Ghee Tea: ತುಪ್ಪದ ಕಾಫಿ ಆಯ್ತು, ಇದೀಗ ಟ್ರೆಂಡ್‌ ಆಗಿದೆ ತುಪ್ಪದ ಚಹಾ; ಈ ಟೀ ತಯಾರಿಸೋದು ಹೇಗೆ, ಇದರ ಪ್ರಯೋಜನಗಳೇನು ನೋಡಿ-food health tips ghee tea health benefits nutrition suggestion about ghee tea vs ghee coffe how to make ghree tea rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Ghee Tea: ತುಪ್ಪದ ಕಾಫಿ ಆಯ್ತು, ಇದೀಗ ಟ್ರೆಂಡ್‌ ಆಗಿದೆ ತುಪ್ಪದ ಚಹಾ; ಈ ಟೀ ತಯಾರಿಸೋದು ಹೇಗೆ, ಇದರ ಪ್ರಯೋಜನಗಳೇನು ನೋಡಿ

Ghee Tea: ತುಪ್ಪದ ಕಾಫಿ ಆಯ್ತು, ಇದೀಗ ಟ್ರೆಂಡ್‌ ಆಗಿದೆ ತುಪ್ಪದ ಚಹಾ; ಈ ಟೀ ತಯಾರಿಸೋದು ಹೇಗೆ, ಇದರ ಪ್ರಯೋಜನಗಳೇನು ನೋಡಿ

ತುಪ್ಪದ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇತ್ತೀಚೆಗೆ ತುಪ್ಪದಿಂದ ಮಾಡಿದ ಕಾಫಿ ಟ್ರೆಂಡ್ ಸೃಷ್ಟಿಸಿತ್ತು. ಇದೀಗ ತುಪ್ಪದ ಟೀ ಟ್ರೆಂಡ್ ಹವಾ ಎಬ್ಬಿಸಿದೆ. ಏನಿದು ತುಪ್ಪದ ಟೀ, ಇದನ್ನು ಮಾಡೋದು ಹೇಗೆ, ಇದ್ರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಬಗ್ಗೆ ಪೌಷ್ಟಿಕ ತಜ್ಞರು ನೀಡಿರುವ ಸಲಹೆ ಇಲ್ಲಿದೆ.

ತುಪ್ಪದ ಟೀ
ತುಪ್ಪದ ಟೀ

ಅನಾದಿ ಕಾಲದಿಂದಲೂ ಭಾರತದ ಆಹಾರ ಹಾಗೂ ಆಯುರ್ವೇದ ಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನವಿತ್ತು. ವಿಶೇಷ ಖಾದ್ಯಗಳನ್ನು ತಯಾರಿಸುವಾಗ ತುಪ್ಪದ ಬಳಕೆಯಿಂದ ಖಾದ್ಯದ ರುಚಿ ದುಪ್ಪಟ್ಟಾಗುತ್ತಿತ್ತು. ಆದರೆ ಕಳೆದ ಒಂದಿಷ್ಟು ವರ್ಷಗಳಿಂದ ತುಪ್ಪದಲ್ಲಿ ಕ್ಯಾಲೊರಿ ಹೆಚ್ಚಿರುವ ಕಾರಣಕ್ಕೆ ತೂಕ ಏರಿಕೆಯಾಗುತ್ತೆ ಎನ್ನುವ ಭಯದಿಂದ ಜನ ತುಪ್ಪ ತಿನ್ನಲು ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಕಾಲ ಹಾಗಿಲ್ಲ.

ತುಪ್ಪದಲ್ಲಿರುವ ಪೌಷ್ಟಿಕಾಂಶಗಳು ಆರೋಗ್ಯಕ್ಕೆ ಉತ್ತಮ ಎನ್ನುವ ಕಾರಣಕ್ಕೆ ತುಪ್ಪದ ಬಳಕೆ ಹೆಚ್ಚಾಗಿದೆ. ಇದನ್ನು ಮಿತವಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಆ ಕಾರಣಕ್ಕೆ ಕೆಲವು ದಿನಗಳ ಹಿಂದೆ ತುಪ್ಪದ ಕಾಫಿ ಟ್ರೆಂಡ್ ಸೃಷ್ಟಿಸಿತ್ತು. ಆದರೆ ಇದೀಗ ತುಪ್ಪದ ಟೀ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ. ಏನಿದು ತುಪ್ಪದ ಟೀ, ಇದನ್ನು ಮಾಡೋದು ಹೇಗೆ, ಇದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲೂ ಮೂಡಬಹುದು. ಇದಕ್ಕೆಲ್ಲಾ ಉತ್ತರ ಇಲ್ಲಿದೆ.

ತುಪ್ಪ ಟೀ ಮಾಡುವ ವಿಧಾನ

ಪೌಷ್ಟಿಕ ತಜ್ಞೆ ಶಿಲ್ಪ ಅರೋರಾ ಅವರ ಪ್ರಕಾರ ತುಪ್ಪದ ಟೀ ಮಾಡಲು ಮೊದಲು ಬ್ಲ್ಯಾಕ್ ಟೀಯನ್ನು ಕುದಿಸಬೇಕು. ಇದಕ್ಕೆ ಒಂದು ಚಮಚ ತುಪ್ಪ ಸೇರಿಸಬೇಕು. ನಂತರ ಸ್ವಲ್ಪ ಅಜ್ವನಾ ಹಾಗೂ ಸಕ್ಕರೆ ಹಾಕಬೇಕು. ಇದನ್ನು ಚೆನ್ನಾಗಿ ಕುದಿಸಿದರೆ ತುಪ್ಪದ ಟೀ ರೆಡಿ. ನಾವು ತಯಾರಿಸುವ ಸಾಮಾನ್ಯ ಹಾಲಿನ ಚಹಾಕ್ಕೂ ತುಪ್ಪವನ್ನು ಸೇರಿಸಬಹುದು ಎಂಬುದು ಪೌಷ್ಟಿಕ ತಜ್ಞರ ಸಲಹೆ.

ತುಪ್ಪದ ಟೀ ಕುಡಿಯುವುದರಿಂದಾಗುವ ಪ್ರಯೋಜನಗಳು

ನಮ್ಮ ಬೆಳಗಿನ ದಿನಚರಿಯನ್ನು ಒಂದು ಕಪ್ ತುಪ್ಪದ ಟೀಯೊಂದಿಗೆ ಆರಂಭಿಸುವುದರಿಂದ ಚೈತನ್ಯದಿಂದ ಇರಬಹುದು. ಆದರೆ ನೀವು ತುಪ್ಪದ ಚಹಾ ಕುಡಿಯುವ ಜೊತೆಗೆ ಕೆಲವು ಆರೋಗ್ಯಕರ ಅಭ್ಯಾಸಗಳನ್ನೂ ರೂಢಿಸಿಕೊಳ್ಳಬೇಕು, ಆಗ ಮಾತ್ರ ಇದರ ಸಂಪೂರ್ಣ ಪ್ರಯೋಜನ ಪಡೆಯಲು ಸಾಧ್ಯ ಎನ್ನುವುದು ಪೌಷ್ಟಿಕ ತಜ್ಞರ ಅಭಿಪ್ರಾಯ.

ಪೌಷ್ಟಿಕತಜ್ಞೆ ಮತ್ತು ಆಯುರ್ವೇದ ವೈದ್ಯೆ ಡಾ. ಅಂಜನಾ ಕಾಲಿಯಾ ಅವರ ಪ್ರಕಾರ ‘ತುಪ್ಪವು ಎ ,ಡಿ ಮತ್ತು ಇ ಯಂತಹ ಕೊಬ್ಬು ಕರಗುವ ವಿಟಮಿನ್‌ಗಳ ಉತ್ತಮ ಮೂಲವಾಗಿದೆ, ಜೊತೆಗೆ ಒಮೆಗಾ 3 ಕೊಬ್ಬಿನಾಮ್ಲ ಇದರಲ್ಲಿ ಸಮೃದ್ಧವಾಗಿರುತ್ತದೆ. ತುಪ್ಪದಿಂದ ಚಹಾ ತಯಾರಿಸುವುದು ಅಥವಾ ಚಹಾಕ್ಕೆ ತುಪ್ಪ ಸೇರಿಸುವುದರಿಂದ ಚಯಾಪಚಯವನ್ನು ಹೆಚ್ಚಿಸಲು ಮತ್ತು ನಮ್ಮ ಚರ್ಮದ ಕಾಂತಿಯನ್ನು ವೃದ್ಧಿಸಲು ಸಹಾಯ ಮಾಡುತ್ತದೆ. ಇದು ಲೂಬ್ರಿಕಂಟ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಮ್ಮ ಕೀಲುಗಳ ಆರೋಗ್ಯಕ್ಕೂ ಉತ್ತಮ‘ ಎಂದು ಅವರು ಹೇಳುತ್ತಾರೆ. ಬೆಳಿಗ್ಗೆ ತುಪ್ಪ ಚಹಾ ಕುಡಿಯುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿಯು ಹೆಚ್ಚುತ್ತದೆ. ದಾಲ್ಚಿನ್ನಿಯೊಂದಿಗೆ ಸ್ವಲ್ಪ ಕಪ್ಪು ಚಹಾವನ್ನು ಕುದಿಸಿ ಮತ್ತು ತುಪ್ಪದೊಂದಿಗೆ ಸೇವಿಸುವುದು ಕೂಡ ಉತ್ತಮ ಎನ್ನುವುದು ಅವರ ವೈಯಕ್ತಿಕ ಸಲಹೆಯಾಗಿದೆ.

ತುಪ್ಪ ಚಹಾ– ತುಪ್ಪದ ಕಾಪಿ ನಡುವಿನ ವ್ಯತ್ಯಾಸ

ತುಪ್ಪದ ಚಹಾ ಮತ್ತು ತುಪ್ಪದ ಕಾಫಿಯಿಂದ ನಡುವಿನ ವ್ಯತ್ಯಾಸದ ಬಗ್ಗೆ ಡಾ. ಅಂಜನಾ ಅವರು ಹೇಳುವುದು ಹೀಗಿ, ‘ತುಪ್ಪದ ಚಹಾ ಮತ್ತು ತುಪ್ಪದ ಕಾಫಿ ಎರಡರಲ್ಲೂ ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿವೆ. ಕಾಫಿಯಲ್ಲಿ ಕೆಫೀನ್ ಅಂಶ ಅಧಿಕವಾಗಿರುವುದರಿಂದ ಕೆಲವು ಜನರಲ್ಲಿ ಅದರಲ್ಲೂ ವಿಶೇಷವಾಗಿ ಅಧಿಕ ರಕ್ತದೊತ್ತಡ ಅಥವಾ ಮೈಗ್ರೇನ್ ಸಮಸ್ಯೆ ಇರುವವರಲ್ಲಿ ಆತಂಕ ಅಥವಾ ಮೈ ನಡುಕದಂತಹ ಸಮಸ್ಯೆ ಹೆಚ್ಚಾಗಬಹುದು. ಅಂತಹ ಸಂದರ್ಭಗಳಲ್ಲಿ, ತುಪ್ಪದ ಚಹಾವು ಉತ್ತಮ ಆಯ್ಕೆಯಾಗಿದೆ.

ನೋಡಿದ್ರಲ್ಲ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ತುಪ್ಪದ ಟೀ ಮಾಡುವುದು ಹೇಗೆ, ಇದರ ಪ್ರಯೋಜನ ಏನು ಎಂಬ ಬಗ್ಗೆ, ಹಾಗಾದರೆ ಇನ್ನೇಕೆ ತಡ ನೀವು ಇದನ್ನು ಮಾಡಿ ಕುಡಿಯಲು ಪ್ರಯತ್ನಿಸಿ.

mysore-dasara_Entry_Point