ಯದ್ವಾತದ್ವಾ ಮಸಾಜ್‌ನಿಂದ ಲಕ್ವಾ ಅಪಾಯಕ್ಕೀಡಾದ ಬಳ್ಳಾರಿ ವ್ಯಕ್ತಿ; ಪಾರ್ಲರ್ ಸ್ಟೋಕ್ ಬಗ್ಗೆ ನಿಮಗೂ ಗೊತ್ತಿರಲಿ
ಬಳ್ಳಾರಿಯಲ್ಲಿ ಪಾರ್ಲರ್‌ಗೆ ಹೋಗಿ ತಲೆ ಹಾಗೂ ಕುತ್ತಿಗೆಗೆ ಮಸಾಜ್ ಮಾಡಿಸಿಕೊಂಡ ವ್ಯಕ್ತಿ ಪಾರ್ಶ್ವವಾಯು ಅಪಾಯಕ್ಕೆ ತುತ್ತಾಗಿದ್ದಾನೆ. ಬರೋಬ್ಬರಿ ಎರಡು ತಿಂಗಳು ಚಿಕಿತ್ಸೆ ಪಡೆದ ವ್ಯಕ್ತಿಯು ಮಾರಣಾಂತಿಕ ಅಪಾಯದಿಂದ ಪಾರಾಗಿದ್ದಾನೆ.
ಪಾರ್ಲರ್ ಅಥವಾ ಸೆಲೂನ್‌ಗೆ ಹೋಗಿ ಸ್ಟೈಲಿಶ್ ಹೇರ್‌ಕಟ್ ಮಾಡಿಸುವುದರ ಜೊತೆಗೆ ತಲೆಗೆ ಮಸಾಜ್ ಮಾಡಿಸಿಕೊಳ್ಳುವವರು ಹಲವರು. ಆ ಸಂದರ್ಭಕ್ಕೆ ದೇಹಕ್ಕೆ ಹಿತ ಅನಿಸುತ್ತದೆ. ಆದರೆ ಪಾರ್ಲರ್‌ನಲ್ಲಿ ಬಗೆಬಗೆಯ ಸೇವೆ ಮಾಡಿಸಿಕೊಳ್ಳುವವರು ಎಚ್ಚೆತ್ತುಕೊಳ್ಳಬೇಕಾದ ಘಟನೆಯೊಂದು ನಡೆದಿದೆ. ಬಳ್ಳಾರಿಯಲ್ಲಿ ಕ್ಷೌರಿಕನೊಬ್ಬನಿಂದ ತಲೆಗೆ ಉಚಿತ ಮಸಾಜ್ ಮಾಡಿಸಿಕೊಂಡ ಪರಿಣಾಮವಾಗಿ, 30 ವರ್ಷದ ವ್ಯಕ್ತಿಯೊಬ್ಬ ಪಾರ್ಶ್ವವಾಯುವಿಗೆ ಒಳಗಾಗಿರುವ ಘಟನೆ ನಡೆದಿದೆ. ಘಟನೆ ಬಳಿಕ ಪಾರ್ಲರ್ ಸ್ಟೋಕ್ (Parlour stroke) ಬಗೆಗಿನ ಆತಂಕ ಹೆಚ್ಚಾಗಿದೆ.
ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದ ರಾಮ್‌ಕುಮಾರ್ ಎಂಬ ವ್ಯಕ್ತಿ ಸೆಲೂನ್‌ಗೆ ಹೋಗಿದ್ದಾರೆ. ಈ ವೇಳೆ ಹೆಡ್ ಮಸಾಜ್ ಮಾಡಿಸಿಕೊಂಡಿದ್ದಾರೆ. ಮಸಾಜ್ ಮಾಡುವ ಸಮಯದಲ್ಲಿಯೇ ಅವರಿಗೆ ಕುತ್ತಿಗೆ ಭಾಗದಲ್ಲಿ ತೀವ್ರ ನೋವಿನ ಅನುಭವವಾಗಿದೆ. ಆದರೆ ಅದು ಸಾಮಾನ್ಯ ನೋವು ಎಂದು ಭಾವಿಸಿದ ವ್ಯಕ್ತಿ, ಅದನ್ನು ನಿರ್ಲಕ್ಷ್ಯ ಮಾಡಿ ಹಾಗೆಯೇ ಮನೆಗೆ ಮರಳಿದ್ದಾರೆ ಎಂದು ಸುದ್ದಿಸಂಸ್ಥೆ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಮನೆಗೆ ಬಂದು ಕೆಲವು ಗಂಟೆಗಳ ನಂತರ, ವ್ಯಕ್ತಿಗೆ ಮಾತನಾಡಲು ಕೂಡಾ ಆಗಲಿಲ್ಲ. ದೇಹದ ಎಡಭಾಗದಲ್ಲಿ ದೌರ್ಬಲ್ಯ ಗಮನಕ್ಕೆ ಬಂದಿದೆ. ಏನೋ ಹೆಚ್ಚುಕಡಿಮೆ ಆಗಿದೆ ಎಂಬ ಭಯದಿಂದ ತಕ್ಷಣ ಅವರು ಆಸ್ಪತ್ರೆಗೆ ತೆರಳಿದ್ದಾರೆ. ಈ ವೇಳೆ ವೈದ್ಯರು ಅವರಿಗೆ ಪಾರ್ಶ್ವವಾಯು (ಲಕ್ವಾ) ಬಂದಿರುವುದಾಗಿ ಹೇಳಿದ್ದಾರೆ. ಕುತ್ತಿಗೆ ಭಾಗದಲ್ಲಿ ತಿರುಚಿದಂತಾಗಿ ಈ ಅಪಾಯ ಕಾಣಿಸಿಕೊಂಡಿದೆ.
ಪಾರ್ಶ್ವವಾಯು ಪರಿಸ್ಥಿತಿಯನ್ನು ತಗ್ಗಿಸಲು, ರೋಗಿಗೆ ಆಂಟಿಕೊಯಾಗುಲಂಟ್ ಚಿಕಿತ್ಸೆ ನೀಡಲಾಯಿತು. ಅಲ್ಲಿಗೆ ಅವರು ಗುಣಮುಖರಾಗಲಿಲ್ಲ. ಸುಮಾರು ಎರಡು ತಿಂಗಳ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಯ್ತು. ಆ ಬಳಿಕ ಮಾರಣಾಂತಿಕ ಸಮಸ್ಯೆಯಿಂದ ಸ್ವಲ್ಪದರಲ್ಲೇ ಪಾರಾಗಿ ಮನೆಗೆ ಮರಳಿದ್ದಾರೆ ಎಂದು ವರದಿ ತಿಳಿಸಿದೆ.
ಏನಿದು ಪಾರ್ಲರ್ ಸ್ಟ್ರೋಕ್?
ಘಟನೆ ಕುರಿತು ಪ್ರತಿಕ್ರಿಯೆ ನೀಡಿರುವ ನರವಿಜ್ಞಾನಿಯೊಬ್ಬರು, ರಕ್ತನಾಳದ ಗೋಡೆಯ ವೈಫಲ್ಯದಿಂದ ಈ ರೀತಿಯ, ಅಂದರೆ ಡಿಸೆಕ್ಷನ್-ಸಂಬಂಧಿತ ಪಾರ್ಶ್ವವಾಯು ಸಂಭವಿಸುತ್ತದೆ ಎಂದು ಹೇಳಿದ್ದಾರೆ. ಹೀಗಾದಾಗ ಮೆದುಳಿಗೆ ರಕ್ತದ ಹರಿವು ಕಡಿಮೆಯಾಗುತ್ತದೆ ಎಂದು ವಿವರಿಸಿದರು.
2022ರಲ್ಲಿ ಹೈದರಾಬಾದ್‌ನ 50 ವರ್ಷದ ಮಹಿಳೆಯೊಬ್ಬರು ಪಾರ್ಲರ್‌ನಲ್ಲಿ ಕೂದಲನ್ನು ತೊಳೆಯುವಾಗ ತಲೆತಿರುಗುದಿಂತಾಗಿ ವಾಕರಿಕೆ ಮತ್ತು ವಾಂತಿ ಅನುಭವಿಸಿದರು. ಸಾಮಾನ್ಯವಾಗಿ “ಸಲೂನ್ ಸ್ಟ್ರೋಕ್” ಅಥವಾ “ಬ್ಯೂಟಿ ಪಾರ್ಲರ್ ಸ್ಟ್ರೋಕ್” ಎಂದು ಕರೆಯಲ್ಪಡುವ ಈ ಅಪರೂಪದ ಸ್ಥಿತಿಯು ಕುತ್ತಿಗೆಯ ತಿರುಚುವಿಕೆ ಅಥವಾ ಮಸಾಜ್‌ನಿಂದಾಗಿ ಇದ್ದಕ್ಕಿದ್ದಂತೆ ಸಂಭವಿಸಬಹುದು. ಇದು ಮೆದುಳಿಗೆ ರಕ್ತದ ಹರಿವನ್ನು ಕಡಿಮೆ ಮಾಡುತ್ತದೆ. ಅಲ್ಲದೆ ಮೆದುಳಿನ ವಿವಿಧ ಭಾಗಗಳಿಗೆ ಹಾನಿ ಉಂಟು ಮಾಡುತ್ತದೆ. ಹೀಗಾಗಿ ಕುತ್ತಿಗೆಯ ಹಠಾತ್ ಮತ್ತು ಬಲವಂತದ ಚಲನೆಗಳು ಲಕ್ವ ಅಥವಾ ಪಾರ್ಶ್ವವಾಯು ಅಪಾಯಕ್ಕೆ ಕಾರಣವಾಗಬಹುದು. ಇದರಿಂದ ಸಾವು ಸೇರಿದಂತೆ ಗಂಭೀರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು ತಜ್ಞರು ಎಚ್ಚರಿಸಿದ್ದಾರೆ.