International Mens Day: ಗಂಡುಮಕ್ಕಳಿಗೂ ನೋವಿದೆ, ಕಷ್ಟಗಳಿವೆ; ಅಂತರರಾಷ್ಟ್ರೀಯ ಪುರುಷರ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ಜೀವನಶೈಲಿ  /  International Mens Day: ಗಂಡುಮಕ್ಕಳಿಗೂ ನೋವಿದೆ, ಕಷ್ಟಗಳಿವೆ; ಅಂತರರಾಷ್ಟ್ರೀಯ ಪುರುಷರ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

International Mens Day: ಗಂಡುಮಕ್ಕಳಿಗೂ ನೋವಿದೆ, ಕಷ್ಟಗಳಿವೆ; ಅಂತರರಾಷ್ಟ್ರೀಯ ಪುರುಷರ ದಿನದ ಆಚರಣೆಯ ಇತಿಹಾಸ, ಮಹತ್ವ ತಿಳಿಯಿರಿ

International Men's Day 2023: ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಪುರುಷರ ಕೊಡುಗೆಗಳು, ಸಾಧನೆಗಳನ್ನು ಎತ್ತಿ ಹಿಡಿಯುವುದು, ಪುರುಷರ ತ್ಯಾಗ ಹಾಗೂ ನೋವುಗಳನ್ನು ಸಮಾಜದ ಮುಂದೆ ಬಿಂಬಿಸುವ ಸಲುವಾಗಿ ಪ್ರತಿವರ್ಷ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಗಂಡಮಕ್ಕಳ ಬದುಕನ್ನು ತೆರೆದಿಡುವ ಪ್ರಯತ್ನ ಮಾಡುವ ಉದ್ದೇಶ ಈ ದಿನದ ಆಚರಣೆಯ ಹಿಂದಿದೆ.

ಅಂತರರಾಷ್ಟ್ರೀಯ ಪುರುಷರ ದಿನ
ಅಂತರರಾಷ್ಟ್ರೀಯ ಪುರುಷರ ದಿನ

ಈ ಜಗತ್ತಿನಲ್ಲಿ ಗಂಡು ಹಾಗೂ ಹೆಣ್ಣಿನ ವಿಚಾರಕ್ಕೆ ಬಂದಾಗ ಹೆಣ್ಣುಮಕ್ಕಳ ಬಗ್ಗೆ ವಿಶೇಷ ಕನಿಕರ ಇರುವುದು ಸಹಜ. ಗಂಡು ಎಂದರೆ ದೃಢ ಮನಸ್ಸಿನ ವ್ಯಕ್ತಿ, ಗಂಡಿಗೆ ನೋವಿಲ್ಲ, ಕಣ್ಣೀರು ಬರುವುದಿಲ್ಲ ಎಂಬೆಲ್ಲ ಪರಿಕಲ್ಪನೆಗಳು ಅನಾದಿ ಕಾಲದಿಂದಲೂ ಮನಸ್ಸಿನಲ್ಲಿ ಬೇರೂರಿದೆ. ಗಂಡಿನ ಕಷ್ಟಕ್ಕಿಂತ ಹೆಣ್ಣುಮಕ್ಕಳ ಕಷ್ಟಗಳೇ ಹೈಲೈಟ್‌ ಆಗಿರುವುದು ಹೊಸತೇನಲ್ಲ. ಆದರೆ ಗಂಡುಮಕ್ಕಳಿಗೂ ಮನಸ್ಸಿದೆ, ಅವರಿಗೂ ನೋವಿದೆ, ಅವರಿಗೂ ಕಷ್ಟಗಳಿವೆ ಎಂಬುದು ಬಹುಶಃ ಅರ್ಥವಾಗುವುದು ಕಡಿಮೆ, ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುವವರು ಕಡಿಮೆ. ಈ ಉದ್ದೇಶದಿಂದ ಗಂಡು ಮಕ್ಕಳ ಬುದುಕನ್ನ, ಅವರ ಕಷ್ಟಗಳನ್ನ, ಅವರ ನೋವುಗಳು, ಅವರ ತ್ಯಾಗಗಳನ್ನು ಸಮಾಜವ ಮುಂದೆ ತೆರೆದಿಡುವ ಉದ್ದೇಶದಿಂದ ಪ್ರತಿವರ್ಷ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.

ನವೆಂಬರ್‌ 19ರಂದು ಪ್ರತಿವರ್ಷ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ. ಸಮಾಜದ ವಿವಿಧ ವಿಭಾಗಗಳಲ್ಲಿ ಪುರುಷರು ಮಾಡಿದ ಸಾಧನೆಗಳು ಮತ್ತು ಕೊಡುಗೆಗಳನ್ನು ಸಂಭ್ರಮಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಪುರುಷರ ದಿನ ಆಚರಣೆಯಲ್ಲಿದೆ. ʼಬ್ರೆಡ್ವನ್ನರ್‌ ಆಫ್‌ ದಿ ಹೋಮ್‌ʼ ಎಂದು ಕರೆಸಿಕೊಳ್ಳುವ ಪುರುಷರು ತಮ್ಮ ಸ್ವಂತ ಅಗತ್ಯಗಳನ್ನು ಕಡೆಗಣಿಸುತ್ತಾರೆ. ತಮ್ಮ ಕುಟುಂಬ, ಸಂಸಾರಕ್ಕಾಗಿ ತಮ್ಮ ಜೀವನ ಪರ್ಯಂತ ಕಷ್ಟಪಡುತ್ತಾರೆ. ನಿಜವಾದ ಅರ್ಥದಲ್ಲಿ ಹೇಳಬೇಕು ಎಂದರೆ ಪುರುಷ ಎಂದರೆ ತನ್ನೆಲ್ಲಾ ಕಷ್ಟವನ್ನು ಮರೆತು ಬೇರೆಯವರ ಸಂತೋಷದಲ್ಲಿ ತಮ್ಮ ಖುಷಿ ಕಾಣುವವನು. ತಮ್ಮ ಹೆಂಡತಿ, ಮಕ್ಕಳು, ಮನೆಯವರು ಖುಷಿಯಿಂದ ಇದ್ದರೆ, ತನಗೆ ಅದೇ ಬದುಕು ಎಂದುಕೊಂಡು ಬಾಳುವವನು.

ಅಂತರರಾಷ್ಟ್ರೀಯ ಪುರುಷರ ದಿನದ ಇತಿಹಾಸ

ಅಂತರರಾಷ್ಟ್ರೀಯ ಪುರುಷರ ದಿನದ ಇತಿಹಾಸವು 1999ರ ಹಿಂದಿನದು. 1990 ಆರಂಭದಲ್ಲಿ ಮಿಸೌರಿ ಸೆಂಟರ್‌ ಫಾರ್‌ ಮೆನ್ಸ್‌ ಸ್ಟಡೀಸ್‌ನ ನಿರ್ದೇಶಕ ಥಾಮಸ್‌ ಓಟರ್‌, ಯುನೈಟೆಡ್‌ ಸ್ಟೇಟ್ಸ್‌, ಆಸ್ಟ್ರೇಲಿಯಾ ಮತ್ತು ಮಾಲ್ಟಾ ಮುಂತಾದ ಕಡೆಗಳಿಂದ ವಿವಿಧ ಗುಂಪುಗಳನ್ನು ಆಹ್ವಾನಿಸಿ ಸಣ್ಣ ಪಾರ್ಟಿಯೊಂದನ್ನು ಆಯೋಜಿಸಲು ನಿರ್ಧರಿಸುತ್ತಾರೆ. ಈ ವೇಳೆ ಜೆರೋಮ್‌ ಟೀಲುಕ್ಸಿಂಗ್‌ ಎನ್ನುವವರು ಪುರುಷರು, ಯುವ, ಹದಿಹರೆಯದ ಹುಡುಗರನ್ನು ಗೌರವಿಸಲು ಯಾವುದೇ ದಿನವಿಲ್ಲ ಎಂಬುದನ್ನು ಕಂಡುಕೊಳ್ಳುತ್ತಾರೆ. ಆ ಕಾರಣಕ್ಕೆ 1999ರಲ್ಲಿ ಮೊದಲ ಬಾರಿ ಅಂತರರಾಷ್ಟ್ರೀಯ ಪರುಷರ ದಿನವನ್ನು ಆಚರಿಸಲಾಗಿತ್ತು. ಅಂದಿನಿಂದ ವಿವಿಧ ಕ್ಷೇತ್ರಗಳಲ್ಲಿ ಪುರುಷರ ಪ್ರಯತ್ನಗಳನ್ನು ಎತ್ತಿ ಹಿಡಿಯಲು ಪ್ರಪಂಚದ ವಿವಿಧ ಭಾಗಗಳಲ್ಲಿ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸಲಾಗುತ್ತದೆ.

ಮಹತ್ವ

ಬಹಳ ಹಿಂದಿನಿಂದಲೂ ಪಿತೃಪ್ರಭುತ್ವ ಮತ್ತು ಸ್ತ್ರೀವಾದದ ನಡುವೆ ಜಗತ್ತು ಸಿಲುಕಿಕೊಂಡಿದೆ. ಹಲವಾರು ವರ್ಷಗಳಿಂದ ಪಿತೃಪ್ರಧಾನ ಸಮಾಜ ಇದ್ದರೂ ಕೂಡ ಪುರುಷರು ತಮ್ಮನ್ನು ನಾವು ಅಭಿವ್ಯಕ್ತಿಸುವ ವಿಚಾರದಲ್ಲಿ ಹಿಂದೆ ಬಿದ್ದಿದ್ದಾರೆ. ಪುರುಷರು ಎಂದರೆ ಕಠಿಣ ಹೃದಯದವರು, ಅವರು ಮಹಿಳೆಯರಂತೆ ದುರ್ಬಲ ಹೃದಯದವರಲ್ಲ. ಅವರ ಯೋಚನಾಶಕ್ತಿಯು ಭಿನ್ನವಾಗಿರುತ್ತದೆ ಹೀಗೆ ಪ್ರಪಂಚದಲ್ಲಿ ಪುರುಷರ ಬಗ್ಗೆ ಒಂದು ನಿಲುವು ಮೂಡಿದೆ. ಆದರೆ ಅವರಿಗೂ ಮನಸ್ಸಿಗೆ, ಅವರಿಗೂ ನೋವಿದೆ, ಅವರು ಪಡುತ್ತಿರುವ ಕಷ್ಟಗಳು ಹಲವು ಇದನ್ನೆಲ್ಲಾ ತಿಳಿಸಲು ಹಾಗೂ ಅವರ ಕೊಡುಗೆ ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಅಂತರರಾಷ್ಟ್ರೀಯ ಪುರುಷರ ದಿನವನ್ನು ಆಚರಿಸುವುದು ಮುಖ್ಯವಾಗಿದೆ.

ಅಂತರರಾಷ್ಟ್ರೀಯ ಪುರುಷರ ದಿನ 2023ರ ಥೀಮ್‌

ಈ ವರ್ಷ ಪುರುಷರ ದಿನದಂದು ಗಂಡಸರು ಮತ್ತು ಹುಡುಗರು ತಮ್ಮ ಮಾನಸಿಕ ಆರೋಗ್ಯ ನಿರ್ವಹಣೆಯ ಮೇಲೆ ಕೇಂದ್ರಿಕರಿಸಲು ಸಹಾಯ ಮಾಡುವ ಉದ್ದೇಶದ ಪರಿಕಲ್ಪನೆ ಹೊಂದಿದೆ. ʼಪುರುಷರ ಆತ್ಮಹತ್ಯೆಯನ್ನು ತಡೆಯುವುದು ಈ ಥೀಮ್‌ನ ಮುಖ್ಯ ಉದ್ದೇಶ.

Whats_app_banner