New Year 2024: ಹೊಸ ವರ್ಷಕ್ಕೆ ಜನರು ತೆಗೆದುಕೊಳ್ಳುವ ಟಾಪ್‌ 10 ರೆಸಲ್ಯೂಷನ್‌ಗಳಿವು, ಈ ಲಿಸ್ಟಲ್ಲಿ ನಿಮ್ಮ ಪ್ಲಾನ್‌ ಇದ್ಯಾ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  New Year 2024: ಹೊಸ ವರ್ಷಕ್ಕೆ ಜನರು ತೆಗೆದುಕೊಳ್ಳುವ ಟಾಪ್‌ 10 ರೆಸಲ್ಯೂಷನ್‌ಗಳಿವು, ಈ ಲಿಸ್ಟಲ್ಲಿ ನಿಮ್ಮ ಪ್ಲಾನ್‌ ಇದ್ಯಾ ನೋಡಿ

New Year 2024: ಹೊಸ ವರ್ಷಕ್ಕೆ ಜನರು ತೆಗೆದುಕೊಳ್ಳುವ ಟಾಪ್‌ 10 ರೆಸಲ್ಯೂಷನ್‌ಗಳಿವು, ಈ ಲಿಸ್ಟಲ್ಲಿ ನಿಮ್ಮ ಪ್ಲಾನ್‌ ಇದ್ಯಾ ನೋಡಿ

ಹೊಸ ವರ್ಷ ಬಂದಾಗ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುವುದು ಸಹಜ. ಪ್ರಪಂಚದಾದ್ಯಂತ ಜನರು ಹೊಸ ವರ್ಷಕ್ಕೆ ತೆಗೆದುಕೊಳ್ಳುವ ಟಾಪ್‌ 10 ರೆಷಲ್ಯೂನ್‌ಗಳಿವು. ಇದರಲ್ಲಿ ನೀವು ಕೆಲವನ್ನು ಅನುಸರಿಸಬಹುದು ನೋಡಿ.

ಹೊಸ ವರ್ಷದ ನಿರ್ಣಯ
ಹೊಸ ವರ್ಷದ ನಿರ್ಣಯ

ಇನ್ನೇನು 2024ರ ಹೊಸ ವರ್ಷ ಒಂದೇ ಬಿಟ್ಟಿತು. ಪ್ರತಿವರ್ಷದಂತೆ ಈ ವರ್ಷವೂ ನಾವು ಹೊಸ ವರ್ಷವನ್ನ ಸ್ವಾಗತಿಸಲು ಸಜ್ಜಾಗಿದ್ದೇವೆ. ಹೊಸ ವರ್ಷ ಎಂದಾಕ್ಷಣ ಒಂದಿಷ್ಟು ನಿರ್ಣಯಗಳನ್ನು ತೆಗೆದುಕೊಳ್ಳುವುದು ಸಹಜ. ಕೆಲವರು ತಮ್ಮ ಗುರಿ ಸಾಧನೆಯ ಕಡೆಗೆ ಗಮನ ಹರಿಸಿದರೆ, ಇನ್ನೂ ಕೆಲವರು ವೃತ್ತಿ ಹಾಗೂ ವೈಯಕ್ತಿಕ ಬದುಕನ್ನು ಸುಧಾರಿಸಿಕೊಳ್ಳುವ ನಿರ್ಣಯ ತೆಗೆದುಕೊಳ್ಳುತ್ತಾರೆ. ಅದೇನೇ ಇದ್ರೂ ಪ್ರಪಂಚದಾದ್ಯಂತ ಜನರು ತೆಗೆದುಕೊಳ್ಳುವ ಒಂದಿಷ್ಟು ಸಾಮಾನ್ಯ ನಿರ್ಣಯಗಳಿವು. ಈ ನಿರ್ಣಯಗಳಲ್ಲಿ ನಿಮ್ಮ ನಿರ್ಣಯವೂ ಇರಬಹುದು. ಹಾಗಾದರೆ ಹೊಸ ವರ್ಷಕ್ಕೆ ಪ್ರಪಂಚದಾದ್ಯಂತ ತೆಗೆದುಕೊಳ್ಳುವ ಟಾಪ್‌ 10 ರೆಸಲ್ಯೂಷನ್‌ಗಳು ಪಟ್ಟಿ ಇಲ್ಲಿದೆ.

ಹೆಚ್ಚೆಚ್ಚು ಓದುವುದು

ಜ್ಞಾನ ಸಂಪಾದನೆಗೆ ಪುಸ್ತಕಗಳು ಉತ್ತಮ ಮಾರ್ಗ. ಅವು ನಮ್ಮ ಮೆದುಳಿಗೆ ಉತ್ತಮ ವ್ಯಾಯಾಮ ನೀಡುತ್ತವೆ. ಒಂದು ವರ್ಷದಲ್ಲಿ 20 ಅಥವಾ ಅದಕ್ಕಿಂತ ಹೆಚ್ಚು ಪುಸ್ತಕಗಳನ್ನು ಓದುವುದು ಕಷ್ಟವೇನಲ್ಲ. ನೀವು ಈ ವರ್ಷ ಪುಸ್ತಕ ಓದುವ ಗುರಿ ಹೊಂದಿದ್ದರೆ ತಿಂಗಳಿಗೆ ಒಂದು ಪುಸ್ತಕವನ್ನು ಪೂರ್ಣಗೊಳಿಸಬೇಕು ಎಂದು ಗುರಿಯೊಂದಿಗೆ ಆರಂಭಿಸಿ. ನೀವು ಒಮ್ಮೆ ಓದುವುದನ್ನು ರೂಢಿಸಿಕೊಂಡರೆ ಖಂಡಿತ ಓದು ನಿಮ್ಮನ್ನು ಅತಿಯಾಗಿ ಆವರಿಸುತ್ತದೆ. ಅಲ್ಲದೆ ಓದಿನ ಮೇಲೆ ನಿಮ್ಮ ಆಸಕ್ತಿಯೂ ಹೆಚ್ಚುತ್ತದೆ.

ತೂಕ ಇಳಿಕೆ

ತೂಕ ಇಳಿಸೋದು, ಹೆಚ್ಚು ಹೆಚ್ಚು ವ್ಯಾಯಾಮ ಮಾಡುವುದು, ಆರೋಗ್ಯವಂತರಾಗಿ ಬದುಕಬೇಕು ಎನ್ನುವುದು ಪ್ರಪಂಚದಾದ್ಯಂತ ಹಲವರು ಇರಿಸಿಕೊಂಡಿರುವ ನಿರ್ಣಯವಾಗಿರುತ್ತದೆ. ವ್ಯಾಯಾಮ ಮಾಡುವುದು ಹಾಗೂ ಡಯೆಟ್‌ ಕ್ರಮ ಪಾಲಿಸುವುದು ಆರಂಭದಲ್ಲಿ ಸುಲಭ ಎನ್ನಿಸಿದರೂ ಇದನ್ನು ಬಿಡದೇ ಮಾಡುವುದು ನಿಜಕ್ಕೂ ಕಷ್ಟ. ಇದಕ್ಕೆ ನೀವು ನಿಮ್ಮ ಸಹವರ್ತಿಗಳ ಜೊತೆ ಸೇರಿಕೊಂಡು ಇಂತಹ ಚಟುವಟಿಕೆಯಲ್ಲಿ ತೊಡಗುವುದು ಉತ್ತಮ.

ಆರೋಗ್ಯಕರ ಆಹಾರ ಸೇವನೆ

ನ್ಯೂ ಇಯರ್‌ ರೆಸಲ್ಯೂಷನ್‌ ವಿಚಾರಕ್ಕೆ ಬಂದಾಗ ಹಲವರು ಆರೋಗ್ಯಕರ ಆಹಾರ ಸೇವನೆಯ ಗುರಿಯನ್ನು ಹೊಂದಿರುತ್ತಾರೆ. ಪೌಷ್ಟಿಕಾಂಶಯುಕ್ತ ಆಹಾರ ಸೇವನೆಯೇ ನನ್ನ ಗುರಿ ಎಂದುಕೊಂಡು ಜಂಕ್‌ಫುಡ್‌, ಕರಿದ ಪದಾರ್ಥಗಳ ಸೇವನೆಗೆ ಕಡಿವಾಣ ಹಾಕಬೇಕು ಎಂದುಕೊಳ್ಳುತ್ತಾರೆ. ಆ ಮೂಲಕ ತೂಕ ಇಳಿಕೆಯತ್ತ ಗಮನ ಹರಿಸುವುದು ಇವರ ಗುರಿಯಾಗಿರುತ್ತದೆ.

ಧೂಮಪಾನ, ಮದ್ಯಪಾನ ನಿಷೇಧ

ಹೊಸ ವರ್ಷ ನಿರ್ಣಯಗಳು ಎಂದಾಗ ಕೆಟ್ಟ ಅಭ್ಯಾಸಗಳನ್ನು ತ್ಯಜಿಸುವುದು ಒಂದು ಉತ್ತಮ ಅಭ್ಯಾಸವಾಗಿರುತ್ತದೆ. ಹಲವಾರು ಮಂದಿ ಹೊಸ ವರ್ಷದಲ್ಲಿ ಧೂಮಪಾನ ಹಾಗೂ ಮದ್ಯಪಾನ ನಿಷೇಧದ ಗುರಿ ಇರಿಸಿಕೊಂಡಿರುತ್ತಾರೆ.

ಕುಟುಂಬದೊಂದಿಗೆ ಹೆಚ್ಚಿನ ಸಮಯ ಕಳೆಯುವುದು

ನಮ್ಮ ಜೀವನದ ಅತಿ ಮುಖ್ಯ ಎನ್ನಿಸುವ, ನಮ್ಮ ಪ್ರೀತಿಪಾತ್ರರು ಹಾಗೂ ಕುಟುಂಬದವರ ಜೊತೆಗೆ ಸಮಯ ಕಳೆಯುವುದು ಜೀವನದ ಮುಖ್ಯ ಗುರಿಯಾಗಿರಬೇಕು. ಆದರೆ ನಮ್ಮ ವೃತ್ತಿ, ವೈಯಕ್ತಿಕ ಕಾರಣಗಳಿಂದ ನಮ್ಮ ಆತ್ಮೀಯರ ಜೊತೆ ಸಮಯ ಕಳೆಯುವುದು ಕಷ್ಟವಾಗಬಹುದು. ಆ ಕಾರಣಕ್ಕೆ ಮುಂದಿನ ವರ್ಷವಾದರೂ ಹೀಗಾಗಬಾರದು ಎಂದುಕೊಂಡು ಈ ರೆಷಲ್ಯೂಷನ್‌ ಹಾಕಿಕೊಳ್ಳುತ್ತಾರೆ.

ಹಣಕಾಸು ಸುಧಾರಣೆ

ಹಣಕಾಸು ನಿರ್ವಹಣೆ ಹಾಗೂ ಹಣಕಾಸಿನ ಪರಿಸ್ಥಿತಿಯನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು ಎಂದು ಪ್ರತಿಯೊಬ್ಬರೂ ಅಂದುಕೊಳ್ಳುವುದು ಸಹಜ. ಜೊತೆಗೆ ಈ ವರ್ಷ ಇಂತಿಷ್ಟು ಹಣ ಇದಕ್ಕೆ ಖರ್ಚು ಮಾಡಬೇಕು ಅಂತಲೂ ಅಂದುಕೊಳ್ಳುತ್ತಾರೆ. ಇದು ಕೂಡ ಮುಖ್ಯವಾಗುತ್ತದೆ.

ಹೊಸ ಕೌಶಲ ಕಲಿಯುವುದು

ಹೊಸ ವರ್ಷದಲ್ಲಿ ಹೊಸತನ್ನು ಏನಾದರೂ ಕಲಿಯಬೇಕು ಎಂದು ಹಲವರು ನಿರ್ಣಯ ತೆಗೆದುಕೊಳ್ಳುತ್ತಾರೆ. ನೃತ್ಯ, ಸಂಗೀತ, ಈಜು, ಅಡುಗೆ ತರಬೇತಿ ಸೇರಿದಂತೆ ಯಾವುದೇ ರೀತಿಯ ತಾಂತ್ರಿಕ ವಿಷಯಗಳನ್ನೂ ಕಲಿಯಬಹುದು. ನಿಮ್ಮ ಓದು ಅಥವಾ ವೃತ್ತಿಗೆ ಸಹಾಯ ಮಾಡುವ ವೃತ್ತಿಪರ ತರಬೇತಿಗಳಿಗೆ ಕೂಡ ಸೇರಿಕೊಳ್ಳಬಹುದು.

ಟ್ರಾವೆಲ್‌

ಟ್ರಿಪ್‌ಗೆ ಹೋಗೋದು, ಟ್ರಾವೆಲ್‌ ಮಾಡೋದು ಬಹುತೇಕರಿಗೆ ಇಷ್ಟವಾಗುವ ಹವ್ಯಾಸ. ಹೊಸ ವರ್ಷದಲ್ಲಿ ನಾವು ಇನ್ನಷ್ಟು ಟ್ರಾವೆಲ್‌ ಮಾಡಬೇಕು ಎಂದು ಎನ್ನುವುದು ಹಲವರು ಹೊಸ ವರ್ಷದ ನಿರ್ಣಯವಾಗಿರುತ್ತದೆ.

ಹೊಸ ವ್ಯಕ್ತಿಗಳನ್ನು ಭೇಟಿ ಮಾಡುವುದು

ಕೆಲವೊಮ್ಮೆ ಯಾವ್ಯಾವುದೋ ಕಾರಣಕ್ಕೆ ಬದುಕಿನಲ್ಲಿ ಒಂದೆಡೆ ಸ್ಟಕ್‌ ಆಗಿ ಬಿಡುತ್ತೇವೆ. ಮನೆಯಲ್ಲೇ ಹೆಚ್ಚಿನ ಸಮಯ ಕಳೆದು ಬಿಡುತ್ತೇವೆ. ಇದರಿಂದ ಹೊಸ ಹೊಸ ಜನರೊಂದಿಗೆ ಸಂಪರ್ಕ ಸಾಧಿಸುವುದು ಕಷ್ಟವಾಗುತ್ತದೆ. ಹೊಸ ಜನರನ್ನು ಭೇಟಿ ಮಾಡುವುದು ಮಾನಸಿಕ ಯೋಗಕ್ಷೇಮಕ್ಕೆ ಪ್ರಯೋಜನಕಾರಿ. ಇದು ನಿಮ್ಮ ವೃತ್ತಿಜೀವನಕ್ಕೂ ಪರೋಕ್ಷವಾಗಿ ನೆರವಾಗುತ್ತದೆ.

ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವುದು

ಪ್ರತಿವರ್ಷ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ನಿರ್ಣಯ ತೆಗೆದುಕೊಳ್ಳುವುದು ಮುಖ್ಯವಾಗುತ್ತದೆ. ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ಜೊತೆಗೆ ಸಕಾರಾತ್ಮಕ ಸ್ವ-ಚರ್ಚೆಗೂ ಗಮನ ಕೊಡಿ. ಸಾಧನೆಗಳ ಮೇಲೆ ಗಮನ ಹರಿಸುವುದು, ವೈಫಲ್ಯವನ್ನು ಅವಕಾಶವನ್ನಾಗಿಸಿಕೊಳ್ಳುವುದು ಮುಖ್ಯವಾಗುತ್ತದೆ.

Whats_app_banner