ಕನ್ನಡ ಸುದ್ದಿ  /  Lifestyle  /  Hyderabad Famous Spot Idli Recipe

Hyderabad Spot Idli: ಹೈದರಾಬಾದ್‌ ಫೇಮಸ್‌ ಸ್ಪಾಟ್‌ ಇಡ್ಲಿ ಟೇಸ್ಟ್‌ ಮಾಡಿದ್ದೀರಾ..ನಾಳೆ ಬ್ರೇಕ್‌ಫಾಸ್ಟ್‌ಗೆ ಅದನ್ನೇ ತಯಾರಿಸಿ

ಇದನ್ನು ತವಾ ಇಡ್ಲಿ ಎಂದೂ ಕರೆಯಲಾಗುತ್ತದೆ. ಬೆಣ್ಣೆ, ಗನ್‌ ಪೌಡರ್‌, ಈರುಳ್ಳಿ, ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ತಯಾರಿಸಲಾದ ಈ ಸ್ಪಾಟ್‌ ಇಡ್ಲಿಗೆ ಹೈದರಾಬಾದ್‌ನಲ್ಲಿ ಭಾರೀ ಡಿಮ್ಯಾಂಡ್‌ ಇದೆ. ಎರಡು ಇಡ್ಲಿಗೆ 70-80 ರೂಪಾಯಿ ಬೆಲೆ ಇದೆ. ಆದರೆ ಈ ಇಡ್ಲಿಯನ್ನು ನೀವು ಮನೆಯಲ್ಲೇ ತಯಾರಿಸಬಹುದು.

ಹೈದರಾಬಾದ್‌ ಫೇಮಸ್‌ ಸ್ಪಾಟ್‌ ಇಡ್ಲಿ
ಹೈದರಾಬಾದ್‌ ಫೇಮಸ್‌ ಸ್ಪಾಟ್‌ ಇಡ್ಲಿ (PC: Twitter)

ಸಂಜೆ ಆದ್ರೆ ಸಾಕು ಬಹುತೇಕ ಸಿಟಿಗಳಲ್ಲಿ ಹಾಗೂ ನಿಗದಿತ ಏರಿಯಾಗಳಲ್ಲಿ ಸ್ನಾಕ್ಸ್‌, ಫಾಸ್ಟ್‌ಫುಡ್‌ ಗಾಡಿಗಳು ಹಾಗೂ ರುಚಿಯಾದ ಬಗೆ ಬಗೆಯಾದ ತಿಂಡಿಗಳನ್ನು ಸವಿಯಲು ಜನರು ಜಮಾಯಿಸುವುದನ್ನು ನಾವು ನೋಡುತ್ತೇವೆ. ಒಂದೊಂದು ಕಡೆ ಒಂದೊಂದು ತಿಂಡಿ ಬಹಳ ಫೇಮಸ್‌. ಹಾಗೇ ಮುತ್ತಿನ ನಗರಿ ಹೈದರಾಬಾದ್‌ನ ಫೇಮಸ್‌ ತಿಂಡಿಗಳಲ್ಲಿ ಸ್ಪಾಟ್‌ ಇಡ್ಲಿ ಕೂಡಾ ಒಂದು.

ಇಡ್ಲಿಯನ್ನು ಹಬೆಯಲ್ಲಿ ಬೇಯಿಸದೆ, ವಿವಿಧ ರೀತಿಯ ಮಸಾಲೆಗಳೊಂದಿಗೆ ತವಾ ಮೇಲೆ ಬೇಯಿಸುವುದರಿಂದ ಇದಕ್ಕೆ ಸ್ಪಾಟ್‌ ಇಡ್ಲಿ ಎಂದು ಹೆಸರು ಬಂದಿದೆ. ಇದನ್ನು ತವಾ ಇಡ್ಲಿ ಎಂದೂ ಕರೆಯಲಾಗುತ್ತದೆ. ಬೆಣ್ಣೆ, ಗನ್‌ ಪೌಡರ್‌, ಈರುಳ್ಳಿ, ಹಾಗೂ ಇನ್ನಿತರ ಸಾಮಗ್ರಿಗಳನ್ನು ಬಳಸಿ ತಯಾರಿಸಲಾದ ಈ ಸ್ಪಾಟ್‌ ಇಡ್ಲಿಗೆ ಹೈದರಾಬಾದ್‌ನಲ್ಲಿ ಭಾರೀ ಡಿಮ್ಯಾಂಡ್‌ ಇದೆ. ಎರಡು ಇಡ್ಲಿಗೆ 70-80 ರೂಪಾಯಿ ಬೆಲೆ ಇದೆ. ಆದರೆ ಈ ಇಡ್ಲಿಯನ್ನು ನೀವು ಮನೆಯಲ್ಲೇ ತಯಾರಿಸಬಹುದು. ಒಮ್ಮೆ ಗನ್‌ ಪೌಡರ್‌/ಖಾರದ ಪುಡಿ ಮಾಡಿಟ್ಟುಕೊಂಡರೆ ನಿಮಗೆ ಬೇಕಾದಾಗಲೆಲ್ಲಾ ಬಳಸಿಕೊಳ್ಳಬಹುದು. ಇದನ್ನು ದೋಸೆಗೆ ಕೂಡಾ ಬಳಸಬಹುದು. ನೀವು ಮೊದಲೇ ಗನ್‌ ಪೌಡರ್‌ ತಯಾರಿಸಿಕೊಂಡರೆ, ಇಡ್ಲಿ, ದೋಸೆ ಮಾಡುವಾಗ ಇದನ್ನು ಬಳಸಬಹುದು. ಆಗ ಕೆಲಸ ಬೇಗ ಆಗುತ್ತದೆ.

ಸ್ಪಾಟ್‌ ಇಡ್ಲಿ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಇಡ್ಲಿ ಹಿಟ್ಟು ತಯಾರಿಸಲು

ಇಡ್ಲಿ ರವೆ - 1 1/2 ಕಪ್‌

ಉದ್ದಿನಬೇಳೆ - 1/2 ಕಪ್‌

ಮೆಂತ್ಯ - 1 ಟೀ ಸ್ಪೂನ್‌

ಅವಲಕ್ಕಿ - 3 ಟೇಬಲ್‌ ಸ್ಪೂನ್‌

ಉಪ್ಪು - ರುಚಿಗೆ ತಕ್ಕಷ್ಟು

ಗನ್‌ ಪೌಡರ್‌ ತಯಾರಿಸಲು

ಕಡ್ಲೆ ಬೇಳೆ - 2 ಟೇಬಲ್‌ ಸ್ಪೂನ್‌

ಧನಿಯಾ ಕಾಳು - 1 1/2 ಟೇಬಲ್‌ ಸ್ಪೂನ್‌

ಮೆಂತ್ಯ - 1/2 ಟೀ ಸ್ಪೂನ್‌

ಉದ್ದಿನ ಬೇಳೆ - 1 1/2 ಟೇಬಲ್‌ ಸ್ಪೂನ್

ಸಾಸಿವೆ - 1 ಟೀ ಸ್ಪೂನ್‌

ಜೀರ್ಗೆ - 1/2 ಟೇಬಲ್‌ ಸ್ಪೂನ್‌

ತುಪ್ಪ - 1/2 ಟೀ ಸ್ಪೂನ್

‌ಬೆಳ್ಳುಳ್ಳಿ ಎಸಳು - 4

ಕರಿಬೇವು - 5

ಹುಣಿಸೆ ಹಣ್ಣು - ಗೋಲಿ ಗಾತ್ರದ್ದು

ಕಾಶ್ಮೀರಿ ಕೆಂಪು ಮೆಣಸಿನ ಪುಡಿ - 3 ಟೇಬಲ್‌ ಸ್ಪೂನ್‌

ಉಪ್ಪು - 1 ಟೀ ಸ್ಪೂನ್

ಇನ್ನಿತರ ಸಾಮಗ್ರಿಗಳು

ಕತ್ತರಿಸಿದ ಈರುಳ್ಳಿ - 1 ಕಪ್‌

ಕತ್ತರಿಸಿದ ಕೊತ್ತಂಬರಿ ಸೊಪ್ಪು - 1 ಟೇಬಲ್‌ ಸ್ಪೂನ್‌

ಕತ್ತರಿಸಿದ ಟೊಮ್ಯಾಟೋ - 2 ಟೇಬಲ್‌ ಸ್ಪೂನ್‌

ಕತ್ತರಿಸಿದ ಹಸಿಮೆಣಸಿನಕಾಯಿ - 1/2 ಟೀ ಸ್ಫೂನ್

ಗನ್‌ ಪೌಡರ್‌ - 1 ಟೇಬಲ್‌ ಸ್ಪೂನ್

ಬೆಣ್ಣೆ - 4 ಟೇಬಲ್‌ ಸ್ಪೂನ್‌

ಸ್ಪಾಟ್‌ ಇಡ್ಲಿ ತಯಾರಿಸುವ ವಿಧಾನ

ಒಂದು ಬೌಲ್‌ನಲ್ಲಿ ರವೆ ಹಾಗೂ ಅದು ಮುಳುಗುವಷ್ಟು ನೀರು ಸೇರಿಸಿ, ರಾತ್ರಿಯಿಡೀ ಬಿಡಿ.

ಪ್ರತ್ಯೇಕ ಪಾತ್ರೆಯಲ್ಲಿ ಉದ್ದಿನಬೇಳೆ, ಮೆಂತ್ಯ, ಅವಲಕ್ಕಿ ಸೇರಿಸಿ ಅದನ್ನು ಕೂಡಾ ರಾತ್ರಿಯಿಡೀ ನೆನೆಸಿ.

ಮರುದಿನ ಉದ್ದಿನ ಬೇಳೆ ನೀರು ಶೋಧಿಸಿ, ಅವಲಕ್ಕಿ ಸೇರಿಸಿ ಗಟ್ಟಿಯಾಗಿ ಗ್ರೈಂಡ್‌ ಮಾಡಿಕೊಳ್ಳಿ.

ರವೆಯಿಂದ ನೀರನ್ನು ಹಿಂಡಿ ಅದನ್ನು ಒಂದು ಪಾತ್ರೆಗೆ ಸೇರಿಸಿ, ಜೊತೆಗೆ ಉದ್ದಿನ ಬೇಳೆ, ಸ್ವಲ್ಪ ಉಪ್ಪು ಸೇರಿಸಿ ಎಲ್ಲವನ್ನೂ ಚೆನ್ನಾಗಿ ಹೊಂದಿಕೊಳ್ಳುವಂತೆ ಮಿಕ್ಸ್‌ ಮಾಡಿ ಮತ್ತೆ 1/2 ಗಂಟೆಗಳ ಕಾಲ ಬಿಡಿ.

ಖಾರದ ಪುಡಿ ಮಾಡಲು ( ಹಿಂದಿನ ದಿನ ಮಾಡಿಟ್ಟುಕೊಂಡರೆ ಒಳ್ಳೆಯದು)

ಒಂದು ಪ್ಯಾನ್‌ ಬಿಸಿ ಮಾಡಿಕೊಂಡು ಕಡ್ಲೆಬೇಳೆ, ಉದ್ದಿನ ಬೇಳೆ, ಧನಿಯಾ ಕಾಳು, ಮೆಂತ್ಯ ಸೇರಿಸಿ

ಜೊತೆಗೆ ಜೀರ್ಗೆ, ಸಾಸಿವೆ, ಸ್ವಲ್ಪ ತುಪ್ಪ ಸೇರಿಸಿ ಕಡಿಮೆ ಉರಿಯಲ್ಲಿ ಡ್ರೈ ರೋಸ್ಟ್‌ ಮಾಡಿ

ನಂತರ ಬೆಳ್ಳುಳ್ಳಿ ಎಸಳು, ಕರಿಬೇವು, ಹುಣಿಸೆಹಣ್ಣು ಸೇರಿಸಿ 30 ಸೆಕೆಂಡ್‌ಗಳ ಕಾಲ ಹುರಿಯಿರಿ

ಮಿಶ್ರಣ ತಣ್ಣಗಾದ ನಂತರ ಉಪ್ಪು, ಕಾಶ್ಮೀರಿ ರೆಡ್‌ ಚಿಲ್ಲಿ ಪೌಡರ್‌ ಸೇರಿಸಿ ಪುಡಿ ಮಾಡಿಕೊಳ್ಳಿ ( ಬಹಳ ಸಣ್ಣದಾಗಿಯೂ ಬೇಡ, ದಪ್ಪನಾಗಿ ಕೂಡಾ ಬೇಡ)

ಈಗ ಇಡ್ಲಿ ತಯಾರಿಸುವ ಸಮಯ

ಒಂದು ತವಾಗೆ ಸಣ್ಣಗೆ ಹೆಚ್ಚಿದ ಈರುಳ್ಳಿ, ಕೊತ್ತಂಬರಿ ಸೊಪ್ಪು, ಟೊಮ್ಯಾಟೋ, ಹಸಿಮೆಣಸಿನಕಾಯಿ, ಗನ್‌ ಪೌಡರ್‌, ಬೆಣ್ಣೆ ಸೇರಿಸಿ ಮಿಕ್ಸ್‌ ಮಾಡಿ

ಬೆಣ್ಣೆ ಕರಗಿದ ನಂತರ ಮಿಶ್ರಣವನ್ನು ತವಾ ಮೇಲೆಯೇ 3-4 ಭಾಗ ಮಾಡಿಕೊಳ್ಳಿ. ಒಂದೊಂದು ಭಾಗದ ಮೇಲೆ ಅರ್ಧ ಸೌಟು ಇಡ್ಲಿ ಹಿಟ್ಟು ಸೇರಿಸಿ.

ಅದರ ಮೇಲೆ ಮತ್ತಷ್ಟು ಗನ್‌ ಪೌಡರ್‌, ಕೊತ್ತಂಬರಿ ಸೊಪ್ಪು, ಸ್ವಲ್ಪ ಬೆಣ್ಣೆ ಸೇರಿಸಿ ಮುಚ್ಚಳ ಮುಚ್ಚಿ.

2-3 ನಿಮಿಷದ ನಂತರ ಮುಚ್ಚಳ ತೆಗೆದು ಮತ್ತೊಂದು ಕಡೆ ತಿರುಗಿಸಿ ರೋಸ್ಟ್‌ ಮಾಡಿ ಸ್ಟೋವ್‌ ಆಫ್‌ ಮಾಡಿ.

ತೆಂಗಿನಕಾಯಿ ಚಟ್ನಿಯೊಂದಿಗೆ ಸ್ಪಾಟ್‌ ಇಡ್ಲಿಯನ್ನು ಸರ್ವ್‌ ಮಾಡಿ.

ಗಮನಿಸಿ: ಈರುಳ್ಳಿ , ಟೊಮ್ಯಾಟೋ, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪನ್ನು ಆದಷ್ಟು ಸಣ್ಣದಾಗಿ ಕತ್ತರಿಸಿಕೊಳ್ಳಿ.

ಇಡ್ಲಿಹಿಟ್ಟನ್ನು ಮಿಕ್ಸ್‌ ಮಾಡಿದ ನಂತರ ಸಮಯ ಇದ್ದರೆ 1 ಗಂಟೆ ಕಾಲ ಬಿಡಿ.

ಗನ್‌ ಪೌಡರ್‌ ತಯಾರಿಸಲು ಸಮಯ ಇಲ್ಲದಿದ್ದರೆ ಹೊರಗಿನಿಂದ ಕೊಂಡು ತನ್ನಿ, ಚಟ್ನಿ ಪುಡಿ ಕೂಡಾ ಬಳಸಬಹುದು.

ವಿಭಾಗ