ದೇಸಿ ತುಪ್ಪಕ್ಕೆ ವ್ಯಾಲಿಡಿಟಿ ಇರುತ್ತಾ, ಮನೆಯಲ್ಲಿ ಮಾಡಿದ ತುಪ್ಪ ಬಹಳ ದಿನ ಕೆಡದಂತೆ ಇರ್ಬೇಕು ಅಂದ್ರೆ ಈ ಟಿಪ್ಸ್ ಫಾಲೋ ಮಾಡಿ
ಇತ್ತೀಚಿಗೆ ಕಲಬೆರಕೆ ತುಪ್ಪದ ವಿಚಾರ ಹೆಚ್ಚು ಸದ್ದು ಮಾಡುತ್ತಿದೆ. ಆ ಕಾರಣಕ್ಕೆ ಹಲವರು ಮನೆಯಲ್ಲೇ ತುಪ್ಪ ಮಾಡುತ್ತಿದ್ದಾರೆ. ಹಾಗಾದರೆ ಈ ದೇಸಿ ತುಪ್ಪಕ್ಕೆ ವಾಯಿದೆ ಇರುತ್ತಾ, ಇದನ್ನು ಎಷ್ಟು ದಿನಗಳವರೆಗೆ ಬಳಸಬಹುದು. ಒಮ್ಮೆ ಮಾಡಿದ ತುಪ್ಪ ಕೆಡದಂತೆ ಬಹಳ ದಿನಗಳವರೆಗೆ ಸಂಗ್ರಹಿಸಿ ಇಡುವುದು ಹೇಗೆ ಎಂಬ ವಿವರ ಇಲ್ಲಿದೆ.
ಭಾರತೀಯ ಅಡುಗೆಮನೆಯಲ್ಲಿ ದೇಸಿ ತುಪ್ಪಕ್ಕೆ ವಿಶೇಷ ಸ್ಥಾನವಿದೆ. ಬಹುತೇಕ ಖಾದ್ಯಗಳಿಗೆ ಭಾರತೀಯರು ತುಪ್ಪ ಬಳಸುತ್ತಾರೆ. ಇದರಿಂದ ಪರಿಮಳದ ಜೊತೆಗೆ ಖಾದ್ಯದ ರುಚಿಯೂ ಹೆಚ್ಚಾಗುತ್ತದೆ. ಇದರೊಂದಿಗೆ ಪೂಜೆ, ಮನೆಮದ್ದಿನಂತಹ ಔಷಧಿಗಳಿಗೂ ತುಪ್ಪವನ್ನು ಬಳಸಲಾಗುತ್ತದೆ. ಈಗೀಗ ಕಲಬೆರಕೆ ತುಪ್ಪ ಸದ್ದು ಮಾಡುತ್ತಿರುವ ಕಾರಣ ಮನೆಯಲ್ಲೇ ತುಪ್ಪ ಮಾಡಿ ಬಳಸಲಾಗುತ್ತಿದೆ. ಕೆಲವರು ತಮ್ಮ ಮನೆಯಲ್ಲಿ ದೇಸಿ ತುಪ್ಪದ ದೊಡ್ಡ ದಾಸ್ತಾನು ಇಡುತ್ತಾರೆ. ಆದರೆ ದೇಸಿ ತುಪ್ಪವನ್ನು ದೀರ್ಘಕಾಲ ಸಂಗ್ರಹಿಸುವುದು ಸರಿಯೇ, ಇದಕ್ಕೂ ವ್ಯಾಲಿಡಿಟಿ ಇರುತ್ತಾ, ಇದನ್ನು ಕೆಡದಂತೆ ಬಹಳ ದಿನಗಳವರೆಗೆ ಸಂಗ್ರಹಿಸಿ ಇಡುವುದು ಹೇಗೆ ಎಂಬ ವಿವರ ಇಲ್ಲಿದೆ.
ದೇಸಿ ತುಪ್ಪ ಹಾಳಾಗುತ್ತಾ?
ದೇಸಿ ತುಪ್ಪುವೂ ಕೆಡುತ್ತಾ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲೂ ಮೂಡಬಹುದು. ಇತರ ವಸ್ತುಗಳಂತೆ ದೇಸಿ ತುಪ್ಪವೂ ಕೆಡುತ್ತದೆ. ಅದು ಕೆಡಲು ಪ್ರಾರಂಭಿಸಿದಾಗ, ಅದರ ವಾಸನೆಯು ಬದಲಾಗಲು ಪ್ರಾರಂಭಿಸುತ್ತದೆ ಮತ್ತು ಅದರ ರುಚಿಯು ಕಹಿಯಾಗುತ್ತದೆ. ಹಾಗಾದರೆ ದೇಸಿ ತುಪ್ಪವನ್ನು ಎಷ್ಟು ದಿನಗಳವರೆಗೆ ಸಂಗ್ರಹಿಸಿ ಇಡಬಹುದು ಎಂಬ ಪ್ರಶ್ನೆ ಮೂಡಬಹುದು. ಮಾರುಕಟ್ಟೆಯಿಂದ ತಂದ ತುಪ್ಪದ ಮೇಲೆ ಏಕ್ಸ್‌ಪೈರಿ ಡೇಟ್ ಬರೆದಿರುತ್ತದೆ. ಹಾಗಾದರೆ ದೇಸಿ ತುಪ್ಪದ ಕತೆ ಏನು, ಇದನ್ನು ಎಷ್ಟು ದಿನಗಳವರೆಗೆ ಬಳಸಬಹುದು ನೋಡಿ.
ನೀವು ಮನೆಯಲ್ಲಿ ದೇಸಿ ತುಪ್ಪವನ್ನು ತಯಾರಿಸಲು ಬಯಸಿದರೆ, ಅದನ್ನು ಹೇಗೆ ಸಂಗ್ರಹಿಸುತ್ತೀರಿ ಎಂಬುದರ ಮೇಲೆ ಅದು ಎಷ್ಟು ಸಮಯದವರೆಗೆ ಕೆಡದೇ ಇರುತ್ತದೆ ಎಂಬುದು ಅವಲಂಬಿತವಾಗಿರುತ್ತದೆ. ಸಾಮಾನ್ಯ ಕೋಣೆಯ ಉಷ್ಣಾಂಶದಲ್ಲಿ ಅದು ಕೇವಲ 3 ತಿಂಗಳಲ್ಲಿ ಹಾಳಾಗಲು ಪ್ರಾರಂಭಿಸುತ್ತದೆ, ಅದನ್ನು ಸರಿಯಾಗಿ ಸಂಗ್ರಹಿಸಿದರೆ ಅದು 3 ವರ್ಷಗಳವರೆಗೆ ಕೆಡುವುದಿಲ್ಲ. ಹಾಗಾದರೆ ದೇಸಿ ತುಪ್ಪವನ್ನು ಶೇಖರಿಸುವ ಸರಿಯಾದ ವಿಧಾನ ಯಾವುದು ಎಂದು ತಿಳಿಯೋಣ.
ದೇಸಿ ತುಪ್ಪ ಸಂಗ್ರಹಿಸುವ ಸರಿಯಾದ ಮಾರ್ಗ
ದೇಸಿ ತುಪ್ಪವನ್ನು ದೀರ್ಘಕಾಲದವರೆಗೆ ತಾಜಾವಾಗಿಡಬಹುದು, ಅದನ್ನು ಸಂಗ್ರಹಿಸುವ ಸರಿಯಾದ ವಿಧಾನವನ್ನು ನೀವು ತಿಳಿದುಕೊಳ್ಳಬೇಕು. ದೇಸಿ ತುಪ್ಪವನ್ನು ಯಾವಾಗಲೂ ಗಾಳಿಯಾಡದ ಪಾತ್ರೆಯಲ್ಲಿ ಮುಚ್ಚಿಡಬೇಕು. ಈ ಕಾರಣದಿಂದಾಗಿ, ಗಾಳಿಯಲ್ಲಿರುವ ಕೊಳಕು, ಬ್ಯಾಕ್ಟೀರಿಯಾದ ಅಂಶ ಅದರೊಳಗೆ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅದು ಬೇಗನೆ ಹಾಳಾಗುವುದಿಲ್ಲ. ಸಾಧ್ಯವಾದರೆ ದೇಸಿ ತುಪ್ಪವನ್ನು ಯಾವಾಗಲೂ ಗಾಜಿನ ಪಾತ್ರೆಯಲ್ಲಿ ಸಂಗ್ರಹಿಸಬೇಕು. ಫ್ರಿಜ್‌ನಲ್ಲಿಟ್ಟರೆ 2-3 ವರ್ಷವಾದರೂ ಕೆಡುವುದಿಲ್ಲ. ಇದಲ್ಲದೇ ತುಪ್ಪದ ರುಚಿಯಲ್ಲಿ ಸ್ವಲ್ಪವಾದರೂ ಬದಲಾವಣೆಯಾಗಿದ್ದರೆ ಮತ್ತೊಮ್ಮೆ ಬಿಸಿ ಮಾಡಿ ತಣ್ಣಗಾದ ನಂತರ ಡಬ್ಬಿಯಲ್ಲಿ ತುಂಬಿಸಿ ಇಡಿ. ಈ ರೀತಿಯಾಗಿ ನೀವು ದೇಸಿ ತುಪ್ಪವನ್ನು ಹಲವು ವರ್ಷಗಳವರೆಗೆ ತಾಜಾವಾಗಿರಿಸಿಕೊಳ್ಳಬಹುದು.
ಮನೆಯಲ್ಲಿ ತುಪ್ಪ ಮಾಡಲು ಬಯಸುವವರು ಈ ಟ್ರಿಕ್ಸ್‌ಗಳನ್ನು ತಿಳಿದುಕೊಳ್ಳಬೇಕು. ಈ ರೀತಿ ಸುಲಭ ವಿಧಾನಗಳನ್ನು ಅನುಸರಿಸುವ ಮೂಲಕ ಬಹಳ ದಿನವರೆಗೆ ತುಪ್ಪ ಕೆಡದಂತೆ ಇಡಬಹುದು.
ವಿಭಾಗ