ಕನ್ನಡ ಸುದ್ದಿ  /  Lifestyle  /  Mental Health Homemaker Suffer Psychological Problems Due To Lack Of Work Remedies To Find Calmness Rsm

ಗಂಡ-ಮಗನ ಜೊತೆಗೆ ಜಗಳವಾಡುವ ಗೃಹಿಣಿಯ ಅತೃಪ್ತಿಗೆ ಕೆಲಸವಿಲ್ಲ ಎನ್ನುವುದೊಂದೇ ಕಾರಣವೇ? ಏನಿದೆ ಪರಿಹಾರ? ಮನದ ಮಾತು

ಹಲವು ಗೃಹಿಣಿಯರು ತಮ್ಮ ಮಾನಸಿಕ ಆರೋಗ್ಯ ನಿರ್ಲಕ್ಷಿಸುತ್ತಾರೆ. ಇದರ ಪರಿಣಾಮವನ್ನು ಇಡೀ ಕುಟುಂಬ ಅನುಭವಿಸಬೇಕಾಗುತ್ತದೆ. ಇಂಥ ಕುಟುಂಬಗಳಲ್ಲಿ ಕಾರಣವೇ ಇಲ್ಲದ ಜಗಳಗಳು ಮಾಮೂಲು. ಗೃಹಿಣಿಯರು ನೆಮ್ಮದಿ ಕಂಡುಕೊಳ್ಳಬಹುದಾದ ಸರಳ ತಂತ್ರಗಳನ್ನು ಈ ಬರಹದಲ್ಲಿ ವಿವರಿಸಿದ್ದಾರೆ ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್.

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ
ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಅವರ ಮನದ ಮಾತು ಅಂಕಣ

ಪ್ರಶ್ನೆ: ನಾನು ಗೃಹಿಣಿ (Home maker / House wife). ಒಂದು ಮಗುವಿನ ತಾಯಿ. ಮನೆ ಕೆಲಸಗಳು ಮುಗಿದ ಮೇಲೆ ಬೇಸರವಾಗುತ್ತದೆ. ಹೇಗೆ ಸಮಯ ಕಳೆಯುವುದು? ಕೆಲವೊಮ್ಮೆ ಸಣ್ಣಪುಟ್ಟ ಕಾರಣಕ್ಕೆ ಸಿಟ್ಟು ಬಂದು, ಗಂಡ-ಮಗನ ಜೊತೆ ಜಗಳವಾಡುತ್ತೇನೆ. ಯಾವ ರೀತಿಯ ಜೀವನಶೈಲಿ ಪಾಲಿಸಿದರೆ ನನ್ನ ಮನಃಸ್ಥಿತಿ ಆರೋಗ್ಯಕರವಾಗಿರುತ್ತದೆ? ಎಲ್ಲರೂ ಹೇಗಿದ್ದಾರೋ ಹಾಗೆಯೇ ನಾನೂ ಇದ್ದೇನೆ. ನನ್ನಿಂದ ನಾಲ್ಕು ಜನಕ್ಕೆ ಸಹಾಯವಾಗುತ್ತಿದೆ ಎನ್ನುವ ತೃಪ್ತಿ ಬೇಕು. ಹೇಳಿ ಮೇಡಂ ನಾನೇನು ಮಾಡಲಿ?

ಉತ್ತರ: ನಿಮ್ಮ ಪ್ರಶ್ನೆಯನ್ನು ಓದಿ ಬಹಳ ಸಂತೋಷವಾಯಿತು. ಸಾಮಾನ್ಯವಾಗಿ ಈ ನಿಟ್ಟಿನಲ್ಲಿ ಆಲೋಚನೆ ಮಾಡುವುದು ಅಪರೂಪ. ಆದರೂ ನೀವು ನಿರಾಶೆಗೊಂಡಂತೆ ಕಾಣುತ್ತದೆ. ನಿಮ್ಮಲ್ಲಿ ಅಸಹಾಯಕತೆ ಇದೆ. ಇದು ಸಿಟ್ಟಿನ ಮೂಲಕ ಜಗಳದ ರೂಪದಲ್ಲಿ ಹೊರಬರುತ್ತಿದೆ. ಇದನ್ನು ತಡೆಯಬೇಕೆಂದರೆ, ಕಾರಣಗಳನ್ನು ತಿಳಿದುಕೊಳ್ಳಬೇಕು. ನೀವು ಹೇಗೆ ಆರೋಗ್ಯಕರ ಮನಃಸ್ಥಿತಿ ರೂಢಿಸಿಕೊಳ್ಳಬಹುದು ಎನ್ನುವ ಬಗ್ಗೆ ಈ ಅಂಕಣದಲ್ಲಿ ಕೆಲ ಟಿಪ್ಸ್ ಹಂಚಿಕೊಂಡಿದ್ದೇನೆ. ಅದನ್ನು ಗಮನಿಸಿ, ಅಳವಡಿಸಿಕೊಳ್ಳಿ.

ಎಲ್ಲರಂತೆ ನಾನು ಚೆನ್ನಾಗಿ ಇರಬೇಕು, ನಾಲ್ಕು ಜನಗಳಿಗೆ ಸಹಾಯ ಮಾಡಬೇಕೆಂಬ ನಿಮ್ಮ ಬಯಕೆ ನನಗೆ ಬಹಳ ಇಷ್ಟವಾಯಿತು. ಇದು ನಿಮ್ಮ ಒಳ್ಳೆಯ ಮನಸ್ಸು ಮತ್ತು ಸಹಾಯ ಮಾಡುವ ಉದ್ದೇಶವನ್ನು ತೋರಿಸುತ್ತದೆ. ಇನ್ನು ಅಧಿಕೃತವಾಗಿ, ನೀವು ನಿಮ್ಮ ಮೌಲ್ಯವನ್ನು ಅಂದರೆ ನಿಮ್ಮ ಅಸ್ತಿತ್ವದ ಬೆಲೆಯನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೀರಿ ಎನ್ನಿಸುತ್ತದೆ. ಇದು ತಪ್ಪಲ್ಲ. ನೀವು ನಿಮ್ಮನ್ನು ಅರಿಯುವ ಪಯಣದಲ್ಲಿ ಮುಂದೆ ಸಾಗುತ್ತಿದ್ದೀರಿ (ಸ್ವ ಅರಿವು). ನಿಮ್ಮ ಪ್ರಯಾಣವನ್ನು ಹೀಗೆಯೇ ಮುಂದುವರಿಸಿ.

ಗೃಹಿಣಿಯರಿಗೆ ಮಾನಸಿಕ ಆರೋಗ್ಯ ಬಹಳ ಮುಖ್ಯ. ಅದನ್ನು ನಿರ್ಲಕ್ಷಿಸಿದಷ್ಟೂ, ಕಡೆಗಣಿಸಿದಷ್ಟೂ ಗೃಹಿಣಿಗೆ ಮಾತ್ರವಲ್ಲದೆ ಕುಟುಂಬದ ಎಲ್ಲ ಸದಸ್ಯರ ಮನಸ್ಸಿನ ಮೇಲೆಯೂ ಪರಿಣಾಮ ಆಗುತ್ತದೆ. ಸಾಮಾನ್ಯವಾಗಿ ಬಹುತೇಕ ಗೃಹಿಣಿಯರು ಈ ಕೆಳಗಿನ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ.

1) ದೈಹಿಕ ಅನಾರೋಗ್ಯ: ಹೊಟ್ಟೆನೋವು, ತಲೆನೋವು ಸೇರಿದಂತೆ ಹಲವು ರೀತಿಯ ದೈಹಿಕ ಸಮಸ್ಯೆಗಳು

2) ಮಾನಸಿಕ ಸಮಸ್ಯೆ: ಖಿನ್ನತೆ, ಆತಂಕ, ದುಗುಡ, ಸ್ವ-ಕೀಳರಿಮೆ, ಗೀಳುರೋಗ ಹೀಗೆ ಹಲವಾರು ಮಾನಸಿಕ ರೋಗಗಳಿಂದ ಬಳಲುತ್ತಿರುತ್ತಾರೆ.

3) ವ್ಯಕ್ತಿಗತ ಸಮಸ್ಯೆಗಳು: ಒಂಟಿತನ, ಉದ್ಯೋಗ ಮಾಡುತ್ತಿಲ್ಲವೆಂಬ ಪಾಪಪ್ರಜ್ಞೆ (guilt), ಅಸಹಾಯಕತೆ, ಸಂತ್ರಸ್ತ ಭಾವನೆ ಇತ್ಯಾದಿ

4) ಸಾಮಾಜಿಕ, ಕೌಟುಂಬಿಕ, ಆರ್ಥಿಕ ಪರಿಸ್ಥಿತಿ: ವಿದ್ಯಾಭ್ಯಾಸದ ಕೊರತೆ, ಸ್ವಾತಂತ್ರ್ಯದ ಕೊರತೆ, ಕೌಟುಂಬಿಕ ದೌರ್ಜನ್ಯ, ಕೌಟುಂಬಿಕ ತಾರತಮ್ಯ, ಆರ್ಥಿಕ ಸಮಸ್ಯೆ ಮತ್ತು ಅವಲಂಬನೆ, ಸಾಮಾಜಿಕ ಮತ್ತು ಕೌಟುಂಬಿಕ ಒತ್ತಡಗಳು ಇತ್ಯಾದಿ

ಮಾನಸಿಕ ಮತ್ತು ದೈಹಿಕ ಸಮಸ್ಯೆ ಎರಡೂ ಕಾರಣವಾಗಿರುತ್ತದೆ

1) ನಿದ್ರಾಹೀನತೆ ಅಥವಾ ಅತಿ ನಿದ್ರೆ

2) ಅತಿಯಾಗಿ ಆಹಾರ ಸೇವಿಸುವುದು ಅಥವಾ ಆಹಾರವನ್ನು ಅಗತ್ಯಕಿಂತಲೂ ಕಡಿಮೆ ಸೇವಿಸುವುದು

3) ದಿನಚರಿಯಲ್ಲಿ ನಿರಾಸಕ್ತಿ

⁠4) ಅಗತ್ಯಕಿಂತಲೂ ಹೆಚ್ಚು ಮೌನವಾಗಿರುವುದು ಅಥವಾ ಹೆಚ್ಚು ಮಾತಾಡುವುದು

5) ಸ್ವಯಂ ಕಾಳಜಿ ಇರುವುದಿಲ್ಲ

6) ಕೋಪ, ಕಿರಿಕಿರಿ, ಗೆೊಣಗುವುದು, ಅಸಮಾಧಾನ ವ್ಯಕ್ತಪಡಿಸುವುದು

7) ಚಿಕ್ಕಪುಟ್ಟ ವಿಷಯಗಳಿಗೆ ಜಗಳವಾಡುವುದು

8) ಅತಿಯಾಗಿ ನಿಯಂತ್ರಣ ತಪ್ಪಿ ಅಳುವುದು ಇತ್ಯಾದಿ

ಈ ಮೇಲಿನ ಅಂಶಗಳು ಪದೇಪದೆ ಕಾಣಿಸಿಕೊಳ್ಳುತ್ತಿದ್ದರೆ ನಿರ್ಲಕ್ಷ್ಯ ಮಾಡಬೇಡಿ. ಕೂಡಲೇ ಆಪ್ತ ಸಮಾಲೋಚಕರನ್ನು ಸಂಪಕಿ೯ಸಿ ಮಾರ್ಗದರ್ಶನ ಪಡೆದುಕೊಳ್ಳಿ. ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಬಹಳ ಮುಖ್ಯ. ನೀವು ಉತ್ತಮ ಸ್ಥಿತಿಯಲ್ಲಿದ್ದರೆ ಮಾತ್ರ ಇನ್ನೊಬ್ಬರನ್ನು ಚೆನ್ನಾಗಿ ನೋಡಿಕೊಳ್ಳಲು ಸಾಧ್ಯ. ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ತಂತ್ರಗಳನ್ನು ಅನುಸರಿಸಿ.

ಆರೋಗ್ಯಕರ ದಿನಚರಿ

1) ದೈಹಿಕ ಆರೋಗ್ಯ: ನಿಮ್ಮ ದೈಹಿಕ ಆರೋಗ್ಯದ ಬಗ್ಗೆ ಗಮನವಿರಲಿ. ವ್ಯಾಯಾಮ ಅಥವಾ ವಾಕಿಂಗ್ ಮಾಡಿ, ತಪ್ಪದೆೇ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ.

2) ಹವ್ಯಾಸಗಳು: ನಿಮಗೆ ಮನಸ್ಸಿಗೆ ಮುದ, ಉತ್ತೇಜನ ನೀಡುವ ಹವ್ಯಾಸಗಳೊಂದಿಗೆ ದಿನವನ್ನು ಕಳೆಯಿರಿ. ಕರಕುಶಲ, ಸಂಗೀತ, ನೃತ್ಯ, ಪುಸ್ತಕ ಇತ್ಯಾದಿ ಹವ್ಯಾಸ ಬೆಳೆಸಿಕೊಳ್ಳಿ.

3) ಗಾಸಿಪ್ ಬೇಡ: ನಿಮ್ಮ ಸ್ನೇಹಿತರು, ಪರಿಚಿತರ ಬಳಿ ಹೆಚ್ಚು ಹರಟೆ (gossip) ಹೊಡೆಯುವುದನ್ನು ತಡೆಯಿರಿ. ಇದು ಬರೀ ಅರ್ಥವಿಲ್ಲದ ವ್ಯರ್ಥವಾದ ಮಾತುಗಳಷ್ಟೆ ಅಲ್ಲ, ಸಮಯ ಮತ್ತು ಮನಸ್ಸಿನ ನೆಮ್ಮದಿ ಹಾಳು ಮಾಡುತ್ತದೆ.

4) ಧ್ಯಾನ: ದಿನಕ್ಕೆ ಒಮ್ಮೆಯಾದರೂ ಉಸಿರಾಟದ ಬಗ್ಗೆ ಗಮನಕೊಟ್ಚು ಧ್ಯಾನ ಮಾಡುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದರಿಂದ ಮನಸ್ಸನ್ನು ಶಾಂತಿಯಿಂದ ಮತ್ತು ಸಕಾರಾತ್ಮಕವಾಗಿ ಇಟ್ಟುಕೊಳ್ಳಲು ಸುಲಭವಾಗುತ್ತದೆ.

5) ಆರೋಗ್ಯಕರ ಮನಃಸ್ಥಿತಿ: “ಹೌದು ಮತ್ತು ಇಲ್ಲ” ಹೇಳುವುದನ್ನು ಅಭ್ಯಾಸ ಮಾಡಿ. ನಿಮ್ಮ ಕರ್ತವ್ಯ ಮತ್ತು ಕೈಲಿ ಆಗುವಷ್ಚು ಎಲ್ಲವನ್ನೂ ಮಾಡಿ. ಅದರ ಮೇಲೂ ನೀವು ಮಾಡಲೇಬೇಕೆಂದು ಹೆಚ್ಚು ಬೇಡಿಕೆ ಅಥವಾ ಬಲವಂತ ಬಂದರೆ ಒಳ್ಳೆ ರೀತಿಯಲ್ಲಿ “ಇಲ್ಲ” ಎಂದು ಹೇಳಿ. ಇದರಿಂದ ಅನವಶ್ಯಕ ಒತ್ತಡಗಳು ಕಡಿಮೆಯಾಗುತ್ತದೆ

6) ನಿಮ್ಮ ಆಯ್ಕೆಯನ್ನು ಗೌರವಿಸಿ: ಗೃಹಿಣಿಯಾಗಬೇಕೆಂಬ ನಿಮ್ಮ ನಿಧಾ೯ರ ಹಾಗೂ ಆಯ್ಕೆಯನ್ನು ಮೊದಲು ನೀವು ಗೌರವಿಸಿಕೊಳ್ಳಿ.

7) ಶ್ರದ್ಧೆಯಿಂದ ನಿಭಾಯಿಸಿ: ನಿಮ್ಮ ಕರ್ತವ್ಯ ಮತ್ತು ಜವಾಬ್ಧಾರಿಗಳನ್ನು ಪ್ರೀತಿ ಮತ್ತು ಶ್ರದ್ಧೆಯಿಂದ ನಿಭಾಯಿಸಿ.

8) ಪೂರ್ಣ ಮನಸ್ಸಿನಿಂದ ಮಾಡಿ: ಅಡುಗೆ ಮಾಡುವುದಾಗಲಿ, ಮನೆ ಕೆಲಸವಾಗಲಿ, ಮಕ್ಕಳನ್ನು ನೋಡಿಕೊಳ್ಳುವುದಾಗಲಿ, ನಿಮ್ಮ ಆರೈಕೆ ಮಾಡಿಕೊಳ್ಳುವುದಾಗಲಿ ಪೂರ್ಣ ಮನಸ್ಸಿನಿಂದ ಮತ್ತು ಹೆಮ್ಮೆಯಿಂದ ಮಾಡಿ.

9) ಹೋಲಿಕೆ ಸಲ್ಲದು: ಯಾವುದೇ ಕಾರಣಕ್ಕೂ ಬೇರೆಯವರ ಜೊತೆ ನಿಮ್ಮನ್ನು ಹೋಲಿಸಿಕೊಂಡು ಕೊರಗಬೇಡಿ. ಪ್ರತಿಯೊಬ್ಬರ ಪರಿಸ್ಥಿತಿ, ಸಾಮರ್ಥ್ಯ, ದೌಬ೯ಲ್ಯಗಳು ಬೇರೆಯಾಗಿರುತ್ತದೆ.

ಸ್ಫೂರ್ತಿದಾಯಕ ಸಿನಿಮಾಗಳು

ನಿಮಗೆ ಉತ್ಸಾಹ ಮತ್ತು ಸ್ಫೂರ್ತಿ ತುಂಬುವ ಕೆಲ ಚಲನಚಿತ್ರಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ತುಸು ಬಿಡುವು ಮಾಡಿಕೊಂಡು ಒಮ್ಮೆ ನೋಡಿ.

1) ಇಂಗ್ಲಿಷ್ ವಿಂಗ್ಲಿಷ್ (2012)

2) ತುಮ್ಹಾರಿ ಸುಲು (2017)

3) ಹಿಂದಿ ಮೀಡಿಯಂ (2017)

4) ಲಂಚ್ ಬಾಕ್ಸ್ (2013)

ಈ ಬಾಲಿವುಡ್ ಚಲನಚಿತ್ರಗಳು ಗೃಹಿಣಿಯನ್ನು ಕೇಂದ್ರವಾಗಿಟ್ಟುಕೊಂಡಿದೆ. ಹೇಗೆ ಗೃಹಿಣಿಯರು ತಮ್ಮ ಆಕಾಂಕ್ಷೆ ಮತ್ತು ಕನಸುಗಳನ್ನು ಹಿಂಬದಿಯಲ್ಲಿಟ್ಟು, ಶ್ರಮಪಟ್ಟು ಕುಟುಂಬದ ಕಾಳಜಿ ಹೊತ್ತು, ಜವಾಬ್ಧಾರಿಗಳನ್ನು ನಿಸ್ವಾರ್ಥ ರೀತಿಯಲ್ಲಿ ನಿಭಾಯಿಸುತ್ತಾರೆ ಎಂಬುದನ್ನು ಚಿತ್ರಿಸುತ್ತವೆ.

ಒಟ್ಟಾರೆ ಎಲ್ಲ ಗೃಹಿಣಿಯರಿಗೆ ನಾನು ಹೇಳಬಯಸುವುದು ಇಷ್ಟೇ. ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವು ನಿಮ್ಮ ಕುಟುಂಬದ ನೆಮ್ಮದಿಗೆ ಬಹಳ ಮುಖ್ಯ. ನಿಮ್ಮ ಆಯ್ಕೆ ಮತ್ತು ಆಸಕ್ತಿಯಿಂದ ಗೃಹಿಣಿಯಾಗಿ ಉಳಿಯಬೇಕು ಎಂದುಕೊಂಡಿದ್ದೀರಿ. ನಿಮ್ಮ ನಿರ್ಧಾರವನ್ನು ನೀವೇ ಗೌರವಿಸಿಕೊಳ್ಳಿ, ಇತರರೊಂದಿಗೆ ಹೋಲಿಸಿಕೊಂಡು ಕೊರಗದಿರಿ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದಿದ್ದರೆ, ಅಗತ್ಯ ಎನಿಸಿದರೆ ಆಪ್ತಸಮಾಲೋಚಕರನ್ನು ಭೇಟಿ ಮಾಡಿ, ನೆರವು ಪಡೆಯಿರಿ.