Motivation: ಸಣ್ಣ ಎಂದುಕೊಳ್ಳಬೇಡಿ, ಆನೆಗಿಂತ ಚೀತಾ ವೇಗವಾಗಿ ಓಡುತ್ತೆ, ಯಶಸ್ಸಿನತ್ತ ಸಾಗಲು ದೊಡ್ಡದಾಗಿ ಯೋಚಿಸಿ
ಯಶಸ್ಸು ಪಡೆಯಲು ಬಯಸುವವರು ತಮ್ಮಲ್ಲಿರುವ ದೌರ್ಬಲ್ಯಗಳನ್ನು ಕಡೆಗಣಿಸಿ ಸಾಮರ್ಥ್ಯಗಳ ಕಡೆಗೆ ಗಮನ ನೀಡಬೇಕು. ನಿಮ್ಮ ಸಣ್ಣ ಗಾತ್ರ, ಸಣ್ಣ ಆಕಾರ, ಕಡಿಮೆ ಸಂಪತ್ತು ಯಶಸ್ಸಿಗೆ ಎಂದಿಗೂ ಅಡ್ಡಿಯಾಗುವುದಿಲ್ಲ.
ಜಗತ್ತಿನಲ್ಲಿ ಸಾಕಷ್ಟು ಜನರಿಗೆ ಹಿಂಜರಿಕೆ ಇರುತ್ತದೆ. ನನ್ನಲ್ಲಿ ಹಣವಿಲ್ಲ, ನನಗೆ ಸಾಧನೆ ಮಾಡಲು ಸಾಧ್ಯವಿಲ್ಲ. ನಾನು ಚಿಕ್ಕವನು, ನನ್ನಿಂದ ಇದು ಸಾಧ್ಯವಿಲ್ಲ. ನನ್ನದ್ದು ಸಣ್ಣ ಕಂಪನಿ, ದೊಡ್ಡ ಕಂಪನಿಯ ಜತೆ ಸ್ಪರ್ಧೆ ಮಾಡಲು ಸಾಧ್ಯವಿಲ್ಲ... ಹೀಗೆ ಸಾಕಷ್ಟು ಜನರು ಹಿಂಜರಿಯುತ್ತಾರೆ. ಸ್ಟಾರ್ಟಪ್‌ಗಳಿಗೆ ಉತ್ತೇಜನ ನೀಡುವ ಸಂದರ್ಭದಲ್ಲಿ "when you small you can move fast" ಎಂಬ ಉತ್ತೇಜನದ ಮಾತುಗಳನ್ನು ಆಡುತ್ತಾರೆ. ಇದು ಸಂಪೂರ್ಣ ಸತ್ಯವಾಗಿರದೆ ಇದ್ದರೂ ಸುಳ್ಳಲ್ಲ. ದೊಡ್ಡ ಆನೆಗಿಂತ ಸಣ್ಣಗಾತ್ರದ ಚೀತಾ ವೇಗವಾಗಿ ಓಡುತ್ತದೆ. ಆದರೆ, ಸಣ್ಣ ಸೈಕಲ್‌ಗಿಂತ ದೊಡ್ಡ ಕಾರು ವೇಗವಾಗಿ ಸಾಗುತ್ತದೆ ಎನ್ನುವುದೂ ಸತ್ಯ. ಆದರೆ, ಸ್ಪೂರ್ತಿದಾಯಕವಾದ ಮಾತುಗಳನ್ನು ಹೇಳುವಾಗ "ಸಣ್ಣವರೆಂದು ಹಿಂಜರಿಯಬೇಡಿ" ಎಂದು ಬೆನ್ನು ತಟ್ಟುವ ಪ್ರಕ್ರಿಯೆ ನಡೆಯುತ್ತದೆ.
ಕೆಲವೊಮ್ಮೆ ನೋಡಲು ಸಣ್ಣಗಿದ್ದವರೂ ಅಗಾಧ ಸಾಧನೆ ಮಾಡುತ್ತಾರೆ. ಇದಕ್ಕೆ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದ್ದು ಎನ್ನುವುದು. ನಿಮಗೆ ಇನ್ಫೋಸಿಸ್‌ನ ನಾರಾಯಣ ಮೂರ್ತಿ ನೆನಪಾಗಬಹುದು. ಸುಧಾ ಮೂರ್ತಿ ಎಲ್ಲೋ ಈ ಕುರಿತು ಮಾತನಾಡಿದ್ದಾರೆ. ನೋಡಲು ವಾಮನನಾದರೂ ಸಾಧನೆಲ್ಲಿ ಇವರು ತ್ರಿವಿಕ್ರಮ. ಭಾರತದಲ್ಲಿ ಸಾಕಷ್ಟು ಸಣ್ಣ ವಯಸ್ಸಿನವರು ಅಗಾಧ ಸಾಧನೆ ಮಾಡಿದ್ದಾರೆ. ಸಣ್ಣ ವಯಸ್ಸಿನಲ್ಲೇ ದೊಡ್ಡ ಕಂಪನಿಗಳ ಸಿಇಒ ಆಗಿದ್ದಾರೆ. ಸ್ಟಾರ್ಟಪ್‌ಗಳ ಮೂಲಕ ಆರಂಭಿಸಿ, ದೊಡ್ಡ ಕಂಪನಿಗಳನ್ನು ಮುನ್ನಡೆಸುತ್ತಿದ್ದಾರೆ. ಹೀಗಾಗಿ, "ವೆನ್ ಯು ಸ್ಮಾಲ್, ಯೂ ಕ್ಯಾನ್ ಮೂವ್ ಫಾಸ್ಟ್" ಎಂಬುದನ್ನು ಈ ವಾರದ ಸ್ಪೂರ್ತಿದಾಯಕ ಮಾತಾಗಿ ತೆಗೆದುಕೊಳ್ಳಬಹುದು.
ಸಣ್ಣ ಎಂದುಕೊಳ್ಳಬೇಡಿ, ಸಾಧನೆಗೆ ಮುಂದಡಿ ಇಡಿ
- ಯಶಸ್ಸಿಗೆ ಬೇಕಾಗಿರುವುದು ದೊಡ್ಡ ಮನಸ್ಥಿತಿ. ನನ್ನಿಂದ ಅಗಾಧವಾದದ್ದು ಸಾಧ್ಯ ಎಂಬ ಮನಸ್ಥಿತಿ ನಿಮ್ಮದಾಗಿಸಿಕೊಳಳಿ.
- ಜೀವನಪೂರ್ತಿ ಕಲಿಯುತ್ತ ಇರುವುದು ಯಶಸ್ಸಿಗೆ ಅತ್ಯಂತ ಅಗತ್ಯವಾದದ್ದು. ಬದಲಾಗುತ್ತಿರುವ ತಂತ್ರಜ್ಞಾನ, ಪರಿಸ್ಥಿತಿಗಳಿಗೆ ತಕ್ಕಂತೆ ಕಲಿಕೆ ನಿರಂತರವಾಗಿರಲಿ.
- ನಿಮ್ಮ ಸಾಮರ್ಥ್ಯದ ಕಡೆಗೆ ಗಮನ ನೀಡಿ. ಪ್ರತಿಯೊಬ್ಬರಲ್ಲಿಯೂ ಸಾಮರ್ಥ್ಯ ಮತ್ತು ದೌರ್ಬಲ್ಯ ಇರುತ್ತದೆ. ದೌರ್ಬಲ್ಯದ ಕುರಿತು ಚಿಂತಿಸುತ್ತಾ ಕಾಲಕಳೆಯಬೇಡಿ.
- ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ಬದಲಾಗುತ್ತ ಇರಿ. ಯಶಸ್ಸು ಪಡೆಯಲು ನೆಟ್‌ವರ್ಕ್ ಕೂಡ ಅಗತ್ಯ. ಈಗಾಗಲೇ ಸಾಧನೆ ಮಾಡಿರುವವರ ಕುರಿತು ಅಧ್ಯಯನ ಮಾಡಿ. ಸೋಲು ಅನುಭವಿಸಿದವರ ಕಥೆಗಳನ್ನೋ ಓದಿ.
- ನಿಮ್ಮನ್ನು ಇತರರ ಜತೆ ಹೋಲಿಕೆ ಮಾಡಿಕೊಳ್ಳಬೇಡಿ. ನಿಮ್ಮ ವಯಸ್ಸು, ನಿಮ್ಮ ಅಂತಸ್ತು, ನಿಮ್ಮ ಬಡತನ, ನಿಮ್ಮ ದೌರ್ಬಲ್ಯ, ನಿಮ್ಮ ಅಂದ, ಕುರೂಪ, ಯಾವುದನ್ನೂ ಯಾರ ಜತೆಯೂ ಹೋಲಿಕೆ ಮಾಡಬೇಡಿ.
- ನೆನಪಿಡಿ, ಯಶಸ್ಸು ಎನ್ನುವುದು ತಕ್ಷಣದ ಫಲಿತಾಂಶವಲ್ಲ. ಯಶಸ್ಸಿನ ಹಾದಿಯಲ್ಲಿ ವೈಫಲ್ಯಗಳು ಎದುರಾಗಬಹುದು. ಹಿಂಜರಿಯಬೇಡಿ. ಸಕ್ಸಸ್ ಎನ್ನುವುದು ನಿರಂತರ ಪ್ರಯಾಣ. ನಿರ್ದಿಷ್ಟ, ಸಾಧಿಸಬಹುದಾದ, ಸೂಕ್ತವಾದ ಗುರಿಗಳನ್ನು ಹಾಕಿಕೊಂಡು ಯಶಸ್ಸಿನತ್ತ ಪ್ರಯಾಣ ಬೆಳೆಸಿ.