ಹಗಲುಗನಸು ವರವೋ? ಶಾಪವೋ? ಅತೃಪ್ತ ಮನಸ್ಸನ್ನು ಕಾಡುವ ಡೇ ಡ್ರೀಮಿಂಗ್ ಬಗ್ಗೆ ನೀವು ತಿಳಿಯಬೇಕಾದ ವಿಷಯಗಳಿವು -ಕಾಳಜಿ-mental health is day dreaming boon or goon psychologist dr roopa rao explains problem of maladaptive daydreaming rpr ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಹಗಲುಗನಸು ವರವೋ? ಶಾಪವೋ? ಅತೃಪ್ತ ಮನಸ್ಸನ್ನು ಕಾಡುವ ಡೇ ಡ್ರೀಮಿಂಗ್ ಬಗ್ಗೆ ನೀವು ತಿಳಿಯಬೇಕಾದ ವಿಷಯಗಳಿವು -ಕಾಳಜಿ

ಹಗಲುಗನಸು ವರವೋ? ಶಾಪವೋ? ಅತೃಪ್ತ ಮನಸ್ಸನ್ನು ಕಾಡುವ ಡೇ ಡ್ರೀಮಿಂಗ್ ಬಗ್ಗೆ ನೀವು ತಿಳಿಯಬೇಕಾದ ವಿಷಯಗಳಿವು -ಕಾಳಜಿ

ಡಾ ರೂಪಾ ರಾವ್: ಮನಸ್ಸು ತನ್ನ ಒತ್ತಡ ಕಡಿಮೆ ಮಾಡಿಕೊಳ್ಳಲು ಹುಡುಕಿಕೊಳ್ಳುವ ಒಂದು ಮಾರ್ಗ ಹಗಲುಗನಸು. ಆದರೆ ಇದು ದೀರ್ಘಕಾಲಕ್ಕೆ ಮುಂದುವರಿದರೆ ಚಿಕಿತ್ಸೆ ಮಾನಸಿಕ ಖಿನ್ನತೆ, ಸ್ಕಿಜೊಫ್ರೇನಿಯಾದಂತಹ ಅನಾರೋಗ್ಯಗಳಿಗೆ ದಾರಿ ಆಗಬಹುದು. ಈ ಬರಹದಲ್ಲಿರುವ ಲಕ್ಷಣ ಕಾಣಿಸಿದರೆ ನಿರ್ಲಕ್ಷ್ಯ ಮಾಡದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಿ.

ಹಗಲುಗನಸು ವರವೋ ಶಾಪವೋ? ಡೇ ಡ್ರೀಮಿಂಗ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು.
ಹಗಲುಗನಸು ವರವೋ ಶಾಪವೋ? ಡೇ ಡ್ರೀಮಿಂಗ್ ಬಗ್ಗೆ ನೀವು ತಿಳಿಯಬೇಕಾದ ಸಂಗತಿಗಳಿವು.

Day Dreaming: ಪ್ರಶ್ನೆ: ಮೇಡಂ ನನಗೊಂದು ಸಮಸ್ಯೆ ಕಾಡುತ್ತಿದೆ. ಇದೇನು ಮಾನಸಿಕ ರೋಗವೋ ಅಥವಾ ನನ್ನದೇ ಸಮಸ್ಯೆಯೋ ಗೊತ್ತಿಲ್ಲ. ನಾನು ಕೆಲಸಕ್ಕೆ ಹೋಗುವ ಮಹಿಳೆ. ನನಗೆ ಮೂರು ವರ್ಷದ ಮಗು ಇದೆ. ಇದೇ ಕಾರಣವನ್ನು ಪರಿಗಣಿಸಿ ಕಂಪನಿಯಲ್ಲಿ ವರ್ಕ್‌ಫ್ರಮ್ ಹೋಮ್ ಕೊಟ್ಟಿದ್ದಾರೆ. ಈ ಮೊದಲು ಆಫೀಸಿಗೆ ಹೋಗಿ ಬರುತ್ತಿದ್ದೆ. ಈಗ ನಾನು ಮನೆಯಿಂದ ಕೆಲಸ ಮಾಡುತ್ತಿದ್ದೇನೆ, ಅದರೆ ಆಫೀಸಿನ ಕೆಲಸಗಳನ್ನು ಸಕಾಲಕ್ಕೆ ಮುಗಿಸಲು ಸಾಧ್ಯವಾಗುತ್ತಿಲ್ಲ. ನನ್ನ ತೊಂದರೆಯ ಅಂದರೆ ಆಫೀಸೀನ ಕೆಲಸಗಳನ್ನು ಸರಿಯಾದ ಸಮಯಕ್ಕೆ ಮುಗಿಸಲಾಗದ್ದು. ಇದಕ್ಕೆ ಕಾರಣ ನನ್ನ ಹಗಲುಗನಸು. ಇದು ನನ್ನ ಗೀಳಾಗಿಹೋಗಿದೆ. ನನ್ನ ಹನ್ನೆರೆಡು ಹದಿಮೂರರ ವಯಸ್ಸಿನಲ್ಲಿ ಇದ್ದಾಗ ಒಂದು ಗುಂಪಿನ ಹುಡುಗರು ನನ್ನನ್ನು ಕೀಟಲೆ ಮಾಡಿ, ಮೈಮುಟ್ಟಿ ಲೈಂಗಿಕ ದೌರ್ಜನ್ಯ ಮಾಡಿದ್ದರು. ಆಗ ನನ್ನ ಪೋಷಕರಿಗೆ ವಿಷಯ ತಿಳಿಸಿ, ಅವರಿಗೆ ಬುದ್ದಿ ಕಲಿಸಲು ಕೇಳಿಕೊಂಡೆ. ಆದರೆ ಇಬ್ಬರೂ ನನ್ನನ್ನೇ ಬೈದರು. ಅವತ್ತು ಅಳುತ್ತಾ ನಿದ್ದೆ ಮಾಡದೆ ಹಾಗೇ ಮಲಗಿದ್ದ ನಾನು ಆ ಹುಡುಗರನ್ನು ಅಟ್ಟಿಸಿಕೊಂಡು ಹೋಗಿ ಹೊಡೆದ ಹಾಗೆ ಹಗಲುಗನಸು ಕಂಡೆ. ಈಗ ಎಚ್ಚರವಾಗಿದ್ದಾಗಲೂ ಏನೇನೋ ಕನಸುಗಳನ್ನು ಕಾಣುತ್ತಾ, ಆಲೋಚಿಸುತ್ತಾ, ನನ್ನ ಕೆಲಸಳನ್ನೂ ಮರೆತುಬಿಡುವೆ. ಈ ಪ್ರಪಂಚದಿಂದಲೇ ಕಟ್ ಆದ ಹಾಗೆ, ನನ್ನದೇ ಪ್ರಪಂಚದಲ್ಲಿರುತ್ತೇನೆ. ಎಂಟು ಹತ್ತು ಗಂಟೆಗಳ ಕಾಲ ಇದು ಮುಂದುವರೆದಿದ್ದಿದೆ. ಈ ಅಭ್ಯಾಸ ನನ್ನ ವೃತ್ತಿ ಹಾಗು ವೈಯಕ್ತಿಕ ಜೀವನದಲ್ಲಿ ಬಹಳ ತೊಂದರೆ ಕೊಡುತ್ತಿದೆ. ಇದಕ್ಕೊಂದು ಪರಿಹಾರ ತಿಳಿಸಿ. -ಹೆಸರು ಮತ್ತು ಊರು ಬೇಡ.

ಉತ್ತರ: ಮೊದಲಿಗೆ ಈಗಲಾದರೂ ನಿಮ್ಮ ತೊಂದರೆಯನ್ನು ಹಂಚಿಕೊಂಡದಕ್ಕೆ ಧನ್ಯವಾದಗಳು. ನಿಮಗಿರುವುದು ಸಮಸ್ಯೆ ಮಾನಸಿಕ ಸಮಸ್ಯೆ. ಇದರ ಪರಿಹಾರಕ್ಕಾಗಿ ನೀವು ಮನಃಶಾಸ್ತ್ರಜ್ಞರನ್ನು ಮುಖತಃ ಭೇಟಿ ಆಗಲೇಬೇಕು. ಆದರೂ ಈ ಬರಹದ ಮುಖಾಂತರ ನಿಮಗೆ ಈ ಸಮಸ್ಯೆಯ ಒಂದಿಷ್ಟು ಚಿತ್ರಣ ಕೊಡುವೆ. ನಿಮ್ಮ ಪರಿಸ್ಥಿತಿ ಏನೆಂದು ಅರ್ಥ ಮಾಡಿಕೊಳ್ಳಲು ಇದರಿಂದ ನೆರವಾಗಬಹುದು. ಸಾಮಾನ್ಯವಾಗಿ ಬಾಲ್ಯ ಮತ್ತು ಹದಿಹರೆಯ ಎಲ್ಲರಿಗೂ ಬಹಳ ಮುಖ್ಯ. ಏಕೆಂದರೆ ಆಗಿನ ಅನುಭವಗಳು, ಭಯ, ಆಸರೆ, ನೆನಪುಗಳು ಮನುಷ್ಯನ ಸುಪ್ತಮನಸಿನಲ್ಲಿ ಬೇರೂರಿರುತ್ತವೆ.

ನಿಮ್ಮ ಉದಾಹರಣೆಯಲ್ಲಿ ನಿಮಗೆ ಬಾಲ್ಯದಲ್ಲಿ ಆದ ಅನುಭವ ಹಾಗೂ ಆ ಸಮಯದಲ್ಲಿ ಆದ ತೊಂದರೆ, ಆ ಸಮಯದಲ್ಲಿ ಯಾರಿಂದಲೂ ಸಿಗದ ಬೆಂಬಲ ನಿಮ್ಮನ್ನು ಹಗಲುಗನಸು ಕಾಣುವತ್ತ ಮುಖ ಮಾಡುವಂತೆ ಮಾಡಿತ್ತು. ಅಲ್ಲಿ ನಿಮಗೆ ಧೈರ್ಯ ಮತ್ತು ಆ ಹುಡುಗರ ಮೇಲೆ ಸೇಡು ತೀರಿಸಿಕೊಂಡ ತೃಪ್ತಿ ಸಿಕ್ಕಿತು. ಹಾಗಾಗಿ ನಿಮಗೆ ವಾಸ್ತವಕ್ಕಿಂತ ಈ ಕಾಲ್ಪನಿಕ ಲೋಕವೇ ಚೆಂದ ಎಂದು ಅನಿಸಿತು. ಹೀಗಾಗಿಯೇ ಬೇಕಾದಾಗೆಲ್ಲಾ ಅಲ್ಲಿಗೆ ಹೋಗಿ ನೆಲೆಸುತ್ತಿದ್ದರಿ.

ಈ ನಡವಳಿಕೆಯನ್ನು ಮನಃಶಾಸ್ತ್ರದಲ್ಲಿ 'ಮಾಲ್‌ಅಡಾಪ್ಟೀವ್ ಡೇ ಡ್ರೀಮಿಂಗ್' (maladaptive daydreaming) ಎಂದು ಕರೆಯುತ್ತಾರೆ. ನೀವು ಇನ್ನೊಂದು ವಿಷಯ ಹೇಳಿದಿರಿ. ನೀವು ಈ ಪ್ರಪಂಚದ ಸಂಪರ್ಕ ಕಡಿದುಕೊಂಡಂತೆ ಇರುತ್ತೀರಿ ಎನ್ನುವ ಅನುಭವ ಹಂಚಿಕೊಂಡಿರಿ. ಇದನ್ನು 'ಡಿಸ್ ಅಸೋಸಿಯೇಶನ್' ಎನ್ನುತ್ತಾರೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ 'ಡಿ ರಿಯಲೈಸೇಶನ್' (ವಾಸ್ತವ ಜಗತ್ತಿನಿಂದ ದೂರ ಇರುವುದು' ಎಂದೂ ಕರೆಯಬಹುದು.

ಮೊದಲಿಗೆ 'ಮಾಲ್‌ಅಡಾಪ್ಟೀವ್ ಡೇಡ್ರೀಮಿಂಗ್' ಅಂದರೆ ಏನೆಂದು ನೋಡೋಣ. ಇದೊಂದು ದೈನಂದಿನ ಜೀವನಕ್ಕೆ ಹಾಗೂ ಮನಸಿಗೆ ಅನಾರೋಗ್ಯಕರವಾಗಬಲ್ಲ ಹಗಲುಗನಸು ಕಾಣುವ ನಡವಳಿಕೆ. ಇದು ಎಡಿಎಚ್‌ಡಿ (ಕಡಿಮೆ ಕೇಂದ್ರೀಕೃತ ಗಮನ ಹಾಗೂ ಅತಿ ಚಟುವಟಿಕೆಯ ಅಸ್ವಸ್ಥತೆ) ಆಂಕ್ಸೈಟಿ, ಓಸಿಡಿಯಂತಹ (ಗೀಳು) ಗಂಭೀರ ಮನೋರೋಗಗಳಿದ್ದವರಿಗೆ ಹೆಚ್ಚಾಗಿ ಕಂಡುಬರುವ ಸ್ಥಿತಿ.

ಮಾಲ್‌ಅಡಾಪ್ಟೀವ್ ಡೇಡ್ರೀಮಿಂಗ್ ರೋಗದ ಲಕ್ಷಣಗಳು

ಕಾಲ್ಪನಿಕ ಲೋಕದಲ್ಲಿ ಅತಿಯಾಗಿ ಕಳೆದು ಹೋಗುವುದು. ಕೆಲವೊಮ್ಮೆ ವರ್ಣರಂಜಿತ ಕಲ್ಪನೆಗಳು, ತಮ್ಮ ಕಲ್ಪನೆಯಲ್ಲಿ ಕಥೆಯನ್ನು ಬೆಳೆಸಿಕೊಂಡು ಹೋಗುವುದು. ಹಗಲು, ರಾತ್ರಿ ನಿದ್ರೆ ಮಾಡುವ ಸಮಯದಲ್ಲಿಯೂ ಇಂತಹ ಕಲ್ಪನೆ ಮಾಡುತ್ತಾ ಎಚ್ಚರವಾಗಿರುವುದು. ಕೆಲವರು ಈ ರೀತಿ ಹಗಲುಗನಸು ಕಾಣುವ ವೇಳೆಯಲ್ಲಿ ಕಥೆಯ ಪಾತ್ರವೇ ಆಗಿ ಆ ಅಭಿನಯವನ್ನು ಇಲ್ಲಿಯೂ ತಮ್ಮ ಮುಖದ ಮೂಲಕ ತೊರಿಹಬಹುದು. ವೃತ್ತಿ ಹಾಗು ವೈಯಕ್ತಿಕ ಬದುಕು ಇದರಿಂದ ಏರುಪೇರಾಗಬಹುದು.

ಹಗಲಗನಸು ಗೀಳಿನಿಂದ ಹೊರಬರುವುದು ಹೇಗೆ?

ಇದರಿಂದ ಹೊರಬರಲು ಮೊದಲಿಗೆ ನೀವು ಕೂಡಲೇ ಮನೋವೈದ್ಯರು ಅಥವಾ ಮನಃಶಾಸ್ತ್ರಜ್ಞರನ್ನು ಭೇಟಿಯಾಗಬೇಕು. ಅವರು ಈ ಸ್ಥಿತಿಯ ಹಿಂದೆ ಮತ್ತಾವುದಾದರೂ ಮನೋಕಾಯಿಲೆಗಳಿವೆಯೇ ಎಂದು ಪರೀಕ್ಷಿಸಿ ಸೂಕ್ತ ಮನೋ ಚಿಕಿತ್ಸೆ ನೀಡುತ್ತಾರೆ. ನಿಮಗಿರಬಹುದಾದ ಇನ್ನೊಂದು ತೊಂದರೆ ಡಿರಿಯಲೈಸೇಶನ್. ಹೀಗೆಂದರೆ ವಾಸ್ತವಲೋಕದ ಸಂಪರ್ಕ ಇಲ್ಲದಂತಿರುವುದು. ಬಾಲ್ಯದಲ್ಲಿ ಹೆತ್ತವರ ನಿರ್ಲಕ್ಷ್ಯ ಅಥವಾ ಅತೀವ ಮಾನಸಿಕ ಒತ್ತಡ (ಸ್ಟ್ರೆಸ್) ಇದ್ದಿರಬಹುದು. ಸತತ ದೈಹಿಕ ಅಥವಾ ಮಾನಸಿಕ ದೌರ್ಜನ್ಯ, ಪೋಸ್ಟ್ ಟ್ರಾಮಾಟಿಕ್ ಸ್ಟ್ರೆಸ್ (ಆಘಾತದ ನಂತರದ ಒತ್ತಡ) ಇಂಥ ಸ್ಥಿತಿಗೆ ಕಾರಣವಾಗುತ್ತದೆ.

ಮೇಲಿನ ಎರಡನ್ನೂ 'ಕಾಗ್ನಿಟೀವ್ ಬಿಹೇವಿಯರ್ ಥೆರಪಿ' (ನಡವಳಿಕೆ ಚಿಕಿತ್ಸೆ) ಮೂಲಕ ಚಿಕಿತ್ಸೆ ಕೊಡಬಹುದು. ಇದೂ ಸಹ ಚಿಕಿತ್ಸೆ ಪಡೆಯದೇ ಹಾಗೆಯೇ ಬಿಟ್ಟರೆ ಮಾನಸಿಕ ಖಿನ್ನತೆ, ಸ್ಕಿಜೊಫ್ರೇನಿಯಾದಂತಹ ಅನಾರೋಗ್ಯಗಳಿಗೆ ದಾರಿ ಆಗಬಹುದು. ಆದ್ದರಿಂದ ದಯವಿಟ್ಟು ನಿರ್ಲಕ್ಷ್ಯ ಮಾಡದೇ ಸೂಕ್ತ ರೀತಿಯಲ್ಲಿ ಕೌನ್ಸೆಲಿಂಗ್ ಪಡೆದುಕೊಳ್ಳಿ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990