ಉಜ್ಜಯನಿಯಲ್ಲಿದೆ ಭಾರತ ಮಾತೆಯ ಭವ್ಯ ಮಂದಿರ: ಭಾರತ್‌ ಮಾತಾ ಮಂದಿರ ಮತ್ತು ಅಖಂಡ ಭಾರತ ನಕ್ಷೆಯ ವೈಶಿಷ್ಟ್ಯ
ಕನ್ನಡ ಸುದ್ದಿ  /  ಜೀವನಶೈಲಿ  /  ಉಜ್ಜಯನಿಯಲ್ಲಿದೆ ಭಾರತ ಮಾತೆಯ ಭವ್ಯ ಮಂದಿರ: ಭಾರತ್‌ ಮಾತಾ ಮಂದಿರ ಮತ್ತು ಅಖಂಡ ಭಾರತ ನಕ್ಷೆಯ ವೈಶಿಷ್ಟ್ಯ

ಉಜ್ಜಯನಿಯಲ್ಲಿದೆ ಭಾರತ ಮಾತೆಯ ಭವ್ಯ ಮಂದಿರ: ಭಾರತ್‌ ಮಾತಾ ಮಂದಿರ ಮತ್ತು ಅಖಂಡ ಭಾರತ ನಕ್ಷೆಯ ವೈಶಿಷ್ಟ್ಯ

78 ನೇ ಸ್ವಾತಂತ್ರ ದಿನಾಚರಣೆಯ ಈ ಸಂದರ್ಭದಲ್ಲಿ ಮಧ್ಯ ಪ್ರದೇಶದ ಉಜ್ಜಯನಿಯಲ್ಲಿರುವ ಭಾರತ ಮಾತಾ ಮಂದಿರದ ವೈಶಿಷ್ಟ್ಯಗಳನ್ನು ತಿಳಿದುಕೊಳ್ಳಲು ಸರಿಯಾದ ಸಮಯ. ಅಮೃತಶಿಲೆಯಲ್ಲಿ ಕೆತ್ತಲಾದ ಭಾರತಮಾತೆ ಮತ್ತು ಅಖಂಡ ಭಾರತ ನಕ್ಷೆ ದೇಶಕ್ಕೆ ನೀಡಿರುವ ಗೌರವವಾಗಿದೆ. (ಬರಹ: ಅರ್ಚನಾ ವಿ.ಭಟ್)

ಉಜ್ಜಯನಿಯ ಭಾರತ್‌ ಮಾತಾ ಮಂದಿರ.
ಉಜ್ಜಯನಿಯ ಭಾರತ್‌ ಮಾತಾ ಮಂದಿರ. (PC: https://x.com/BharatTemples_/status/1308352374990282752/photo/1)

ಭಾರತ ಮಾತೆ ನಮ್ಮನ್ನೆಲ್ಲ ಪೊರೆಯುವ ತಾಯಿ. ನಮ್ಮ ದೇಶದಲ್ಲಿ ಕೆಲವೇ ಕೆಲವು ಭಾರತ ಮಾತೆಯ ಮಂದಿರವಿದೆ. ಅದರಲ್ಲಿ ಮಧ್ಯ‍ ಪ್ರದೇಶದ ಉಜ್ಜಯನಿಯಲ್ಲಿರುವ ಭಾರತ ಮಾತೆಯ ಭವ್ಯ ಮಂದಿರವೂ ಒಂದು. ಅದನ್ನು ಭಾರತ್‌ ಮಾತಾ ಮಂದಿರ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಮಂದಿರ ಎಂದರೆ ಸಾಂಪ್ರದಾಯಿಕ ದೇವರುಗಳಿರುವ ಜಾಗ ಎಂದು ತಿಳಿಯಲಾಗಿದೆ. ಆದರೆ ಈ ಮಂದಿರುವ ಉಪಖಂಡವಾದ ಭಾರತವನ್ನು ಸಂಕೇತಿಸುವ ಅಖಂಡ ಭಾರತದ ನಕ್ಷೆಯನ್ನು ಒಳಗೊಂಡಿರುವ ಭಾರತಮಾತೆಯ ಮಂದಿರವಾಗಿದೆ. ಇದನ್ನು ಅಮೃತಶಿಲೆಯಲ್ಲಿ ಕೆತ್ತಲಾಗಿದೆ. ಈ ರೀತಿ ದೇಶವನ್ನು ಪೊರೆಯುವ ತಾಯಿಗಾಗಿ ಕಟ್ಟಿರುವ ವಿಶ್ವದ ಮೊದಲ ದೇಗುಲ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿದೆ. ಭಾರತ್‌ ಮಾತಾ ಮಂದಿರುವ ನಮ್ಮ ರಾಷ್ಟ್ರದ ಶ್ರೀಮಂತ ಸಾಂಸ್ಕೃತಿಕ ಪರಂಪರೆಗೆ ಸಾಕ್ಷಿಯಾಗಿದೆ. ಇದು ಏಕತೆಯ ಸಂಕೇತವಾಗಿದೆ. ಈ ಮಂದಿರಕ್ಕೆ ಅನೇಕ ಜನರು ಭೇಟಿ ನೀಡುತ್ತಾರೆ. ಈ ಅಪರೂಪದ ದೇವಸ್ಥಾನಕ್ಕೆ ಭೇಟಿ ನೀಡುವುದೆಂದರೆ ಭಾರತದ ಆತ್ಮಕ್ಕೆ ಗೌರವವನ್ನು ಸಲ್ಲಿಸಿದಂತೆ. ಭಾರತ್‌ ಮಾತಾ ಮಂದಿರವು ವಿಶಿಷ್ಟ ವಿನ್ಯಾಸದಿಂದ ಕೂಡಿದೆ. ಇಲ್ಲಿನ ವಾಸ್ತುಶೈಲಿಯು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದೆ. ಇದು ಭಾರತದ ಶಿಲ್ಪಕಲೆಯ ಹೆಗ್ಗುರುತಾಗಿದೆ. ಈ 78ನೇ ಸ್ವಾತಂತ್ರ್ಯೋತ್ಸದ ಸಂದರ್ಭದಲ್ಲಿ ಈ ಮಂದಿರದ ಬಗ್ಗೆ ತಿಳಿದುಕೊಳ್ಳಿ. ನೀವು ಉಜ್ಜಯನಿ ಪ್ರವಾಸ ಮಾಡುತ್ತಿದ್ದರೆ ಈ ಮಂದಿರಕ್ಕೆ ಖಂಡಿತ ಬೇಟಿ ಕೊಡಿ.

ಭಾರತ್‌ ಮಾತಾ ಮಂದಿರದ ವೈಶಿಷ್ಟ್ಯಗಳು

ವಾಸ್ತುಶಿಲ್ಪ

ಭಾರತ್‌ ಮಾತಾ ಮಂದಿರವನ್ನು ಅದ್ಭುತ ವಾಸ್ತುಶಿಲ್ಪದಿಂದ ಕಟ್ಟಿಲಾಗಿದೆ. ಇದು ಭಾರತೀಯರು ತಮ್ಮ ರಾಷ್ಟ್ರದ ಬಗ್ಗೆ ಹೊಂದಿರುವ ಭಕ್ತಿ ಮತ್ತು ಗೌರವದ ಸಂಕೇತವಾಗಿದೆ. ಈ ಮಂದಿರವು ಸುಮಾರು 6000 ಚದರ ಅಡಿಗಳ ವಿಸ್ತೀರ್ಣ ಮತ್ತು 101 ಅಡಿ ಎತ್ತರ ಹೊಂದಿದೆ. ಈ ಮಂದಿರವನ್ನು ಧೋಲ್ಪುರದ ಕೆಂಪು ಕಲ್ಲುಗಳಿಂದ ನಿರ್ಮಿಸಲಾಗಿದೆ. ಭಾರತ್‌ ಮಾತಾ ಮಂದಿರವು ನಮ್ಮ ರಾಷ್ಟ್ರದ ಹೆಮ್ಮೆ ಮತ್ತು ಏಕತೆಯ ಸಂಕೇತವಾಗಿದೆ.

ಮಂದಿರದ ಒಳಾಂಗಣ

ಭಾರತ್‌ ಮಾತಾ ಮಂದಿರುವು ಮೂರು ಮಹಡಿಗಳನ್ನು ಹೊಂದಿರುವ ರಚನೆಯಾಗಿದೆ. ಪ್ರತಿ ಮಹಡಿಯು ಒಂದೊಂದು ವೈಶಿಷ್ಟ್ಯವನ್ನು ಹೊಂದಿದೆ. ಮೊದಲನೇ ಮಹಡಿಯಲ್ಲಿ ಗ್ರಂಥಾಲಯ, ಧ್ಯಾನ, ಯೋಗ ಮುಂತಾದ ಆಧ್ಯಾತ್ಮಿಕ ಬೆಳವಣಿಗೆಗಳನ್ನು ಉತ್ತೇಜಿಸಲು ಮೀಸಲಿಡಲಾಗಿದೆ. 120 ವ್ಯಕ್ತಿಗಳು ಕುಳಿತುಕೊಳ್ಳಬಹುದಾದ ಆಸನಗಳಿರುವ ಸಭಾಂಗಣ ಮತ್ತು ಡಾಕ್ಯುಮೆಂಟರಿ ಥಿಯೇಟರ್‌ ಅನ್ನು ಎರಡನೇ ಮಹಡಿ ಹೊಂದಿದೆ. ಇದನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗಾಗಿ ಇಡಲಾಗಿದೆ. ಕೊನೆಯ ಮಹಡಿಯು ಭವ್ಯವಾದ 16 ಅಡಿಯ ಅಮೃತಶಿಲೆಯ ಭಾರತ ಮಾತೆಯ ಪ್ರತಿಮೆ ಹೊಂದಿದೆ. ಅದರ ಸುತ್ತಲೂ ಗೋಡೆಗಳ ಮೇಲೆ ನವದುರ್ಗೆಯರ ಚಿತ್ರಣವನ್ನು ಕೆತ್ತಲಾಗಿದೆ. ಭಾರತ್‌ ಮಾತಾ ಪ್ರತಿಮೆಗೆ 1 ಕೆಜಿ ಚಿನ್ನದ ಕಿರೀಟಿವನ್ನು ತೊಡಿಸಲಾಗಿದೆ. ಇದು ಪ್ರತಿಮೆಯ ಭವ್ಯತೆಯನ್ನು ಹೆಚ್ಚಿಸಿದೆ. ದೇವಾಲಯಕ್ಕೆ 5 ಗಾಜಿನ ಬಾಗಿಲುಗಳನ್ನು ಅಳವಡಿಸಲಾಗಿದೆ. ಭಕ್ತರು ಮಂದಿರಕ್ಕೆ ಎಲ್ಲಾ ದಿಕ್ಕುಗಳಿಂದಲೂ ಪ್ರವೇಶಿಸಬಹುದಾಗಿದೆ.

ಅಮೃತಶಿಲೆಯ ಭಾರತ ಮಾತೆಯ ಪ್ರತಿಮೆ

ಭಾರತ್‌ ಮಾತಾ ಮಂದಿರವು ಕಲ್ಲಿನಿಂದ ನಿರ್ಮಿಸಲಾದ ಮಂದಿರವಾಗಿದೆ. ಇಲ್ಲಿ ಭಾರತ ಮಾತೆಯನ್ನು ಅಮೃತ ಶಿಲೆಯಲ್ಲಿ ಕೆತ್ತಲಾಗಿದೆ. ಈ ಪ್ರತಿಮೆಯ ಮುಂದೆ ಅಖಂಡ ಭಾರತದ ನಕ್ಷೆಯನ್ನು ಸ್ಥಾಪಿಸಲಾಗಿದೆ. ಅದರಲ್ಲಿ ಭಾರತದ ಭೂಭಾಗ, ಪರ್ವತ ಶ್ರೇಣಿಗಳು, ಸಮುದ್ರ ಮುಂತಾದವುಗಳನ್ನು ಚಿತ್ರಿಸಲಾಗಿದೆ.

ಯಾವುದೇ ಸಾಂಪ್ರದಾಯಿಕ ಮೂರ್ತಿ ಅಲ್ಲಿಲ್ಲ

ಭಾರತ್‌ ಮಾತಾ ಮಂದಿರದಲ್ಲಿ ಉದ್ದೇಶಪೂರ್ವಕವಾಗಿಯೇ ಯಾವುದೇ ಸಾಂಪ್ರದಾಯಿಕ ದೇವರುಗಳ ಮೂರ್ತಿಯನ್ನು ಸ್ಥಾಪಿಸಲಾಗಿಲ್ಲ. ಏಕೆಂದರೆ ಈ ಮಂದಿರವನ್ನು ಜಾತ್ಯಾತೀತೆಯನ್ನು ಸಾರುವ ಉದ್ದೇಶದಿಂದ ನಿರ್ಮಿಸಲಾಗಿದೆ ಮತ್ತು ಇದು ರಾಷ್ಟ್ರೀಯ ಭಾವವನ್ನು ಬೆಳೆಸುತ್ತದೆ. ಅಷ್ಟೇ ಅಲ್ಲದೇ ಈ ಮಂದಿರವು ಏಕತೆಯ ಗುರುತಾಗಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು

ಈ ಮಂದಿರದಲ್ಲಿ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ವರ್ಷವಿಡೀ ವಿವಿಧ ಉತ್ಸವಗಳನ್ನು ಆಚರಿಸಲಾಗುತ್ತದೆ. ಮಂದಿರದ ಮೈದಾನದಲ್ಲಿ ದೇಶಭಕ್ತಿಯನ್ನು ಬಿಂಬಿಸುವ ಪ್ರದರ್ಶನಗಳನ್ನು ನಡೆಸಲಾಗುತ್ತದೆ. ಇದು ಜನರಲ್ಲಿ ರಾಷ್ಟ್ರಾಭಿಮಾನವನ್ನು ಹೆಚ್ಚಿಸುತ್ತದೆ. ಉಜ್ಜಯನಿಯ ಪ್ರಮುಖ ಆಕರ್ಷಣೀಯ ಕೇಂದ್ರಗಳಲ್ಲೊಂದಾದ ಭಾರತ್‌ ಮಾತಾ ಮಂದಿರವು ದೇಶ ವಿದೇಶಗಳ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತಿದೆ.

Whats_app_banner