ಕನ್ನಡ ಸುದ್ದಿ  /  Lifestyle  /  Paracetamol Overdose Can Cause Severe Liver Damage Says University Of Edinburgh Study Side Effects Of Pain Killer Rsa

Paracetamol: ಎಚ್ಚರ.. ಎಚ್ಚರ ಪ್ಯಾರಸಿಟಮಾಲ್ ಮಾತ್ರೆಯಿಂದ ಯಕೃತ್ತಿನ ಮೇಲಾಗಬಹುದು ಗಂಭೀರ ಹಾನಿ; ಆಘಾತಕಾರಿ ಮಾಹಿತಿ ಬಹಿರಂಗ

Paracetamol: ಸಾಮಾನ್ಯವಾಗಿ ಎಲ್ಲರೂ ಪ್ಯಾರಸಿಟಮಾಲ್ ಮಾತ್ರೆ ಬಳಸುತ್ತಾರೆ. ಈ ಮಾತ್ರೆಗಳ ಬಳಕೆ ಕುರಿತಂತೆ ಇತ್ತೀಚಿಗೆ ನಡೆಸಲಾದ ಅಧ್ಯಯನವೊಂದರಲ್ಲಿ ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಪ್ಯಾರಸಿಟಮಾಲ್ ಮಾತ್ರೆಗಳು ನೋವು ನಿವಾರಕವಾಗಿ ಕಾರ್ಯ ನಿರ್ವಹಿಸುವುದರ ಜೊತೆಗೆ ನಿಮ್ಮ ಯಕೃತ್ತಿಗೆ ಭಾರೀ ಪ್ರಮಾಣದ ಹಾನಿ ತಂದೊಡ್ಡಲಿದೆ ಎಂಬುದು ತಿಳಿದುಬಂದಿದೆ.

ಎಚ್ಚರ ಪ್ಯಾರಸಿಟಮಾಲ್ ಮಾತ್ರೆಯಿಂದ ಯಕೃತ್ತಿನ ಮೇಲಾಗಬಹುದು ಗಂಭೀರ ಹಾನಿ
ಎಚ್ಚರ ಪ್ಯಾರಸಿಟಮಾಲ್ ಮಾತ್ರೆಯಿಂದ ಯಕೃತ್ತಿನ ಮೇಲಾಗಬಹುದು ಗಂಭೀರ ಹಾನಿ (PC: Freepik)

Paracetamol: ಸಾಮಾನ್ಯವಾಗಿ ಜ್ವರ, ಮೈ ಕೈ ನೋವು ಕಾಣಿಸಿಕೊಂಡರೆ ಸಾಕು ಅನೇಕರು ಪ್ಯಾರಸಿಟಮಾಲ್ ಮಾತ್ರೆ ತೆಗೆದುಕೊಳ್ಳುತ್ತಾರೆ. ಆದರೆ ಎಡಿನ್ ಬರ್ಗ್ ವಿಶ್ವವಿದ್ಯಾಲಯವು ಪ್ಯಾರೆಸಿಟಮಾಲ್ ಕುರಿತಂತೆ ಅಧ್ಯಯನವೊಂದನ್ನು ನಡೆಸಿದ್ದು ಅತಿಯಾದ ಪ್ಯಾರಸಿಟಮಾಲ್ ಸೇವನೆಯಿಂದ ಮನುಷ್ಯನ ಯಕೃತ್ತಿನ ಮೇಲೆ ಗಂಭೀರ ಪ್ರಮಾಣದಲ್ಲಿ ಹಾನಿಯುಂಟಾಗಬಹುದು ಎಂದು ತಿಳಿದುಬಂದಿದೆ. ಇಲಿಗಳ ಮೇಲೆ ನಡೆಸಲಾದ ಅಧ್ಯಯನವೊಂದರಲ್ಲಿ ಈ ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಇದು ಮಾರಣಾಂತಿಕ ಸಮಸ್ಯೆಗಳನ್ನು ತಂದೊಡ್ಡುತ್ತದೆ ಎಂದು ಅಧ್ಯಯನ ತಿಳಿಸಿದೆ.

ಅಂಗಾಂಗ ವೈಫಲ್ಯ

ಎಡಿನ್ ಬರ್ಗ್ ವಿಶ್ವವಿದ್ಯಾಲಯ ನಡೆಸಿರುವ ಅಧ್ಯಯನದಲ್ಲಿ ಪ್ಯಾರಸಿಟಮಾಲ್‌ ದುಷ್ಪರಿಣಾಮಗಳ ಬಗ್ಗೆ ತಿಳಿಯುವ ಪ್ರಯತ್ನವನ್ನು ಮಾಡಲಾಗಿತ್ತು . ಇದರಲ್ಲಿ ಪ್ಯಾರಸಿಟಮಾಲ್ ಡ್ರಗ್‌ ಓವರ್‌ ಡೋಸ್‌ನಿಂದ ಯಕೃತ್ತು ಹಾನಿಗೊಳಗಾಗುತ್ತದೆ ಎಂಬ ವಿಚಾರ ದೃಢಪಟ್ಟಿದೆ. ಪ್ಯಾರಸಿಟಮಾಲ್ ಮಾತ್ರೆಗಳು ಮನುಷ್ಯ ಹಾಗೂ ಇಲಿಗಳರೆಡರಲ್ಲೂ ಯಕೃತ್ತಿಗೆ ಹಾನಿಯನ್ನುಂಟು ಮಾಡಿತ್ತು ಎಂದು ಸಾಬಿತಾಗಿದೆ.

ಜೀವಕೋಶಗಳು ಒಂದಕ್ಕೊಂದು ಸಂಪರ್ಕವನ್ನು ಹೊಂದಿರುತ್ತದೆ. ಆದರೆ ಯಾವಾಗ ಜೀವಕೋಶಗಳ ನಡುವಿನ ಗೋಡೆ ಮುರಿದು ಹೋಗುವುದೋ ಆಗ ಅಂಗಾಂಗ ವೈಫಲ್ಯಗಳು ಆರಂಭಗೊಳ್ಳುತ್ತದೆ. ಇಂತಹ ಡ್ರಗ್‌ಗಳು ಜೀವಕೋಶದ ಕಾರ್ಯಕ್ಕೆ ಹಾನಿಯುಂಟು ಮಾಡುವ ಮೂಲಕ ಆ ಜೀವಕೋಶಗಳನ್ನು ಸಾಯಿಸುತ್ತಾ ಬರುತ್ತವೆ. ಈ ರೀತಿಯ ಜೀವಕೋಶದ ನಾಶದಿಂದ ಯಕೃತ್ತಿಗೆ ಸಂಬಂಧಿಸಿದ ಕ್ಯಾನ್ಸರ್, ಸಿರೋಸಿಸ್ ಹಾಗೂ ಹೆಪಟೈಟಿಸ್‌ನಂಥ ಕಾಯಿಲೆ ಬರುತ್ತವೆ ಆದರೂ ಸಹ ಇಂತಹ ಮಾರಕ ಕಾಯಿಲೆಗಳಿಗೂ ಪ್ಯಾರಸಿಟಮಾಲ್‌ಗಳಿಗೂ ಸಂಬಂಧವಿದೆ ಎಂಬುದು ದೃಢಪಟ್ಟಿಲ್ಲ.

ಇನ್ನಷ್ಟು ಸಂಶೋಧನೆಗೆ ಮುಂದಾದ ವಿಜ್ಞಾನಿಗಳು

ಪ್ಯಾರಸಿಟಮಾಲ್‌ಗಳು ಮನುಷ್ಯನ ಯಕೃತ್ತಿನ ಮೇಲೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತವೆ ಎಂಬುದನ್ನು ಇನ್ನಷ್ಟು ತಿಳಿದುಕೊಳ್ಳಲು ಸಂಶೋಧಕರು ಪ್ರಾಣಿಗಳ ಮೇಲೆ ಮಾಡುವ ಪರೀಕ್ಷೆಯ ಬದಲಾಗಿ ಮಾನವ ಯಕೃತ್ತಿನಲ್ಲಿರುವ ಕೋಶಗಳ ಬಳಕೆ ಮಾಡುವ ವಿಶ್ವಾಸಾರ್ಹ ವಿಧಾನವೊಂದನ್ನು ಅಭಿವೃದ್ಧಿಪಡಿಸಬೇಕು ಎನ್ನುವ ಗುರಿಯನ್ನು ಹೊಂದಿದ್ದಾರೆ. ಈ ಅಧ್ಯಯನದ ಮೂಲಕ ಯಾವ ಪ್ರಮಾಣದ ಪ್ಯಾರಸಿಟಮಾಲ್ ಮನುಷ್ಯನ ಯಕೃತ್ತಿಗೆ ಹಾನಿಯುಂಟು ಮಾಡುತ್ತದೆ ಎಂಬುದನ್ನು ತಿಳಿಯುವುದು ಸಂಶೋಧಕರ ಉದ್ದೇಶವಾಗಿದೆ. ಈ ಅಧ್ಯಯನವು ಸ್ಕಾಟಿಷ್ ರಾಷ್ಟ್ರೀಯ ರಕ್ತ ವರ್ಗಾವಣೆ ಸೇವೆ ಹಾಗೂ ಎಡಿನ್ ಬರ್ಗ್ ಮತ್ತು ಓಸ್ಲೋ ವಿಶ್ವವಿದ್ಯಾಲಯಗಳ ಸಂಶೋಧಕರನ್ನು ಒಳಗೊಂಡಿದೆ.

ಪ್ಯಾರಸಿಟಮಾಲ್ ಎನ್ನುವುದು ಅತ್ಯಂತ ಸುಲಭವಾಗಿ, ಕಡಿಮೆ ದರದಲ್ಲಿ ಸಿಗುವ ಹಾಗೂ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುವ ನೋವು ನಿವಾರಕ ಎಂದೇ ಹೆಸರು ಪಡೆದಿದೆ. ಆದರೆ ಪ್ಯಾರಸಿಟಮಾಲ್ ಕುರಿತಂತೆ ಅಧ್ಯಯನದಲ್ಲಿ ಬಯಲಾಗಿರುವ ಈ ಆಘಾತಕಾರಿ ಅಂಶವು ಮುಂದಿನ ದಿನಗಳಲ್ಲಿ ಪ್ಯಾರಸಿಟಮಾಲ್ ಬದಲಿಗೆ ಬೇರೆ ನೋವು ನಿವಾರಕಗಳನ್ನು ಬಳಕೆ ಮಾಡುವಂತಹ ದಿನ ಎದುರಾಗುವ ಸಾಧ್ಯತೆ ಇದೆ.