್‌ಎಸ್‌ಸಿ) ಏಳನೇ ಆವೃತ್ತಿ: ಬಡ್ಡಿದರ ವಾರ್ಷಿಕ ಶೇಕಡ 7.7 (10,000 ರೂಪಾಯಿ ಮೆಚ್ಯುರಿಟಿ ಮೊತ್ತ 14,490 ರೂ)
10) ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್): ಬಡ್ಡಿ ದರ ವಾರ್ಷಿಕ ಶೇಕಡ 7.1
11) ಕಿಸಾನ್ ವಿಕಾಸ ಪತ್ರ ಬಡ್ಡಿದರ ಶೇಕಡ 7.5 (115 ತಿಂಗಳಿಗೆ ಮೆಚ್ಯುರಿಟಿ)
12) ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರ: ಬಡ್ಡಿ ದರ ವಾರ್ಷಿಕ ಶೇಕಡ 7.5 (10,000 ರೂಪಾಯಿಗೆ ಮೆಚ್ಯುರಿಟಿ ಮೊತ್ತ 11,602 ರೂ)
13) ಸುಕನ್ಯಾ ಸಮೃದ್ಧಿ ಖಾತೆ ಯೋಜನೆ (ಎಸ್‌ಎಸ್‌ವೈ): ಬಡ್ಡಿ ದರ ವಾರ್ಷಿಕ ಶೇಕಡ 8.2
2024ರಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಸ್ಥಿರ
ಕೇಂದ್ರ ಸರ್ಕಾರವು ಪಿಪಿಎಫ್, ಸುಕನ್ಯಾ ಸಮೃದ್ಧಿ ಸೇರಿ ಎಲ್ಲ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರವನ್ನು ಕೊನೆಯದಾಗಿ ಪರಿಷ್ಕರಿಸಿದ್ದು 2023ರ ಡಿಸೆಂಬರ್ 31ಕ್ಕೆ. ಅದರ ನಂತರ ಬಡ್ಡಿದರ ಸ್ಥಿರವಾಗಿ ಉಳಿದಿದೆ. ಸರಳವಾಗಿ ಹೇಳಬೇಕು ಎಂದರೆ 2024ರ ಜನವರಿ 1 ರಿಂದ ಡಿಸೆಂಬರ್ 31ರ ತನಕ ಬಡ್ಡಿ ಪರಿಷ್ಕರಣೆ ಇಲ್ಲದೇ ಸ್ಥಿರವಾಗಿ ಒಂದೇ ಬಡ್ಡಿ ಮುಂದುವರಿದಂತಾಗಿದೆ.
ಇನ್ನು ಪಿಪಿಎಫ್ ವಿಚಾರಕ್ಕೆ ಬಂದರೆ ಕೇಂದ್ರ ಸರ್ಕಾರವು 2020-2021 ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಬಡ್ಡಿದರ ಪರಿಷ್ಕರಿಸಿದ್ದು ಬಿಟ್ಟರೆ, ನಂತರ ಬಡ್ಡಿದರ ಪರಿಷ್ಕರಿಸಿಲ್ಲ. ಸತತ ಮೂರು ವರ್ಷಗಳಿಂದ ಸಾರ್ವಜನಿಕ ಭವಿಷ್ಯ ನಿಧಿಯ ಬಡ್ಡಿದರವನ್ನು ಸ್ಥಿರವಾಗಿ ಇರಿಸಿದೆ. ಆ ಸಂದರ್ಭದಲ್ಲಿ ಅಂದರೆ 2020- 21ರಲ್ಲಿ ಪಿಪಿಎಫ್ ಬಡ್ಡಿದರವನ್ನು 7.9 ಪ್ರತಿಶತದಿಂದ 7.1 ಪ್ರತಿಶತಕ್ಕೆ ಇಳಿಕೆ ಮಾಡಲಾಗಿತ್ತು.
ವಿಭಾಗ